/newsfirstlive-kannada/media/post_attachments/wp-content/uploads/2024/10/ratan-Tata-1.jpg)
ರಾತ್ರೋರಾತ್ರಿ ಶತಕೋಟಿ ಭಾರತೀಯರು ದುಃಖತಪ್ತರಾಗಿದ್ದಾರೆ. ದೇಶ ಕಂಡ ಮಹಾನ್ ಉದ್ಯಮಿ ರತನ್ ಟಾಟಾ ನಮ್ಮನ್ನಗಲಿದ್ದಾರೆ. ಈ ಸುದ್ದಿ ಕೇಳಿ ಭಾರತೀಯರು ಬೆಚ್ಚಿ ಬಿದ್ದಿದ್ದಾರೆ. ಸಾಮಾನ್ಯರು ಮಾತ್ರವಲ್ಲದೇ ರಾಜಕಾರಣಿಗಳು, ಉದ್ಯಮಿಗಳು ಕಣ್ಣೀರಿಟ್ಟಿದ್ದಾರೆ.
ಭಾರತದ ಉದ್ಯೋಗ ವಲಯದ ಪಿತಾಮಹ. ಅಜಾತ ಶತ್ರು. ದೇಶ ಕಂಡ ಮಹಾನ್ ಮಾನವತಾವಾದಿ. ಬಡವರ ಬಂಧು, ಕೊಡುಗೈ ದಾನಿ. ಭಾರತದ ಶ್ರೀಮಂತ ಉದ್ಯಮಿ. ಸರಳ ಜೀವಿ. ಎಲ್ಲರ ನೆಚ್ಚಿನ ರತನ್ ಟಾಟಾ ತಮ್ಮ ಜೀವನ ಬಂಡಿಯನ್ನು ನಿಲ್ಲಿಸಿದ್ದಾರೆ.
ಅನಾರೋಗ್ಯದಿಂದ ಉದ್ಯಮ ರತ್ನ ರತನ್ ಟಾಟಾ ಇನ್ನಿಲ್ಲ
ಭಾರತ ಕಂಡ ಶ್ರೇಷ್ಠ ಕೈಗಾರಿಕೋದ್ಯಮಿ, ಟಾಟಾ ಸಮೂಹದ ಮುಖ್ಯಸ್ಥ ರತನ್ ಟಾಟಾ ಅನಾರೋಗ್ಯದಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದವರು ತಮ್ಮ 86ನೇ ವಯಸ್ಸಿಗೆ ವಿಧಿವಶರಾಗಿದ್ದಾರೆ. ಭಾರತದ ವಸ್ತುಗಳಂದ್ರೆ ಮೂಗು ಮುರಿಯುವಾಗ ವಿಶ್ವಾದ್ಯಂತ ಟಾಟಾ ಕಂಪನಿಗಳಿಗೆ ಉತ್ತಮ ಹೆಸರನ್ನು ತಂದು ಕೊಟ್ಟವರು. ವೃದ್ಧಾಪ್ಯದಲ್ಲೂ ಸದಾ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದ ರತನ್ ಟಾಟಾ ಇಂದು ನಮ್ಮನೆಲ್ಲ ಅಗಲಿ ಕಾಲದ ಕರೆಗೆ ಓಗೊಟ್ಟಿದ್ದಾರೆ.
ಇದನ್ನೂ ಓದಿ: ಎಲ್ಲವನ್ನೂ ಹಂಚಿಕೊಂಡ ಅವಳಿ ಸಹೋದರಿಯರು ಪತಿಯನ್ನು ಹಂಚಿಕೊಳ್ಳಲು ರೆಡಿ? ಏನಿದು ಒನ್ ಬೈ ಟು ಮ್ಯಾರೇಜ್ ಸ್ಟೋರಿ
ರತನ್ ಟಾಟಾ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮೊನ್ನೆಯಷ್ಟೇ ರಕ್ತದೊತ್ತಡ ಹೆಚ್ಚಾಗಿ ಮುಂಬೈನ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಕಳೆದ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಈ ಸುದ್ದಿ ಕೇಳಿ ಶತಕೋಟಿ ಭಾರತೀಯರು ಶಾಕ್ಗೊಳಗಾಗಿದ್ದಾರೆ. ಉದ್ಯಮ ವಲಯವಂತೂ ಬೆಚ್ಚಿ ಬಿದ್ದಿದೆ. ರತನ್ ಟಾಟಾ ಇನ್ನಷ್ಟು ದಿನ ಇರಬೇಕಿತ್ತು ಅಂತ ಸಂತಾಪ ಸೂಚಿಸುತ್ತಿದ್ದಾರೆ. ಕೋವಿಡ್ ಸಂಕಷ್ಟದಲ್ಲಿ ಸಿಲುಕಿದ್ದಾಗ ಕೋಟಿ ಕೋಟಿ ಹಣವನ್ನು ದೇಣಿಗೆ ನೀಡಿದ್ದರು. ರತನ್ ಟಾಟಾ 2000ನೇ ಇಸ್ವಿಯಲ್ಲಿ ಪದ್ಮಭೂಷಣ ಮತ್ತು 2008ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಗೂ ಭಾಜನರಾಗಿದ್ದಾರೆ.
ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಮುಖೇಶ್ ಅಂಬಾನಿ ಭೇಟಿ
ಇನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ರತನ್ ಟಾಟಾ ವಿಧಿವಶರಾದ ಹಿನ್ನೆಲೆ ರಾತ್ರೋ ರಾತ್ರಿ ರಿಲಾಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಇವರ ಜೊತೆಗೆ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಕೂಡ ಆಗಮಿಸಿದ್ದಾರೆ. ಮಾತ್ರವಲ್ಲದೇ ಹಲವು ಗಣ್ಯರು ಆಗಮಿಸಿದ್ದಾರೆ.
ಇದನ್ನೂ ಓದಿ: ಪ್ರೇಮಿಗಳಲ್ಲಿ ಪರಸ್ಪರ ಜಗಳ; ವ್ಯವಹಾರದಲ್ಲಿ ಭಾರೀ ನಷ್ಟ ಸಾಧ್ಯತೆ; ಇಲ್ಲಿದೆ ಇಂದಿನ ಭವಿಷ್ಯ
ರತನ್ ಟಾಟಾ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಗಣ್ಯರ ಸಂತಾಪ
ಇನ್ನು ಟಾಟಾ ಸನ್ಸ್‌ನ ಗೌರವ ಅಧ್ಯಕ್ಷ ರತನ್ ಟಾಟಾ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಮೋದಿ, ರತನ್ ಟಾಟಾ ದೂರದೃಷ್ಟಿಯ ಉದ್ಯಮಿ. ಸಹಾನುಭೂತಿಯುಳ್ಳ ಆತ್ಮ ಮತ್ತು ಅಸಾಧಾರಣ ಮನುಷ್ಯ. ಅವರು ಭಾರತದ ಅತ್ಯಂತ ಹಳೆಯ ಮತ್ತು ಅತ್ಯಂತ ಪ್ರತಿಷ್ಠಿತ ವ್ಯಾಪಾರ ಸಂಸ್ಥೆಗಳಿಗೆ ಸ್ಥಿರ ನಾಯಕತ್ವ ನೀಡಿದರು ಎಂದು ಸ್ಮರಿಸಿದ್ದಾರೆ. ಇದರ ಜೊತೆಗೆ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ಸಲ್ಮಾನ್ ಖಾನ್, ಗೌತಮ್ ಅದಾನಿ, ಆನಂದ ಮಹೀಂದ್ರಾ, ಗೂಗಲ್ ಸಿಇಓ ಸುಂದರ್ ಪಿಚ್ಛೈ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಒಟ್ಟಾರೆ ಭಾರತ ಕಂಡ ಶ್ರೇಷ್ಟ ಕೈಗಾರಿಕೋದ್ಯಮಿ, ಕಲಿಯುಗದ ಕರ್ಣ ಅಂತಾನೇ ಕರೆಸಿಕೊಳ್ಳುತ್ತಿದ್ದ ರತನ್ ಟಾಟಾ ನಮ್ಮನ್ನಗಲಿರುವುದು ತೀವ್ರ ದುಃಖ ತಂದಿದೆ. ದೈಹಿಕವಾಗಿ ಟಾಟಾ ನಮ್ಮನ್ನಗಲಿದ್ರೂ ಮಾನಸಿಕವಾಗಿ, ಅವರು ಮಾಡಿದ ದಾನ-ಧರ್ಮಗಳಿಂದ ಶತಕೋಟಿ ಭಾರತೀಯರ ಮನಸ್ಸಲ್ಲಿ ಚಿರಸ್ಥಾಯಿ ಅನ್ನೋದ್ರಲ್ಲಿ ಎರಡು ಮಾತಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ