/newsfirstlive-kannada/media/media_files/2025/10/08/bbk12_contestants-2025-10-08-23-09-23.jpg)
ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್‌ಗೆ ಬೀಗ ಬಿದ್ದಿದೆ. ಅಸಲಿ ಆಟ ಶುರುವಾದ 10 ದಿನಕ್ಕೆ ಶಟ್​ಡೌನ್​ ಆಗಿದೆ. ವಾರದ ಕಥೆ ಕಿಚ್ಚ ಜೊತೆ ಬದಲು ವಾರದ ಆರಂಭದಲ್ಲೇ ವಾರದ ಕಥೆ ಮಾಲಿನ್ಯ ಮಂಡಳಿ ಜೊತೆ ಎನ್ನುವಂತಾಗಿದೆ. ಎಲ್ಲಾ ಸ್ಪರ್ಧಿಗಳು ಸದ್ಯ ರೆಸಾರ್ಟ್​ ಸೇರಿದ್ದು ಬಿಗ್​ ಮನೆ ತೆರೆಯುತ್ತಾ, ಇಲ್ವೋ ಅನ್ನೋದೇ ದೊಡ್ಡ ಕನ್ಫೂಶನ್​.
ಬಿಗ್​ ಬಾಸ್​​.. ಯಶಸ್ವಿಯಾಗಿ 11 ಸೀಸನ್ ಮುಗಿಸಿ 12ನೇ ಆವೃತ್ತಿ ನಡೆಸುತ್ತಿರುವ ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋಗೆ ಸದ್ಯ ಬೀಗ ಜಡಿಯಲಾಗಿದೆ. ಪರಿಸರ ನಿಯಮ ಉಲ್ಲಂಘಿಸಿದ ಆರೋಪದ ಮೇರೆಗೆ ಬಿಗ್‌ಬಾಸ್ ನಡೀತಿದ್ದ ರಾಮನಗರದ ಅಮ್ಯೂಸ್‌ಮೆಂಟ್ ಪಾರ್ಕ್ ಜಾಲಿವುಡ್ ಸ್ಟುಡಿಯೋಗೆ ಬೀಗ ಬಿದ್ದಿದ್ದು 17 ಸ್ಪರ್ಧಿಗಳು ಕೂಡ ಈಗಲ್ಟನ್ ರೆಸಾರ್ಟ್​ ಸೇರಿದ್ದಾರೆ.
ಬಿಗ್ ಬಾಸ್ ಮನೆಗೆ ಮಾಲಿನ್ಯ ಮಂಡಳಿ ಬೀಗ!
ಡ್ರಾಮಾ..ಡ್ರಾಮಾ.. ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್​ ಬಾಸ್​ನಲ್ಲಿ ಹೈಡ್ರಾಮಾ ನಡೆದಿದೆ. ಪರಿಸರ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಬಿಗ್ ಮನೆಗೆ ಬೀಗ ಬಿದ್ದಿದ್ದು ಜಾಲಿವುಡ್ ಕೆಲ ದಿನಗಳ ಸಮಯಾವಕಾಶ ಕೋರಿತ್ತು. ಸ್ಟುಡಿಯೋದಲ್ಲಿ 400ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡ್ತಿದ್ದಾರೆ. ಬಿಗ್ ಬಾಸ್ ಶೋ ನಡೆಯುತ್ತಿದೆ. ಈ ರೀತಿ ಏಕಾಏಕಿ ಬಂದ್ ಮಾಡಿದ್ರೆ ಕಾರ್ಮಿಕರ ಕೆಲಸಕ್ಕೆ ಕುತ್ತು ಬೀಳಲಿದೆ. ನಮ್ಮಿಂದ ತಪ್ಪಾಗಿದೆ, ತಪ್ಪು ಸರಿಪಡಿಸಿಕೊಳ್ಳಲು ಕಾಲಾವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ. ಮನವಿ ಪುರಸ್ಕರಿಸಿರುವ ಡಿಸಿ, ಇದನ್ನ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಂಗಳಕ್ಕೆ ತಲುಪಿಸಿದ್ದಾರೆ.
ಇದರ ವ್ಯಾಪ್ತಿ ಇರೋದು ಮಾಲಿನ್ಯ ನಿಯಂತ್ರಣ ಬೋರ್ಡ್​ಗೆ. ಅವರ ನಿರ್ಧಾರಂತೆ ನಾವು ಕ್ರಮ ತೆಗೆದುಕೊಂಡಿದ್ದೇವೆ. ಅವರು ಹೇಳಿದಂತೆ ಮಾಡಲಾಗಿದೆ.
ಯಶವಂತ ವಿ. ಗುರುಕರ್, ರಾಮನಗರ ಜಿಲ್ಲಾಧಿಕಾರಿ
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ, ನಾವು ಬಿಗ್‌ಬಾಸ್ ವಿರುದ್ಧವಿಲ್ಲ. ಜಾಲಿವುಡ್‌ನವರೇ ಬಿಗ್‌ಬಾಸ್‌ಗೆ ಮೋಸ ಮಾಡಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಅಲ್ಲದೆ ಜಿಲ್ಲಾಧಿಕಾರಿಗಳಿಗೆ ಇದರಲ್ಲಿ ನಿರ್ಣಯ ತಗೊಳ್ಳುವ ಅಧಿಕಾರ ಇಲ್ಲ ಎಂದಿದ್ದಾರೆ.
ನಾವು ಬಿಗ್​ ಬಾಸ್ ಅಪೋಸಿಟ್ ಇಲ್ಲ, ಅದನ್ನು ನಾವು ವಿರೋಧ ಮಾಡಲ್ಲ, ಅದನ್ನ ಸ್ಟಾಪ್ ಮಾಡಿಲ್ಲ. ನಮ್ಮ ಬಳಿ ಯಾವುದೇ ಅರ್ಜಿ ಬಂದಿಲ್ಲ. ನಮ್ಮ ನಿರ್ದೇಶನವನ್ನು ಪಾಲನೆ ಮಾಡುತ್ತಿರುವುದು ಜಿಲ್ಲಾಧಿಕಾರಿಗಳು. ಶೋಕಾಸ್ ನೋಟಿಸ್ ಅನ್ನು ಪದೇ ಪದೇ ಜಾಲಿವುಡ್​ಗೆ ಕೊಟ್ಟಿದ್ದೇವೆ. ಇವುಗಳಿಗೆ ಸ್ಪಂದನೆ ಮಾಡಿಲ್ಲ. ಕನ್ಷೆಂಟ್​ಗೆ ಅಪ್ಲೇನೇ ಮಾಡಿಲ್ಲ. ಇನ್ನಿತರ ವಿಚಾರಗಳನ್ನು ಮಾತನಾಡಲು ಅವರಿಗೆ ಹಕ್ಕು ಇಲ್ಲ. ಬಿಗ್​ ಬಾಸ್​ಗೆ ಜಾಲಿವುಡ್​ನವರು ಮೋಸ ಮಾಡಿದ್ದಾರೋ ಏನೋ ನನಗೆ ಗೊತ್ತಿಲ್ಲ. ಸ್ಥಳ ಮಹಜರು ಮಾಡಿದ್ದೇವೆ. ಅವಾಗ ಬಿಗ್ ಬಾಸ್ ಇರಲಿಲ್ಲ.
ನರೇಂದ್ರ ಸ್ವಾಮಿ, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ
ಬಿಗ್ ಬಾಸ್ ಮನೆಗೆ ಬೀಗ.. ಡಿಕೆಶಿಗೆ ಜೆಡಿಎಸ್​ ಡಿಚ್ಚಿ!
ಇನ್ನು ಬಿಗ್ ಬಾಸ್ ಮನೆಗೆ ಬೀಗ ಹಾಕಿದ ವಿಚಾರವನ್ನ ಉಲ್ಲೇಖಿಸಿ ಡಿಕೆಶಿಗೆ ಜೆಡಿಎಸ್​ ಡಿಚ್ಚಿ ಕೊಟ್ಟಿದೆ. ಬಿಗ್​ ಮನೆಗೆ ಬೀಗ ಹಾಕಿದ ಹಾಗೆ ಗುಂಡಿ ಮುಚ್ಚಿಸ್ತೀರಾ? ರಾಜ್ಯದಲ್ಲಿ ರೈತರ ಆತ್ಮಹತ್ಯೆಗಳ ಯಾವಾಗ ನಿಲ್ಲಿಸ್ತೀರಾ? ಕೈಲಾಗದವರು ಮೈಪರಚಿಕೊಂಡಂತೆ ಅಂತ ಸಾಲು ಸಾಲು ಪ್ರಶ್ನೆಗಳ ಮೂಲಕ ಟ್ವಿಟರ್​ನಲ್ಲಿ ತಿವಿದಿದೆ. ಇದಕ್ಕೆ ಡಿಸಿಎಂ ಕೂಡ ತಿರುಗೇಟು ಕೊಟ್ಟಿದ್ದಾರೆ.
ಕನ್ನಡದ ಬಿಗ್ ಬಾಸ್ ಶೋಗೆ ‘ಕರೆಂಟ್’​​ ಶಾಕ್​!
ಇಷ್ಟೆಲ್ಲಾ ಆದ ಮೇಲೆ ಬಿಗ್ ಬಾಸ್ ಶೋಗೆ ‘ಕರೆಂಟ್’​​ ಶಾಕ್​ ಕೂಡ ಹೊಡೆದಿದೆ. ಬೆಸ್ಕಾಂ ಜಾಲಿವುಡ್​ ಸ್ಟುಡಿಯೋದ ವಿದ್ಯುತ್ ಸಂಪರ್ಕವನ್ನ ಕಡಿತಗೊಳಿಸಿದೆ. ನೋಟಿಸ್​ ನೀಡಿದ್ರೂ ಪಡೆಯದ ಕಾರಣ ಈ ಪವರ್​ ಕಟ್​ ಮಾಡಲಾಗಿದೆ.
ಜಾಲಿವುಡ್ ಸ್ಟುಡಿಯೋಸ್ ಅರ್ಜಿ ನಾಳೆ ವಿಚಾರಣೆ
ಇನ್ನು ಇಷ್ಟೆಲ್ಲಾ ಹೈಡ್ರಾಮಾ ಬಳಿಕ ನಾಳೆ ವಿಚಾರಣೆ ನಡೆಯಲಿದೆ. ಜಾಲಿವುಡ್ ಸ್ಟುಡಿಯೋಸ್​ಗೆ ನೀಡಿದ್ದ ನೋಟೀಸ್ ಪ್ರಶ್ನಿಸಿ ಹೈಕೋರ್ಟ್​ಗೆ ವೆಲ್ಸ್ ಸ್ಟುಡಿಯೋಸ್ ಅಂಡ್ ಎಂಟರ್ಟೈನ್ಮೆಂಟ್ ಅರ್ಜಿ ಸಲ್ಲಿಸಿದೆ. ಈ ಅರ್ಜಿ ವಿಚಾರಣೆ ನಾಳೆ ನಡೆಯಲಿದೆ. ಕನ್ನಡ ಬಿಗ್​ ಬಾಸ್​ ಶೋ ಇತಿಹಾಸದಲ್ಲೇ ಇದೊಂದು ಕರಾಳ ದಿನ. ಸದ್ಯ ಪರಿಸರ ವಿಚಾರಕ್ಕೆ ತಿಕ್ಕಾಟ ನಡೆಯುತ್ತಿದ್ದು ಬಿಗ್ ಬೀಗ ತೆಗೆಯುವ ಭವಿಷ್ಯ ನಾಳೆ ನಿರ್ಧಾರವಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ