/newsfirstlive-kannada/media/media_files/2025/08/24/rains_news-2025-08-24-09-25-32.jpg)
ಉತ್ತರ ಭಾರತದಲ್ಲಿ ಸದ್ಯ ಮಳೆರಾಯನ ಅಬ್ಬರ ಜೋರಾಗಿದೆ. ಮಳೆಯ ರೌದ್ರ ನರ್ತನಕ್ಕೆ ಅಕ್ಷರಶಃ ತತ್ತರಿಸಿರುವ ರಾಜಸ್ಥಾನ, ಬಿಹಾರ, ಒಡಿಶಾಗಳಲ್ಲಿ ಜನ ಜೀವ ಕೈಯಲ್ಲಿ ಹಿಡಿದು ದಿನದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆ, ಬೆಳೆ, ರಸ್ತೆ ಎಲ್ಲವೂ ನೀರಿನಲ್ಲಿ ಕೊಚ್ಚಿ ಹೋಗ್ತಿವೆ.
ಮಳೆ, ತನ್ನ ರೌದ್ರ ಪ್ರತಾಪದಿಂದ ಉತ್ತರ ಭಾರತವನ್ನ ಹಿಂಡಿ ಹಿಪ್ಪೆ ಮಾಡ್ತಿದೆ. ವರುಣ ಅಬ್ಬರಕ್ಕೆ ಉತ್ತರ ಭಾರತ ನಲುಗಿ ಹೋಗ್ತಿದ್ದು, ರಾಜಸ್ತಾನ, ಒಡಿಶಾ ಹಾಗೂ ಬಿಹಾರದಲ್ಲಿ ಜನರ ಕಣ್ಣ ಮುಂದೆಯೇ ಆಸ್ತಿ-ಪಾಸ್ತಿಗಳು ನಾಶ ಆಗುತ್ತಿವೆ.
NDRF ಟ್ರ್ಯಾಕ್ಟರ್ ಪಲ್ಟಿ.. ಅಮೀರ್ ಕೋಟೆ ಗೋಡೆ ಕುಸಿತ!
ನಿರಂತರ ಮಳೆಯಿಂದಾಗಿ ರಾಜಸ್ಥಾನದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೋಟಾ, ಬುಂಡಿ, ಬರಾನ್ ಮತ್ತು ಸವಾಯಿ ಮಾಧೋಪುರ ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಸವಾಯಿ ಮಾಧೋಪುರ ಸಂಪೂರ್ಣ ಜಲಾವೃತವಾಗಿದ್ದು, ರಸ್ತೆಯಲ್ಲಿ ಬಸ್ ವಾಲಿಕೊಂಡು ನಿಂತಿದ್ದು, ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ. ಮತ್ತೊಂದೆಡೆ ಪ್ರವಾಹದಲ್ಲಿ ಸಿಲುಕಿದ್ದವರ ರಕ್ಷಣೆ ತೆರಳಿದ್ದ ಎನ್ಡಿಆರ್ಎಫ್ ಸಿಬ್ಬಂದಿ ಇದ್ದ ಟ್ರ್ಯಾಕ್ಟರ್ ಪಲ್ಟಿಯಾಗಿದೆ.
ಇನ್ನು ಭಾರೀ ಮಳೆಗೆ ಬುಂಡಿ ಪ್ರದೇಶ ಜಲಾವೃತವಾಗಿದ್ದು, ಜೈಪುರದ ಅಮೇರ್ ಕೋಟೆಯಲ್ಲಿ 200 ಅಡಿ ಉದ್ದದ ಗೋಡೆ ಕುಸಿತವಾಗಿದೆ.
ಬಿಹಾರದಲ್ಲೂ ವರುಣನ ಅಬ್ಬರ.. ಉಕ್ಕಿ ಹರಿದ ಲೋಕೈನ್ ರಿವರ್
ಮಳೆಯ ರೌದ್ರರೂಪಕ್ಕೆ ಬಿಹಾರದಲ್ಲಿ ಲೋಕೈನ್ ನದಿ ಉಕ್ಕಿ ಹರಿಯುತ್ತಿದೆ. ನದಿ ಉಕ್ಕಿ ಹರಿದ ಪರಿಣಾಮ, ನಳಂದದಲ್ಲಿನ 10ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ನೋಡ ನೋಡುತ್ತಲೇ ಮನೆಗಳು ಕುಸಿದು ಹೋಗ್ತಿವೆ. ನಗರದ ಪ್ರಮುಖ ರಸ್ತೆಗಳು ಕೊಚ್ಚಿಹೋಗಿ ಬೆಳೆಗಳು ನಾಶವಾಗಿವೆ.
ಇದನ್ನೂ ಓದಿ: ಘೋರ ದುರಂತ.. ಸೊಸೆಗೆ ಬೆಂಕಿ ಹಚ್ಚಿ ಜೀವ ತೆಗೆದ ಅತ್ತೆ, ಮಾವ, ಗಂಡ.. ಮಗು ಹೇಳಿದ್ದೇನು?
ರೌದ್ರ ಮಳೆಯಿಂದ ಒಡಿಶಾದಲ್ಲಿ ಸೇತುವೆ ಮುಳುಗಡೆ!
ಓಡಿಶಾದಲ್ಲೂ ವರುಣ ತನ್ನ ರೌದ್ರ ರೂಪ ಪ್ರದರ್ಶಿಸ್ತಿದ್ದಾನೆ. ಧಾರಾಕಾರ ಮಳೆಗೆ ಸಮಕೋಯ್ ನದಿ ಪಾಯ ಮಟ್ಟ ಮೀರಿದೆ. ಇದ್ರಿಂದ ಸೇತುವೆ ಮೇಲೆ ನೀರು ರಭಸವಾಗಿ ಹರಿಯುತ್ತಿದ್ದು, 13 ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಗೆ ಉತ್ತರ ಭಾರರತ ಅಕ್ಷರಶಃ ತತ್ತರಿಸಿ ಹೋಗಿದೆ. ಪ್ರವಾಹದ ಭೀತಿ ಮಧ್ಯೆಯೇ ಜನರು ಬದುಕು ನಡೆಸುವಂತಾಗಿದೆ. ಇನ್ನೂ ಮಳೆ ಮುಂದುವರಿದ್ರೆ ಉತ್ತರ ಭಾರತದಲ್ಲಿ ಪ್ರವಾಹ ಅಪ್ಪಳಿಸಿದ್ರೂ ಅಚ್ಚರಿಯೇನಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ