/newsfirstlive-kannada/media/media_files/2025/10/17/rss-3-2025-10-17-07-13-52.jpg)
ಸಾರ್ವಜನಿಕ ಸ್ಥಳಗಳಲ್ಲಿ RSS ಚಟುವಟಿಕೆಗಳಿಗೆ ನಿರ್ಬಂಧ ಬಿದ್ದಿದೆ. ಇನ್ಮುಂದೆ ಯಾವುದೇ ಸಾರ್ವಜನಿಕ ಕಾರ್ಯಕ್ರಮ ಮಾಡಬೇಕಾದ್ರೂ ಸರ್ಕಾರದ ಅನುಮತಿ ಪಡೆಯಬೇಕೆಂಬ ನಿಯಮ ಜಾರಿಗೆ ಬಂದಿದ್ದು, ಇದು ಕೇಸರಿ ಕಲಿಗಳ ಕಣ್ಣು ಕೆಂಪಗಾಗಿಸಿದೆ. ಸರ್ಕಾರದ ನಿರ್ಧಾರದ ಬಗ್ಗೆ ಪುನರ್ ಪರಿಶೀಲನೆ ನಡೆಸಬೇಕೆಂದಿರುವ ಬಿಜೆಪಿ, ಉಗ್ರ ಹೋರಾಟದ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಸರ್ಕಾರಿ ಸ್ಥಳಗಳಲ್ಲಿ RSS ಚಟುವಟಿಕೆಗಳಿಗೆ ಬ್ರೇಕ್​; ಸಚಿವ ಪ್ರಿಯಾಂಕ್ ಖರ್ಗೆ ಏನ್ ಅಂದ್ರು?
ರಾಷ್ಟ್ರೀಯ ಸ್ವಯಂ ಸೇವಕ ಸಂಘ.. ಸಂಘ ಶತಮಾನೋತ್ಸವ ಸಂಭ್ರಮದಲ್ಲಿದ್ದಾಗಲೇ ಸಚಿವ ಪ್ರಿಯಾಂಕ್ ಖರ್ಗೆ ಹೊತ್ತಿಸಿದ ಬೆಂಕಿ ಧಗಧಗಿಸ್ತಿದೆ. ಇಷ್ಟೆಲ್ಲ ಬೆಳವಣಿಗೆಗಳ ಬೆನ್ನಲ್ಲೇ ಸಿದ್ದರಾಮಯ್ಯ ಸರ್ಕಾರ ಆರ್​ಎಸ್​ಎಸ್​ಗೆ ಲಗಾಮು ಹಾಕುವ ತೀರ್ಮಾನ ಕೈಗೊಂಡಿದೆ. RSS​ ಬ್ಯಾನ್​ ಮಾಡುವಂತೆ ಸಚಿವ ಪ್ರಿಯಾಂಕ್​ ಖರ್ಗೆ ಪತ್ರ ಬರೆದ ಬೆನ್ನಲ್ಲೇ ನಿನ್ನೆ ಸಚಿವ ಸಂಪುಟ ಸಭೆಯಲ್ಲಿ RSS ಹೆಸರು ಉಲ್ಲೇಖಿಸದೇ ಪರೋಕ್ಷವಾಗಿ ಸಂಘದ ಚಟುವಟಿಕೆಗಳಿಗೆ ಅಂಕುಶ ಹಾಕಿದೆ.
RSSಗೆ ಅಂಕುಶ ಹಾಕಿದ ಸರ್ಕಾರದ ನಡೆಗೆ ಕೇಸರಿ ಕೆಂಡ
ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಸಿದ್ಧರಾಮಯ್ಯ ಸಾರ್ವಜನಿಕ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗೆ ನಿರ್ಬಂಧ ಹೇರಿದ್ದಾರೆ. ಕಾಂಗ್ರೆಸ್​ ಸರ್ಕಾರದ ಈ ನಿರ್ಧಾರ ಕೇಸರಿ ವೀರರ ಕಣ್ಣು ಕೆಂಪಗಾಗಿಸಿದೆ. ಶತಮಾನೋತ್ಸವದ ಸಂದರ್ಭ ಸಂಘದ ಬಗ್ಗೆ ತೆಗೆದುಕೊಂಡ ನಿರ್ಧಾರಕ್ಕೆ ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ. RSS ದೂರ ಇಟ್ರೆ ದೇಶಕ್ಕೆ ನಷ್ಟ. ಅರಾಜಕವಾದಿಗಳು, ಭಾರತ್ ತೇರೆ ತುಕಡೆ ಹೋಂಗೆ, ಇನ್ಷಾ ಅಲ್ಲಾ ಅನ್ನೋರು ಲಾಭ ಪಡೆಯುತ್ತಾರೆ. RSS ವಿರೋಧಿಸುವವರು ದೇಶದ್ರೋಹಿಗಳು ಅಂತ ಸಿ.ಟಿ ರವಿ ಕಿಡಿಕಾರಿದ್ದಾರೆ. ಇತ್ತ ಪ್ರಿಯಾಂಕ್ ಖರ್ಗೆ ಒಬ್ಬ ಎಳಸು ಮಂತ್ರಿ. ಸಂಘದ ಪರವಾಗಿ ಮಾಡುತ್ತಿರುವ ಪ್ರಚಾರ ಮುಂದುವರೆಯಲಿ ಅಂತ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸುರೇಶ್‌ಕುಮಾರ್ ಕಾಲೆಳೆದಿದ್ದಾರೆ.
ಪಾಕಿಸ್ತಾನ ಜಿಂದಾಬಾದ್ ಎಂದವರ ಮೇಲೆ ಕ್ರಮವಿಲ್ಲ.. ವಿಜಯೇಂದ್ರ ಕಿಡಿ
ಇನ್ನು ಪಾಕಿಸ್ತಾನ್ ಜಿಂದಾಬಾದ್ ಎನ್ನುವವರ ಮೇಲೆ ಈವರೆಗೂ ಕ್ರಮವಿಲ್ಲ ಅಂತ ಸರ್ಕಾರದ ವಿರುದ್ಧ ವಿಜಯೇಂದ್ರ ಕಿಡಿಕಾರಿದ್ದಾರೆ. PFI, KFD, SDPI ನಂತಹ ದೇಶವಿರೋಧಿ ಸಂಘಟನೆಗಳನ್ನು ನಿಷೇಧಿಸುವ, ಚಟುವಟಿಕೆಗಳ ಮೇಲೆ ಕನಿಷ್ಠ ನಿಯಂತ್ರಣ ಸಾಧಿಸುವ ನಿರ್ಧಾರ ಮಾಡಲಿಲ್ಲ. ಆರ್​ಎಸ್​ಎಸ್​ ಮೇಲೆ ನಿಯಂತ್ರಣ ಹೇರಿದಷ್ಟೂ ಅದು ಮುಗಿಲೆತ್ತರಕ್ಕೆ ಬೆಳೆಯುತ್ತದೆ ಅಂತ ಟ್ವೀಟ್​ನಲ್ಲಿ ಕುಟುಕಿದ್ದಾರೆ.
ನಿರ್ಬಂಧ ವಾಪಸ್ ತೆಗೆದುಕೊಳ್ಳದಿದ್ರೆ ಉಗ್ರ ಹೋರಾಟ ಎಚ್ಚರಿಕೆ
ಇನ್ನು ರಾಜ್ಯ ಕಾಂಗ್ರೆಸ್​ ಸರ್ಕಾರದ ನಿರ್ಧಾರವನ್ನು ಕಡುವಾಗಿ ಟೀಕಿಸಿರುವ ಕಮಲ ಪಡೆ ದೀಪಾವಳಿ ಮುಗಿಯುವವರೆಗೂ ಸರ್ಕಾರಕ್ಕೆ ಗಡುವು ನೀಡಿದ್ದಾರೆ. ಬಳಿಕ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಐ ಲವ್ ಆರ್‌ಎಸ್ಎಸ್ ಪೋಸ್ಟರ್ ಬಿಡುಗಡೆ
ಇನ್ನು ಆರ್​ಎಸ್​ಎಸ್​ ಕಿಚ್ಚಿನ ನಡುವೆ ಬೀದರ್‌ನಲ್ಲಿ ಬಿಜೆಪಿ, ಆರ್‌ಎಸ್ಎಸ್ ಕಾರ್ಯಕರ್ತರಿಂದ ಐ ಲವ್ RSS ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ನಗರದ ಹನುಮಾನ್ ಮಂದಿರದ ಬಳಿ ಯಾರು ಭಾರತವನ್ನು ಪ್ರೀತಿಸುತ್ತಾರೋ ಅವರು ಆರ್‌ಎಸ್ಎಸ್‌ನ್ನು ಪ್ರೀತಿಸುತ್ತಾರೆ ಎಂಬ ಪೋಸ್ಟರ್ ಬಿಡುಗಡೆಗೊಳಿಸಿದ್ದಾರೆ. RSS ನಿಷೇಧಕ್ಕೆ ಖರ್ಗೆ ಬರೆದ ಪತ್ರ ಹಿಂಪಡೆಯಬೇಕೆಂದು ಆಗ್ರಹದ ಜೊತೆ ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಆರ್‌ಎಸ್‌ಎಸ್ ಬಗ್ಗೆ ಸರ್ಕಾರ ಹೆಸರನ್ನೇ ಹೇಳದೇ ಅಂಕುಶ ಹಾಕಿದೆ. ಅವರು ಬಂದ್ರೆ ಇವರ ಮೇಲೆ, ಇವ್ರು ಬಂದ್ರೆ ಅವರ ಮೇಲೆ ಕ್ರಮ ಕೈಗೊಳ್ಳುವುದು ಬಿಟ್ಟು ರಾಜ್ಯದ ಅಭಿವೃದ್ಧಿ ಬಗ್ಗೆ ಯಾವಾಗ ಯೋಚಿಸ್ತಾರೋ ದೇವರೇ ಬಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ