/newsfirstlive-kannada/media/post_attachments/wp-content/uploads/2024/10/STRESS-AND-SMOKING.jpg)
ಇದು ಓಡುತ್ತಿರುವ ಜಮಾನಾ, ಪ್ರತಿಯೊಂದರಲ್ಲೂ ಸ್ಪರ್ಧೆ ಅನ್ನೋದು ಹಾಸುಹೊಕ್ಕಾಗಿದೆ. ಹೀಗಾಗಿ ನಾವು ಓಡಬೇಕಾದದ್ದು ಅನಿವಾರ್ಯ. ಈ ಅನಿವಾರ್ಯತೆಯಲ್ಲಿಯೇ ಸಿಲುಕಿ ಜಗತ್ತು ಈಗ ಒತ್ತಡ ಎನ್ನುವ ಕೂಪದಲ್ಲಿ ಬಿದ್ದು ಒದ್ದಾಡುತ್ತಿದೆ. ಈ ಒತ್ತಡ ಯಾರನ್ನೂ ಕೂಡ ಬಿಟ್ಟಿಲ್ಲ, ವಯಸ್ಸು, ಲಿಂಗ ಯಾವ ಬೇಧವೂ ಇಲ್ಲದೇ ಇದು ಈಗ ಎಲ್ಲೆಡೆ ಆವರಿಸಿಕೊಂಡಿದೆ. ಅದನ್ನು ನಿವಾರಿಸಿಕೊಳ್ಳಲೆಂದೇ ಹಲವರು ಹಲವು ರೀತಿಯ ಚಟಗಳಿಗೆ ಬಲಿಯಾಗುತ್ತಾರೆ. ಅದರ ಮೊದಲ ಹೆಜ್ಜೆಯೇ ಧೂಮಪಾನ.
ಸ್ಮೋಕಿಂಗ್ ಹಾಗೂ ಸ್ಟ್ರೇಸ್​ಗೆ ತುಂಬಾ ಅವಿನಾಭಾವ ಸಂಬಂಧವಿದೆ. ಜನರು ಏನಾದರೂ ಒತ್ತಡ ಉಂಟಾದಾಗ ಬಾ ಮಗಾ ಒಂದು ಧಮ್ ಹೊಡದು ಬರೋಣ ಅನ್ನೋ ಡೈಲಾಗ್ ಕಾಮನ್. ಹೀಗಾಗಿ, ಮಾನಸಿಕ ಒತ್ತಡ ಉಂಟಾದಾಗ ಮೊದಲು ಕೈಗೆ ಬರೋದೆ ಸಿಗರೇಟ್. ಬಹಳಷ್ಟು ಜನ ಒತ್ತಡದಿಂದ ಹೊರಗೆ ಬರಲೆಂದೇ ಧೂಮಪಾನ ಮಾಡುತ್ತಾರೆ. ಅದು ಮುಂದೆ ಬಲಿತು ದೊಡ್ಡದಾಗಿ ನಮ್ಮ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಆದ್ರೆ ಒಂದು ವಿಷಯವನ್ನು ನೀವು ತಿಳಿದುಕೊಳ್ಳುವುದು ತುಂಬಾ ಪ್ರಮುಖವಾಗಿದೆ. ಧೂಮಪಾನದಿಂದ ತಾತ್ಕಾಲಿ ನಿರಾಳ ಸಿಗಬಹುದಾದರೂ ನಿಮ್ಮ ಒತ್ತಡ ಹಾಗೂ ಆತಂಕವನ್ನು ಇನ್ನೂ ಹೆಚ್ಚಿಸುವುದೇ ನಿಮ್ಮ ಧೂಮಪಾನದ ಚಟ. ಧೂಮಪಾನದ ಚಟ ನಿಮ್ಮನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಇಂಚಿಂಚಾಗಿ ಸಾಯಿಸುತ್ತಾ ಬರುತ್ತದೆ. ಇದು ಅನೇಕ ದೈಹಿಕ ಹಾಗೂ ಭಾವನಾತ್ಮಕ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆ ಇರುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಇದನ್ನೂ ಓದಿ:ನಿಮ್ಮನ್ನು ನೀವು ಪ್ರೀತಿಸುವುದನ್ನು ಕಲಿಯಿರಿ, ಸ್ವಯಂ ದ್ವೇಷದಿಂದ ಆಚೆ ಬರಲು ಇವೆ 7 ದಾರಿಗಳು
ಧೂಮಪಾನ ಒತ್ತಡವನ್ನು ಹೆಚ್ಚಿಸಲು ಪ್ರಮುಖ ಕಾರಣ ಅಂದ್ರೆ ಅದರೊಳಗಿರುವ ನಿಕೋಟಿನ್ ಅಂಶ. ಸ್ಟ್ರೆಸ್ ಹಾಗೂ ಆ್ಯಂಕ್ಸೈಟಿಯಂತಹ ಸಮಸ್ಯೆಗಳು ಇದರಿಂದ ಇನ್ನಷ್ಟು ಜಾಸ್ತಿಯಾಗುತ್ತವೆಯೇ ಹೊರತು ಕಡಿಮೆ ಆಗುವುದಿಲ್ಲ. ಸ್ಮೋಕ್ ಮಾಡಿದ ಆ ಒಂದು ಕ್ಷಣಕ್ಕೆ ನಮಗೆ ರಿಲೀಫ್ ಅನಿಸಬಹುದು ಆದ್ರೆ ಧೂಮಪಾನ ದೀರ್ಘಕಾಲಿಕ ಮಾನಸಿಕ ಸಮಸ್ಯೆಗಳನ್ನು ತಂದೊಡ್ಡುತ್ತದೆ.
ಕೇವಲ ಆತಂಕ ಹಾಗೂ ಒತ್ತಡ ಸಮಸ್ಯೆಗಳು ಮಾತ್ರವಲ್ಲ ಧೂಮಪಾನದಿಂದ ನಿದ್ರಾಹೀನತೆಯೂ ಆವರಿಸುವ ಸಾಧ್ಯತೆ ಇದೆ. ನಿದ್ರೆಯೂ ಸರಿಯಾಗಿ ಆಗದೇ ಇದ್ರೆ ಅದು ಇನ್ನಷ್ಟು ಒತ್ತಡದ ಸಮಸ್ಯೆಗೆ ಕಾರಣವಾಗಲಿದೆ. ಈಗಾಗಲೇ ಹೇಳಿದಂತೆ ಸ್ಮೋಕಿಂಗ್​ ಆ ಕ್ಷಣಕ್ಕೆ ನೆಮ್ಮದಿ ನೀಡಿದರು ಕೂಡ ಅದು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಬಹಳ ವ್ಯತಿರಿಕ್ತವಾದ ಪರಿಣಾಮ ಬೀರಲಿದೆ.
ಇದೆಲ್ಲಾ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸಮಸ್ಯೆಗಳ ಮೇಲೆ ಧೂಮಪಾನ ಮಾಡುವ ಪರಿಣಾಮಗಳಾದ್ರೆ ನಿಮ್ಮ ಕೆಲಸ ಮೇಲೆಯೂ ಕೂಡ ಈ ಧೂಮಪಾನ ಋಣಾತ್ಮಕ ಪರಿಣಾಮ ಬೀರುತ್ತದೆ. ಪ್ರತಿ ಗಂಟೆಗೊಮ್ಮೆ ನೀವು ಧೂಮಪಾನ ಮಾಡಲು ಎದ್ದು ಹೋಗಬೇಕಾಗುತ್ತದೆ. ಪದೇ ಪದೇ ಸಣ್ಣ ವಿರಾಮ ತೆಗೆದುಕೊಳ್ಳುವುದರಿಂದ ನೀವು ಮಾಡುತ್ತಿರುವ ಕೆಲಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರೋದು ಪಕ್ಕಾ.
ಅದರ ಜೊತೆಗೆ ಧೂಮಪಾನ ಅನ್ನೋದು ನಿಮ್ಮ ಜೇಬಿಗೂ ಕೂಡ ಕತ್ತರಿ ಹಾಕುತ್ತದೆ. ಪ್ಯಾಕ್​ಗಟ್ಟಲೇ ಸಿಗರೇಟು ಸೇದುವುದು ನಿಮ್ಮ ಸ್ಟ್ರೆಸ್​ ಲೇವಲ್ ಜಾಸ್ತಿಯಾಗುವುದಲ್ಲದೇ ನಿತ್ಯ ಅದಕ್ಕೆ ತಗುಲುವ ವೆಚ್ಚವೂ ಕೂಡ ನಿಮಗೆ ಹಣಕಾಸಿನ ಸಮಸ್ಯೆಯನ್ನು ತಂದಿಡುತ್ತದೆ. ಹೀಗಾಗಿ ಒತ್ತಡವಿದೆ ಟೆನ್ಶನ್ ಇದೆ ಅನ್ನೋ ಕಾರಣಕ್ಕೆ ಧೂಮಪಾನದ ಮೊರೆ ಹೋಗುವುದು ತುಂಬಾ ಅಪಾಯಕಾರಿ. ಅದು ನಿಮ್ಮನ್ನು ಮಾನಸಿಕವಾಗಿ, ದೈಹಿಕವಾಗಿ ಹಾಗೂ ಆರ್ಥಿಕವಾಗಿಯೂ ಕೂಡ ಬಡವರನ್ನಾಗಿ ಮಾಡುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us