/newsfirstlive-kannada/media/media_files/2025/09/24/team_india_win-2025-09-24-23-27-58.jpg)
ಬಾಂಗ್ಲಾದೇಶದ ವಿರುದ್ಧ ನಡೆದ ಏಷ್ಯಾಕಪ್​ನ ಸೂಪರ್-4 ಪಂದ್ಯದಲ್ಲಿ ಸೂರ್ಯಕುಮಾರ್ ನೇತೃತ್ವದ ಟೀಮ್ ಇಂಡಿಯಾ 41 ರನ್​ಗಳಿಂದ ಭರ್ಜರಿ ಗೆಲುವು ದಾಖಲು ಮಾಡಿದೆ. ಈ ಮೂಲಕ ಏಷ್ಯಾಕಪ್​ನಲ್ಲಿ ಸತತ ಐದು ಮ್ಯಾಚ್​ಗಳಲ್ಲಿ ವಿಜಯಮಾಲೆ ಧರಿಸಿದೆ.
ದುಬೈನ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿ ಟೀಮ್ ಇಂಡಿಯಾವನ್ನು ಮೊದಲ ಬ್ಯಾಟಿಂಗ್​ಗೆ ಆಹ್ವಾನ ಮಾಡಿತು. ಅದರಂತೆ ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಅಭಿಷೇಕ್ ಶರ್ಮಾ ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 169 ರನ್​ಗಳ ಟಾರ್ಗೆಟ್​ ಅನ್ನು ನೀಡಿತ್ತು.
ಇದಾದ ಮೇಲೆ ಗುರಿ ಬೆನ್ನತ್ತಿದ್ದ ಬಾಂಗ್ಲಾದೇಶ ಆರಂಭದಲ್ಲೇ ದೊಡ್ಡ ಆಘಾತಕ್ಕೆ ಒಳಗಾಯಿತು. ಓಪನರ್ ತಾಂಜಿದ್ ಹಸನ್ ತಮೀಮ್ ಕೇವಲ 1 ರನ್​ಗೆ ಔಟ್ ಆದರು. ಇವರ ನಂತರ ಬಂದ ಪರ್ವೇಜ್ ಹೊಸೇನ್ ಎಮನ್, ಓಪನರ್ ಸೈಫ್ ಹಸನ್​ಗೆ ಉತ್ತಮ ಸಾಥ್ ಕೊಟ್ಟು 21 ರನ್​ ಗಳಿಸಿ ಔಟ್​ ಆದರು. ಇನ್ನೊಂದೆಡೆ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ್ದ ಸೈಫ್ ಹಸನ್ ಅರ್ಧಶತಕ ಬಾರಿಸಿ ಪಂದ್ಯದ ಕೊನೆವರೆಗೂ ಹೋರಾಟ ನಡೆಸಿದ್ದನು.
ಸೈಫ್ ಹಸನ್ ಕೊನೆವರೆಗೆ ಹೋರಾಟ ನಡೆಸಿ 51 ಎಸೆತಗಳಲ್ಲಿ 3 ಬೌಂಡರಿ ಹಾಗೂ 5 ಸಿಕ್ಸರ್​ಗಳಿಂದ 69 ರನ್​ ಗಳಿಸಿದರು. ತೋಹಿದ್ ಹೃದಯ್ 7, ಕ್ಯಾಪ್ಟನ್​​ ಜಾಕೀರ್ ಅಲಿ 4 ರನ್ ಬಿಟ್ಟರೇ ಉಳಿದ ಯಾವ ಬ್ಯಾಟರ್​ ಕೂಡ 7 ರನ್​ಗಳ ಗಡಿ ದಾಟಲಿಲ್ಲ. ಹೀಗಾಗಿ 19.3 ಓವರ್​ಗಳಲ್ಲಿ ಕೇವಲ 127 ರನ್​ಗೆ ಬಾಂಗ್ಲಾ ಆಟಗಾರರು ಆಲೌಟ್ ಆದರು. ಟೀಮ್ ಇಂಡಿಯಾ ವಿರುದ್ಧ ಬಾಂಗ್ಲಾದೇಶ ಸೋಲುಂಡಿತು. ಈ ವಿಜಯಮಾಲೆಯೊಂದಿಗೆ ಟೀಮ್ ಇಂಡಿಯಾ ಏಷ್ಯಾಕಪ್​ ಫೈನಲ್​ಗೆ ಎಂಟ್ರಿಕೊಟ್ಟಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ