/newsfirstlive-kannada/media/media_files/2025/09/15/team_india-7-2025-09-15-23-12-28.jpg)
ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐನ ನೂತನ ಬಾಸ್ ನೇಮಕಕ್ಕೆ ಕೌಂಟ್ಡೌನ್ ಆರಂಭವಾಗಿದೆ. ರೋಜರ್ ಬಿನ್ನಿಯಿಂದ ತೆರವಾಗಿರೋ ಅಧ್ಯಕ್ಷ ಸ್ಥಾನಕ್ಕೆ ಹೊಸಬರ ನೇಮಕಕ್ಕೆ ಕಸರತ್ತು ಆರಂಭವಾಗಿದೆ. ಬಿಸಿಸಿಐ ಬಾಸ್ ಪಟ್ಟವೇರೋ ರೇಸ್ಗೆ ಇದೀಗ ದಿಗ್ಗಜ ಕ್ರಿಕೆಟರ್ಸ್ ಇಳಿದಿದ್ದಾರೆ. ದಿಗ್ಗಜರ ಎಂಟ್ರಿಯಿಂದ ಬಿಸಿಸಿಐ ಅಧ್ಯಕ್ಷಗಾದಿಯ ಚುನಾವಣಾ ಕಣ ಫುಲ್ ರಂಗೇರಿದೆ.
ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐ ವಲಯದಲ್ಲಿ ಬದಲಾವಣೆಯ ಬಿರುಗಾಳಿ ಜೋರಾಗಿ ಬೀಸ್ತಾಯಿದೆ. ಇತ್ತೀಚೆಗಷ್ಟೇ 70ನೇ ವರ್ಷಕ್ಕೆ ಕಾಲಿಟ್ಟ ರೋಜರ್ ಬಿನ್ನಿ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದಾರೆ. ಇದೀಗ ಭಾರತೀಯ ಕ್ರಿಕೆಟ್‌ನ ಮುಂದಿನ ಬಿಗ್ಬಾಸ್ ಯಾರಾಗ್ತಾರೆ.? ಅನ್ನೋ ಕುತೂಹಲ ಕ್ರಿಕೆಟ್ ವಲಯದಲ್ಲಿ ಮನೆ ಮಾಡಿದೆ. ರೋಜರ್ ಬಿನ್ನಿಯಿಂದ ತೆರವಾದ ಬಿಸಿಸಿಐ ಅಧ್ಯಕ್ಷ ಹುದ್ದೆಯ ರೇಸ್ಗೀಗ ದಿಗ್ಗಜ ಕ್ರಿಕೆಟಗರು ಇಳಿದಿದ್ದಾರೆ.
‘ಬಿಗ್ಬಾಸ್’ ಹುದ್ದೆಯ ಮೇಲೆ ಬೆಂಗಾಲ್ ಟೈಗರ್ ಕಣ್ಣು.!
ರೋಜರ್ ಬಿನ್ನಿ ಪಟ್ಟದಿಂದ ಕೆಳಗಿಳಿದ ಬಳಿಕ ನಡೆದ ಹಂಗಾಮಿ ಅಧ್ಯಕ್ಷರಾಗಿ ರಾಜೀವ್ ಶುಕ್ಲಾ ಸದ್ಯ ಕಾರ್ಯ ನಿರ್ವಹಿಸ್ತಾ ಇದ್ದಾರೆ. ಎಜಿಎಮ್ ಮೀಟಿಂಗ್ನಲ್ಲಿ ನೂತನ ಅಧ್ಯಕ್ಷರ ನೇಮಕವಾಗಲಿದೆ. ಈ ಸಭೆಗೆ ಬೆಂಗಾಲ್ ಕ್ರಿಕೆಟ್ ಅಸೋಷಿಯನ್ ಸೌರವ್ ಗಂಗೂಲಿಯನ್ನ ಪ್ರತಿನಿಧಿಯಾಗಿ ನಾಮಿನೇಟ್ ಮಾಡಿದೆ. ಇದರೊಂದಿಗೆ ಅಧಿಕೃತವಾಗಿ ಸೌರವ್ ಗಂಗೂಲಿ ಅಧ್ಯಕ್ಷ ಹುದ್ದೆಯ ರೇಸ್ಗೆ ಎಂಟ್ರಿಕೊಟ್ಟಿದ್ದಾರೆ.
ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ನಿಂದ ಅಚ್ಚರಿಯ ಎಂಟ್ರಿ.!
ಆರಂಭದಲ್ಲಿ ರಾಜೀವ್ ಶುಕ್ಲಾ, ಆ ಬಳಿಕ ಸೌರವ್ ಗಂಗೂಲಿ, ನಂತರದಲ್ಲಿ ಸಚಿನ್ ತೆಂಡುಲ್ಕರ್ ಹೆಸರು ಬಿಸಿಸಿಐ ಬಾಸ್ ಹುದ್ದೆಗೆ ಕೇಳಿ ಬಂದಿದ್ವು. ಸಚಿನ್ ಸಾರಾಸಗಟಾಗಿ ಈ ಸುದ್ದಿಯನ್ನ ತಳ್ಳಿ ಹಾಕಿದ್ದಾರೆ. ರಾಜೀವ್ ಶುಕ್ಲಾ ಹೆಚ್ಚೆನು ಆಸಕ್ತಿ ತೋರಿಸಿಲ್ಲ. ಹೀಗಾಗಿ ಗಂಗೂಲಿ ಮತ್ತೆ ಬಿಸಿಸಿಐ ಅಧ್ಯಕ್ಷರಾಗೋದು ಪಕ್ಕಾ ಎಂಬ ಟಾಕ್ ಬಿಸಿಸಿಐ ವಲಯದಲ್ಲಿತ್ತು. ಆದ್ರೀಗ ಗಂಗೂಲಿಗೆ ಟಫ್ ಫೈಟ್ ಎದುರಾಗಿದೆ. ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ರೇಸ್ಗೆ ಎಂಟ್ರಿಕೊಟ್ಟಿದ್ದಾರೆ.
ಎಜಿಎಮ್ ಮೀಟಿಂಗ್ಗೂ ಮುನ್ನ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಅಚ್ಚರಿಯ ನಿರ್ಧಾರ ತಳೆದಿದೆ. ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ನ PCA ಪ್ರತಿನಿಧಿಯಾಗಿ ಸಭೆಗೆ ಕಳುಹಿಸಲು ತೀರ್ಮಾನಿಸಿದೆ. ಇದ್ರಿಂದಿಗೆ ಹರ್ಭಜನ್ ಸಿಂಗ್ ಕೂಡ ಅಧಿಕೃತವಾಗಿ ಚುನಾವಣಾ ಕಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆಫ್ಸ್ಪಿನ್ನರ್ ಕಣ್ಣು ಅಧ್ಯಕ್ಷಗಾದಿಯ ಮೇಲಿದೆ ಅನ್ನೋದು ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಮೂಲದ ಮಾಹಿತಿಯಾಗಿದೆ.
ಇದನ್ನೂ ಓದಿ: ಟೀಮ್ ಇಂಡಿಯಾದಿಂದ ಕಣ್ಮರೆಯಾದ ಕೊಹ್ಲಿ, ರೋಹಿತ್ ಸೇರಿ ಈ ಆಟಗಾರರು ಏನ್ ಮಾಡ್ತಿದ್ದಾರೆ?
ಕ್ರಿಕೆಟಿಗರಿಗೆ ಮಣೆ ಹಾಕಲು ಬಿಸಿಸಿಐನಲ್ಲಿ ಒಲವು.!
ಬಿಸಿಸಿಐ, ಕ್ರಿಕೆಟ್ ನಿಯಂತ್ರಣ ಮಂಡಳಿಯಾಗಿರೋದ್ರಿಂದ ಕ್ರಿಕೆಟಿಗರೇ ಮತ್ತೆ ಅಧ್ಯಕ್ಷರಾಗಬೇಕು ಎಂಬ ನಿಲುವು ಬಿಸಿಸಿಐನಲ್ಲಿದೆ. 2019ರಿಂದ ಅದೇ ಪರಿಪಾಠ ಪಾಲಿಸಿಕೊಂಡು ಬರಲಾಗಿದೆ. ಗಂಗೂಲಿ ಆ ಬಳಿಕ ಬಿನ್ನಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಈಗಲೂ ಮತ್ತೆ ಮಾಜಿ ಕ್ರಿಕೆಟಿಗರಿಗೇ ಪಟ್ಟ ಕಟ್ಟ ಬೇಕು ಅನ್ನೋ ಕೂಗು ಬಿಸಿಸಿಐ ವಲಯದಲ್ಲಿ ಬಲವಾಗಿದೆ. ಇದೀಗ ಗಂಗೂಲಿ ಹಾಗೂ ಹರ್ಭಜನ್ ಅಧಿಕೃತವಾಗಿ ರೇಸ್ಗೆ ಎಂಟ್ರಿಕೊಟ್ಟಿದ್ದಾರೆ. ಹೀಗಾಗಿ ಇವರಿಬ್ಬರಲ್ಲೇ ಒಬ್ಬರು ಅಧ್ಯಕ್ಷರಾಗೋದು ಪಕ್ಕಾ.!
KSCAನಿಂದ ಅಧ್ಯಕ್ಷ ರಘುರಾಮ್ ಭಟ್ ಬಿಸಿಸಿಐಗೆ.?
ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ನಿಂದ ರಘುರಾಮ್ ಭಟ್ ಎಜಿಎಮ್ಗೆ ಪ್ರತಿನಿಧಿಯಾಗಿ ತೆರಳಲಿದ್ದಾರೆ. ಬಿಸಿಸಿಐ ಅಧ್ಯಕ್ಷ ಪಟ್ಟ ಸೇರಿದಂತೆ ಒಟ್ಟು 4 ಸ್ಥಾನಗಳಿಗೆ ಹೊಸ ಪದಾಧಿಕಾರಿಗಳ ನೇಮಕ ನಡೆಯಲಿದೆ. ಇವುಗಳ ಪೈಕಿ ರಘುರಾಮ್ ಭಟ್ಗೂ ಒಂದು ಸ್ಥಾನ ಸಿಗಲಿದೆ ಅನ್ನೋದು ಮೂಲಗಳ ಮಾಹಿತಿಯಾಗಿದೆ. ಸಪ್ಟೆಂಬರ್ 28ರಂದು ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆ ನಡೆಯಲಿದ್ದು, ನೂತನ ಅಧ್ಯಕ್ಷ ಹಾಗೂ ನೂತನ ಪದಾಧಿಕಾರಿಗಳು ಯಾರಾಗಲಿದ್ದಾರೆ ಎಂಬ ಕುತೂಹಲದ ಪ್ರಶ್ನೆಗೆ ಉತ್ತರ ಸಿಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ