/newsfirstlive-kannada/media/media_files/2025/09/21/abhishek_sharma_50-2025-09-21-23-18-30.jpg)
ಏಷ್ಯಾಕಪ್​ನ ಸೂಪರ್-4 ಪಂದ್ಯದಲ್ಲಿ ಓಪನರ್​ ಅಭಿಷೇಕ್ ಶರ್ಮಾ​ ಅವರ ಅಮೋಘವಾದ ಅರ್ಧಶತಕದ ನೆರವಿನಿಂದ ಪಾಕಿಸ್ತಾನದ ವಿರುದ್ಧ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ.
ದುಬೈ ಇಂಟರ್​​ನ್ಯಾಷನಲ್​ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕ್ಯಾಪ್ಟನ್​ ಸೂರ್ಯಕುಮಾರ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿದರು. ಇದರಿಂದ ಮೊದಲ ಬ್ಯಾಟಿಂಗ್ ಮಾಡಿದ ಪಾಕಿಸ್ತಾನ, ಓಪನರ್​ ಫಖಾರ್ ಜಮಾನ್ ಕೇವಲ 15 ರನ್​ಗೆ ಔಟ್ ಆದರು. ಇನ್ನೊಂದೆಡೆ ಕ್ರೀಸ್​ ಕಾಯ್ದುಕೊಂಡಿದ್ದ ಓಪನರ್​ ಸಾಹಿಬ್‌ಜಾದಾ ಫರ್ಹಾನ್ ತಂಡಕ್ಕೆ ನೆರವಾದರು. 45 ಬಾಲ್ ಎದುರಿಸಿದ ಫರ್ಹಾನ್ 3 ಸಿಕ್ಸರ್​ಗಳಿಂದ 58 ರನ್​​ ಗಳಿಸಿದರು. ಉಳಿದಂತೆ ಸೈಮ್ ಆಯುಬ್ 21, ಹುಸೇನ್ ತಲಾತ್ 10, ನವಾಜ್ 21, ಕ್ಯಾಪ್ಟನ್ ಸಲ್ಮಾನ್ 17, ಫಹೀಮ್ ಆಶ್ರಪ್ 20 ರನ್​ ಗಳಿಸಿದರು. ಇದರಿಂದ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡ ಪಾಕಿಸ್ತಾನ 171 ರನ್​ಗಳ ಟಾರ್ಗೆಟ್​ ನೀಡಿತ್ತು.
ಈ ಗುರಿ ಬೆನ್ನತ್ತಿದ್ದ ಟೀಮ್ ಇಂಡಿಯಾ ಆರಂಭದಿಂದಲೇ ಬ್ಯಾಟಿಂಗ್​ನಲ್ಲಿ ಅಬ್ಬರಿಸಿ ಬೊಬ್ಬಿರಿಯಿತು. ಅಭಿಷೇಕ್ ಶರ್ಮಾ ಹಾಗೂ ಶುಭ್​ಮನ್​ ಗಿಲ್​ ಬ್ಯಾಟಿಂಗ್​ಗೆ ಪಾಕ್​ ಬೌಲರ್​ಗಳು ಹೈರಾಣದಾರು. ಅಭಿಷೇಕ್ ಶರ್ಮಾ ಅಂತೂ ಸಿಕ್ಸರ್​ನಿಂದಲೇ ಬ್ಯಾಟಿಂಗ್ ಆರಂಭಿಸಿದರು. ಹೀಗಾಗಿಯೇ 4 ಬೌಂಡರಿ, 4 ಸಿಕ್ಸರ್​ಗಳಿಂದ ಅರ್ಧಶತಕ ಬಾರಿಸಿದರು.
ಇನ್ನೊಂದೆಡೆ ಅಭಿಷೇಕ್​ಗೆ ಉತ್ತಮ ಸಾಥ್ ಕೊಟ್ಟ ಶುಭ್​ಮನ್​ ಗಿಲ್​ 28 ಎಸೆತಗಳಲ್ಲಿ 8 ಬೌಂಡರಿಗಳಿಂದ 47 ರನ್​ಗಳಿಸಿ ಆಡುತ್ತಿದ್ದರು. ಈ ವೇಳೆ ಫಹೀಮ ಆಶ್ರಫ್ ಬೌಲಿಂಗ್​ನಲ್ಲಿ ಕ್ಲೀನ್ ಬೋಲ್ಡ್ ಆದರು. ಗಿಲ್ ನಂತರ ಕ್ರೀಸ್​ಗೆ ಬಂದ ಸೂರ್ಯಕುಮಾರ್ ಯಾದವ್ ಹಾಗೇ ಬಂದು ಹೀಗೆ ಹೋದರು. ಅಂದರೆ ಕ್ಯಾಪ್ಟನ್ ಡಕೌಟ್ ಆದರು. ಇನ್ನು ಪಂದ್ಯದಲ್ಲಿ 39 ಎಸೆತಗಳನ್ನು ಎದುರಿಸಿದ ಅಭಿಷೇಕ್ ಶರ್ಮಾ, 6 ಬೌಂಡರಿ ಹಾಗೂ 5 ಅಮೋಘವಾದ ಸಿಕ್ಸರ್​ ಸಿಡಿಸಿ 74 ರನ್​ ಗಳಿಸಿ ಆಡುವಾಗ ಹ್ಯಾರಿಸ್ ರಹುಫ್​ಗೆ ಕ್ಯಾಚ್​ ನೀಡಿದರು.
ಕ್ರೀಸ್​ಗೆ ಬಂದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಹಾಗೂ ತಿಲಕ್ ವರ್ಮಾ ಜೊತೆಯಾದರು. ಕೊನೆಗೆ ಪಾಕಿಸ್ತಾನ ನೀಡಿದ್ದ 172 ರನ್​ಗಳ ಗುರಿ ತಲುಪುವ ಮೂಲಕ ಟೀಮ್ ಇಂಡಿಯಾ ಮತ್ತೊಮ್ಮೆ ಜಯಭೇರಿ ಬಾರಿಸಿತು. ಏಷ್ಯಾಕಪ್​ನಲ್ಲಿ ಪಾಕಿಸ್ತಾನ ವಿರುದ್ಧ ಇದು ಭಾರತಕ್ಕೆ 2ನೇ ಸತತ ಗೆಲುವು ಆಗಿದೆ. ಟಾಸ್​ ಸಮಯದಲ್ಲಿ ಸೂರ್ಯಕುಮಾರ್ ಮತ್ತೊಮ್ಮೆ ಪಾಕಿಸ್ತಾನದ ನಾಯಕನಿಗೆ ಹ್ಯಾಂಡ್​ಶೇಕ್ ಮಾಡಲಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ