/newsfirstlive-kannada/media/media_files/2025/12/19/siddaramaiah-session-2025-12-19-11-34-22.jpg)
ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ರಾಜ್ಯ ಬಜೆಟ್ ಮಂಡನೆಗೆ ಅಂತಿಮ ಸಿದ್ಧತೆ ನಡೆಸಿದ್ದು, ದಾಖಲೆಯ 17ನೇ ಆಯವ್ಯಯ ಮಂಡನೆಗೆ ಕ್ಷಣಗಣನೆ ಶುರುವಾಗಿದೆ. ಕಳೆದ ಬಾರಿ ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಿದ್ದ ಸರ್ಕಾರ, ಈ ಬಾರಿ ಗ್ಯಾರಂಟಿ ಜೊತೆಗೆ ದೀರ್ಘಕಾಲೀನ ಜನಪರ ಯೋಜನೆಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವ ನಿರೀಕ್ಷೆಯಿದೆ.
ಕಳೆದೊಂದು ತಿಂಗಳಿನಿಂದ ಸರಣಿ ಸಭೆಗಳನ್ನು ನಡೆಸಿ, ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನಾಧರಿಸಿ ಸಿದ್ಧಪಡಿಸಲಾಗಿರುವ ಈ ಬಜೆಟ್ ಮೇಲೆ ರಾಜ್ಯದ ಜನತೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹಾಗಾದರೆ ಈ ಬಾರಿಯ ಬಜೆಟ್‌ನಲ್ಲಿ ಏನೆಲ್ಲಾ ಇರಲಿದೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.
4.50 ಲಕ್ಷ ಕೋಟಿ ರೂ. ಆಸುಪಾಸಿಗೆ ಬಜೆಟ್ ಗಾತ್ರ!
ವೇತನ ಹೆಚ್ಚಳ, ಹಣದುಬ್ಬರ ಸೇರಿದಂತೆ ಮತ್ತಿತರ ಕಾರಣಗಳಿಂದಾಗಿ ಈ ಬಾರಿ ಬಜೆಟ್ ಗಾತ್ರ 4.49 ಲಕ್ಷ ಕೋಟಿ ರೂ. (ಸುಮಾರು 4.50 ಲಕ್ಷ ಕೋಟಿ) ತಲುಪುವ ಸಾಧ್ಯತೆ ಇದೆ. 2025-26ನೇ ಸಾಲಿನಲ್ಲಿ 4.09 ಲಕ್ಷ ಕೋಟಿ ರೂ. ಮೊತ್ತದ ಮುಂಗಡಪತ್ರ ಮಂಡಿಸಲಾಗಿತ್ತು. ಈ ಬಾರಿ ಬಜೆಟ್ ಗಾತ್ರ ಬರೋಬ್ಬರಿ 40 ಸಾವಿರ ಕೋಟಿ ರೂ.ಗಳಷ್ಟು ಹೆಚ್ಚಳವಾಗಲಿದೆ.
ಲಕ್ಷ ಕೋಟಿ ದಾಟಲಿದೆಯೇ ಸಾಲದ ಮೊತ್ತ?
ರಾಜ್ಯದ ಸಾಲದ ಪ್ರಮಾಣ ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಮಿತಿಯೊಳಗೆ ಇರಬೇಕು ಎಂಬ ದೃಷ್ಟಿಯಿಂದ ಪ್ರತಿ ವರ್ಷ ಸಾಲದ ಘೋಷಣೆ ಮಾಡಲಾಗುತ್ತದೆ. 2025-26ನೇ ಸಾಲಿಗೆ 1.14 ಲಕ್ಷ ಕೋಟಿ ರೂ. ಸಾಲ ಪಡೆಯುವುದಾಗಿ ಘೋಷಿಸಲಾಗಿತ್ತು. 2026-27ನೇ ಸಾಲಿಗೂ ಅಷ್ಟೇ ಪ್ರಮಾಣದ (1.14 ಲಕ್ಷ ಕೋಟಿ) ಸಾಲ ಪಡೆಯುವ ಕುರಿತಂತೆ ಬಜೆಟ್‌ನಲ್ಲಿ ಘೋಷಿಸುವ ಸಾಧ್ಯತೆಗಳಿವೆ.
ಇದನ್ನೂ ಓದಿ: T20 world cup: ದಕ್ಷಿಣ ಆಫ್ರಿಕಾವನ್ನು ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟ ನ್ಯೂಜಿಲೆಂಡ್..!
/filters:format(webp)/newsfirstlive-kannada/media/post_attachments/wp-content/uploads/2025/03/Karnataka-session-Cm-Siddaramaiah.jpg)
ಬಜೆಟ್‌ನ ಪ್ರಮುಖ ಆಕರ್ಷಣೆ
ಇಂದಿರಾ ಆಹಾರ ಕಿಟ್: ಕೇವಲ ಅಕ್ಕಿ ನೀಡುವ ಬದಲು 'ಅನ್ನ ಭಾಗ್ಯ' ಯೋಜನೆಯಡಿ 'ಇಂದಿರಾ ಆಹಾರ ಕಿಟ್' ಘೋಷಿಸುವ ನಿರೀಕ್ಷೆ ದಟ್ಟವಾಗಿದೆ. ಸದ್ಯ ನೀಡಲಾಗುತ್ತಿರುವ 10 ಕೆಜಿ ಅಕ್ಕಿಯಲ್ಲಿ 5 ಕೆಜಿ ಅಕ್ಕಿ ನೀಡಿ, ಉಳಿದ 5 ಕೆಜಿ ಬದಲಿಗೆ ತೊಗರಿಬೇಳೆ, ಅಡುಗೆ ಎಣ್ಣೆ, ಸಕ್ಕರೆ, ಉಪ್ಪು ಹಾಗೂ ಹೆಸರುಕಾಳು ಒಳಗೊಂಡ 'ಇಂದಿರಾ ಕಿಟ್' ವಿತರಿಸುವ ಮಹತ್ವದ ಘೋಷಣೆ ಹೊರಬೀಳುವ ಸಾಧ್ಯತೆಯಿದೆ.
7ನೇ ಗ್ಯಾರಂಟಿಯಾಗಿ ಮನೆ ಹಂಚಿಕೆ: ಆಶ್ರಯ ಯೋಜನೆ ಸೇರಿದಂತೆ ವಸತಿ ಯೋಜನೆಗಳ ಅಡಿಯಲ್ಲಿ ಸರ್ಕಾರ ಮನೆಗಳನ್ನು ನೀಡುತ್ತಿಲ್ಲ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ಬ್ರೇಕ್ ಹಾಕಲು ಸಿಎಂ ಮುಂದಾಗಿದ್ದಾರೆ. ಇದರ ಭಾಗವಾಗಿ ಸರ್ಕಾರದ '7ನೇ ಗ್ಯಾರಂಟಿ'ಯಾಗಿ ಬೃಹತ್ ವಸತಿ ಹಂಚಿಕೆ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸಲಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಉಳಿದಂತೆ ಗ್ರಾಮ ಪಂಚಾಯಿತಿಗಳಿಗೆ ಮಹಾತ್ಮ ಗಾಂಧೀಜಿ ಅವರ ಹೆಸರನ್ನಿಡುವುದು ಮತ್ತು ಗ್ರಾಮೀಣ ಭಾಗದಲ್ಲಿನ ಕಾಲು ಸಂಕಗಳ ನಿರ್ಮಾಣಕ್ಕೆ ವಿಶೇಷ ಅನುದಾನ ಮೀಸಲಿಡುವ ಸಾಧ್ಯತೆಯಿದೆ.
ದೀರ್ಘಾವಧಿ ಯೋಜನೆಗಳಿಗೆ ಬಂಪರ್ ಅನುದಾನ
ಕೃಷ್ಣಾ ಮೇಲ್ದಂಡೆ ಯೋಜನೆ (UKP 3ನೇ ಹಂತ): 3ನೇ ಹಂತದ ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ 1.33 ಲಕ್ಷ ಎಕರೆ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲು ಸರ್ಕಾರ ನಿರ್ಧರಿಸಿದೆ. ಇದಕ್ಕೆ ಒಟ್ಟು 70 ಸಾವಿರ ಕೋಟಿ ರೂ. ಬೇಕಾಗಲಿದ್ದು, ಹಂತಹಂತವಾಗಿ ಹಣ ಬಿಡುಗಡೆ ಮಾಡಲಾಗುವುದು. ಶುಕ್ರವಾರ ಮಂಡನೆಯಾಗಲಿರುವ ಬಜೆಟ್‌ನಲ್ಲಿ ಭೂಸ್ವಾಧೀನಕ್ಕಾಗಿ ಸುಮಾರು 8 ರಿಂದ 15 ಸಾವಿರ ಕೋಟಿ ರೂ.ಗಳನ್ನು ಮೀಸಲಿಡುವ ನಿರೀಕ್ಷೆಯಿದೆ.
ಇದನ್ನೂ ಓದಿ: ಮೈಸೂರು ಸಿಲ್ಕ್ ಸೀರೆಯಲ್ಲಿ ಮಿಂಚಿದ ನ್ಯಾಷನಲ್ ಕ್ರಷ್.. ಆರತಕ್ಷತೆಯಲ್ಲಿ ಭಾಗಿಯಾದ ಡಿಸಿಎಂ ಡಿಕೆಶಿ
ಪ್ರಾದೇಶಿಕ ಅಸಮತೋಲನ ನಿವಾರಣೆ: ಹಿಂದುಳಿದಿರುವ 172 ತಾಲೂಕುಗಳ ಅಭಿವೃದ್ಧಿಗೆ ಮುಂದಿನ 5 ವರ್ಷಗಳಲ್ಲಿ 43,914 ಕೋಟಿ ರೂ. ನೀಡುವಂತೆ ಸಮಿತಿ ವರದಿ ನೀಡಿದೆ. ಅದರಂತೆ ಪ್ರಸಕ್ತ ವರ್ಷದ ಪಾಲುವಾಗಿ 8,500 ರಿಂದ 9,000 ಕೋಟಿ ರೂ.ಗಳನ್ನು ಈ ಬಜೆಟ್‌ನಲ್ಲಿ ಮೀಸಲಿಟ್ಟು, ಹೊಸ ಯೋಜನೆಗಳನ್ನು ಘೋಷಿಸುವ ಸಾಧ್ಯತೆಯಿದೆ.
ಜನಸಾಮಾನ್ಯರಿಗೆ ಶುರುವಾಗಲಿದೆಯಾ ತೆರಿಗೆ ಬಿಸಿ?
ಗ್ಯಾರಂಟಿ ಹಾಗೂ ಜನಪರ ಯೋಜನೆಗಳ ನಿರ್ವಹಣೆಗಾಗಿ ಸಂಪನ್ಮೂಲ ಕ್ರೋಢೀಕರಣ ಅನಿವಾರ್ಯವಾಗಿರುವುದರಿಂದ, ಈ ಬಾರಿಯ ಬಜೆಟ್ ಜನಸಾಮಾನ್ಯರಿಗೆ ಕೊಂಚ ಹೊರೆಯಾಗುವ ಎಲ್ಲಾ ಲಕ್ಷಣಗಳಿವೆ. ಪ್ರಮುಖವಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಅನ್ನು ತಲಾ 1 ರೂ. ಹೆಚ್ಚಳ ಮಾಡುವುದು ಬಹುತೇಕ ಖಚಿತ ಎನ್ನಲಾಗಿದೆ. ಇದರ ಜೊತೆಗೆ ಅಬಕಾರಿ ಸುಂಕ (ಮದ್ಯದ ಬೆಲೆ), ನೋಂದಣಿ ಮತ್ತು ಮುದ್ರಾಂಕ ಶುಲ್ಕ ಹಾಗೂ ಮೋಟಾರು ವಾಹನ ತೆರಿಗೆಯನ್ನು ಹೆಚ್ಚಿಸುವ ಮೂಲಕ ಬೊಕ್ಕಸ ತುಂಬಿಸಿಕೊಳ್ಳುವ ಲೆಕ್ಕಾಚಾರವನ್ನು ಸರ್ಕಾರ ಹಾಕಿಕೊಂಡಿದೆ.
ಒಟ್ಟಾರೆಯಾಗಿ ಸಿಎಂ ಸಿದ್ದರಾಮಯ್ಯ ಅವರ ಈ 17ನೇ ಬಜೆಟ್ ಅಭಿವೃದ್ಧಿ, ಕಲ್ಯಾಣ ಯೋಜನೆಗಳು ಹಾಗೂ ತೆರಿಗೆಗಳ ನಡುವಿನ ‘ಬ್ಯಾಲೆನ್ಸಿಂಗ್ ಬಜೆಟ್’ ಆಗಿರಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ: ಜೆಜೆಎಂ ಸ್ಟಾಂಪ್ ಪೇಪರ್ ವಿಚಾರದಲ್ಲಿ ಕ್ರಿಮಿನಲ್ ಚಟುವಟಿಕೆ: ಸಿಬಿಐ ತನಿಖೆಗೆ ಜೀವರಾಜ್ ಒತ್ತಾಯ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us