ಅನಾಥ.. ಬಾಲ್ಯದಲ್ಲೇ ಡಿಪ್ರೆಶನ್; ಒಲಿಂಪಿಕ್ಸ್ ಕುಸ್ತಿಯಲ್ಲಿ ಗೆದ್ದ ಅಮನ್ ಕಥೆಯೇ ರೋಚಕ; ತಪ್ಪದೇ ಓದಿ!

author-image
Veena Gangani
Updated On
ಅನಾಥ.. ಬಾಲ್ಯದಲ್ಲೇ ಡಿಪ್ರೆಶನ್; ಒಲಿಂಪಿಕ್ಸ್ ಕುಸ್ತಿಯಲ್ಲಿ ಗೆದ್ದ ಅಮನ್ ಕಥೆಯೇ ರೋಚಕ; ತಪ್ಪದೇ ಓದಿ!
Advertisment
  • ಕಮರಿ ಹೋಗಿದ್ದ ಕನಸನ್ನ ಸಾಧಿಸಿ ತೋರಿಸಿದ ಅಮನ್ ಸೆಹ್ರಾವತ್!
  • ಅಪ್ಪ, ಅಮ್ಮನಿಲ್ಲದ ಅನಾಥನೀಗ ಭಾರತೀಯರ ಮನೆ ಮನೆಯ ಮಗ
  • ಅವರಂತೆಯೇ ನಾನೂ ಪದಕಗಳನ್ನ, ಚಿನ್ನವನ್ನ ಗೆಲ್ತೇನೆಂಬ ವಿಶ್ವಾಸ

ಸೋಲು ಸಾಧನೆಯ ಮೆಟ್ಟಿಲಾಗುತ್ತೆ. ಆದ್ರೆ, ಪಂದ್ಯಕ್ಕೆ ಮೊದಲೇ ಟೆನ್ಷನ್, ನರ್ವಸ್​ನೆಸ್ ಅನ್ನೋದು ಮನಸ್ಸಿನೊಳಗೆ ಹೊಕ್ಕರೆ ಅದಾದ ಮೇಲೂ ಅದ್ಭುತ ಪರ್ಫಾರ್ಮೆನ್ಸ್ ಕೊಡೋದು, ಗೆಲ್ಲೋದು, ಕಂಚಿನ ಪದಕ ಗೆದ್ದು ಬೀಗೋದು ಇದೆಯಲ್ಲಾ, ಅದಕ್ಕೆ ಮೆಂಟಲ್ ಸ್ಟ್ರೆಂತ್ ಸಿಕ್ಕಾಪಟ್ಟೆ ಸ್ಟ್ರಾಂಗ್ ಆಗಿರಬೇಕು. ಇಲ್ಲದಿದ್ರೆ, ಮಾನಸಿಕ ಒತ್ತಡವೇ, ನಿಮ್ಮನ್ನ ಸೋಲಿನ ಸುಳಿಗೆ ದೂಡಿಬಿಡುತ್ತೆ. ಇದು, ಕೇವಲ ಪಂದ್ಯಕ್ಕೆ ಮೊದಲಿದ್ದ ಸ್ಟ್ರೆಸ್ ಮೀರಿ, ಪಂದ್ಯ ಗೆದ್ದವನ ಕಥೆಯಲ್ಲ.

publive-image

ಬಾಲ್ಯದಲ್ಲೇ ಡಿಪ್ರೆಶನ್ ಗೆದ್ದು, ಈಗ ಭಾರತಕ್ಕೆ ಕಂಚಿನ ಕಿರೀಟವನ್ನ ತೊಡಸಿದ ಹದಿ ಹರೆಯದ ಯುವಕನ ಯಶೋ ಗಾಥೆ.
21ರ ಹರೆಯ, ಚಂಚಲ ಮನಸು, ಪ್ರೀತಿ, ಪ್ರೇಮ ಅಂತ ಕನಸು ಕಾಣೋ, ಚೆಲ್ಲಾಟವಾಡ್ತಾ, ಲೈಫ್ ಲೀಡ್ ಮಾಡೋ ಟೈಮ್. ಅದೆಷ್ಟೋ ಜನ ಇದೇ ರೀತಿ ಇರ್ತಾರೆ. ಆದ್ರೆ, ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಭಾಗಿಯಾದ ಅದೆಷ್ಟೋ ಸ್ಪರ್ಧಿಗಳು ಇದಕ್ಕೆ ತದ್ವಿರುದ್ಧ. 14 ಪ್ರಾಯದ ಹುಡುಗಿಯಿಂದ ಹಿಡಿದು ಅದೆಷ್ಟೋ ಯುವ ಮನಸುಗಳು, ತಮ್ಮ ದೇಶಕ್ಕಾಗಿ, ಪದಕ ಗೆಲ್ಲೋದಕ್ಕಾಗಿ ಸಿಕ್ಕಾಪಟ್ಟೆ ಶ್ರಮ ಹಾಕ್ತಿವೆ. ಇದರಲ್ಲಿ ನಮ್ಮ ಭಾರತದ ಯುವ ಕ್ರೀಡಾಪಟು, ಕುಸ್ತಿಯ ಕಂಚಿನ ಕುವರ ಅಮನ್ ಸೆಹ್ರಾವತ್ ಕೂಡ ಒಬ್ಬ. ಭಾರತಕ್ಕೆ ಒಲಿಂಪಿಕ್ಸ್​ನಲ್ಲಿ 6ನೇ ಮೆಡಲ್ ತಂದುಕೊಟ್ಟ ಚಿಗುರು ಮೀಸೆಯ ಹೀರೋ ಕೂಡ ಈತನೇ.

ಹರಿಯಾಣದ ಬಿರೋಹರ್ ಅನ್ನೋ ಪುಟ್ಟ ಗ್ರಾಮದಲ್ಲಿ ಹುಟ್ಟಿದ ಹುಡುಗನ ಬಗ್ಗೆ ಈಗ ದೇಶವೇ ಹೆಮ್ಮೆ ಪಡುತ್ತಿದೆ. ಇದಕ್ಕೆ ಕಾರಣ, ಪ್ಯಾನ್ ಅಮೆರಿಕನ್ ಗೇಮ್ಸ್​​ನಲ್ಲಿ ಮೂರು ಬಾರಿ ಪದಕ ಗೆದ್ದ, ಪೋರ್ಟೋ ರೀಕೋದ 29 ವರ್ಷದ ಡೆರಿಯಾನ್ ಕ್ರೂಜ್​ನನ್ನ ಸೋಲಿಸಿ, ಕೇವಲ 21ರ ಹರೆಯದಲ್ಲಿ ಭಾರತಕ್ಕೆ ಒಲಿಂಪಿಕ್ಸ್​​ನಲ್ಲಿ ಕಂಚಿನ ಪದಕವನ್ನ ತಂದುಕೊಟ್ಟು, ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಕ್ರೀಡಾಪಟು ಅನ್ನೋ ಸಾಧನೆ ಮಾಡಿದ್ದೊಂದೇ ಅಲ್ಲ. ಕುಸ್ತಿಯಲ್ಲಿ ಕಮರಿ ಹೋಗಿದ್ದ ಭಾರತದ ಪದಕದ ಕನಸನ್ನ ನನಸಾಗಿಸಿದ್ದು, ಇದೇ ಅಮನ್.

ಇದನ್ನೂ ಓದಿ:ಅಬ್ಬಾ.. ಬಾಂಗ್ಲಾದಲ್ಲಿ ತಿರುಗಿಬಿದ್ದ ಹಿಂದೂಗಳಿಂದ ಅತಿ ದೊಡ್ಡ ದಂಗೆ; ಏನೆಲ್ಲಾ ನೋವು? ಎಷ್ಟೆಲ್ಲಾ ಕ್ರೌರ್ಯ?

ಮಹಿಳೆಯರ 50ಕೆಜಿ ವಿಭಾಗದಲ್ಲಿ ಭಾರತಕ್ಕೆ ಚಿನ್ನ ಬಂದೇ ಬರುತ್ತೆ ಅನ್ನೋ ನಂಬಿಕೆ ಇತ್ತು. ಆದ್ರೆ ಕಡೆ ಕ್ಷಣದಲ್ಲಿ 50 ಕೆಜಿಗಿಂತ ಕೇವಲ 100 ಗ್ರಾಮ್ ತೂಕ ಹೆಚ್ಚಿದಿದ್ದರಿಂದ ವಿನೇಶ್ ಫೋಗಟ್​ರನ್ನ ಒಲಿಂಪಿಕ್ಸ್​​ನಿಂದಲೇ ಅನರ್ಹಗೊಳಿಸಲಾಯ್ತು. ಸದ್ಯ ವಿನೇಶ್ ಫೋಗಟ್, ಬೆಳ್ಳಿ ಪದಕಕ್ಕಾಗಿ ಹೋರಾಟವನ್ನ ನಡೆಸ್ತಿದ್ದಾರೆ. ಬೆಳ್ಳಿ ಪದಕ ಸಿಗುತ್ತೋ ಇಲ್ವೋ ಗೊತ್ತಿಲ್ಲ. ಆದ್ರೆ, ಒಲಿಂಪಿಕ್ಸ್ ಕುಸ್ತಿಯಲ್ಲಿ ಪದಕದ ಆಸೆಯನ್ನೇ ಕೈಬಿಟ್ಟಿದ್ದ ಭಾರತಕ್ಕೆ ಹೊಸ ಹುರುಪು ತಂದು ಕೊಟ್ಟಿದ್ದು ಅಮನ್.

publive-image

57 ಕೆಜಿ ವಿಭಾಗದಲ್ಲಿ ಸೆಮಿ ಫೈನಲ್​ನಲ್ಲಿ ಸೋತಿದ್ದ ಅಮನ್, ಕಂಚಿನ ಪಂದ್ಯಕ್ಕೆ ಮೊದಲು ವೇಟ್ ಗೇನ್ ಆಗಿದ್ದ. ಅಷ್ಟೊತ್ತಿಗಾಗಲೇ ವಿನೇಶ್ ಫೋಗಟ್ ಅನರ್ಹಗೊಂಡಿದ್ದರಿಂದ ನಿಗದಿತ ತೂಕಕ್ಕಿಂತಲೂ ನಾಲ್ಕೂವರೆ ಕೆಜಿ ವೇಟ್ ಗೇನ್ ಮಾಡಿದ್ದ ಅಮನ್ ಸೆಹ್ರಾವತ್​ಗೆ ಹಾಗೂ ಅವ್ರ ಕೋಚ್​ಗಳಿಗೆ ಸಣ್ಣದೊಂದು ಟೆನ್ಷನ್ ಶುರುವಾಗಿತ್ತು. ಅಷ್ಟೇ ಅಲ್ಲ, 2021ರ ವಿಶ್ವ ಚಾಂಪಿಯನ್ ಅಲಿರೇಜಾ ಸರ್ಲಾಕ್, ಒಲಿಂಪಿಕ್ಸ್ ಪ್ರಿಲಿಮಿನರಿಯಲ್ಲೂ ಇದೇ ತೂಕದ ವಿಚಾರಕ್ಕೆ ಹೊರ ಹೋಗುವಂತಾಗಿತ್ತು. ಅಮನ್​ಗೆ ಪಂದ್ಯಕ್ಕೆ ವೇಟ್ ಚೆಕ್ ಮಾಡೋ ಮೊದಲೇ 4.5 ಕೆಜಿ ತೂಕವನ್ನ ಇಳಿಸೋದು ಸವಾಲಿನ ವಿಷಯವೇ. 61.5 ಕೆಜಿಯಿಂದ ಅಮನ್ ಸೆಹ್ರವಾತ್ 57 ಕೆಜಿಗೆ ತನ್ನ ತೂಕವನ್ನ ಇಳಿಸಿಕೊಳ್ಳಬೇಕಿತ್ತು. ಅಮನ್​ ಬೆನ್ನಿಗೆ ನಿಂತಿದ್ದು ಕೋಚ್​ಗಳಾದ, ಜಗ್ಮಂದರ್ ಸಿಂಗ್ ಮತ್ತು ವಿರೇಂದ್ರ ದಹಿಯಾ.

ಇಬ್ಬರು ಹಿರಿಯ ಕೋಚ್​ಗಳ ಸುಪರ್ದಿಯಲ್ಲಿ ಮೊದಲಿಗೆ ಅಮನ್ ಒಂದೂವರೆ ಗಂಟೆಗಳ ಕಾಲ ಮ್ಯಾಟ್ ಸೆಷನ್​ನಲ್ಲಿ ನಿಂತು ಕುಸ್ತಿಯನ್ನ ಆಡಿ ಬೆವರು ಸುರಿಸಿದ್ರು. ನಂತರ 1 ಗಂಟೆಗಳ ಕಾಲ ಹಾಟ್ ಬಾತಿಂಗ್ ಮೂಲಕ ಬೆವರು ಹರಿಸಿ, ತೂಕ ಕಡಿಮೆ ಮಾಡಿಸಲಾಯ್ತು. ಇದಾದ್ಮೇಲೆ ಮತ್ತೊಂದು ಗಂಟೆಯ ಕಾಲ ಜಿಮ್​ನಲ್ಲಿ ಟ್ರೆಡ್ ಮಿಲ್​ನಲ್ಲಿ ಓಡಿ ಬೆವರು ಹರಿಸಿ, ಅಮನ್ ಕೇವಲ ಅರ್ಧ ಗಂಟೆಯ ಚಿಕ್ಕ ಬ್ರೇಕ್ ತಗೊಂಡಿದ್ರು. ವಿರಾಮದ ಬಳಿಕ 5 ನಿಮಿಷ ಸೌನಾ ಬಾತ್ ಮಾಡಿದ್ರೂ, ಇನ್ನೂ 900 ಗ್ರಾಮ್ ತೂಕ ಹೆಚ್ಚಿತ್ತು. ಮಸಾಜ್ ತಗೊಂಡು ಕೆಲ ಕಾಲ ಲೈಟ್ ಜಾಗಿಂಗ್ ಮಾಡಿದ ಅಮನ್, 15 ನಿಮಿಷಗಳ ಕಾಲ ರನ್ನಿಂಗ್ ಸೆಷನ್​ನಲ್ಲೂ ಭಾಗಿಯಾಗ್ತಾರೆ. ಇಷ್ಟೆಲ್ಲಾ ಚಮತ್ಕಾರ ನಡೆದಿದ್ದು ಕೇವಲ 10 ಗಂಟೆಗಳಲ್ಲಿ. ಬೆಳಗಿನ ಜಾವ 4.30ಕ್ಕೆ ಅಮನ್​ರ ತೂಕ ನೋಡಿದಾಗ ಅವ್ರು 56.9 ಕೆಜಿಗೆ ಬಂದಿರುತ್ತಾರೆ. ಅಲ್ಲಿಗೆ ಎಲ್ಲರೂ ನಿರಾಳ.

publive-image

ಇನ್ನು, ಈ ಇಂಟೆನ್ಸ್ ಟ್ರೇನಿಂಗ್ ನಡೆಯೋ ಸಂದರ್ಭದಲ್ಲಿ ಎಲ್ಲೂ ಅಮನ್ ಡಿ ಹೈಡ್ರೇಟ್ ಆಗದಂತೆ ನೋಡಿಕೊಳ್ಳಲು ನಿಂಬೆರಸ ಹಾಗೂ ಜೇನು ತುಪ್ಪ ಇರುವ ಉಗುರು ಬೆಚ್ಚಗಿನ ನೀರನ್ನ ಕುಡಿಯೋಕೆ ನೀಡಲಾಗಿತ್ತು. ಪ್ರತಿ ಗಂಟೆಗೊಮ್ಮೆ ವೇಟ್ ಚೆಕ್ ಮಾಡಲಾಗ್ತಿತ್ತು. ಇಡೀ ರಾತ್ರಿ ಯಾರೂ ನಿದ್ದೆಯನ್ನೂ ಮಾಡಿರಲಿಲ್ಲ. ಒಲಿಂಪಿಕ್ ಪದಕದ ಹಿಂದಿನ ದಿನವಷ್ಟೇ ಅಲ್ಲ, ಅಮನ್ ಸೆಹ್ರಾವತ್ ತನ್ನ ಬಾಲ್ಯದಿಂದಲೂ ಇಂತಹ ಅದೆಷ್ಟೋ ನಿದ್ದೆಯಿಲ್ಲದ ರಾತ್ರಿಗಳನ್ನ ಕಳೆದಿದ್ದಾನೆ. 9 ವರ್ಷದ ಬಾಲಕನಾಗಿದ್ದಾಗಲೇ ಅಮನ್​ನ ತಾಯಿ ಡಿಪ್ರೆಶನ್​ಗೆ ಬಲಿಯಾಗ್ತಾರೆ. ಪತ್ನಿಯ ಸಾವಿನ ಹಿಂದೆಯೇ ಅಮನ್ 11 ವರ್ಷದವನಾಗಿದ್ದಾಗ, ತಂದೆ ಕೂಡ ಮಕ್ಕಳನ್ನ ಅನಾಥರನ್ನಾಗಿಸಿ ಕೊನೆಯುಸಿರು ಎಳೀತಾರೆ. ಆಮೇಲೆ ಮಕ್ಕಳ ನಿಗಾ ವಹಿಸಿದ್ದು, ಅಮನ್​ನ ಚಿಕ್ಕಪ್ಪ ಸುಧೀರ್ ಸೆಹ್ರಾವತ್ ಮತ್ತು ತಾತ ಮಂಗೆರಾಮ್. ಬಡತನ ಇತ್ತು, ಜೊತೆಗೆ ತಂದೆ ತಾಯಿಯನ್ನ ಕಳೆದುಕೊಂಡಿದ್ದ ಅಮನ್ ಕೂಡ ಡಿಪ್ರೆಶನ್​ಗೆ ಹೋಗಿದ್ದರು. ಇದರಿಂದ ಹೊರ ಬರೋಕೆ ಡ್ರಗ್ಸ್ ಮೊರೆ ಕೂಡ ಹೋಗ್ತಾರೆ.

publive-image

ಆದ್ರೆ, ಬಡತನದಲ್ಲೂ ತಾತ ಮತ್ತು ಚಿಕ್ಕಪ್ಪನ ಬೆಂಬಲ ಅಮನ್​ಗೆ ಸದಾ ಇದ್ದೇ ಇರುತ್ತೆ. 2008ರಲ್ಲಿ ಒಲಿಂಪಿಕ್ಸ್ ಕುಸ್ತಿಯಲ್ಲಿ ಪದಕ ಗೆಲ್ಲೋ ಸುಶೀಲ್ ಕುಮಾರ್ ಅಮನ್​ಗೆ ಪ್ರೇರಣೆಯಾಗ್ತಾರೆ. ಕುಸ್ತಿಯತ್ತ ಆಕರ್ಷಿತನಾಗೋ ಅಮನ್​ ದೆಹಲಿಯ ಪ್ರತಿಷ್ಠಿತ ಛತ್ರಸಾಲಾ ಸ್ಟೇಡಿಯಂನಲ್ಲಿ ಕೋಚಿಂಗ್ ಪಡೆದಿರೋದು. ಅಮನ್​ ವ್ರೆಸ್ಲಿಂಗ್​ಗೆ ಅಂತ ರೆಸಿಡೆನ್ಶಿಯಲ್ ಶಾಲೆಗೆ ಸೇರಿದಾಗ, ಅನಾಥವಾಗಿರೋ ಬಡ ಹುಡುಗನಿಗೆ ಎರಡು ಹೊತ್ತಿನ ಊಟವಾದ್ರೂ ಸಿಗುತ್ತೆ ಅಂತ ಕನಿಕರದಿಂದ ಸೇರಿಸಿಕೊಳ್ಳಲಾಗುತ್ತೆ. ಆದ್ರಿವತ್ತು ಅದೇ ಹುಡುಗ ಇಡೀ ದೇಶ ಹೆಮ್ಮೆ ಪಡುವಂತೆ ಮಾಡಿದ್ದಾನೆ. ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಭಾರತದ ಅತ್ಯಂತ ಕಿರಿಯ ಅನ್ನೋ ಹೆಗ್ಗಳಿಕೆ ಅಮನ್​ಗೀಗ ಸಿಕ್ಕಿದೆ.

ಇದ್ರ ಜೊತೆಯಲ್ಲೇ 2022ರಲ್ಲಿ ನಡೆದ ಅಂಡರ್ 23 ವರ್ಲ್ಡ್ ವ್ರೆಸ್ಲಿಂಗ್ ಚಾಂಪಿಯನ್ ಶಿಪ್​ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಕುಸ್ತಿಪಟು ಅನ್ನೋ ಸಾಧನೆ ಕೂಡ ಅಮನ್​ರದ್ದು. 2023ರಲ್ಲಿ ನಡೆದ 19ನೇ ಏಷ್ಯನ್ ಗೇಮ್ಸ್​​ನಲ್ಲಿ ಕಂಚು, ಸೀನಿಯರ್ ಏಷ್ಯನ್ ಚಾಂಪಿಯನ್​ಶಿಪ್ಸ್​​ನಲ್ಲಿ ಚಿನ್ನ, 2022ರಲ್ಲಿ ಅಂಡರ್ 23 ಏಷ್ಯನ್ ಚಾಂಪಿಯನ್ ಶಿಪ್​ನಲ್ಲಿ ಚಿನ್ನ, 2022ರಲ್ಲೇ ಅಂಡರ್ 20 ಏಷ್ಯನ್ ಚಾಂಪಿಯನ್​ಶಿಪ್​ನಲ್ಲಿ ಕಂಚು, ಱಂಕಿಂಗ್ ಸೀರೀಸ್​ಗಳಲ್ಲಿ 2002ರಲ್ಲಿ ವಿವಿಧ ಸ್ಪರ್ಧೆಗಳಲ್ಲಿ 2 ಬೆಳ್ಳಿ, ಒಂದು ಕಂಚು, 2023ರಲ್ಲಿ ಒಂದು ಕಂಚು ಹಾಗೂ 2024ರಲ್ಲಿ ಒಂದು ಚಿನ್ನ ಹಾಗೂ ಒಂದು ಬೆಳ್ಳಿ ಪದಕವನ್ನೂ ಅಮನ್ ಗೆದ್ದಿದ್ದಾರೆ. ಈ ಬಾರಿಯ ಒಲಿಂಪಿಕ್ಸ್​​ನಲ್ಲಿ ಅಮನ್ ಪದಕ ಗೆಲ್ಲೋ ಮೂಲಕ 2008ರಿಂದ ಇಲ್ಲಿವರೆಗೂ ಒಲಿಂಪಿಕ್ಸ್ ಕುಸ್ತಿಯಲ್ಲಿ ಭಾರತದ ಪದಕದ ಬೇಟೆ ಬ್ರೇಕ್ ಆಗದಂತೆ ಮುಂದುವರಿದಿದೆ.

ಇದನ್ನೂ ಓದಿ: ಗುರುವಿಲ್ಲ, ಜಾವೆಲಿನ್​ ಖರೀದಿಸಲು ಹಣವಿಲ್ಲ.. ಸಖತ್​​ ಡಿಫರೆಂಟಾಗಿದೆ ಪಾಕ್​ ಅಸಲಿ ‘ಚಿನ್ನ’ ನದೀಮ್​ ಕತೆ

publive-image

ಕಂಚಿನ ಪದಕವನ್ನ ಗೆದ್ದ ಬಳಿಕ ಮಾತನಾಡಿರುವ ಅಮನ್, ಈ ಪದಕವನ್ನ ನನ್ನ ದೇಶ ಹಾಗೂ ತಂದೆ ತಾಯಿಗೆ ಅರ್ಪಿಸುತ್ತೇನೆ. ಅವರಿಗೆ ನಾನು ಪದಕ ಗೆದ್ದಿರೋದು ಬಿಡಿ, ಕುಸ್ತಿ ಪಟುವಾಗಿದ್ದೇನೆ ಅನ್ನೋದು ಸಹ ಗೊತ್ತಿಲ್ಲ ಅಂತ ನೋವಿನಿಂದ ನುಡಿದಿದ್ದ. 2028ರಲ್ಲಿ ನಾನು ಖಂಡಿತವಾಗಿಯೂ ಚಿನ್ನವನ್ನ ಗೆಲ್ತೇನೆ ಅಂತ ಭಾರತದ ಜನರಿಗೆ ಹೇಳಬಯಸ್ತೇನೆ. ಈ ಬಾರಿಯೇ ನನ್ನ ಗುರಿ ಇದ್ದಿದ್ದು ಚಿನ್ನಕ್ಕೆ. ಆದ್ರೆ, ಕಂಚಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ನನ್ನ ಸೆಮಿ ಫೈನಲ್​ನ ಸೋಲನ್ನ ಮರೆಯಬೇಕಾಗಿದೆ. ಈಗ ಅದನ್ನೆಲ್ಲಾ ಬದಿಗಿರಿಸಿ ಮುಂದಿನ ಗುರಿಯ ಬಗ್ಗೆ ಗಮನ ಹರಿಸಬೇಕು. ಸುಶೀಲ್ ಪೈಲ್ವಾನ್ ಎರಡು ಮೆಡಲ್​ಗಳನ್ನ ಗೆದಿದ್ದರು. ನಾನೂ ಗೆಲ್ತೇನೆ. 2028 ಹಾಗೂ 2032ರಲ್ಲೂ ಪದಕಗಳನ್ನ ಗೆಲ್ಲುತ್ತೇನೆ.

ಇದು ಸುಶೀಲ್​ ಕುಮಾರ್​ರಿಂದ ಪ್ರೇರಿತರಾಗಿ ಇವತ್ತು ಪದಕಕ್ಕೆ ಮುತ್ತಿಟ್ಟ ಅಮನ್ ಮಾತು. ಸಹಜವಾಗಿಯೇ ಒಬ್ಬ ಕ್ರೀಡಾಪಟುವಿಗೆ ಇರಬೇಕಾದ ಎಂಥೂಸಿಯಾಸಮ್ ಅಮನ್​ಗಿದೆ. ಬಾಲ್ಯದಿಂದಲೇ ಸಾಕಷ್ಟು ಕಟ್ಟ, ಸಾವು, ನೋವುಗಳನ್ನೆಲ್ಲಾ ನೋಡಿ, ತನ್ನೆಲ್ಲಾ ಮಿತಿಗಳನ್ನೂ ಮೀರಿ ಒಲಿಂಪಿಕ್​ನಲ್ಲಿ ಪದಕ ಸಾಧನೆ ಮಾಡಿರುವ ಅಮನ್ ಸೆಹ್ರಾವತ್ ಇನ್ನಷ್ಟು ಪದಕಗಳನ್ನ ಗೆಲ್ಲಲಿ, ಭಾರತದ ಕೀರ್ತಿ ಪತಾಕೆಯನ್ನ, ನಮ್ಮ ತ್ರಿವರ್ಣ ಧ್ವಜವನ್ನ ಜಗತ್ತಿನಾದ್ಯಂತ ಇನ್ನಷ್ಟು ಎತ್ತರಕ್ಕೆ ಹಾರಿಸಲಿ ಅನ್ನೋದು ನಮ್ಮೆಲ್ಲರ ಆಶಯ.

ವಿಶೇಷ ವರದಿ: ನವೀನ್ ಕೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment