/newsfirstlive-kannada/media/media_files/2026/01/20/rinku-singh-1-2026-01-20-11-08-15.jpg)
ಟಿ20 ವಿಶ್ವಕಪ್ 2026ರ ಟೂರ್ನಿಯ ಸೂಪರ್-8 ಹಂತದಲ್ಲಿ ಮಾಡು ಇಲ್ಲವೆ ಮಡಿ ಪಂದ್ಯಕ್ಕೆ ಸಜ್ಜಾಗುತ್ತಿರುವ ಟೀಮ್ ಇಂಡಿಯಾಗೆ ದೊಡ್ಡ ಆಘಾತ ಎದುರಾಗಿದೆ. ಭಾರತ ತಂಡದ ಸ್ಟಾರ್ ಸ್ಫೋಟಕ ಬ್ಯಾಟರ್ ರಿಂಕು ಸಿಂಗ್ (Rinku Singh) ಅವರು ಕೌಟುಂಬಿಕ ತುರ್ತು ಪರಿಸ್ಥಿತಿಯ ಕಾರಣದಿಂದಾಗಿ ದಿಢೀರ್ ಆಗಿ ಟೀಮ್ ಕ್ಯಾಂಪ್ ತೊರೆದು ಮನೆಗೆ ಮರಳಿದ್ದಾರೆ.
ವೆಂಟಿಲೇಟರ್‌ನಲ್ಲಿ ರಿಂಕು ತಂದೆ
ರಿಂಕು ಸಿಂಗ್ ಅವರ ತಂದೆ ಖಾನ್‌ಚಂದ್ ಸಿಂಗ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಗ್ರೇಟರ್ ನೋಯ್ಡಾದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಲಗಳ ಪ್ರಕಾರ ಅವರು ವೆಂಟಿಲೇಟರ್ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಸೂಪರ್-8 ಪಂದ್ಯಾವಳಿಯ ನಿಮಿತ್ತ ಸೋಮವಾರವಷ್ಟೇ (ಫೆ.23) ತಂಡದೊಂದಿಗೆ ಚೆನ್ನೈಗೆ ಆಗಮಿಸಿದ್ದ ರಿಂಕು, ತಂದೆಯ ಆರೋಗ್ಯ ತೀರಾ ಹದಗೆಟ್ಟ ವಿಷಯ ತಿಳಿದು ಮಂಗಳವಾರ ಮುಂಜಾನೆ ಚೆನ್ನೈನಿಂದ ತವರಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ವರದಿಯಾಗಿದೆ.
ಮಾಡು ಇಲ್ಲವೆ ಮಡಿ ಪದ್ಯದ ಹೊತ್ತಲ್ಲೇ ಆಘಾತ
ರಿಂಕು ಸಿಂಗ್ ಅವರ ಈ ದಿಢೀರ್ ನಿರ್ಗಮನ ಟೀಮ್ ಇಂಡಿಯಾಗೆ ನಿರ್ಣಾಯಕ ಸಮಯದಲ್ಲಿ ಹಿನ್ನಡೆಯುಂಟು ಮಾಡಿದೆ. ಅಹಮದಾಬಾದ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಸೂಪರ್ 8 ಪಂದ್ಯದಲ್ಲಿ ಭಾರತ 76 ರನ್‌ಗಳ ಹೀನಾಯ ಸೋಲು ಅನುಭವಿಸಿತ್ತು. ಇದರಿಂದ ಟೀಮ್ ಇಂಡಿಯಾದ 12 ಪಂದ್ಯಗಳ ಅಜೇಯ ಓಟಕ್ಕೆ ಬ್ರೇಕ್ ಬಿದ್ದಿದ್ದಲ್ಲದೆ, ನೆಟ್ ರನ್ ರೇಟ್ (NRR) ಕೂಡ ಪಾತಾಳಕ್ಕಿಳಿದಿದೆ.
ಹಾಲಿ ಚಾಂಪಿಯನ್ ಆಗಿರುವ ಭಾರತ ಟೂರ್ನಿಯಿಂದ ಹೊರಬೀಳುವ ಭೀತಿಯಲ್ಲಿದ್ದು, ಸೆಮಿಫೈನಲ್ ಪ್ರವೇಶಿಸಬೇಕಾದರೆ ಉಳಿದೆರಡು ಪಂದ್ಯಗಳನ್ನು ಭಾರಿ ಅಂತರದಿಂದ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ.
ಇದನ್ನೂ ಓದಿ: ರಾಜಸ್ಥಾನದಲ್ಲಿ ಮದುವೆ ಆಗ್ತಿದ್ರೂ ದಕ್ಷಿಣ ಭಾರತದ ಸಂಪ್ರದಾಯ: ‘ವಿರೋಶ್’ ವಿವಾಹದ ಎಕ್ಸ್‌ಕ್ಲೂಸಿವ್ ಡೀಟೇಲ್ಸ್..!
/filters:format(webp)/newsfirstlive-kannada/media/post_attachments/wp-content/uploads/2023/12/RINKU-SINGH-1-2.jpg)
ಚೆನ್ನೈನಲ್ಲಿ ಜಿಂಬಾಬ್ವೆ ಸವಾಲು:
ಭಾರತ ತನ್ನ ಮುಂದಿನ ಪಂದ್ಯದಲ್ಲಿ ಚೆನ್ನೈನಲ್ಲಿ ಜಿಂಬಾಬ್ವೆ ತಂಡವನ್ನು ಎದುರಿಸಲಿದೆ. ಸಿಕಂದರ್ ರಾಜಾ ನೇತೃತ್ವದ ಜಿಂಬಾಬ್ವೆ ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಗ್ರೂಪ್ ಹಂತದಲ್ಲಿ ಮಾಜಿ ಚಾಂಪಿಯನ್‌ಗಳಾದ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾವನ್ನು ಮಣಿಸಿ ಜಿಂಬಾಬ್ವೆ ಸೂಪರ್ 8 ಪ್ರವೇಶಿಸಿತ್ತು. ವೆಸ್ಟ್ ಇಂಡೀಸ್ ವಿರುದ್ಧದ ತನ್ನ ಮೊದಲ ಸೂಪರ್ 8 ಪಂದ್ಯದಲ್ಲಿ ಸೋತಿರುವ ಜಿಂಬಾಬ್ವೆ, ಭಾರತದ ವಿರುದ್ಧ ತಿರುಗಿಬೀಳುವ ಸಾಧ್ಯತೆಯಿದೆ.
ಅಕ್ಷರ್ ಪಟೇಲ್‌ಗೆ ಸ್ಥಾನ?
ಒಂದು ವೇಳೆ ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೆ ರಿಂಕು ಸಿಂಗ್ ಲಭ್ಯವಾಗದಿದ್ದರೆ, ಅವರ ಸ್ಥಾನದಲ್ಲಿ ಉಪನಾಯಕ ಅಕ್ಷರ್ ಪಟೇಲ್ (Axar Patel) ಅವರನ್ನು ಆಡುವ ಬಳಗಕ್ಕೆ (Playing 11) ಸೇರಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅಕ್ಷರ್ ಪಟೇಲ್ ಅವರನ್ನು ಬೆಂಚ್ ಕಾಯಿಸಿದ ಟೀಮ್ ಮ್ಯಾನೇಜ್ಮೆಂಟ್ ನಿರ್ಧಾರವು ಕ್ರಿಕೆಟ್ ಪಂಡಿತರು ಹಾಗೂ ಅಭಿಮಾನಿಗಳಿಂದ ತೀವ್ರ ಟೀಕೆಗೆ ಗುರಿಯಾಗಿತ್ತು. ಇದೀಗ ರಿಂಕು ಅನುಪಸ್ಥಿತಿಯಲ್ಲಿ ಅಕ್ಷರ್ ಮೈದಾನಕ್ಕಿಳಿಯುವ ಅವಕಾಶ ಪಡೆಯಲಿದ್ದಾರೆ.
ಒಟ್ಟಿನಲ್ಲಿ ರಿಂಕು ಸಿಂಗ್ ಅವರ ತಂದೆ ಶೀಘ್ರವಾಗಿ ಗುಣಮುಖರಾಗಲಿ ಹಾಗೂ ಟೀಮ್ ಇಂಡಿಯಾ ಜಿಂಬಾಬ್ವೆ ವಿರುದ್ಧ ಭರ್ಜರಿ ಜಯ ಸಾಧಿಸಿ ಸೆಮೀಸ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲಿ ಎಂಬುದೇ ಅಭಿಮಾನಿಗಳ ಆಶಯವಾಗಿದೆ.
ಇದನ್ನೂ ಓದಿ:ದಕ್ಷಿಣ ಭಾರತದ ಅತಿದೊಡ್ಡ ಶಿರಸಿ ಜಾತ್ರೆಗೆ ಅದ್ದೂರಿ ಚಾಲನೆ: ಭಕ್ತ ಸಾಗರದ ನಡುವೆ ರಥಾರೂಢಳಾದ ಶ್ರೀ ಮಾರಿಕಾಂಬೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us