/newsfirstlive-kannada/media/media_files/2026/02/02/india-vs-pakistan-1-2026-02-02-09-05-46.jpg)
2026ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಘೋಷಿಸಿರುವ ಪಾಕಿಸ್ತಾನದ ಹಠಮಾರಿ ಧೋರಣೆಗೆ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಕೊನೆಗೂ ಮೌನ ಮುರಿದಿದೆ. ಪಾಕಿಸ್ತಾನದ ಈ ನಿರ್ಧಾರವು ಅಂತರಾಷ್ಟ್ರೀಯ ಕ್ರಿಕೆಟ್ನ ಸಮಗ್ರತೆಗೆ ಧಕ್ಕೆ ತರುತ್ತದೆ ಎಂದು ಐಸಿಸಿ ಎಚ್ಚರಿಸಿದೆ.
ಐಸಿಸಿ ಹೇಳಿದ್ದೇನು?
ಭಾರತದ ವಿರುದ್ಧ ಫೆಬ್ರವರಿ 15ರಂದು ನಡೆಯಬೇಕಿರುವ ಪಂದ್ಯವನ್ನು ಆಡುವುದಿಲ್ಲ ಎಂಬ ಪಾಕಿಸ್ತಾನ ಸರ್ಕಾರದ ನಿರ್ಧಾರದ ಕುರಿತು ಪ್ರತಿಕ್ರಿಯಿಸಿರುವ ಐಸಿಸಿ, ವಿಶ್ವದರ್ಜೆಯ ಕ್ರೀಡಾಕೂಟವೊಂದರಲ್ಲಿ ಅರ್ಹತೆ ಪಡೆದ ಎಲ್ಲಾ ತಂಡಗಳು ಸಮಾನವಾಗಿ ಮತ್ತು ವೇಳಾಪಟ್ಟಿಯಂತೆ ಆಡುವುದು ಕಡ್ಡಾಯ. ಕೇವಲ ಆಯ್ದ ಪಂದ್ಯಗಳನ್ನು ಮಾತ್ರ ಆಡುತ್ತೇವೆ ಎನ್ನುವ ಪಾಕಿಸ್ತಾನದ ನಿಲುವು ಒಪ್ಪುವಂತದ್ದಲ್ಲ ಎಂದು ತಿಳಿಸಿದೆ.
ಇದನ್ನೂ ಓದಿ: ಟಿ-20 ವಿಶ್ವಕಪ್ ಮುನ್ನವೇ ಪಾಕ್ ವಿವಾದ.. ಹಠಮಾರಿ ಧೋರಣೆಗೆ ICC ಎಚ್ಚರಿಕೆ..!
ಪಿಸಿಬಿಗೆ ಐಸಿಸಿ ನೀಡಿದ ಪ್ರಮುಖ ಎಚ್ಚರಿಕೆಗಳು
ಕ್ರೀಡಾ ಸ್ಫೂರ್ತಿಗೆ ಧಕ್ಕೆ: ಆಯ್ದ ಪಂದ್ಯಗಳಿಂದ ಹಿಂದೆ ಸರಿಯುವುದು ಕ್ರಿಕೆಟ್ನ ಪವಿತ್ರತೆ ಮತ್ತು ಸ್ಪರ್ಧಾತ್ಮಕತೆಯನ್ನು ಹಾಳುಮಾಡುತ್ತದೆ.
ಪಾಕಿಸ್ತಾನಕ್ಕೆ ನಷ್ಟ: ಈ ನಿರ್ಧಾರದಿಂದ ಜಾಗತಿಕ ಕ್ರಿಕೆಟ್ ವ್ಯವಸ್ಥೆಗೆ ಮಾತ್ರವಲ್ಲದೆ, ಪಾಕಿಸ್ತಾನ ಕ್ರಿಕೆಟ್ಗೂ ದೀರ್ಘಕಾಲದ ಭಾರಿ ಹಿನ್ನಡೆಯಾಗಲಿದೆ. ಇದರ ಪರಿಣಾಮಗಳನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಎದುರಿಸಬೇಕಾಗುತ್ತದೆ.
ಸಮನ್ವಯದ ಕೊರತೆ: ಈ ನಿರ್ಧಾರದ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ ನಮಗೆ ಇನ್ನೂ ಯಾವುದೇ ಅಧಿಕೃತ ಪತ್ರ ಬಂದಿಲ್ಲ. ಕೇವಲ ಮಾಧ್ಯಮಗಳ ಮೂಲಕ ವಿಷಯ ತಿಳಿದಿದೆ ಎಂದು ಐಸಿಸಿ ಅಸಮಾಧಾನ ವ್ಯಕ್ತಪಡಿಸಿದೆ.
ಪಂದ್ಯ ಆಡದಿದ್ದರೆ ಏನಾಗುತ್ತೆ? ಪಾಕ್ಗೆ ‘NRR‘ ಭೀತಿ!
ಐಸಿಸಿ ನಿಯಮ 16.10.7ರ ಪ್ರಕಾರ, ಪಾಕಿಸ್ತಾನ ತಂಡವು ಭಾರತದ ವಿರುದ್ಧದ ಪಂದ್ಯವನ್ನು ಆಡದೆ ಬಹಿಷ್ಕರಿಸಿದರೆ, ಆ ಪಂದ್ಯದ ಎರಡು ಅಂಕಗಳನ್ನು ಭಾರತಕ್ಕೆ ಬಿಟ್ಟುಕೊಡಬೇಕಾಗುತ್ತದೆ. ಪಾಕಿಸ್ತಾನದ ನೆಟ್ ರನ್ ರೇಟ್ (Net Run Rate) ಮೇಲೆಯೂ ಇದು ಭಾರಿ ಕೆಟ್ಟ ಪರಿಣಾಮ ಬೀರಲಿದೆ. ಪಂದ್ಯ ಆಡದೆ ಸೋತರೆ ಎದುರಾಳಿ ತಂಡ 20 ಓವರ್ಗಳಲ್ಲಿ ಗುರಿ ತಲುಪಿದಂತೆ ಪರಿಗಣಿಸಿ ಪಾಕ್ ತಂಡದ ರನ್ ರೇಟ್ ಕಡಿತಗೊಳಿಸಲಾಗುತ್ತದೆ. ಇದು ಪಾಕಿಸ್ತಾನ ಮುಂದಿನ ಹಂತಕ್ಕೆ (Super 8) ಹೋಗುವುದನ್ನು ಕಠಿಣಗೊಳಿಸಲಿದೆ.
ವೇಳಾಪಟ್ಟಿ ಹೀಗಿದೆ
ಪಾಕಿಸ್ತಾನ ತಂಡವು ಗ್ರೂಪ್ 'ಎ' ನಲ್ಲಿ ಭಾರತ, ನಮೀಬಿಯಾ, ನೆದರ್ಲ್ಯಾಂಡ್ಸ್ ಮತ್ತು ಅಮೆರಿಕಾ ತಂಡಗಳ ಜೊತೆಗಿದೆ. ಫೆಬ್ರವರಿ 7 ರಂದು ನೆದರ್ಲ್ಯಾಂಡ್ಸ್ ವಿರುದ್ಧ ಪಾಕ್ ಮೊದಲ ಪಂದ್ಯವಾಡಬೇಕಿದೆ.
ಸದ್ಯ ಐಸಿಸಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮತ್ತು ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸೂಚಿಸಿದೆ. ಒಂದು ವೇಳೆ ಪಾಕಿಸ್ತಾನ ತನ್ನ ಪಟ್ಟು ಸಡಿಲಿಸದಿದ್ದರೆ, ಐಸಿಸಿ ಪಾಕ್ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ:ಐಟಿ ಕಣ್ಣು CJ ರಾಯ್ ಮೇಲೆ ಬಿದ್ದಿದ್ಯಾಕೆ..? ಈ ಆರೋಪ ನಿಜಾನಾ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us