/newsfirstlive-kannada/media/media_files/2026/03/05/siddaramiah-budget-2026-03-05-11-47-44.jpg)
ಬೆಂಗಳೂರು: 2026-27ನೇ ಸಾಲಿನ ರಾಜ್ಯ ಬಜೆಟ್ ಮಂಡನೆಗೆ ಕ್ಷಣಗಣನೆ ಶುರುವಾಗಿದೆ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿಗಳು ಮಂಡಿಸಲಿರುವ ಈ ಬಾರಿಯ ಆಯವ್ಯಯದ ಮೇಲೆ ರಾಜ್ಯದ ಜನತೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕೇವಲ ಗ್ಯಾರಂಟಿ ಯೋಜನೆಗಳಿಗಷ್ಟೇ ಸೀಮಿತವಾಗದೆ, ಶಿಕ್ಷಣ, ಕೃಷಿ, ಕೈಗಾರಿಕೆ, ಸಾರಿಗೆ ಹಾಗೂ ಆರೋಗ್ಯ ಸೇರಿದಂತೆ ಪ್ರಮುಖ ವಲಯಗಳಿಗೆ ಬಂಪರ್ ಕೊಡುಗೆಗಳು ಸಿಗುವ ವಿಶ್ವಾಸವಿದೆ.
ವಿವಿಧ ವಲಯಗಳ ಸಮುದಾಯಗಳು ಈ ಬಾರಿಯ ಬಜೆಟ್‌ನಿಂದ ಏನೆಲ್ಲಾ ನಿರೀಕ್ಷೆಗಳನ್ನು ಇಟ್ಟುಕೊಂಡಿವೆ ಎಂಬುದರ ಸಮಗ್ರ ವಿವರ ಇಲ್ಲಿದೆ.
ಶಿಕ್ಷಣ ಕ್ಷೇತ್ರ: 60 ಸಾವಿರ ಹುದ್ದೆ ಭರ್ತಿ, ಒಪಿಎಸ್ (OPS) ಜಾರಿ ನಿರೀಕ್ಷೆ
- ಆರ್‌ಟಿಇ ಕಾಯ್ದೆ ಬಲವರ್ಧನೆ: ಖಾಸಗಿ ಶಾಲೆಗಳಲ್ಲಿ ಬಡ ಮಕ್ಕಳಿಗೆ ಶೇ.25ರಷ್ಟು ಸೀಟು ಮೀಸಲಿಟ್ಟು ಸರ್ಕಾರವೇ ಶುಲ್ಕ ಭರಿಸುವ 'ಶಿಕ್ಷಣ ಹಕ್ಕು ಕಾಯ್ದೆ'ಯನ್ನು (RTE) ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂಬುದು ಪೋಷಕರ ಬಹುದೊಡ್ಡ ನಿರೀಕ್ಷೆ.
- ಶಿಕ್ಷಕರ ನೇಮಕಾತಿ: ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಬರೋಬ್ಬರಿ 60 ಸಾವಿರ ಹುದ್ದೆಗಳ ಭರ್ತಿಗೆ ಬಜೆಟ್‌ನಲ್ಲಿ ಗ್ರೀನ್ ಸಿಗ್ನಲ್ ಸಿಗುವ ನಿರೀಕ್ಷೆಯಲ್ಲಿ ವಯೋಮಿತಿ ಮೀರುತ್ತಿರುವ ಆಕಾಂಕ್ಷಿಗಳಿದ್ದಾರೆ.
- ಹಳೆ ಪಿಂಚಣಿ ಯೋಜನೆ: ಹೊಸ ಪಿಂಚಣಿ ಸೌಲಭ್ಯ ರದ್ದುಗೊಳಿಸಿ, ಹಳೆಯ ಪಿಂಚಣಿ ಸೌಲಭ್ಯವನ್ನೇ (OPS) ಮರು ಜಾರಿಗೊಳಿಸುವಂತೆ ಸರ್ಕಾರಿ ನೌಕರರ ಒಕ್ಕೊರಲ ಆಗ್ರಹವಿದೆ.
- ಗೌರವಧನ ಹೆಚ್ಚಳ: ಅತ್ಯಂತ ಕಡಿಮೆ ವೇತನಕ್ಕೆ ದುಡಿಯುತ್ತಿರುವ ಅತಿಥಿ ಶಿಕ್ಷಕರು, ಉಪನ್ಯಾಸಕರು ಹಾಗೂ ಬಿಸಿಯೂಟ ಸಿಬ್ಬಂದಿಗೆ ಈ ಬಾರಿಯಾದರೂ ಗೌರವಧನ ಹೆಚ್ಚಳವಾಗುವ ಆಶಯವಿದೆ.
ಕೃಷಿ ಮತ್ತು ರೈತ ಕಲ್ಯಾಣ: ಟೋಲ್ ಮುಕ್ತ ಸಾಗಣೆ, ಕಾಯ್ದೆಗಳ ರದ್ದತಿಗೆ ಆಗ್ರಹ
ಯುವಜನರನ್ನು ಕೃಷಿಯತ್ತ ಸೆಳೆಯಲು ಹಾಗೂ ಸಾವಯವ/ಸಮಗ್ರ ಕೃಷಿಗೆ ಸಹಾಯಧನ, ಶೂನ್ಯ ಬಡ್ಡಿ ಸಾಲದ ಸಮರ್ಪಕ ಅನುಷ್ಠಾನಕ್ಕೆ ರೈತರು ಕಾಯುತ್ತಿದ್ದಾರೆ.
- ಪಂಜಾಬ್ ಮಾದರಿ: ಪಂಜಾಬ್ ಮಾದರಿಯಲ್ಲಿ ರಾಜ್ಯದಾದ್ಯಂತ ರೈತರು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಟೋಲ್ ಮುಕ್ತಗೊಳಿಸಬೇಕು. ಕಬ್ಬು ಕಟಾವು ಹಾಗೂ ಸಾಗಣೆ ವೆಚ್ಚವನ್ನು ಕಾರ್ಖಾನೆಗಳೇ ಭರಿಸಬೇಕು ಎಂಬ ಒತ್ತಾಯವಿದೆ.
- ಎಪಿಎಂಸಿ ಕಾಯ್ದೆ, ಭೂ ಸುಧಾರಣೆ ಕಾಯ್ದೆ ರದ್ದುಗೊಳಿಸಬೇಕು, ನಕಲಿ ಕೀಟನಾಶಕ/ಗೊಬ್ಬರ ಮಾರಾಟಕ್ಕೆ ಬ್ರೇಕ್ ಹಾಕಬೇಕು.
- ಬೆಳೆಗಳಿಗೆ ವಿಮೆ, ಬೆಂಬಲ ಬೆಲೆ, ಹನಿ ನೀರಾವರಿಗೆ ಪ್ರೋತ್ಸಾಹ, ವನ್ಯಜೀವಿ ದಾಳಿಯಿಂದ ಮೃತಪಟ್ಟವರ ಪರಿಹಾರ ಹೆಚ್ಚಳ ಹಾಗೂ ಕೆರೆ ಹೂಳು ತೆಗೆದು ರೈತರ ಜಮೀನಿಗೆ ಸಾಗಿಸುವ ಯೋಜನೆಗಳ ನಿರೀಕ್ಷೆ ಇದೆ.
ಹಿಂದುಳಿದ ವರ್ಗಗಳ ಕಲ್ಯಾಣ: 10 ಸಾವಿರ ಕೋಟಿ ಅನುದಾನ, ಮೀಸಲಾತಿ ಹೆಚ್ಚಳ
- 2026-27ನೇ ಸಾಲಿನ ಬಜೆಟ್‌ನಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಕನಿಷ್ಠ 10,000 ಕೋಟಿ ರೂ. ಅನುದಾನ ಮೀಸಲಿಡಬೇಕು ಹಾಗೂ ಮೀಸಲಾತಿ ಪ್ರಮಾಣವನ್ನು ಶೇ.50ಕ್ಕೆ ಹೆಚ್ಚಿಸಬೇಕು ಎಂಬ ಆಗ್ರಹವಿದೆ.
- ಎಸ್‌ಸಿ/ಎಸ್‌ಟಿ ಸಮುದಾಯದ (SCSP/TSP) ಮಾದರಿಯಲ್ಲೇ ಪ್ರವರ್ಗ-1 ಮತ್ತು 2A ಗೆ ಪ್ರತ್ಯೇಕ ಮೀಸಲಾತಿ ಭರವಸೆ ಹಾಗೂ
- ಹಿಂದುಳಿದ ವರ್ಗಗಳ ನಿಗಮಗಳಿಗೆ ಹೆಚ್ಚಿನ ಅನುದಾನದ ನಿರೀಕ್ಷೆ ಇದೆ.
- 2022ರಿಂದ ಸ್ಥಗಿತಗೊಂಡಿರುವ ದೇವರಾಜ ಅರಸು ನಿಗಮದ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಪುನಾರಂಭವಾಗುವ ವಿಶ್ವಾಸವಿದೆ.
ಕೈಗಾರಿಕಾ ವಲಯ: ಬೆಂಗಳೂರು ಹೊರವಲಯಕ್ಕೂ ಕೈಗಾರಿಕೆ ವಿಸ್ತರಣೆ, ಎಂಎಸ್‌ಎಂಇಗೆ ಒತ್ತು
- ಕೇವಲ ಬೆಂಗಳೂರಿಗೆ ಸೀಮಿತವಾಗಿರುವ ಕೈಗಾರಿಕೆಗಳನ್ನು ರಾಜ್ಯದ 2ನೇ ಮತ್ತು 3ನೇ ಹಂತದ ನಗರಗಳಿಗೂ ವಿಸ್ತರಿಸಲು ಉತ್ತೇಜಕ ಕಾರ್ಯಕ್ರಮಗಳ ಘೋಷಣೆ.
- ಎಫ್‌ಕೆಸಿಸಿಐ (FKCCI) ಶಿಫಾರಸುಗಳ ಅನುಷ್ಠಾನ, ಕೈಗಾರಿಕಾ ಟೌನ್‌ಶಿಪ್‌ಗಳ ಸ್ಥಾಪನೆ, ಪ್ರತ್ಯೇಕ MSME ನೀತಿ ಜಾರಿ ಹಾಗೂ ಕೈಗಾರಿಕಾ ವಲಯಕ್ಕೆ ಸಾಲದ ಹರಿವು ಹೆಚ್ಚಳ.
- ಇಂಧನ, ಹಸಿರು ಇಂಧನ (Green Energy), ಕೌಶಲ್ಯಾಭಿವೃದ್ಧಿ ಹಾಗೂ ಪ್ರವಾಸೋದ್ಯಮ ವಲಯಕ್ಕೆ ಬೂಸ್ಟ್ ನೀಡುವ ನಿರೀಕ್ಷೆ ಉದ್ಯಮಿಗಳದ್ದಾಗಿದೆ.
ಸಾರಿಗೆ ವಲಯ: ಚಾಲಕರ ಅಭಿವೃದ್ಧಿ ನಿಗಮ, ವೇತನ ಪರಿಷ್ಕರಣೆ ಆಶಯ
- ಸರ್ಕಾರಿ ಸಾರಿಗೆ: ಕೆಎಸ್‌ಆರ್‌ಟಿಸಿ ಸೇರಿ ಸಾರಿಗೆ ನೌಕರರ ಬಾಕಿ ಇರುವ 38 ತಿಂಗಳ ವೇತನ ಪಾವತಿ ಹಾಗೂ ವೇತನ ಪರಿಷ್ಕರಣೆಯ ಭರವಸೆ ನಿರೀಕ್ಷೆಯಲ್ಲಿದ್ದಾರೆ.
- ಖಾಸಗಿ ಸಾರಿಗೆ: ಆಟೋ, ಟ್ಯಾಕ್ಸಿ, ಲಾರಿ, ಖಾಸಗಿ ಬಸ್ ಸೇರಿದಂತೆ ಅಸಂಘಟಿತ ವಲಯದ ಚಾಲಕರಿಗಾಗಿ 'ಅಸಂಘಟಿತ ಚಾಲಕರ ಅಭಿವೃದ್ಧಿ ನಿಗಮ' ಸ್ಥಾಪನೆಯ ಬೇಡಿಕೆ ಇದೆ.
- ಹೆದ್ದಾರಿಗಳಲ್ಲಿ ಚಾಲಕರಿಗೆ ತಂಗುದಾಣ, ಪೊಲೀಸ್ ಪೆಟ್ರೋಲಿಂಗ್, ಸಿಸಿಟಿವಿ ವ್ಯವಸ್ಥೆ ಜೊತೆಗೆ ಎಲೆಕ್ಟ್ರಿಕ್ ಆಟೋ/ಟ್ಯಾಕ್ಸಿ ಖರೀದಿಗೆ ಸಹಾಯಧನ ಘೋಷಣೆಯ ನಿರೀಕ್ಷೆಯಿದೆ.
ಆರೋಗ್ಯ ಮತ್ತು ವೈದ್ಯಕೀಯ: ಸರ್ಕಾರಿ ಆಸ್ಪತ್ರೆಗಳ ಮೇಲ್ದರ್ಜೆ, ಹೊಸ ಮೆಡಿಕಲ್ ಕಾಲೇಜು
- ಸರ್ಕಾರಿ, ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಹಾಸಿಗೆ ಸಾಮರ್ಥ್ಯ ಹೆಚ್ಚಳ, ಆಧುನಿಕ ವೈದ್ಯಕೀಯ ಉಪಕರಣಗಳ ನವೀಕರಣ, ಹೊಸ ಐಸಿಯು, ಡಯಾಲಿಸಿಸ್ ಹಾಗೂ ಕ್ಯಾನ್ಸರ್ ಚಿಕಿತ್ಸಾ ಘಟಕಗಳ ಸ್ಥಾಪನೆ.
- ವೈದ್ಯರು, ಸಿಬ್ಬಂದಿ ನೇಮಕಾತಿ, ಗರ್ಭಿಣಿ-ನವಜಾತ ಶಿಶುಗಳ ಮರಣ ಪ್ರಮಾಣ ತಗ್ಗಿಸಲು ವಿಶೇಷ ಯೋಜನೆ.
- 'ಆರೋಗ್ಯ ಕರ್ನಾಟಕ ಆಯುಷ್ಮಾನ್' ಯೋಜನೆ ವಿಸ್ತರಣೆ, ಹೊಸ ಮೆಡಿಕಲ್ ಕಾಲೇಜುಗಳ ಸ್ಥಾಪನೆ, ಸಂಶೋಧನೆಗೆ ಅನುದಾನ ಹಾಗೂ ಆರೋಗ್ಯ ಡೇಟಾ ಡಿಜಿಟಲೀಕರಣದಂತಹ ಮಹತ್ವದ ಘೋಷಣೆಗಳು ಈ ಬಜೆಟ್‌ನಲ್ಲಿ ಹೊರಬೀಳುವ ಸಾಧ್ಯತೆಯಿದೆ.
ಒಟ್ಟಾರೆಯಾಗಿ, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ತತ್ವದಡಿ ಮುಖ್ಯಮಂತ್ರಿಗಳು ಮಂಡಿಸಲಿರುವ ಈ ಬಜೆಟ್, ಜನಸಾಮಾನ್ಯರ ನಿರೀಕ್ಷೆಗಳನ್ನು ಎಷ್ಟರಮಟ್ಟಿಗೆ ಹುಸಿಗೊಳಿಸದೆ ಈಡೇರಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us