/newsfirstlive-kannada/media/media_files/2025/09/18/ms_dhoni-2-2025-09-18-17-36-31.jpg)
ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾದ ಗ್ರೇಟ್ ಕ್ಯಾಪ್ಟನ್ ನಿಜ. ಆದ್ರೆ, ಧೋನಿ ವಿರುದ್ಧ ಕೆಲ ಆರೋಪಗಳು ಕೇಳಿ ಬರ್ತಾನೆ ಇರುತ್ತೆ. ಧೋನಿ ನಾಯಕತ್ವದಲ್ಲಿ ತಮಗೆ ಅನ್ಯಾಯವಾಯ್ತು ಎಂದವರು ಸಾಲು ಸಾಲು ಆಟಗಾರರಿದ್ದಾರೆ. ಇದೀಗ ಇದೇ ಮಹಾ ನಾಯಕನ ಎದುರು ಮತ್ತೊಂದು ಸ್ಪೋಟಕ ಆರೋಪವೊಂದು ಕೇಳಿ ಬಂದಿದೆ.
ಟೀಮ್ ಇಂಡಿಯಾ ಕಂಡ ಸರ್ವಶ್ರೇಷ್ಠ ನಾಯಕ ಅಂದರೆ ಧೋನಿ. ಟೀಮ್ ಇಂಡಿಯಾಗೆ ಮೂರು ಐಸಿಸಿ ಟ್ರೋಫಿ ಮುಡಿಗೇರಿಸಿದ ಮಹಾನಾಯಕ. ಇದೇ ಮಹಾ ನಾಯಕ ಅವಧಿಯಲ್ಲೇ ಟೀಮ್ ಇಂಡಿಯಾ ವಿಶ್ವ ಕ್ರಿಕೆಟ್ ಲೋಕದ ಅಧಿಪತಿಯಾಗಿ ಮರೆದಾಡಿತ್ತು. ಟಿ20, ಏಕದಿನ, ಟೆಸ್ಟ್ ಕ್ರಿಕೆಟ್ನಲ್ಲಿ ನಂ.1 ಪಟ್ಟಕ್ಕೇರಿತ್ತು. ಆದ್ರೆ, ಧೋನಿ, ಅಂತರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಸರಿದು ವರ್ಷಗಳೇ ಉರುಳಿದರು. ಧೋನಿ ವಿರುದ್ಧದ ಕೆಲ ಆರೋಪಗಳಿಗೆ ಮಾತ್ರ ಇವತ್ತಿಗೂ ಬ್ರೇಕ್ ಬಿದ್ದಿಲ್ಲ.
ಬೇಕಾದವರಿಗೆ ಸ್ಥಾನ.. ಬೇಡದವರಿಗೆ ಗೇಟ್ ಪಾಸ್..!
ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಸರಿದಿದ್ದಾರೆ. ಆದ್ರೆ, ಧೋನಿ ನಾಯಕತ್ವದಲ್ಲಿ ಹಲವು ಆಟಗಾರರಿಗೆ ಅನ್ಯಾಯವಾಗಿದೆ. ಯುವರಾಜ್ ಸಿಂಗ್, ವಿರೇಂದ್ರ ಸೆಹ್ವಾಗ್, ಇರ್ಫಾನ್ ಪಠಾಣ್, ಹರ್ಭಜನ್ ಸಿಂಗ್ ಸೇರಿದಂತೆ ಹಲವು ಆಟಗಾರರು ಧೋನಿಯಿಂದಲೇ ಟೀಮ್ ಇಂಡಿಯಾದಿಂದ ಔಟಾಗಬೇಕಾಯ್ತು ಎಂಬ ಮಾತುಗಳಿವೆ. ಈ ಬಗ್ಗೆ ಸ್ವತಃ ಅದೇ ಮಾಜಿ ಕ್ರಿಕೆಟರ್ಗಳು ತುಟಿಬಿಚ್ಚಿದ್ದಿದೆ. ಬೇಕಾದವರಿಗಷ್ಟೇ ಸ್ಥಾನ ನೀಡ್ತಿದ್ದ ಧೋನಿ, ಬೇಡದವರಿಗೆ ತಂಡದಿಂದ ಡ್ರಾಪ್ ಮಾಡಿದ್ದರು. ಆದ್ರೆ, ಧೋನಿಗೆ ಬೇಕಾದವರು ಹುಕ್ಕಾ ಹ್ಯಾಂಗ್.
ಧೋನಿ ಒಬ್ಬ ಹುಕ್ಕಾ ವ್ಯಸನಿ. ಇದೇ ಕಾರಣಕ್ಕೆ ರೂಮ್ನಲ್ಲಿ ಹುಕ್ಕಾ ಅರೆಂಜ್ ಮಾಡ್ತಿದ್ದ ಆಟಗಾರರಿಗೆ ತಂಡದಲ್ಲಿ ಸ್ಥಾನ ಫಿಕ್ಸ್. ಇದೇ ವಿಚಾರವಾಗೇ ಮಾತನಾಡಿದ್ದ ಇರ್ಫಾನ್ ಪಠಾಣ್, ಪರೋಕ್ಷ ಹುಕ್ಕಾ ಗ್ಯಾಂಗ್ಗಷ್ಟೇ ತಂಡದಲ್ಲಿ ಸ್ಥಾನ ಖಾಯಂ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದರು.
2008ರ ಆಸ್ಟ್ರೇಲಿಯಾ ಸರಣಿಯಲ್ಲಿ ಇರ್ಫಾನ್ ಚೆನ್ನಾಗಿ ಬೌಲಿಂಗ್ ಮಾಡಿಲ್ಲ ಎಂದು ಧೋನಿ ಹೇಳಿದ್ದರು. ಆ ಸರಣಿಯುದ್ದಕ್ಕೂ ನಾನು ಉತ್ತಮವಾಗಿ ಬೌಲಿಂಗ್ ಮಾಡಿದ್ದೆ. ಕೆಲವೊಮ್ಮೆ, ಹೇಳಿಕೆಗಳನ್ನ ಮಾಧ್ಯಮಗಳಲ್ಲಿ ತಿರುಚಲಾಗುತ್ತದೆ. ಆದ್ದರಿಂದ ನಾನು ಈ ಬಗ್ಗೆ ಸ್ಪಷ್ಟನೆ ಕೇಳಲು ಬಯಸಿದ್ದೆ. ಹೀಗಾಗಿ ನಾನು ಧೋನಿಯನ್ನೇ, ಇದಕ್ಕಿಂತ ಚೆನ್ನಾಗಿ ಬೌಲಿಂಗ್ ಮಾಡುವುದು ಹೇಗೆ ಎಂದು ಕೇಳಿದ್ದೆ. ಈ ವೇಳೆ ಧೋನಿ, ಆ ಥರ ಏನೂ ಇಲ್ಲ. ಎಲ್ಲವೂ ಯೋಜನೆಯಂತೆ ಚೆನ್ನಾಗಿ ನಡೀತಿದೆ ಎಂದರು. ನಾಯಕನಿಂದಲೇ ಸ್ಪಷ್ಟನೆ ಸಿಕ್ಕ ಮೇಲೆ ನಾವು ನಮ್ಮ ಕೆಲಸ ಮಾಡಿಕೊಂಡು ಹೋಗಬೇಕಷ್ಟೇ. ಇದಾದ ಬಳಿಕವೂ ಮತ್ತೆ ವಿವರಣೆ ಕೇಳುತ್ತಿದ್ದರೆ, ಅದು ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆಯನ್ನುಂಟು ಮಾಡುತ್ತದೆ. ನಮಗೂ ಸ್ವಾಭಿಮಾನ ಇರುತ್ತಲ್ವಾ? ನನಗೆ ಯಾರದ್ದಾದರೂ ಕೋಣೆಗೆ ಹೋಗಿ ಹುಕ್ಕಾ ವ್ಯವಸ್ಥೆ ಮಾಡಿಕೊಡುವ ಅಥವಾ ಮಾತನಾಡುವ ಅಭ್ಯಾಸ ಇರಲಿಲ್ಲ. ಇವೆಲ್ಲವೂ ಎಲ್ಲರಿಗೂ ತಿಳಿದಿರುವ ವಿಷಯ.
ಇರ್ಫಾನ್ ಆರೋಪಕ್ಕೆ ದನಿಗೂಡಿಸಿದ ಮನೋಜ್ ತಿವಾರಿ..!
ಇರ್ಫಾನ್ ಪಠಾಣ್ ಮಾತ್ರವೇ ಅಲ್ಲ, ಮಾಜಿ ಕ್ರಿಕೆಟರ್ ಮನೋಜ್ ತಿವಾರಿಯೂ ಹುಕ್ಕಾ ಗ್ಯಾಂಗ್ ಬಗ್ಗೆ ಮಾತನಾಡಿದ್ದಾರೆ. ಧೋನಿ ಜೊತೆ ಹುಕ್ಕಾ ಹೊಡೆಯುತ್ತಿದ್ದ ಆ ಗ್ಯಾಂಗ್, ಬೆಣ್ಣೆಯ ಮಾತುಗಳನ್ನಾಡುತ್ತಲೇ ಸ್ಥಾನ ಪಡಿಸಿಕೊಳ್ಳುವಲ್ಲಿ ಚಾಣಾಕ್ಷರಾಗಿದ್ದರು. ಅವರಿಗೆಲ್ಲ ಧೋನಿ ರೂಮ್ ಡೋರ್ ಓಪನ್ ಇರ್ತಿತ್ತು ಅನ್ನೋದು ಮನೋಜ್ ತಿವಾರಿಯ ಬಾಂಬ್.
ನಾವು ಹತ್ತಿರದಿಂದ ನೋಡಿದ್ದೇವೆ. ಹುಕ್ಕಾ ತೆಗೆದುಕೊಳ್ಳುವ ಸೆಷನ್‌ಗಳು ಇದ್ದವು. ಕೆಲ ಆಟಗಾರರು ಹತ್ತಿರದವರಾಗಿದ್ದರು. ಆ ಸಮಯದಲ್ಲಿ ಕೆಲ ಆಟಗಾರರು, ನಾಯಕನಿಂದ ಸಹಾಯ ಪಡೆಯಲು ಬೆಣ್ಣೆಯ ಮಾತುಗಳನ್ನಾಡುತ್ತಿದ್ದರು. ಸ್ಥಾನ ಖಚಿತಪಡಿಸಿಕೊಳ್ಳುವಲ್ಲಿ ಅವರು ಚಾಣಾಕ್ಷರಾಗಿದ್ದರು.
ಇಷ್ಟವಿಲ್ಲದ ಆಟಗಾರನ ಟಾರ್ಗೆಟ್ ಮಾಡ್ತಿದ್ರಾ ಮಾಹಿ.?
ಧೋನಿ ಗ್ರೇಟ್ ಕ್ಯಾಪ್ಟನ್ ನಿಜ. ಆದ್ರೆ, ಆಟಗಾರರ ಯುಗಾಂತ್ಯದ ವಿಚಾರದಲ್ಲಿ ಧೋನಿ ಸದಾ ಸದ್ದಿಯಾಗ್ತಾರೆ. ಮಾಜಿ ಆಟಗಾರರೇ ಬಾಂಬ್ ಸಿಡಿಸಿದ್ದಾರೆ. ಯುವರಾಜ್ ಸಿಂಗ್, ವಿರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್, ಗೌತಮ್ ಗಂಭೀರ್, ಅಷ್ಟೇ ಯಾಕೆ..? ಮನೋಜ್ ತಿವಾರಿ, ಇರ್ಫಾನ್ ಪಠಾಣ್ ವೃತ್ತಿ ಜೀವನದ ಅಂತ್ಯಕ್ಕೂ ಧೋನಿಯೇ ಕಾರಣ ಎಂಬ ಮಾತಿದೆ.
ಇದನ್ನೂ ಓದಿ: RCB ಆಟಗಾರರ ಡೆಡ್ಲಿ ಬ್ಯಾಟಿಂಗ್.. ರಜತ್, ಸಾಲ್ಟ್, ಟಿಮ್ ಡೇವಿಡ್, ಬೆಥಲ್ ಸಿಡಿಲಬ್ಬರ.!
ಡ್ರಾಪ್ ಆಗೋಕೆ ಧೋನಿ ಕಾರಣ
ನಾನು ಮತ್ತು ಸಹೋದರ ಶ್ರೀಲಂಕಾದಲ್ಲಿ ಪಂದ್ಯ ಗೆಲ್ಲಿಸಿದ್ವಿ. ನಮ್ಮ ಜಾಗದಲ್ಲಿ ಬೇರೆ ಯಾರೆ ಇದ್ದಿದ್ರೂ ಆ ಬಳಿಕ ಒಂದು ವರ್ಷ ಡ್ರಾಪ್ ಆಗ್ತಾ ಇರಲಿಲ್ಲ. ಆ ಪಂದ್ಯದಲ್ಲಿ ನಮ್ಮ ಗೆಲುವಿಗೆ 27-28 ಎಸೆತಗಳಲ್ಲಿ 60 ರನ್ ಬೇಕಿದ್ವು. ಅಲ್ಲಿಂದ ನಾವು ಪಂದ್ಯ ಗೆಲ್ಲಿಸಿದ್ವಿ. ಆದ್ರೆ, ನ್ಯೂಜಿಲೆಂಡ್ನಲ್ಲಿ ನನ್ನನ್ನ ಬೆಂಚ್ಗೆ ಸೀಮಿತಗೊಳಿಸಲಾಯ್ತು. ಆಗ ನಾನು ಗ್ಯಾರಿ ಬಳಿ ನನ್ನನ್ನ ಯಾಕೆ ಡ್ರಾಪ್ ಮಾಡಲಾಗಿದೆ ಎಂದು ಕೇಳಿದೆ. ಆಗ ಗ್ಯಾರಿ ನನ್ನ ಕೈಯಲ್ಲಿ ಏನೂ ಇಲ್ಲ ಅಂದ್ರು. ನನಗೆ ಇದ್ರಲ್ಲಿ ಯಾರ ಕೈ ಇದೆ ಅನ್ನೋದು ಗೊತ್ತಾಯ್ತು. ನಾಯಕ ಪ್ಲೇಯಿಂಗ್-XI ನಿರ್ಧರಿಸ್ತಾ ಇದ್ದ. ಆಗ ಧೋನಿ ನಮ್ಮ ನಾಯಕನಾಗಿದ್ರು.
ಇರ್ಫಾನ್ ಪಠಾಣ್, ಮಾಜಿ ಕ್ರಿಕೆಟಿಗ
ಧೋನಿ ಸಾಧನೆಗಳ ಬಗ್ಗೆ ಎಷ್ಟು ಚರ್ಚೆಯಾಗುತ್ತೋ, ನಾಯಕ ಧೋನಿಯ ನಡೆಗಳ ಬಗ್ಗೆ ಮಾಜಿ ಟೀಮ್ಮೆಟ್ಸ್ ಟೀಕೆಗಳು ಸದಾ ಚರ್ಚೆಯಲ್ಲಿರ್ತವೆ. ಮೇಲಿಂದ ಮೇಲೆ ಈ ಟೀಕೆಗಳು ವ್ಯಕ್ತವಾದ್ರೂ, ಈ ವಿಚಾರದಲ್ಲಿ ಧೋನಿ ಸದಾ ಮೌನವಹಿಸುವುದು ಹೊಸ ಪ್ರಶ್ನೆಗಳನ್ನ ಹುಟ್ಟು ಹಾಕುವುದು ಸುಳ್ಳಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ