WPL 2026: ಎರಡನೇ ಬಾರಿಗೆ ಟ್ರೋಫಿ ಎತ್ತಿ ಹಿಡಿದ ಆರ್‌ಸಿಬಿ..! ಕಪ್‌ ನಮ್ದೇ..

WPL 2026 ಫೈನಲ್‌ ಪಂದ್ಯದಲ್ಲಿ RCB ತಂಡವು ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿ 2ನೇ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿದೆ. ಮಂಧಾನ ಹಾಗೂ ಜಾರ್ಜಿಯಾ ವೋಲ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಜಯಭೇರಿ ಬಾರಿಸಿತು

author-image
Ganesh Kerekuli
rcb (1)
Advertisment

WPL 2026 ಫೈನಲ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿ ಎರಡನೇ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿದೆ. ಸ್ಮೃತಿ ಮಂಧಾನ ಹಾಗೂ ಜಾರ್ಜಿಯಾ ವೋಲ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಜಯಭೇರಿ ಬಾರಿಸಿತು. ಈ ಮೂಲಕ ಆರ್‌ಸಿಬಿ ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೇರಿತು.

ಜೆಮಿಮಾ ರೋಡ್ರಿಗಸ್ ನೇತೃತ್ವದ ಡೆಲ್ಲಿ ತಂಡಕ್ಕೆ ಇದು ಸತತ ನಾಲ್ಕನೇ ಫೈನಲ್ ಸೋಲಾಗಿದ್ದು, ಬೌಲಿಂಗ್‌ನಲ್ಲಿ ವೈಫಲ್ಯ ಕಂಡಿದ್ದರಿಂದ ಮತ್ತೊಮ್ಮೆ ಪ್ರಶಸ್ತಿಯಿಂದ ವಂಚಿತವಾಯಿತು. ಸ್ಮೃತಿ ಮತ್ತು ವೋಲ್ ಜೋಡಿ 165 ರನ್‌ಗಳ ದಾಖಲೆಯ ಜೊತೆಯಾಟವಾಡುವ ಮೂಲಕ ಆರ್‌ಸಿಬಿಯ ಗೆಲುವನ್ನು ಸುಲಭಗೊಳಿಸಿದರು.

ಇದನ್ನೂ ಓದಿ:ಭಾರತಕ್ಕೆ ಬರ್ತಿದೆ 'ದ ಮೆಸ್ಸಿ ಎಕ್ಸ್‌ಪೀರಿಯನ್ಸ್': ಫುಟ್‌ಬಾಲ್ ಅಭಿಮಾನಿಗಳಿಗೆ ಹಬ್ಬ!

rcb (14)

ಮೊದಲ ಇನ್ನಿಂಗ್ಸ್ 

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡಕ್ಕೆ ಲಿಜೆಲ್ ಲೀ ಉತ್ತಮ ಆರಂಭ ನೀಡಿದರು. ಲೀ ನಿರ್ಗಮನದ ನಂತರ ಕ್ರೀಸ್‌ಗೆ ಬಂದ ನಾಯಕಿ ಜೆಮಿಮಾ ರೋಡ್ರಿಗಸ್ ಕೇವಲ 37 ಎಸೆತಗಳಲ್ಲಿ 57 ರನ್ ಸಿಡಿಸಿ ಇನ್ನಿಂಗ್ಸ್‌ಗೆ ವೇಗ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಲಾರಾ ವೊಲ್ವಾರ್ಡ್ ಮತ್ತು ಚಿನೆಲ್ಲೆ ಹೆನ್ರಿ 55 ರನ್‌ಗಳ ಜೊತೆಯಾಟದ ಮೂಲಕ ಅಬ್ಬರಿಸಿದರು. ದಕ್ಷಿಣ ಆಫ್ರಿಕಾದ ನಾಯಕಿ ವೊಲ್ವಾರ್ಡ್ 25 ಎಸೆತಗಳಲ್ಲಿ 44 ರನ್ ಗಳಿಸಿದರೆ, ಚಿನೆಲ್ಲೆ ಹೆನ್ರಿ ಕೇವಲ 15 ಎಸೆತಗಳಲ್ಲಿ ಅಜೇಯ 35 ರನ್ ಚಚ್ಚಿದರು. ಈ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ 203 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿತ್ತು.

ಎರಡನೇ ಇನ್ನಿಂಗ್ಸ್ 

204 ರನ್‌ಗಳ ಗುರಿ ಬೆನ್ನಟ್ಟಿದ ಬೆಂಗಳೂರು ತಂಡಕ್ಕೆ ಆರಂಭದಲ್ಲಿ ಗ್ರೇಸ್ ಹ್ಯಾರಿಸ್ (9) ವಿಕೆಟ್ ಕಳೆದುಕೊಂಡು ಹಿನ್ನಡೆಯಾಯಿತು. ಪವರ್‌ಪ್ಲೇನಲ್ಲಿ ತಂಡ ಸ್ವಲ್ಪ ಸಂಕಷ್ಟದಲ್ಲಿದ್ದಂತೆ ಕಂಡರೂ, ಸ್ಮೃತಿ ಮಂಧಾನ ಮತ್ತು ಜಾರ್ಜಿಯಾ ವೋಲ್ ಕ್ರೀಸ್‌ಗೆ ಬಂದ ನಂತರ ಪಂದ್ಯದ ಚಿತ್ರಣವೇ ಬದಲಾಯಿತು. ಡೆಲ್ಲಿಯ ಯಾವುದೇ ತಂತ್ರಗಳು ಇವರ ಮುಂದೆ ಕೆಲಸ ಮಾಡಲಿಲ್ಲ.

rcb (15)

ಜಾರ್ಜಿಯಾ ವೋಲ್ 79 ರನ್ ಗಳಿಸಿ ಔಟಾದರೆ, ನಾಯಕಿ ಸ್ಮೃತಿ ಮಂಧಾನ 87 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಅಂತ್ಯದಲ್ಲಿ ರಿಚಾ ಘೋಷ್ 6 ರನ್ ಗಳಿಸಿ ಔಟಾದಾಗ ಚಿನೆಲ್ಲೆ ಹೆನ್ರಿ ಡೆಲ್ಲಿಗೆ ಸ್ವಲ್ಪ ಆಸೆ ಮೂಡಿಸಿದರು. ಆದರೆ ನಡಿನ್ ಡಿ ಕ್ಲರ್ಕ್ ಮತ್ತು ರಾಧಾ ಯಾದವ್ ಸಂಯಮದ ಆಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಗೆಲುವಿನ ರನ್ ಹರಿಯುತ್ತಿದ್ದಂತೆ ಆರ್‌ಸಿಬಿ ಆಟಗಾರರು ಮೈದಾನಕ್ಕೆ ಧಾವಿಸಿ ಸಂಭ್ರಮ ಆಚರಿಸಿದರು. ಇನ್ನೊಂದೆಡೆ ಸತತ ನಾಲ್ಕನೇ ಬಾರಿಯೂ ಫೈನಲ್ ಸೋತ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರು ತೀವ್ರ ನಿರಾಶೆಗೊಂಡರು.

ಇದನ್ನೂ ಓದಿ: ಕರ್ನಾಟಕದಲ್ಲಿ 5 ವರ್ಷದಲ್ಲಿ 947 ಸರ್ಕಾರಿ ಶಾಲೆಗಳು ಬಂದ್‌! ದೇಶದಲ್ಲಿ 18,727 ಸರ್ಕಾರಿ ಶಾಲೆ ಬಂದ್‌!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WPL 2026 RCB
Advertisment