/newsfirstlive-kannada/media/media_files/2025/09/04/suryakumar_gill-2025-09-04-14-26-24.jpg)
ಪ್ರತಿಷ್ಠೆಯ ಏಷ್ಯಾಕಪ್ ಟೂರ್ನಿ ಟೀಮ್ ಇಂಡಿಯಾ ಟಿ20 ಕ್ಯಾಪ್ಟನ್ ಸೂರ್ಯಕುಮಾರ್ ಪಾಲಿಗೆ ಅಗ್ನಿಪರೀಕ್ಷೆಯ ಕಣವಾಗಿ ಮಾರ್ಪಟ್ಟಿದೆ. ಶುಭ್ಮನ್ ಗಿಲ್ ಎಂಟ್ರಿ ಸೂರ್ಯನ ನೆಮ್ಮದಿಯನ್ನೇ ಕಸಿದುಕೊಂಡಿದೆ. ಅರಬ್ಬರ ನಾಡಲ್ಲಿ ಸೂರ್ಯ ಅಬ್ಬರಿಸಿದ್ರೆ ಸೇಫ್. ಫ್ಲಾಪ್ ಆದ್ರೋ ತಲೆದಂಡ ಫಿಕ್ಸ್. ಶುಭ್ಮನ್ ಗಿಲ್ ಎಂಟ್ರಿ ಸೂರ್ಯನ ಸ್ಥಾನಕ್ಕೆ ಕುತ್ತು ತಂದಿರೋದ್ಯಾಕೆ?.
ಏಷ್ಯಾಕಪ್ ಟೂರ್ನಿಗೆ ಕೌಂಟ್ಡೌನ್ ಶುರುವಾಗಿದೆ. ಇಂದು ಅಥವಾ ನಾಳೆ ಸೂರ್ಯಕುಮಾರ್ ಸೈನ್ಯ ಯುಎಇ ಫ್ಲೈಟ್ ಹತ್ತಲಿದೆ. ಈ ಬಾರಿಯ ಏಷ್ಯಾಕಪ್ ಟೂರ್ನಿಗೆ ಟೀಮ್ ಇಂಡಿಯಾದ ಹಲವರ ಪಾಲಿಗೆ ಅಗ್ನಿಪರೀಕ್ಷೆಯ ಕಣವಾಗಿದೆ. 2026ರ ಟಿ20 ವಿಶ್ವಕಪ್ ಆಡಬೇಕು ಅಂದ್ರೆ, ಏಷ್ಯಾಕಪ್ನಲ್ಲಿ ಮಿಂಚಬೇಕಿದೆ. ಏಷ್ಯನ್ ಸಮರದಲ್ಲಿ ಪರ್ಫಾಮ್ ಮಾಡಿದ್ರೆ ಮಾತ್ರ ಸ್ಥಾನ ಫಿಕ್ಸ್ ಆಗಲಿದೆ. ಇಲ್ಲದಿದ್ರೆ ಪೈಪೋಟಿಯ ನಡುವೆ ಕಳೆದೇ ಹೋಗೋ ಸಾಧ್ಯತೆಯಿದೆ.
ಕ್ಯಾಪ್ಟನ್ ಸೂರ್ಯನಿಗೆ UAEನಲ್ಲಿ ಅಗ್ನಿಪರೀಕ್ಷೆ.!
ಉಳಿದೆಲ್ಲಾ ಆಟಗಾರರ ಕತೆ ಹಾಗಿರಲಿ, ಏಷ್ಯಾಕಪ್ನಲ್ಲಿ ಟಿ20 ತಂಡದ ನಾಯಕ ಸೂರ್ಯಕುಮಾರ್ಗೆ ರಿಯಲ್ ಚಾಲೆಂಜ್ ಎದುರಾಗಲಿದೆ. ಏಷ್ಯಾಕಪ್ನಲ್ಲಿ ಮಿಸ್ಟರ್ 360 ಬ್ಯಾಟರ್ ಮಿಂಚಿದ್ರೆ ಮಾತ್ರ ಸೇಫ್.! ಫೇಲಾದ್ರೆ ನಾಯಕತ್ವದ ಜೊತೆಗೆ ತಂಡದಲ್ಲಿ ಸ್ಥಾನವೂ ಹೋಗೋ ಸಾಧ್ಯತೆ ದಟ್ಟವಾಗಿದೆ. ಟಿ20 ವಿಶ್ವಕಪ್ಗೆ ಯುವ ತಂಡ ಕಟ್ಟೋ ಲೆಕ್ಕಾಚಾರದಲ್ಲಿರೋ ಬಿಸಿಸಿಐ, ಸೂರ್ಯನಿಗೆ ಶಾಕ್ ಕೊಟ್ರೂ ಅಚ್ಚರಿಪಡಬೇಕಿಲ್ಲ.
ನಾಯಕನಾಗಿ ಪಾಸ್.. ಬ್ಯಾಟ್ಸ್ಮನ್ ಆಗಿ ಫೇಲ್.!
ಟೀಮ್ ಇಂಡಿಯಾದ ಟಿ20 ಕ್ಯಾಪ್ಟನ್ ಆಗಿ ಸೂರ್ಯ ಶೈನ್ ಆಗಿದ್ದಾರೆ. ತಂಡವನ್ನ ಮುನ್ನಡೆಸಿದ 6 ಸರಣಿಗಳ ಪೈಕಿ ಒಂದರಲ್ಲೂ ಸೋತಿಲ್ಲ. 5 ಸರಣಿ ಗೆದ್ದಿದ್ರೆ, 1 ಸರಣಿಯಲ್ಲಿ ಡ್ರಾ ಸಾಧಿಸಿದ್ದಾರೆ. 22 ಪಂದ್ಯಗಳಲ್ಲಿ ತಂಡ ಮುನ್ನಡೆಸಿ 17ರಲ್ಲಿ ಗೆಲುವು ತಂದುಕೊಟ್ಟಿದ್ದಾರೆ. ಸೂರ್ಯಕುಮಾರ್ ನಾಯಕತ್ವದ ಬಗ್ಗೆ ಯಾವುದೇ ಪ್ರಶ್ನೆಗಳಿಲ್ಲ. ಪ್ರಶ್ನೆ ಇರೋದು ಪರ್ಫಾಮೆನ್ಸ್ ಮೇಲೆ.!
ನಾಯಕನ ಪಟ್ಟವೇರಿದ ಬಳಿಕ ಸೂರ್ಯ ಸೈಲೆಂಟ್.!
ಸೂರ್ಯಕುಮಾರ್ ಯಾದವ್ ಸ್ಥಾನಕ್ಕೆ ಕುತ್ತು ತಂದಿರೋದು ಪರ್ಫಾಮೆನ್ಸ್ & ಪೈಪೋಟಿ.! 2024ರಲ್ಲಿ ಟೀಮ್ ಇಂಡಿಯಾ ಟಿ20 ಚಾಂಪಿಯನ್ ಆದ ಬಳಿಕ ನಾಯಕನ ಪಟ್ಟ ಅಲಂಕರಿಸಿದ್ದ ಸೂರ್ಯಕುಮಾರ್ ಯಾದವ್ ಮೇಲೆ ಅಪಾರವಾದ ನಿರೀಕ್ಷೆಯಿತ್ತು. ಆದ್ರೆ, ನಾಯಕನ ಪಟ್ಟವೇರಿದ್ದೇ ಏರಿದ್ದು, ಸೂರ್ಯಕುಮಾರ್ ಬ್ಯಾಟಿಂಗ್ ಚಾರ್ಮ್ ಕಳೆದು ಹೋಗಿದೆ. ಮೈದಾನದ ಉದ್ದಗಲಕ್ಕೆ ಚೆಂಡಿನ ದರ್ಶನ ಮಾಡಿಸಿ ಎದುರಾಳಿಗಳನ್ನ ಕಂಗೆಡಿಸ್ತಾ ಇದ್ದ ಸೂರ್ಯಕುಮಾರ್ ರನ್ಗಳಿಕೆಗೆ ತಿಣುಕಾಟ ನಡೆಸಿದ್ದಾರೆ.
ನಾಯಕನಾದ ಬಳಿಕ ಸೂರ್ಯ
ಟೀಮ್ ಇಂಡಿಯಾದ ನಾಯಕನ ಪಟ್ಟವೇರಿದ ಬಳಿಕ ಸೂರ್ಯಕುಮಾರ್ 15 ಪಂದ್ಯಗಳನ್ನ ಆಡಿದ್ದಾರೆ. ಈ ಪಂದ್ಯಗಳಲ್ಲಿ ಕೇವಲ 18.42ರ ಸರಾಸರಿಯಲ್ಲಿ ರನ್ಗಳಿಸಿರೋ ಸೂರ್ಯ 2 ಬಾರಿ ಅರ್ಧಶತಕದ ಗಡಿದಾಟಿದ್ದಾರಷ್ಟೇ.
2025ರಲ್ಲಿ ಸೂರ್ಯ ಫ್ಲಾಪ್.. ಫ್ಲಾಪ್.. ಫ್ಲಾಪ್.!
2025ರ ಕಥೆಯಂತೂ ಇನ್ನೂ ಡಿಫರೆಂಟ್. ಆಡಿದ 5 ಪಂದ್ಯಗಳಿಂದ ಸೂರ್ಯಕುಮಾರ್ ಗಳಿಸಿರೋದು ಜಸ್ಟ್ 28 ರನ್ ಮಾತ್ರ. ಸರಾಸರಿ ಎಷ್ಟು ಗೊತ್ತಾ.? ಕೇವಲ 5.60. ಇದ್ರಲ್ಲಿ ಎರಡು ಪಂದ್ಯಗಳಲ್ಲಿ ಡಕೌಟ್ ಕೂಡ ಆಗಿದ್ದಾರೆ. ಈ ಹೀನಾಯ ಪ್ರದರ್ಶನವೇ ಸದ್ಯ ಸೂರ್ಯನನ್ನ ಅಗ್ನಿಪರೀಕ್ಷೆಯ ಕಣದಲ್ಲಿರಿಸಿದೆ.
ಸೂರ್ಯಕುಮಾರ್ಗೆ ಏಷ್ಯಾಕಪ್ ಲಾಸ್ಟ್ ಚಾನ್ಸ್.!
ಟೀಮ್ ಇಂಡಿಯಾ ಶುಭ್ಮನ್ ಗಿಲ್ ಯುಗಾರಂಭವಾಗಿದೆ. ಟಿ20 ಫಾರ್ಮೆಟ್ನಿಂದಲೇ ಹೊರಬಿದ್ದಿದ್ದ ಗಿಲ್ ಮತ್ತೆ ಕಮ್ಬ್ಯಾಕ್ ಮಾಡಿದ್ದಾರೆ. ಉಪನಾಯಕನ ಪಟ್ಟವನ್ನೂ ಕಟ್ಟಲಾಗಿದೆ. ಬಿಸಿಸಿಐ, ಸೆಲೆಕ್ಟರ್ಸ್, ಟೀಮ್ ಮ್ಯಾನೇಜ್ಮೆಂಟ್ ಎಲ್ಲರೂ ಗಿಲ್ನ ಆಲ್ಫಾರ್ಮೆಟ್ ಕ್ಯಾಪ್ಟನ್ ಮಾಡಲು ಹೊರಟಿದ್ದಾರೆ. ನಾಯಕನ ಪಟ್ಟವೇರಿದ ಬಳಿಕ ಬ್ಯಾಟಿಂಗ್ ಚಾರ್ಮ್ ಕಳೆದುಕೊಂಡಿರೋ ಸೂರ್ಯಕುಮಾರ್, ಏಷ್ಯಾಕಪ್ನಲ್ಲೂ ಫೇಲ್ ಆಗಿದ್ದೇ ಆದ್ರೆ ಸಂಕಷ್ಟ ಫಿಕ್ಸ್. ಸೂರ್ಯನನ್ನ ಕೆಳಗಿಳಿಸಿ ಗಿಲ್ಗೆ ಪಟ್ಟಾಭಿಷೇಕ ಮಾಡೋ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ: ED ವಿಚಾರಣೆಗೆ ಹಾಜರಾದ ಟೀಮ್ ಇಂಡಿಯಾದ ಮಾಜಿ ಪ್ಲೇಯರ್.. ಕಾರಣ ಏನು?
/filters:format(webp)/newsfirstlive-kannada/media/media_files/2025/08/12/shubman-gill-captain-2025-08-12-17-22-12.jpg)
ನಾಯಕತ್ವ ಸೂರ್ಯಕುಮಾರ್ ಮೇಲಿನ ಒತ್ತಡ ಹೆಚ್ಚಿಸ್ತಿದೆ ಅನ್ನೋ ಟಾಕ್ ಕ್ರಿಕೆಟ್ ವಲಯದಲ್ಲಿದೆ. ನಾಯಕನಾದ ಬಳಿಕ ಟೀಮ್ ಇಂಡಿಯಾ ಪರ ಸೂರ್ಯ ಫೇಲ್ ಆಗಿದ್ದಾರೆ. ಆದ್ರೆ, ಇದ್ರ ನಡುವೆ ಸಾಮಾನ್ಯ ಆಟಗಾರನಾಗಿ ಐಪಿಎಲ್ ಆಡಿದ ಸೂರ್ಯಕುಮಾರ್ ತನ್ನ ಹಳೆ ಖದರ್ನಲ್ಲೇ ಬ್ಯಾಟ್ ಬೀಸಿದ್ದಾರೆ. 2025ರ ಐಪಿಎಲ್ನಲ್ಲಿ 65.18ರ ಸರಾಸರಿಯಲ್ಲಿ 717 ರನ್ ಕೊಳ್ಳೆ ಹೊಡೆದಿದ್ದಾರೆ. ನಾಯಕನಾಗಿ ಸೂರ್ಯ ಫೇಲ್ ಆಗಿದ್ರೆ, ಶುಭ್ಮನ್ ಗಿಲ್ ಟೆಸ್ಟ್ ನಾಯಕನಾದ ಮೊದಲ ಸರಣಿಯಲ್ಲೇ ಶೈನ್ ಆಗಿದ್ದಾರೆ. ಒತ್ತಡವನ್ನ ಸಮರ್ಥವಾಗಿ ನಿಭಾಯಿಸಿದ್ದಾರೆ. ಸೂರ್ಯನನ್ನ ಪಟ್ಟದಿಂದ ಕೆಳಗಿಳಿಸಲು ಇದೂ ಒಂದು ಕಾರಣವಾದ್ರೂ ಅಚ್ಚರಿ ಪಡಬೇಕಿಲ್ಲ.
ಕ್ಯಾಪ್ಟನ್ ಸೂರ್ಯಕುಮಾರ್ ಪಾಲಿಗೆ ಏಷ್ಯಾಕಪ್ ಸಮರ ಮಹತ್ವದ ಟೂರ್ನಿಯಾಗಿದೆ. ನಾಯಕನಾಗಿ ಟೀಮ್ ಇಂಡಿಯಾಗೆ ವಿಶ್ವಕಪ್ ಗೆಲ್ಲಿಸಿಕೊಡಬೇಕು ಅನ್ನೋ ಅತಿ ದೊಡ್ಡ ಕನಸು ಜೀವಂತವಾಗಿರಬೇಕು ಅಂದ್ರೆ ಅರಬ್ಬರ ನಾಡಲ್ಲಿ ಸೂರ್ಯ ಶೈನ್ ಆಗಲೇಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ