/newsfirstlive-kannada/media/post_attachments/wp-content/uploads/2024/10/RATAN-TATA-DAANA.jpg)
ಟಾಟಾ, ರತನ್ ಟಾಟಾ, 86ರ ಪ್ರಾಯದಲ್ಲಿ ಇಹಲೋಕ ತ್ಯಜಿಸಿರೋ ಕಲಿಯುಗದ ಮಹಾನ್ ಕರ್ಣ. ಬಲಗೈನಲ್ಲಿ ಕೊಟ್ಟಿದ್ದು ಎಡಗೈಗೆ ತಿಳಿಯಾರದು ಅಂತಾರೆ. ಆದ್ರೆ, ಉದ್ಯಮಿ ರತನ್ ಟಾಟಾ ಮಾಡಿದ ದಾನಧರ್ಮ ಬಲಗೈಗಲ್ಲ, ಬೇಡ ಅಂದ್ರೂ ಇಡೀ ಜಗತ್ತಿಗೇ ತಿಳೀತಿತ್ತು. ಯಾಕಂದ್ರೆ, ಪುಣ್ಯಾತ್ಮ ರತನ್ ಟಾಟಾ ಮಾಡುತ್ತಿದ್ದ ದಾನ, ಪರೋಪಕಾರ ಸಾಮಾನ್ಯವಾದದ್ದೇನು ಆಗಿರಲಿಲ್ಲ. ನೀವು ನಂಬಲಿಕ್ಕೆ ಕಷ್ಟವಾಗುವಂತಾ ಸಂಗತಿಯೊಂದಿದೆ. ರತನ್ ಟಾಟಾ ಅವರು ಸೇರಿದಂತೆ ಟಾಟಾ ಫ್ಯಾಮಿಲಿ ಇಲ್ಲಿವರೆಗೆ ಮಾಡಿರೋ ದಾನ ಧರ್ಮದ ಲೆಕ್ಕ ಅಂಬಾನಿಯ ಆಸ್ತಿಯನ್ನೂ ಮೀರಿ ನಿಲ್ಲುತ್ತೆ. ಪರೋಪಕಾರಿಗಳ ಕುಟುಂಬದಲ್ಲಿ ಹುಟ್ಟಿದ್ದ ರತನ್ ಟಾಟಾ, ಪರರ ಕಷ್ಟಕ್ಕೆ ಮಿಡಿಯೋದ್ರಲ್ಲಿ ತಮ್ಮ ಕುಟುಂಬದವರನ್ನೂ ಮೀರಿಸಿಬಿಟ್ಟಿದ್ರು. ಆದ್ರೆ, ಸಾಸಿವೆಯಷ್ಟು ದುಡ್ಡು ಕೂಡಿಟ್ಟು, ಬೆಟ್ಟದಷ್ಟು ದಾನ ಮಾಡಿದ್ದ ಈ ಮಹಾನ್ ಮಾನವತಾವಾದಿ ವಿಧಿಯ ಕರೆಗೆ ತಲೆಬಾಗಿ. ನಮ್ಮೆಲ್ಲರಿಂದ ದೂರ, ಬಲುದೂರ ಹೋಗಿದ್ದಾರೆ.
ಇದನ್ನೂ ಓದಿ: ಪ್ರೀತಿಯ ಶ್ವಾನಕ್ಕಾಗಿ ಪ್ರಿನ್ಸ್ ಚಾರ್ಲ್ಸ್ ಆಹ್ವಾನವನ್ನೇ ತಿರಸ್ಕರಿಸಿದ್ದ ರತನ್ ಟಾಟಾ; ಇದೊಂದು ಮನಮಿಡಿಯುವ ಕಥೆ!
ರತನ್ ಟಾಟಾ ಅವರೇನು ಝೀರೋ ಟು ಹೀರೋ ಆದವ್ರಲ್ಲ. ಬಟ್, ಸಿರಿವಂತರ ಕುಟುಂಬದಲ್ಲೇ ಹುಟ್ಟಿದರೂ ತಮ್ಮ ವಂಶದ ಪ್ರತಿಷ್ಠೆಯನ್ನ ಕಾಪಾಡಿಕೊಂಡು ಬಂದ ರೀತಿ, ಅದನ್ನ ವಿಶ್ವದ ಮೂಲೆ ಮೂಲೆಯಲ್ಲೂ ಹಬ್ಬಿಸಿದ ರೀತಿ ಇದೆಯಲ್ಲ, ಅದನ್ನ ಬರಿ ಮಾತಲ್ಲಿ ವರ್ಣಿಸೋಕೆ ಸಾಧ್ಯವೇ ಇಲ್ಲ. ತಾತ, ಅಪ್ಪ ಮಾಡಿಟ್ಟ ದುಡ್ಡನ್ನ ಉಡಾಯಿಸುತ್ತಾ ಮೋಜು ಮಸ್ತಿ ಮಾಡಿಕೊಂಡು ಕಾಲಹರಣ ಮಾಡೋರೆ ತುಂಬಿರೋ ಕಾಲದಲ್ಲಿ ರತನ್ ಟಾಟಾ ಅವರು ಮಾಡಿದ ಕೆಲಸ ನಿಜಕ್ಕೂ ಪ್ರಶಂಸನೀಯ. ನಿಮಗೆ ಗೊತ್ತಾ? ಇಂದು ಟಾಟಾ ಸಮೂಹದ ಒಟ್ಟಾರೆ ಮೌಲ್ಯ 37 ಲಕ್ಷ ಕೋಟಿಯನ್ನೂ ಮೀರುತ್ತೆ. ಅದರಲ್ಲಿ ಟಾಟಾ ಫ್ಯಾಮಿಲಿಯದ್ದು 66 ಪರ್ಸೆಂಟ್ ಶೇರ್ ಇದೆ. ನೂರು ರೂಪಾಯಿ ಲಾಭ ಬಂದ್ರೆ 66 ರೂಪಾಯಿ ಟಾಟಾ ಕುಟುಂಬಕ್ಕೆ ಬರುತ್ತೆ. ಬಟ್, ಆ 66 ರೂಪಾಯಿಯಲ್ಲಿ ಒಂದೇ ಒಂದು ರೂಪಾಯಿಯನ್ನೂ ರತನ್ ಟಾಟಾ ತಮ್ಮ ಕುಟುಂಬಕ್ಕೆ ತೆಗೆದುಕೊಳ್ತಿಲ್ಲ. ಎಲ್ಲವನ್ನೂ ಬಡವರಿಗೆ ದಾನ ಮಾಡ್ತಾ ಬಂದಿದ್ದಾರೆ.
ದಾನ-ಧರ್ಮದಲ್ಲಿ ಕರ್ಣನನ್ನೂ ಮೀರಿಸಿದ್ದ ಪುಣ್ಯಾತ್ಮ
ರತನ್ ಟಾಟಾ ಅವರ ಬಗ್ಗೆ ಕೇಳೋದಕ್ಕಿಂತಲೂ ಅವ್ರ ಬಗ್ಗೆ ಹೇಳುವಾಗಲೇ ಹೆಚ್ಚಿನ ರೋಮಾಂಚನವಾಗುತ್ತೆ ಅಂದ್ರೆ ಈ ಪುಣ್ಯಾತ್ಮ ಬದುಕಿದ ರೀತಿ ಅದೆಂಥಾ ರೋಚಕ ಇರಬೇಡ. ವಿಚಿತ್ರ ಏನ್ ಗೊತ್ತಾ? ಅತಿದೊಡ್ಡ ಕನಸುಗಾರ, ಮಹಾನ್ ಮಹತ್ವಾಕಾಂಕ್ಷಿಯಾಗಿದ್ದ ರತನ್ ಟಾಟಾರಿಗೆ ತಮ್ಮ ಕಂಪನಿಯನ್ನ ಜಗತ್ತಿನಲ್ಲೇ ನಂಬರ್ ಒನ್ ಕಂಪನಿಯಾಗಿ ಮಾಡೋ ಕನಸಿತ್ತು. ಬಟ್, ಎಂದಿಗೂ ಕೂಡ ದುಡ್ಡಿಗೆ ಆಸೆ ಪಡಲೇ ಇಲ್ಲ. ಒಂದೇ ಒಂದು ನಿರ್ಧಾರ, ಒಂದೇ ಒಂದು ಸಹಿಯಿಂದ ರತನ್ ಟಾಟಾ ಜಗತ್ತಿನ ಶ್ರೀಮಂತ ವ್ಯಕ್ತಿ ಆಗಬಹುದಿತ್ತು. ಆದ್ರೆ, ಕಂಪನಿ ಬೆಳೆಸೋದು ತನ್ನ ಕೆಲಸ. ದುಡ್ಡು ಮಾತ್ರ ಬಡವರಿಗೆ, ದೇಶಕ್ಕೆ ಸೇರಬೇಕು ಅಂತಾ ಯೋಚಿಸಿದ ಮಹಾನ್ ನಿಸ್ವಾರ್ಥಿ ಮತ್ತು ಧೀಮಂತ.
ಇದನ್ನೂ ಓದಿ:4 ಬಾರಿ ಮೂಡಿತ್ತು ಮೊಹಬ್ಬತ್; ಆದರೂ ಮದ್ವೆ ಆಗದೇ ಏಕಾಂಗಿಯಾಗಿಯೇ ಉಳಿದಿದ್ದೇಕೆ ರತನ್ ಟಾಟಾ?
ಇಷ್ಟೆಲ್ಲಾ ಹೇಳ್ತಿದ್ದೀರಲ್ಲಾ ರತನ್ ಟಾಟ್ ಎಷ್ಟು ದಾನ ಮಾಡಿದ್ದಾರೆ ಎಂಬ ಪ್ರಶ್ನೆ ಮೂಡಬಹುದು. ಏಳರ ಮುಂದೆ ಬರೊಬ್ಬರಿ 12 ಸೊನ್ನೆಗಳನ್ನು ಹಾಕಿದ್ರೆ ಬರುತ್ತಲ್ಲಾ.. ಇಷ್ಟು ದುಡ್ಡನ್ನ ಟಾಟಾ ಕುಟುಂಬ ಇಲ್ಲಿವರೆಗೆ ದೇಶದ ಬಡವರಿಗೆ, ಸರ್ಕಾರದ ಯೋಜನೆಗಳಿಗೆ ದಾನ ಮಾಡಿದೆ. ಈ ಮೊತ್ತ ಅಂದು ಅಂಬಾನಿಯ ಒಟ್ಟು ಆಸ್ತಿಯನ್ನೂ ಮೀರುತ್ತೆ. ಕರ್ನಾಟಕದ ಬಜೆಟ್‌ನ ಎರಡು ಪಟ್ಟು ದುಡ್ಡಿದು. ರತನ್ ಟಾಟಾ ಸೇರಿದಂತೆ ಟಾಟಾ ಫ್ಯಾಮಿಲಿ ಇಲ್ಲಿವರೆೆಗೆ ಮಾಡಿರೋ ದಾನ ಭರ್ತಿ 7 ಲಕ್ಷ ಕೋಟಿಯನ್ನೂ ಮೀರುತ್ತದೆ.
ರತನ್ ಟಾಟಾ ಭಾರತದಲ್ಲಿ ಕೇವಲ ಉದ್ಯಮ ಬೆಳೆಸಲಿಲ್ಲ, ದೇಶದ ಲಕ್ಷಾಂತರ, ಕೋಟ್ಯಂತರ ಮನೆಗಳಲ್ಲಿ ದೀಪ ಬೆಳಗಿದರು. ಉಪ್ಪು ಮಾರಾಟದಿಂದ ಹಿಡಿದು, ಕೋಟಿ ಕೋಟಿ ರೂಪಾಯಿ ಬೆಲೆ ಬಾಳುವ ಕಾರ್‌ಗಳ ತನಕ ವ್ಯಾಪಾರ ಮಾಡಿ ಲಾಭ ಪಡೆದು ಸೈ ಎನಿಸಿಕೊಂಡಿರೋ ಟಾಟಾ ಸಮೂಹದ ಲಾಭದಲ್ಲಿ 66 ಪರ್ಸೆಂಟ್‌ನಷ್ಟು ದುಡ್ಡನ್ನು ಪರೋಪಕ್ಕಾರಕ್ಕಾಗಿಯೇ ಧಾರೆ ಎರೆದಿದ್ದಾರೆ. ಭರ್ತಿ 7 ಲಕ್ಷ ಕೋಟಿ ರೂಪಾಯಿಯನ್ನು ದಾನ ಮಾಡಿರೋ ರತನ್ ಟಾಟಾ ಇಲ್ಲೀವರೆಗೂ ವೈಯಕ್ತಿಕವಾಗಿ ಮಾಡ್ಕೊಂಡಿರೋ ಆಸ್ತಿ ಎಷ್ಟು ಗೊತ್ತಾ?
ಕೇವಲ 3800 ಕೋಟಿ ಮಾತ್ರ!
ರತನ್ ಟಾಟಾ ಹೆಸರು ಜಗತ್ತಿನ ಟಾಪ್ ಕುಬೇರರ ಪಟ್ಟಿಯಲ್ಲಿ ಇಲ್ಲದೇ ಇರಬದುದು. ಆದ್ರೆ, ಜಗತ್ತಿನ ಅತಿದೊಡ್ಡ ದಾನಶೂರಕರ್ಣರ ಸಾಲಿನಲ್ಲಿ ಟಾಟಾ ಹೆಸರು ನಂಬರ್ ಒನ್. ಬಡವರ ಆರೋಗ್ಯಕ್ಕೆ ಆಸ್ಪತ್ರೆ, ಉಚಿತ ಚಿಕಿತ್ಸೆ, ಉಚಿತ ಆರೋಗ್ಯ ಶಿಬಿರಗಳಿಗೆ ಕೋಟ್ಯಾಂತರ ರೂಪಾಯಿ ದಾನ ಕೊಟ್ಟಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಬಡವರ ಮಕ್ಕಳಿಗೆ ಉಚಿತ ಶಿಕ್ಷಣ, ಸ್ಕಾಲರ್‌ಶಿಪ್, ಸಂಶೋಧನೆಗೆ ಲೆಕ್ಕಕ್ಕೇ ಸಿಗದಷ್ಟು ದುಡ್ಡನ್ನು ನೀಡಿದ್ದಾರೆ. ಗ್ರಾಮೀಣ ಅಭಿವೃದ್ಧಿ ಕ್ಷೇತ್ರದಲ್ಲಿ ರಸ್ತೆಗಳು, ಕುಡಿಯುವ ನೀರಿನ ಸೌಕರ್ಯ, ಯುವಕರಿಗೆ ಉಚಿತ ಕೌಶಲ್ಯ ತರಬೇತಿ. ಹೀಗೆ, ಪ್ರತಿಯೊಂದು ಕ್ಷೇತ್ರದಲ್ಲಿಯೂ ರತನ್ ಟಾಟಾ ಕೊಡುಗೈ ದಾನವಿದೆ.
ಬಡವರ ಮನೆ ಮನೆಗೂ ಕಾರು ಕೊಟ್ಟ ಕನಸುಗಾರ!
ನ್ಯಾನೋ, ಇಂದಿನ ಮಕ್ಕಳು, ಹರೆಯ ಯುವಕ ಯುವತಿಯರನ್ನು ಹೊರತುಪಡಿಸಿ ಈ ಹೆಸರು ಕೇಳಿರದ ಭಾರತೀಯನೇ ಇಲ್ಲ ಅಂದ್ರೂ ತಪ್ಪಿಲ್ಲ. ಯಾಕಂದ್ರೆ, ಒಂದು ಕಾಲದಲ್ಲಿ ಈ ಹೆಸರು ಸೃಷ್ಟಿ ಮಾಡಿದ್ದ ಹವಾ ಅಂಥಾದ್ದು. ಸಾಯೋವರೆಗೂ ದುಡಿದ್ರೂ ಕಾರು ಖರೀದಿಸೋದು ಅಸಾಧ್ಯ ಅಂತಾ ಕನಸಿಗೆ ಕೊಳ್ಳಿಯಿಟ್ಟು ಕೂತಿದ್ದ ಬಡ ಕುಟುಂಬಗಳ ಕಣ್ಣಲ್ಲೂ ಕಾರು ಖರೀದಿಸೋ ಆಸೆ ಚಿಗುರಿತ್ತು. ಲಕ್ಷ ರೂಪಾಯಿಗೆ ಕಾರು ಖರೀದಿಸಿದ ಮಧ್ಯಮ ವರ್ಗದ ಕುಟುಂಬ ಹಾಯಾಗಿ ಸವಾರಿ ಮಾಡುವಂತಾಯ್ತು. ಆ ನ್ಯಾನೋ ಕಾರಿನ ಪಿತಾಮಹ ಬೇರಾರೂ ಅಲ್ಲ.
ಒಮ್ಮೆ ರತನ್ ಟಾಟಾ ತಮ್ಮ ಐಷಾರಾಮಿ ಕಾರಿನಲ್ಲಿ ಸಾಗುವಾಗ ರಸ್ತೆಯಲ್ಲಿ ಬಡ ಕುಟುಂಬವೊಂದು ಬೈಕ್‌ನಲ್ಲಿ ಹೋಗುತ್ತಿತ್ತಂತೆ. ಅದೇ ವೇಳೆ ಜೋರಾದ ಮಳೆ ಸುರಿದಿತ್ತು. ಬೈಕ್‌ನಲ್ಲಿದ್ದ ಗಂಡ, ಹೆಂಡತಿ ಮತ್ತು ಮಗು ಎಲ್ಲರೂ ತೋಯ್ದು ತೊಪ್ಪೆಯಾಗಿದ್ರು. ಆದ್ರೂ ನೆನೆಯುತ್ತಲೇ ಬೈಕ್ ನಲ್ಲಿ ಸಾಗಿದ್ರು. ಆ ದೃಶ್ಯ ಕಂಡು ರತನ್ ಟಾಟಾ ತೀವ್ರ ನೊಂದುಕೊಂಡಿದ್ರು. ತಮ್ಮನ್ನು ತಾವು ಆ ಬಡ ಕುಟುಂಬದಲ್ಲಿ ಕಲ್ಪಿಸಿಕೊಂಡು ಕಣ್ಣೀರಿಟ್ಟಿದ್ರು. ಅಂದು ರತನ್ ಟಾಟಾ ತಲೆಯಲ್ಲಿ ಬಂದಿದ್ದ ಯೋಚನೆಯ ಪ್ರತಿಫಲವೇ ನ್ಯಾನೋ ಕಾರು!
ದೊಡ್ಡ ದೊಡ್ಡವರೆಲ್ಲಾ ರತನ್ ಟಾಟಾ ಕಾಲಿಗೆ ಬೀಳುತ್ತಿದ್ದರೇಕೆ ?
ಈ ದೇಶದಲ್ಲಿದ್ದ ಮತ್ತು ದೇಶದಲ್ಲಿರೋ ನಿಜವಾದ ಅಜಾತಶತ್ರುಗಳ ಪೈಕಿ ರತನ್ ಟಾಟಾ ಅಗ್ರಸ್ಥಾನದಲ್ಲಿರುತ್ತಾರೆ. ಯಾಕಂದ್ರೆ ಎಂತಹ ಕಡುಪಾಪಿಗೂ ಕೂಡ ಈ ಪುಣ್ಯಾತ್ಮನನ್ನು ದ್ವೇಷಿಸೋದಕ್ಕೆ ಮನಸ್ಸೇ ಬರಲ್ಲಾ ಅಂತಂದ್ರೂ ಉತ್ಪ್ರೇಕ್ಷೆಯಲ್ಲಾ. ಅದೆಲ್ಲಾ ಬಿಡಿ, ಟಾಟಾ ಸಮೂಹಕ್ಕೆ ಪ್ರತಿಸ್ಪರ್ಧಿಯಾಗಿದ್ದ ಕಂಪನಿಗಳ ಮಾಲೀಕರೂ ಕೂಡ ರತನ್ ಟಾಟಾ ಭೇಟಿಗೆ ಬಂದು ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡು ಹೋಗಿರೋ ಅನೇಕ ಉದಾಹರಣೆಗಳಿವೆ. ಅಂತಹವರ ಸಾಲಿನಲ್ಲಿ ಇನ್ಫೋಸಿಸ್ ಸಂಸ್ಥೆಯ ಸಹಸಂಸ್ಥಾಪಕ ನಾರಾಯಣ ಮೂರ್ತಿ ಕೂಡ ಒಬ್ಬರು.ಒಮ್ಮೆ ಒಂದು ಕಾರ್ಯಕ್ರಮದಲ್ಲಿ ನಾರಾಯಣ ಮೂರ್ತಿ ಟಾಟಾ ಅವ್ರಿಂದ ಪ್ರಶಸ್ತಿ ಪಡೆದು ಅವರು ಕಾಲೆಗಿರಗಿದ್ದ ರೀತಿ ಕಂಡು ಇಡೀ ದೇಶವೇ ಟಾಟಾಗೆ ತಲೆಬಾಗಿತ್ತು.
ಇದನ್ನೂ ಓದಿ: VIDEO: ರತನ್ ಟಾಟಾಗೆ ಅಂತಿಮ ನಮನ ಸಲ್ಲಿಸಿದ ಪ್ರೀತಿಯ ‘ಗೋವಾ’.. ಮನ ಮಿಡಿಯೋ ದೃಶ್ಯ!
ಉದ್ಯಮಿಗಳು, ಸ್ಟಾರ್‌ಗಳು, ಸಾಧಕರು, ಇವೆರಲ್ಲ ಪಾಲಿಗೆ ರತನ್ ಟಾಟಾ ಬಿಗ್‌ಬಾಸ್ ರೀತಿಯಲ್ಲಿದ್ರು. ದೇವತಾ ಮನುಷ್ಯ ಅಂತೀವಲ್ಲ, ರತನ್ ಟಾಟಾ ಅಂಥಾ ಒಬ್ಬ ದೇವ ಮಾನವ ಅಂದ್ರೂ ತಪ್ಪಿಲ್ಲ.ಬಹುಶಃ ದಾನದ ವಿಚಾರದಲ್ಲಿ ರತನ್ ಟಾಟಾ ಮತ್ತು ಟಾಟಾ ಫ್ಯಾಮಿಲಿಯನ್ನು ಮೀರಿಸೋ ಮತ್ತೊಂದು ಕುಟುಂಬ ಬರುತ್ತೋ ಇಲ್ವೋ ಗೊತ್ತಿಲ್ಲ. ರತನ್ ಟಾಟಾ ನಡೆಸಿಕೊಂಡು ಬಂದಿಕೋ ಸಂಸ್ಕಾರವನ್ನು ಅವರ ಮುಂದಿನ ಪೀಳಿಗೆ ಮುಂದುವರೆಸಿಕೊಂಡು ಹೋಗುತ್ತೋ ಇಲ್ವೋ ಅದೂ ಗೊತ್ತಿಲ್ಲ. ರತನ್ ಟಾಟಾರದ್ದು ದಾನದಲ್ಲಿ ಕರ್ಣನನ್ನೂ ಮೀರಿಸೋ ವ್ಯಕ್ತಿತ್ವ ಅನ್ನೋದಕ್ಕೆ ಎರಡ್ಮೂರು ಲೆಕ್ಕಗಳನ್ನ ಹೇಳ್ತೀವಿ ಕೇಳಿ. 2010 ರಲ್ಲಿ ಟಾಟಾ ಸಮೂಹದ ಮೂಲಕ ಕೊಲ್ಕತ್ತಾದ ಟಾಟಾ ಮೆಡಿಕಲ್ ಸೆಂಟರ್‌ಗೆ ಕ್ಯಾನ್ಸರ್ ರೋಗಿಗಳ ಉಚಿತ ಚಿಕಿತ್ಸೆಗೆಂದೇ ಭರ್ತಿ 200 ಕೋಟಿ ರೂಪಾಯಿ ದಾನ ಮಾಡಿತ್ತು. 2008 ರಲ್ಲಿ ದೇಶದ ಉನ್ನತ ಶಿಕ್ಷಣ ಕ್ಷೇತ್ರಕ್ಕೆ 500 ಕೋಟಿ ರೂಪಾಯಿಗಳನ್ನ ನೀಡಿದ್ರು. ಸ್ಕಾಲರ್‌ಶಿಪ್ ರೂಪದಲ್ಲಿ ಬಡ ಯುವಕರಿಗೆ ಉನ್ನತ ಶಿಕ್ಷಣಕ್ಕೆ ದುಡ್ಡು ವಿನಿಯೋಗವಾಗಿತ್ತು. ಇಂದು ದೇಶದಲ್ಲಿ ದೊಡ್ಡ ದೊಡ್ಡ ಹುದ್ದೆಯಲ್ಲಿರೋ ಸಾವಿರಾರು ಮಂದಿಗೆ ದಾರಿ ದೀಪವಾಗಿದ್ದೇ ಈ ರತನ್ ಟಾಟಾ.
ದೇಶದ ಪಾಲಿಗೆ ಬರಸಿಡಿಲಿನಂತೆ ಬಂದೆರಗಿದ್ದ ಕೋವಿಡ್ ವೇಳೆಯಲ್ಲಿ ರತನ್ ಟಾಟಾ ಮಾಡಿದ ಕೊಡುಗೈ ದಾನವನ್ನ ನೆನೆಯದಿರೋಕೆ ಸಾಧ್ಯವೇ ಇಲ್ಲ. ಕೋವಿಡ್ ವೇಳೆ ರತನ್ ಟಾಟಾ ಸರ್ಕಾರಕ್ಕೆ ಬರೊಬ್ಬರಿ 1500 ಕೋಟಿ ರೂಪಾಯಿಗಳನ್ನ ದಾನ ಮಾಡಿದ್ದರು. ಜೊತೆಯಲ್ಲಿ, ಟಾಟಾ ಟ್ರಸ್ಟ್‌ನಿಂದ 500 ಕೋಟಿಗಳಷ್ಟು ಮೌಲ್ಯದ ಕೋವಿಡ್ ಕಿಟ್‌ಗಳು, ಮೆಡಿಕಲ್ ಉಪಕರಣಗಳು, ಟೆಸ್ಟಿಂಗ್ ಕಿಟ್ ಖರೀದಿಗೆ ನೀಡಿದ್ದರು.ರತನ್ ಟಾಟಾ ಬಗ್ಗೆ ಅಪಾರ ಗೌರವ, ಭಕ್ತಿ ಇರೋದಕ್ಕೆ ಕಾರಣವೇ ಈ ಗುಣ. ಮೊದಲೇ ಹೇಳಿದ ಹಾಗೆ, ರತನ್ ಟಾಟಾ ಅವರು ವೈಯಕ್ತಿಕವಾಗಿ ಮಾಡಿಕೊಂಡಿರೋ ಆಸ್ತಿ ಕೇವಲ 3800 ಕೋಟಿ. ಅದೇ ಕೋವಿಡ್ ಟೈಮಲ್ಲಿ ದೇಶಕ್ಕೆ ಒಂದೇ ಬಾರಿಗೆ ನೀಡಿದ ದುಡ್ಡು ಬರೊಬ್ಬರಿ 1500 ಕೋಟಿ. ಇಂಥಾ ಪುಣ್ಯಾತ್ಮ ಭಾರತದಲ್ಲಿ ಹುಟ್ಟಿದ್ದರು ಎಂಬುದೇ ನಮ್ಮೆಲ್ಲರ ಪುಣ್ಯ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ