/newsfirstlive-kannada/media/media_files/2025/12/28/dk-shivakumar-19-2025-12-28-17-42-06.jpg)
ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಗುಸುಗುಸು ಜೋರಾಗಿದೆ. ಈ ಮಧ್ಯೆ ಇವತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಗೆ ದೌಡಾಯಿಸಿದ್ದಾರೆ. ಶತಾಯಗತಾಯ ಸಿಎಂ ಪಟ್ಟಕ್ಕೇರಲೇಬೇಕೆಂಬ ಹಠಕ್ಕೆ ಬಿದ್ದಿರುವ ಡಿಕೆಶಿ, ಈ ಬಾರಿ ನೇರವಾಗಿ ಸೋನಿಯಾ ಗಾಂಧಿ ಅವರನ್ನೇ ಭೇಟಿಯಾಗಿ ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಡಲು ಸಜ್ಜಾಗಿದ್ದಾರೆ ಎನ್ನಲಾಗಿದೆ.
ರಾಜ್ಯ ಬಜೆಟ್ ಮಂಡನೆಗೂ ಮುನ್ನವೇ ಡಿ.ಕೆ. ಶಿವಕುಮಾರ್ ದೆಹಲಿ ವಿಮಾನ ಏರಿದ್ದಾರೆ. ಇಂದು ದೆಹಲಿಯಲ್ಲೇ ವಾಸ್ತವ್ಯ ಹೂಡಲಿರುವ ಅವರು, ಹೈಕಮಾಂಡ್ ನಾಯಕರ ಮುಂದೆ ಪ್ರಮುಖವಾಗಿ 5 ಅಸ್ತ್ರಗಳನ್ನು ಪ್ರಯೋಗಿಸಲು ತಯಾರಿ ನಡೆಸಿದ್ದಾರೆ.
ಇದನ್ನೂ ಓದಿ:ಟೀಂ ಇಂಡಿಯಾಗೆ ದೊಡ್ಡ ಪಾಠ ಕಲಿಸಿದ ಅಮೆರಿಕ.. ಸೂರ್ಯನ ಸೈನ್ಯಕ್ಕೆ ಸಿಕ್ಕ ಸಂದೇಶ ಏನು?
ಡಿಕೆಶಿ ಪ್ರಮುಖ ವಾದಗಳೇನು?
1) ನಾಯಕತ್ವ ಬದಲಾವಣೆಗೆ ಇದೇ ಸಕಾಲ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಶೀಘ್ರದಲ್ಲೇ ಮೂರು ವರ್ಷಗಳು ಪೂರೈಸಲಿವೆ. ಲೋಕಲ್ ಎಲೆಕ್ಷನ್‌ಗಳು ಹತ್ತಿರ ಬರುತ್ತಿವೆ. ಹೀಗಾಗಿ ನಾಯಕತ್ವ ಬದಲಾವಣೆಗೆ ಮತ್ತು ಸಿಎಂ ಸ್ಥಾನಕ್ಕೆ ತಮ್ಮನ್ನು ಪರಿಗಣಿಸಲು ಇದೇ ಸುಸಮಯ ಎಂಬ ವಾದವನ್ನು ಡಿಕೆಶಿ ಮಂಡಿಸಲಿದ್ದಾರೆ ಎನ್ನಲಾಗಿದೆ.
2) ಶ್ರಮಕ್ಕೆ ತಕ್ಕ ಪ್ರತಿಫಲ ಬೇಕು: ರಾಜ್ಯದಲ್ಲಿ ಪಕ್ಷ ಸೊರಗಿದ್ದಾಗ ಕೆಪಿಸಿಸಿಗೆ ಹೊಸ ವರ್ಚಸ್ಸು ತಂದಿದ್ದೇನೆ. ನನ್ನ ನೇತೃತ್ವದಲ್ಲಿ 136 ಸ್ಥಾನಗಳನ್ನು ಗೆಲ್ಲಿಸಿ, ಪಕ್ಷದ ಬದ್ಧತೆಗಾಗಿ ಹಗಲಿರುಳು ಶ್ರಮಿಸಿದ್ದೇನೆ. ಎಂಪಿ ಚುನಾವಣೆಯಲ್ಲೂ ಪಕ್ಷಕ್ಕೆ ಉತ್ತಮ ಫಲಿತಾಂಶ ತಂದುಕೊಟ್ಟಿದ್ದೇನೆ. ಸ್ವಪಕ್ಷೀಯರ ತಂತ್ರಗಳ ನಡುವೆಯೂ ನನ್ನ ಪಕ್ಷ ನಿಷ್ಠೆ ಬದಲಾಗಿಲ್ಲ ಎಂದು ಸೋನಿಯಾ ಗಾಂಧಿ ಮುಂದೆ ಡಿಕೆಶಿ ಅಹವಾಲು ತೋಡಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
3) ಮೌನ ಮುರಿಯಿರಿ, ಗೊಂದಲ ನಿವಾರಿಸಿ: ಹೈಕಮಾಂಡ್‌ನ ಮೌನದಿಂದಲೇ ರಾಜ್ಯ ನಾಯಕರಲ್ಲಿ ಮತ್ತು ಕಾರ್ಯಕರ್ತರಲ್ಲಿ ಗೊಂದಲಗಳು ಸೃಷ್ಟಿಯಾಗುತ್ತಿವೆ. ನಾಯಕತ್ವ ಬದಲಾವಣೆ ವಿಚಾರದಲ್ಲಿ ಇನ್ನು ಮೌನ ವಹಿಸುವುದು ಪಕ್ಷಕ್ಕೆ ಶೋಭೆ ತರುವುದಿಲ್ಲ. ಈ ಬಗ್ಗೆ ಹೈಕಮಾಂಡ್ ಸ್ಪಷ್ಟ ಸಂದೇಶ ನೀಡಲೇಬೇಕು ಎಂದು ಡಿಕೆಶಿ ಒತ್ತಾಯಿಸಲಿದ್ದಾರೆ ಎಂದು ಹೇಳಲಾಗಿದೆ.
4) ಒಗ್ಗಟ್ಟಾಗುತ್ತಿರುವ ವಿಪಕ್ಷಗಳು: ಸ್ಥಳೀಯ ಚುನಾವಣೆಯ ಹೊತ್ತಿನಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಒಗ್ಗಟ್ಟಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಪ್ರಬಲ ಸಮುದಾಯಗಳು ನನ್ನ (ಡಿಕೆಶಿ) ಪರವಾಗಿವೆ. ಮುಂಬರುವ ಸವಾಲುಗಳನ್ನು ಎದುರಿಸಲು ನಾಯಕತ್ವ ಬದಲಾವಣೆ ಅನಿವಾರ್ಯ ಎಂಬುದನ್ನು ಮನವರಿಕೆ ಮಾಡಿಕೊಡಲಿದ್ದಾರೆ.
5) ತಾಳ್ಮೆಗೂ ಮಿತಿ ಇದೆ: ಹೈಕಮಾಂಡ್ ಸೂಚನೆಯನ್ನು ನಾವೆಲ್ಲರೂ ಪಾಲಿಸುತ್ತೇವೆ. ಆದರೆ, ನನ್ನ ಬೆಂಬಲಿಗರು ನಿರೀಕ್ಷೆಯ ಜೊತೆಗೆ ಸೈಲೆಂಟ್ ಆಗಿದ್ದಾರೆ. ಅವರ ತಾಳ್ಮೆ ಪರೀಕ್ಷಿಸುವುದು ಬೇಡ ಎಂಬ ಎಚ್ಚರಿಕೆಯ ಸಂದೇಶವನ್ನೂ ರವಾನಿಸುವ ಸಾಧ್ಯತೆಯಿದೆ.
ಒಟ್ಟಿನಲ್ಲಿ, ರಾಜ್ಯ ರಾಜಕಾರಣದ ಗಮನ ಈಗ ದೆಹಲಿಯತ್ತ ನೆಟ್ಟಿದೆ. ಡಿ.ಕೆ. ಶಿವಕುಮಾರ್ ಅವರ ಈ ‘ದೆಹಲಿ ಯಾತ್ರೆ’ ಮತ್ತು ಸೋನಿಯಾ ಗಾಂಧಿ ಭೇಟಿ, ಕರ್ನಾಟಕದ ಮುಖ್ಯಮಂತ್ರಿ ಕುರ್ಚಿ ಬದಲಾವಣೆಗೆ ಮುನ್ನುಡಿ ಬರೆಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ:ನಟೌಂಕಿ ನಾಟಕ ಕೈಬಿಟ್ಟು ತೆಪ್ಪಗಾದ ಪಾಕ್ ಸರ್ಕಾರ - ಭಾರತದ ಮೇಲೆ ಮ್ಯಾಚ್ ಆಡಲು ಒಪ್ಪಿಗೆ..! Highlights
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us