/newsfirstlive-kannada/media/media_files/2025/08/24/up_woman-1-2025-08-24-08-30-23.jpg)
ಲಕ್ನೋ: ವರದಕ್ಷಿಣೆಗಾಗಿ ಅತ್ತೆ, ಮಾವ ಹಾಗೂ ಗಂಡ ಸೇರಿ ಸೊಸೆಗೆ ಮನ ಬಂದಂತೆ ಹೊಡೆದು ಮನೆಯಲ್ಲೇ ಬೆಂಕಿ ಹಚ್ಚಿ ಜೀವ ತೆಗೆದಿರುವ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.
ಗ್ರೇಟರ್ ನೋಯ್ಡಾದ ನಿಕ್ಕಿ ಎನ್ನುವ ಮಹಿಳೆ ಜೀವ ಕಳೆದುಕೊಂಡವರು. ಈಕೆಯ ಗಂಡ ವಿಪಿನ್ ಅನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಘಟನೆಯ ನಂತರ ನಾಪತ್ತೆ ಆಗಿರುವ ರೋಹಿತ್ (ಮಾವ), ದಯಾ (ಅತ್ತೆ) ಮತ್ತು ಸತ್ವೀರ್ (ಸೋದರ ಮಾವ) ಈ ಮೂವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಮಹಿಳೆ ನಿಕ್ಕಿ ಹಾಗೂ ಈಕೆಯ ಸಹೋದರಿ ಕಾಂಚಾಣ ಇಬ್ಬರು ಒಂದೇ ಮನೆಗೆ ಸೊಸೆಯಾಗಿದ್ದರು.
ನಿಕ್ಕಿ ಹಾಗೂ ವಿಪಿನ್ 2016ರಲ್ಲಿ ಹರಿಯಾಣದ ಸಿರ್ಸಾದಲ್ಲಿ ಮದುವೆಯಾಗಿದ್ದರು. ಆದರೆ ಮದುವೆಯಲ್ಲಿ ವರದಕ್ಷಿಣೆಯಾಗಿ ಎಸ್ಯುವಿ ಕಾರು, ಬೆಲೆಬಾಳುವ ಚಿನ್ನಾಭರಣಗಳನ್ನು ನೀಡಲಾಗಿತ್ತು. ಆದರೂ ವರದಕ್ಷಿಣೆಗಾಗಿ ಇಬ್ಬರಿಗೂ ಗಂಡನ ಮನೆಯವರು ಹೊಡೆಯುತ್ತಿದ್ದರು. ತವರಿನಿಂದ ಹಣ ತರುವಂತೆ ಮನೆಯಲ್ಲಿ ನಿರಂತರ ಹಿಂಸೆ ಕೊಡುತ್ತಿದ್ದರು. ಹೀಗಾಗಿಯೇ ಮತ್ತೊಂದು ಕಾರನ್ನು ಕೂಡ ನೀಡಲಾಗಿತ್ತು ಎಂದು ಹೇಳಲಾಗಿದೆ.
ಆದರೂ ಗಂಡನ ಮನೆಯವರ ವರದಕ್ಷಿಣೆಯ ಆಸೆ ನಿರಂತರವಾಗಿದ್ದರಿಂದ ಮನೆಯಲ್ಲಿ ಹೆಂಡತಿ ಜೊತೆ ವಿಪಿನ್ ಜಗಳ ತೆಗೆದು ಹೊಡೆದಿದ್ದಾನೆ. ಇದಕ್ಕೆ ಗಂಡನ ಪೋಷಕರು ಸಾಥ್ ಕೊಟ್ಟಿದ್ದಾರೆ. ಅದರಂತೆ ಗಂಡ ಹೊಡೆದು, ಕೋಪದಲ್ಲಿ ಹೆಂಡತಿಗೆ ಬೆಂಕಿ ಹಚ್ಚಿಬಿಟ್ಟಿದ್ದಾನೆ. ರಕ್ಷಣೆಗಾಗಿ ಬೆಂಕಿಯಲ್ಲೇ ಮಹಿಳೆ ಚೀರಾಡಿದ್ದಾಳೆ. ಈ ವೇಳೆ ಈಕೆಯ ಸಹೋದರಿಯನ್ನ ಹೊರಗಾಕಲಾಗಿತ್ತು. ಇದನ್ನು ನೋಡಿ ಸಹೋದರಿ ತೀವ್ರ ಭಯದಿಂದ ಕೂಗಿದ್ದಾಳೆ.
ತಕ್ಷಣ ಸ್ಥಳೀಯರು ಬಂದು ಮನೆ ಒಳಗೆ ತೀವ್ರ ಸುಟ್ಟ ಗಾಯಗಳಿಂದ ಬಿದ್ದಿದ್ದ ಮಹಿಳೆಯನ್ನ ರಕ್ಷಣೆ ಮಾಡಿ, ಗ್ರೇಟರ್ ನೋಯ್ಡಾದ ಫೋರ್ಟಿಸ್ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ದಾರಿ ಮಧ್ಯೆಯೇ ಮಹಿಳೆ ಜೀವ ಬಿಟ್ಟಿದ್ದಾಳೆ. ಸದ್ಯ ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ.
ಈ ಬಗ್ಗೆ ಮಾತನಾಡಿರುವ ನಿಕ್ಕಿಯ ಸಹೋದರಿ ಕಾಂಚಾಣ, ನನ್ನ ಸಹೋದರಿಗೆ ಆಕೆಯ ಗಂಡ ಮನಬಂದಂತೆ ಥಳಿಸಿದ್ದರಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದಾಗ ವಿಪಿನ್ ಬೆಂಕಿ ಹಚ್ಚಿದ್ದಾನೆ. ವರದಕ್ಷಿಣೆಗಾಗಿ ನಮಗೆ ಹಿಂಸಿಸುತ್ತಿದ್ದರು. ಮದುವೆಯಲ್ಲಿ ಬ್ರ್ಯಾಂಡೆಡ್ ಎಸ್ಯುವಿ ಕಾರು ಹಾಗೂ ಬೆಲೆಬಾಳುವ ಚಿನ್ನಾಭರಣಗಳನ್ನ ನೀಡಲಾಗಿದೆ. ಆದರೂ ನಿಕ್ಕಿ ಕಡೆಯವರು ಇನ್ನು ಬೇಕು ಎನ್ನುತ್ತಿದ್ದರು. ಮದುವೆ ನಂತರವೂ 35 ಲಕ್ಷ ರೂಪಾಯಿಗೆ ಡಿಮ್ಯಾಂಡ್ ಮಾಡಿದ್ದರು ಎಂದಿದ್ದಾಳೆ.
ಇದನ್ನೂ ಓದಿ:Asia Cup 2025; ಟೀಮ್ ಇಂಡಿಯಾಗೆ ಸ್ಪಾನ್ಸರ್ ಕೊಡೋದು ಯಾರು.. Dream11 ಹಿಂದೆ ಸರಿಯುತ್ತಾ?
ಇದರ ಬದಲಿಗೆ ಮತ್ತೊಂದು ಕಾರನ್ನು ಇವರಿಗೆ ನೀಡಲಾಗಿತ್ತು. ಆದರೂ ಅವರ ಕಿರುಕುಳ, ಹಿಂಸೆ ನಿರಂತರವಾಗಿತ್ತು. ನಾನು ಸ್ಥಳದಲ್ಲೇ ಇದ್ದರೂ ಸಹೋದರಿಯನ್ನ ಉಳಿಸಿಕೊಳ್ಳಲು ಆಗಲಿಲ್ಲ. ಇಬ್ಬರು ಒಂದೇ ಬಾರಿ ಮದುವೆ ಆಗಿದ್ದೇವು. ಸ್ಥಳೀಯರ ಸಹಾಯದಿಂದ ನಿಕ್ಕಿಯನ್ನ ಆಸ್ಪತ್ರೆಗೆ ಕರೆದುಕೊಂಡು ಬಂದೇವು ಎಂದು ಕಾಂಚಾಣ ಹೇಳಿದ್ದಾರೆ.
ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ನಿಕ್ಕಿ ಅವರ ಮಗು ಹೇಳಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಪ್ಪನೇ ಮಮ್ಮಿಗೆ ಬೆಂಕಿ ಹಚ್ಚಿ ಜೀವ ತೆಗೆದಿದ್ದಾನೆ ಎಂದು ಮಗು ಹೇಳಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ವಿಪಿನ್ ಹಾಗೂ ಅವರ ಮನೆಯವರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಇನ್ನು ಸ್ಥಳೀಯರು ಕೂಡ ಆ ಕುಟುಂಬದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ