ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು; ಕಾಂಗ್ರೆಸ್ ಸರ್ಕಾರದ ಟೀಕೆಗಳಿಗೆ ಉತ್ತರ ಎಂದ ಕುಮಾರಸ್ವಾಮಿ

ಕೇಂದ್ರದ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2026-27ನೇ ಸಾಲಿನ ಆಯವ್ಯಯದ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಟೀಕೆಗಳಿಗೆ ಉತ್ತರ ಕೊಡಲಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು.

author-image
Ganesh Kerekuli
HD Kumaraswamy
Advertisment

ನವದೆಹಲಿ: ಕೇಂದ್ರದ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2026-27ನೇ ಸಾಲಿನ ಆಯವ್ಯಯದ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಟೀಕೆಗಳಿಗೆ ಉತ್ತರ ಕೊಡಲಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು.

ಆಯವ್ಯಯದ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು; ತೆರಿಗೆ ಪಾಲಿನಲ್ಲಿ ಅನ್ಯಾಯ ಆಗಿದೆ ಎಂದು ರಾಜ್ಯ ಸರ್ಕಾರ ಸಾಮಾನ್ಯವಾಗಿ ದೂರುತ್ತಿತ್ತು. 16ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ಶೇ 4.13ರಷ್ಟು ತೆರಿಗೆ ಪಾಲು ಹಂಚಿಕೆಗೆ ಶಿಫಾರಸು ಮಾಡಿದೆ. 15ನೇ ಹಣಕಾಸು ಆಯೋಗವು ಶೇ 3.64 ಹಂಚಿಕೆ ಮಾಡಿತ್ತು. ಹೊಸದಾಗಿ ಹಂಚಿಕೆ ಆಗಿರುವುದರ ಮೂಲಕ ರಾಜ್ಯಕ್ಕೆ 2026–27ನೇ ಸಾಲಿನಲ್ಲಿ ₹63,049 ಕೋಟಿ ತೆರಿಗೆ ಪಾಲು ದೊರೆಯಲಿದೆ. ಇನ್ನು ಮುಂದೆ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ರಾಜಕೀಯವಾಗಿ ಕೇಂದ್ರವನ್ನು ಟೀಕೆ ಮಾಡುವುದನ್ನು ಬಿಡಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮೆಗಾ ಕುಟುಂಬಕ್ಕೆ ಸಂಭ್ರಮದ ಹಬ್ಬ: ರಾಮ್ ಚರಣ್-ಉಪಾಸನ ದಂಪತಿಗೆ ಅವಳಿ ಮಕ್ಕಳ ಜನನ

ಈ ಬಜೆಟ್ ನಲ್ಲಿ ಕರ್ನಾಟಕಕ್ಕೆ ನಿರಾಶೆಯೇನೂ ಆಗಿಲ್ಲ. ತೆಂಗು ಪ್ರೋತ್ಸಾಹ ಯೋಜನೆಯಡಿ ತೆಂಗಿನ ಉತ್ಪಾದನೆ ಹೆಚ್ಚಳಕ್ಕೆ ಉತ್ತೇಜನ ಕೊಡಲಾಗಿದೆ. ಹಾಗೆಯೇ ಗೋಡಂಬಿ ಮತ್ತು  ಕೋಕೋವನ್ನು 2030ರ ವೇಳೆಗೆ ಪ್ರೀಮಿಯಂ ಗ್ಲೋಬಲ್ ಬ್ರಾಂಡ್ ಆಗಿ ರೂಪಿಸುವ ಅಂಶವು ಮುಂಗಡ ಪತ್ರದಲ್ಲಿ ಸೇರಿದೆ. ಶ್ರೀಗಂಧ, ತೆಂಗು ಬೆಳೆ, ಕೋಕೋ ಬೆಳೆಗೆ ವಿಶೇಷ ಯೋಜನೆ ಮೂಲಕ ರಾಜ್ಯದ ಹಲವಾರು ಜಿಲ್ಲೆಗಳಿಗೆ ಉಪಯೋಗ ಆಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಹೈದರಾಬಾದ್-ಬೆಂಗಳೂರು, ಬೆಂಗಳೂರು ಚೆನ್ನೈ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆ ರಾಜ್ಯಕ್ಕೆ ವರದಾನವಾಗಲಿದೆ. ಈಗಾಗಲೇ ರಾಜ್ಯದ ಹಲವು ವೇಗದ ರೈಲುಗಳು ಕಾರ್ಯಾಚರಿಸುತ್ತಿದ್ದು, ವಂದೇ ಭಾರತ್ ರೈಲುಗಳು ಕೂಡ ಸೇರ್ಪಡೆಯಾಗಿದೆ. ಈಗ ಹೈ ಸ್ಪೀಡ್ ರೈಲುಗಳು ರಾಜ್ಯಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ರೈಲು ಸಂಪರ್ಕದಲ್ಲಿ ಹೊಸ ಕ್ರಾಂತಿ ಆಗಲಿದೆ ಎಂದು ಸಚಿವರು ಪ್ರತಿಪಾದಿಸಿದರು.

ಇದು ಕೇವಲ ಅಂಕಿ ಅಂಶಗಳ ಮುಂಗಡ ಪತ್ರವಲ್ಲ, ಬದಲಿಗೆ ಮುನ್ನೋಟ, ಮುಂದಾಲೋಚನೆ, ವಿಕಾಸ, ಫಲಿತಾಂಶ ಆಧರಿತ ಮುಂಗಡ ಪತ್ರವಾಗಿದೆ. ವಿಕಸಿತ ಭಾರತ ಗುರಿ ಸಾಕಾರಕ್ಕೆ ಇದು ಪೂರಕವಾಗಿದೆ. 2047ಕ್ಕೆ ನಾವು ಈ ಗುರಿ ಸಾಧನೆ ಮಾಡಬೇಕು, ಅದಕ್ಕೆ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಈ ಬಜೆಟ್ ಸ್ಪಷ್ಟ ದಿಕ್ಸೂಚಿ ತೋರಿದೆ ಎಂದು ಅವರು ಹೇಳಿದ್ದಾರೆ.

ಗ್ರಾಮೀಣ ಭಾರತಕ್ಕೆ ಮನ್ನಣೆ ಕೊಡಲಾಗಿದೆ. ಪ್ರತಿ ರಾಜ್ಯ, ಪ್ರತಿ ಜಿಲ್ಲೆ, ಪ್ರತಿ ತಾಲೂಕು, ಪ್ರತಿ ಪಂಚಾಯಿತಿ, ಪ್ರತಿ ಹಳ್ಳಿ ಮುಂಗಡಪತ್ರದಲ್ಲಿ ಒಳಗೊಂಡಿದೆ. ವಿಶಾಲ, ವಿಸ್ತೃತ, ವಿಕಾಸ; ಇದು ಮೋದಿ ಅವರ ಲೋಕದೃಷ್ಟಿ. ಅದಕ್ಕೆ ತಕ್ಕಂತೆ ಮುಂಗಡಪತ್ರ ಮೂಡಿ ಬಂದಿದೆ ಎಂದು ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ರೈತರನ್ನು ಉದ್ಯಮಿಗಳನ್ನಾಗಿ ರೂಪಿಸುವುದು ಸರ್ಕಾರದ ಗುರಿ: ಕೃಷಿ ಸಚಿವ N.ಚಲುವರಾಯಸ್ವಾಮಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

HD Kumaraswamy Nirmala Sitharaman budget 2026 union budget
Advertisment