/newsfirstlive-kannada/media/media_files/2025/09/02/rcb_win-1-2025-09-02-14-40-49.jpg)
ಚೊಚ್ಚಲ ಕಪ್ ಗೆದ್ದ ಸಂಭ್ರಮ ತಂದ ಸೂತಕದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ನಿಧಾನವಾಗಿ ಹೊರಬರುತ್ತಿದೆ. ಕಾಲ್ತುಳಿತದ ಕಪ್ಚುಕ್ಕೆಯನ್ನ ತೊಡೆದು ಹಾಕಲು ಹೊರಟಿರುವ ಫ್ರಾಂಚೈಸಿ ಇದೀಗ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಮಾಡಿದ ತಪ್ಪಿಗೆ ಪಶ್ಚಾತಾಪ ಪಡುತ್ತಿರುವ ಫ್ರಾಂಚೈಸಿ ಅಭಿಮಾನಿಗಳಿಗಾಗಿ 6 ವಿಶೇಷ ಕಾರ್ಯಕ್ರಮ ರೂಪಿಸಿದೆ.
ಜೂನ್ 4ರಂದು ನಡೆದ ದುರ್ಘಟನೆಯ ಬಳಿಕ ಸುದೀರ್ಘ ಮೌನಕ್ಕೆ ಜಾರಿದ್ದ ಆರ್ಸಿಬಿ ಅಗಸ್ಟ್ 28ರಂದು ಫ್ಯಾನ್ಸ್ಗೆ ಭಾವನಾತ್ಮಕ ಪತ್ರ ಬರೆದಿತ್ತು. 3 ತಿಂಗಳ ಮೌನ ಮುರಿದು ಆರ್ಸಿಬಿ ಕೇರ್ಸ್ ಅನ್ನೋ ಯೋಜನೆಯನ್ನ ರೂಪಿಸಿರೋದಾಗಿ ತಿಳಿಸಿತ್ತು. ಇಷ್ಟೇ ಅಲ್ಲ.. 2 ದಿನಗಳ ಹಿಂದೆ ಕಾಲ್ತುಳಿತ ದುರಂತದಲ್ಲಿ ಅಸುನೀಗಿದ ಕುಟುಂಬದವರಿಗೆ 10 ಲಕ್ಷದ ಬದಲಾಗಿ 25 ಲಕ್ಷ ಪರಿಹಾರ ನೀಡೋದಾಗಿ ಘೋಷಿಸಿತ್ತು. ಅದ್ರ ಜೊತೆಗೆ ಇದೀಗ ಮತ್ತೆ 6 ಯೋಜನೆಗಳನ್ನ ಅಭಿಮಾನಿಗಳಿಗಾಗಿ ಪರಿಚಯಿಸಿದೆ.
ಯೋಜನೆ 1- ಹಣಕಾಸು ನೆರವಿನ ಹೊರತಾಗಿ ಸಹಾಯಹಸ್ತ
ದುರಂತದಲ್ಲಿ ಮಡಿದವರಿಗೆ ಹಣಕಾಸಿನ ನೆರವು ಮಾತ್ರವಲ್ಲ, ಅದ್ರ ಹೊರತಾಗಿ ಸಹಾಯಹಸ್ತ ಚಾಚಲು ಆರ್ಸಿಬಿ ಮುಂದಾಗಿದೆ. ಅಂದು ಆದ ದುರಂತದಿಂದ ಯಾರಿಗೆಲ್ಲ ತೊಂದೆರೆ ಆಗಿದೆಯೋ ಅವರಿಗೆಲ್ಲ ವೇಗವಾಗಿ, ಪಾರದರ್ಶಕವಾಗಿ ನೆರವಿಗೆ ನಿಲ್ಲೋ ವಾಗ್ಧಾನ ಮಾಡಿದೆ. ಮುಖ್ಯವಾಗಿ ಹ್ಯೂಮನ್ ಸಪೋರ್ಟ್ ಕೂಡ ನೀಡೋದಾಗಿ ತಿಳಿಸಿದೆ.
ಯೋಜನೆ 2- ಕ್ರೌಡ್ ಮ್ಯಾನೇಜ್ಮೆಂಟ್ಗೆ ಹೊಸ ನಿಯಮ
ಚಿನ್ನಸ್ವಾಮಿ ಸ್ಟೇಡಿಯಂ ಸುತ್ತ ಆದ ಘಟನೆ ಇದೀಗ ಫ್ರಾಂಚೈಸಿಯನ್ನ ಎಚ್ಚರಿಸಿದಂತಿದೆ. ಮುಂದೆ ಇಂತಾ ಘಟನೆಗಳು ಆಗದಂತೆ ತಡೆಯೋಕೆ ಈಗಿನಿಂದಲೇ ಪ್ಲಾನ್ ರೂಪಿಸೋ ಕೆಲಸಕ್ಕೂ ಕೈ ಹಾಕಿದೆ. ಕೆಎಸ್ಸಿಎ, ಬಿಸಿಸಿಐ ಜೊತೆಗೂಡಿ ಕ್ರೌಡ್ ಮ್ಯಾನೇಜ್ಮೆಂಟ್ಗೆ ಇನ್ನಷ್ಟು ಸುರಕ್ಷತಾ ಕ್ರಮಗಳನ್ನ ರೂಪಿಸೋದಾಗಿ ಹೇಳಿಕೊಂಡಿದೆ.
ಯೋಜನೆ 3- ಮ್ಯಾನೇಜ್ಮೆಂಟ್ ಕಂಪನಿಗೆ ವಿಶೇಷ ತರಬೇತಿ
ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಜೊತೆಗೂ ಕ್ರೌಡ್ ಮ್ಯಾನೇಜ್ಮೆಂಟ್ಗೆ ಹೊಸ ಪ್ಲಾನ್ಗಳನ್ನ ಆರ್ಸಿಬಿ ರೂಪಿಸಲಿದ್ಯಂತೆ. ಅದ್ರ ಜೊತೆಗೆ ಪ್ರತಿ ವರ್ಷ ಕ್ರೌಡ್ನ ಹೇಗೆ ಮ್ಯಾನೇಜ್ ಮಾಡಬೇಕು. ಎಮರ್ಜೆನ್ಸಿ ಸಂದರ್ಭಗಳಲ್ಲಿ ಹೇಗೆ ರೆಸ್ಪಾಂಡ್ ಮಾಡಬೇಕು ಅನ್ನೋದರ ವಿಶೇಷವಾದ ತರಬೇತಿಯನ್ನ ನೀಡಲು ಆರ್ಸಿಬಿ ಮುಂದಾಗಿದೆ.
ಯೋಜನೆ 4- ಸಮುದಾಯಗಳ ಸಬಲೀಕರಣಕ್ಕೆ ನೆರವು
ಕರ್ನಾಟಕದ ವಿವಿಧ ಭಾಗಗಳಲ್ಲಿರೋ ಹಲವು ಕಮ್ಯುನಿಟಿಗಳಿಗೂ ಸಹಾಯ ಹಸ್ತ ಚಾಚುವುದಾಗಿ ಆರ್ಸಿಬಿ ಫ್ರಾಂಚೈಸಿ ತಿಳಿಸಿದೆ. ಸಮಸ್ಯೆಗಳನ್ನ ಎದುರಿಸ್ತಿರೋ ಜನಾಂಗಗಳ ಶಿಕ್ಷಣ, ಆರೋಗ್ಯ ಸೇರಿದಂತೆ ಮೂಲಭೂತ ಅಗತ್ಯಗಳಿಗೆ ನೆರವಾಗಲು ಆರ್ಸಿಬಿ ಮುಂದಾಗಿದೆ. ಸಿದ್ಧಿ ಜನಾಂಗಕ್ಕೆ ಸಹಾಯ ಮಾಡುವುದರೊಂದಿಗೆ ಈ ಕೆಲಸ ಆರಂಭವಾಗಲಿದೆ ಎಂದು ಫ್ರಾಂಚೈಸಿ ತಿಳಿಸಿದೆ.
ಯೋಜನೆ 5- ಬೆಂಗಳೂರಿನಲ್ಲಿ ವಿಶೇಷ ಸ್ಮಾರಕ ನಿರ್ಮಾಣ
ಅಭಿಮಾನಿಗಳಿಗಾಗಿಯೇ ಬೆಂಗಳೂರಿನಲ್ಲಿ ಸ್ಮಾರಕವೊಂದನ್ನ ನಿರ್ಮಿಸಲು ಕೂಡ ಆರ್ಸಿಬಿ ಪ್ಲಾನ್ ರೂಪಿಸಿದೆ. ಕಾಲ್ತುಳಿತದ ದುರಂತದಲ್ಲಿ ಮಡಿದವರು ಸೇರಿದಂತೆ ವಿಶ್ವಾದ್ಯಂತ ಇರೋ ಆರ್ಸಿಬಿಯ ಅಭಿಮಾನಿಗಳ ಕತೆಗಳನ್ನ, ಹೆಸರುಗಳನ್ನ ವಿಶೇಷ ರೀತಿಯಲ್ಲಿ ಗೌರವಿಸೋದು ಈ ಸ್ಮಾರಕ ನಿರ್ಮಾಣದ ಹಿಂದಿರೋ ಉದ್ದೇಶ.
ಇದನ್ನೂ ಓದಿ:S ಶ್ರೀಶಾಂತ್ಗೆ ಇಂಜುರಿ ಆದ್ರೆ.. ಈ IPL ಫ್ರಾಂಚೈಸಿನ ಸುಪ್ರೀಂ ಕೋರ್ಟ್ಗೆ ಎಳೆದ ಇನ್ಶುರೆನ್ಸ್ ಕಂಪನಿ
ಯೋಜನೆ 6- ಸ್ಥಳೀಯ ಪ್ರತಿಭೆಗಳಿಗೆ ಉದ್ಯೋಗವಕಾಶ ಸೃಷ್ಟಿ
ಅಭಿಮಾನಿಗಳು ಹಾಗೂ ಫ್ರಾಂಚೈಸಿಯ ಸಂಬಂಧ ಮೈದಾನ ಹಾಗೂ ಆಟಕ್ಕೆ ಮಾತ್ರ ಸೀಮಿತವಾಗಿರಬಾರದು ಅನ್ನೋ ಉದ್ದೇಶ ಆರ್ಸಿಬಿ ಕೇರ್ಸ್ದ್ದಾಗಿದೆ. ಹೀಗಾಗಿ ಕೆಲವು ಉದ್ಯೋಗಗಳನ್ನ ಸೃಷ್ಟಿಸಲು ಆರ್ಸಿಬಿ ಮುಂದಾಗಿದೆ. ಪ್ರಮುಖವಾಗಿ ಕರ್ನಾಟಕ ಲೋಕಲ್ ಟ್ಯಾಲೆಂಟ್ಗಳನ್ನ ಗುರುತಿಸಿ ಕೆಲಸಗಳನ್ನ ನೀಡೋ ಯೋಜನೆ ಆರ್ಸಿಬಿ ಹಾಕಿಕೊಂಡಿದೆ. ಜೊತೆಗೆ ಮುಂದಿನ ಪೀಳಿಗೆಯ ಕ್ರೀಡಾಪಟುಗಳಿಗೂ ನೆರವು ನೀಡೋದಾಗಿ ತಿಳಿಸಿದೆ.
ಆರ್ಸಿಬಿಯ ಈ ಹೊಸ ಯೋಜನೆಗಳನ್ನ ಸದ್ಯ ಫ್ಯಾನ್ಸ್ ತುಂಬು ಹೃದಯದಿಂದ ಸ್ವಾಗತ ಮಾಡಿದ್ದಾರೆ. ಈ ಯೋಜನೆಗಳನ್ನ ಫ್ರಾಂಚೈಸಿ ಹೇಗೆ ಅನುಷ್ಠಾನಕ್ಕೆ ತರುತ್ತೆ ಅನ್ನೋದು ಸದ್ಯದ ಪ್ರಶ್ನೆಯಾಗಿದೆ. ಸರಿಯಾದ ರೀತಿಯಲ್ಲಿ ಯೋಜನೆಗಳು ಜಾರಿಗೆ ಬಂದ್ರೆ ಮಾತ್ರ ಇದಕ್ಕೊಂದು ಸಾರ್ಥಕತೆ ಸಿಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ