/newsfirstlive-kannada/media/media_files/2025/08/12/tripura_doughter-2025-08-12-09-39-14.jpg)
ಅಗರ್ತಲಾ: ಗಂಡು ಮಗು ಹುಟ್ಟಲಿಲ್ಲ ಅಂತ ಒಂದು ವರ್ಷದ ಹೆಣ್ಣು ಮಗುವಿಗೆ ಯೋಧರೊಬ್ಬರು ಬಿಸ್ಕತ್ನಲ್ಲಿ ವಿಷ ಇಟ್ಟು ತಿನಿಸಿ ಜೀವ ತೆಗೆದಿದ್ದಾರೆ. ತ್ರಿಪುರಾದ ಖೊವೈ ಜಿಲ್ಲೆಯ ಬೆಹಲಬಾರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಜಿಲ್ಲೆಯ ಬೆಹಲಬಾರಿ ಗ್ರಾಮದ ರಥೀಂದ್ರ ದೆಬ್ಬಾರ್ಮ್ ಜೀವ ತೆಗೆದ ಆರೋಪಿ. ಇವರು ತ್ರಿಪುರಾ ಸ್ಟೇಟ್ ರೈಫಲ್ಸ್ (ಟಿಎಸ್ಆರ್)ನ ಬೆಟಲಿಯಾನ್ 10ರಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಗಳ ಜೀವ ತೆಗೆದ ಹಿನ್ನೆಲೆಯಲ್ಲಿ ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಕೋರ್ಟ್ ವಿಚಾರಣೆ ನಡೆಸಿ ಆರೋಪಿಯನ್ನು 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Asia Cup T20; ಭಾರತ ತಂಡದ ವೈಸ್ ಕ್ಯಾಪ್ಟನ್ ಸ್ಥಾನಕ್ಕೆ ಪೈಪೋಟಿ.. ಗಿಲ್ ಸೇರಿ ಮೂವರ ನಡುವೆ ಬಿಗ್ ಫೈಟ್..!
ರಥೀಂದ್ರ ದೆಬ್ಬಾರ್ಮ್ ಹಾಗೂ ಮಿತಾಲಿ ದೆಬ್ಬಾರ್ಮ್ ದಂಪತಿಗೆ ಎರಡು ಹೆಣ್ಣು ಮಕ್ಕಳಿವೆ. ಇದರಲ್ಲಿ 2ನೇ ಮಗು ಸುಹಾನಿ, ತನ್ನ ತಂದೆಯಿಂದಲೇ ಜೀವ ಕಳೆದುಕೊಂಡಿದೆ. ಈ ಬಗ್ಗೆ ಆರೋಪ ಮಾಡಿರುವ ಹೆಂಡತಿ ನನ್ನ ಗಂಡನಿಂದಲೇ ಮಗು ಇಲ್ಲವಾಗಿದೆ ಎಂದು ದುಃಖಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
ಘಟನೆ ನಡೆದಿದ್ದು ಹೇಗೆ?
ಮಿತಾಲಿ ತನ್ನ ಮಕ್ಕಳೊಂದಿಗೆ ಸಹೋದರಿಯ ಊರಿಗೆ ಹೋಗಿದ್ದಳು. ಈ ವೇಳೆ ಗಂಡ ಕೂಡ ಜೊತೆಗೆ ಬಂದಿದ್ದನು. ಮನೆಯಲ್ಲಿ ಇರುವಾಗ ಬಿಸ್ಕೆತ್ ಕೊಡಿಸುವುದಾಗಿ ನನ್ನ ಮಗಳು ಸುಹಾನಿ ಹಾಗೂ ಸಹೋದರಿಯ ಮಗನನ್ನು ಕರೆದುಕೊಂಡು ಸಮೀಪದ ಅಂಗಡಿಗೆ ಹೋಗಿದ್ದರು. ಇದಾದ ಮೇಲೆ ಮಗಳು ವಾಂತಿ ಮಾಡಲು ಶುರು ಮಾಡಿದಳು. ಅವಳ ಬಾಯಿಂದ ಮೆಡಿಸೆನ್ ವಾಸನೆ ಬರುತ್ತಿತ್ತು. ಇದಕ್ಕೆ ಏನಾದರೂ ತಿನ್ನಿಸಿದ್ದೀಯಾ ಎಂದು ಗಂಡನನ್ನ ಕೇಳಿದ್ದೆ. ಅವರು ಏನನ್ನು ಒಪ್ಪಲಿಲ್ಲ. ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಜೀವ ಹೋಗಿದೆ ಅಂತ ವೈದ್ಯರು ಹೇಳಿದರು ಎಂದು ತಾಯಿ ಮಿತಾಲಿ ಹೇಳಿದ್ದಾರೆ.
ಮತ್ತೊಂದು ಹೆಣ್ಣು ಮಗು ಹುಟ್ಟಿದ್ದಕ್ಕೆ ನನ್ನನ್ನು ನಿತ್ಯ ನಿಂದಿಸುತ್ತಿದ್ದರು. ಕೂದಲು ಹಿಡಿದು ಎಳೆದಾಡಿ ಹೊಡೆಯುತ್ತಿದ್ದರು. ಗಂಡು ಮಗು ಹುಟ್ಟಲಿಲ್ಲ ಎನ್ನುತ್ತಿದ್ದರು. ಮಗುನ ಮುಗಿಸಿದ್ದಕ್ಕೆ ಗಂಡನಿಗೆ ಮರಣದಂಡನೆಯಂತಹ ಕಠಿಣ ಶಿಕ್ಷೆಯಾಗಬೇಕು ಎಂದು ಮಿತಾಲಿ ಆಗ್ರಹವಾಗಿದೆ. ಸದ್ಯ ಪೊಲೀಸರು ಆರೋಪಿಯನ್ನ ವಿಚಾರಣೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ