/newsfirstlive-kannada/media/media_files/2025/09/28/jyoti_vikas-2025-09-28-19-02-00.jpg)
ಐತಿಹಾಸಿಕ ಕಾವೇರಿ ಆರತಿ ಕಾರ್ಯಕ್ರಮ ರಾಜ್ಯ, ದೇಶದಲ್ಲೂ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದೆ. ಅಮೆರಿಕದ ಫೀನಿಕ್ಸ್ ನೆಲೆಸಿರುವ ಬೆಂಗಳೂರು ಮೂಲದ ಜ್ಯೋತಿ, ವಿಕಾಸ್ ದಂಪತಿ, ಕಾವೇರಿ ಆರತಿ ಕಾರ್ಯಕ್ರಮ ಮೆಚ್ಚಿ ಭಾವುಕರಾಗಿದ್ದಾರೆ.
ಭಾರತದ ಪವಿತ್ರ ನದಿಗಳಲ್ಲಿ ಒಂದಾದ ಕಾವೇರಿ ನದಿಗೆ ಕಾವೇರಿ ಆರತಿಯಂತಹ ಅರ್ಥಪೂರ್ಣ ಕಾರ್ಯಕ್ರಮಕ್ಕೆ 5 ಲಕ್ಷ ರೂಪಾಯಿ ಸಮರ್ಪಣೆ ಮಾಡಿದ್ದಾರೆ. ನಾನು ಬೆಂಗಳೂರಿನ ನಿವಾಸಿ ಕಾವೇರಿ ನೀರನ್ನು ಕುಡಿದು ಬಾಲ್ಯದ ಜೀವನ ಕಳೆದು, ಇಂಜಿನಿಯರಿಂಗ್ ಪದವಿ ಪೂರೈಸಿ ಅಮೆರಿಕದಲ್ಲಿ ನೆಲೆಸಿದ್ದೇವೆ. ಸೆಪ್ಟೆಂಬರ್ 26 ರಿಂದ ಕೆಆರ್​ಎಸ್​ನ ಬೃಂದಾವನದಲ್ಲಿ ಆರಂಭವಾಗಿರುವ ಐತಿಹಾಸಿಕ ಕಾವೇರಿ ಆರತಿ ಕಾರ್ಯಕ್ರಮವನ್ನ ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮದಲ್ಲಿ ವೀಕ್ಷಿಸಿ ಭಾವುಕರಾಗಿದ್ದೇವೆ.
ಅಮೆರಿಕದಲ್ಲಿ ನೆಲೆಸಿದ್ದರೂ ನಾವು ಕುಡಿದು ಬೆಳೆದಿರುವುದು ಕಾವೇರಿ ನೀರೇ. ಕಾವೇರಿ ತಾಯಿ ಕೋಟ್ಯಂತರ ಜನರ ದಾಹ ನೀಗಿಸಿದ್ದು ರೈತರ ಬದುಕಿಗೆ ಆಸರೆಯಾಗಿದ್ದಾಳೆ. ಜೀವನದ ಅವಿಭಾಜ್ಯ ಅಂಗವಾಗಿದ್ದಾಳೆ. ಕನ್ನಡ ನಾಡಿನ ಜನತೆ ಕಾವೇರಿಯನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇಂತಹ ಜೀವನದಿಗೆ ವಂದಿಸಿ, ನಮಿಸುವ ಕಾರ್ಯಕ್ಕೆ ಮುನ್ನುಡಿ ಬರೆದಿರುವ ಕರ್ನಾಟಕ ಸರ್ಕಾರದ ಈ ಕಾರ್ಯಕ್ಕೆ ಎಲ್ಲಾ ಅನಿವಾಸಿ ಕನ್ನಡಿಗರ ಪರವಾಗಿ ಅಭಿನಂದನೆಗಳು. ಕಾವೇರಿ ಆರತಿಯ ಪೂಜಾ ವಿಧಾನ ಹಾಗೂ ಕಾರ್ಯಕ್ರಮದ ಬಗ್ಗೆ ಸಂತಸಗೊಂಡಿದ್ದೇವೆ. ಕರ್ನಾಟಕ ಸರ್ಕಾರದ ಈ ಕಾರ್ಯ ಪ್ರಶಂಸನೀಯ. ರಾಜ್ಯದ ಇತಿಹಾಸದಲ್ಲಿ ಈ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಹೇಳಿದ್ದಾರೆ.
ಕಾವೇರಿ ಮಾತೆಗೆ ವಂದಿಸಿ, ಪೂಜಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಮತ್ತು ಜವಾಬ್ದಾರಿ. ದೇವರು ಎಂದರೆ ಪ್ರಕೃತಿ. ಆ ಪ್ರಕೃತಿ ರೂಪವೇ ಕಾವೇರಿ. ಕಾವೇರಿಯನ್ನು ಪೂಜಿಸುವುದರಿಂದ ಮಾನವ ಕುಲ ಮಾತ್ರವಲ್ಲದೆ ಸಕಲ ಜೀವಸಂಕುಲಕ್ಕೂ ಸನ್ಮಂಗಳ ಉಂಟಾಗಲಿದೆ. ಆದ್ದರಿಂದ ಕಾವೇರಿ ಆರತಿಯನ್ನು ಕೇವಲ ದಸರಾಗೆ ಮಾತ್ರ ಸೀಮಿತಗೊಳಿಸದೆ ವರ್ಷ ಪೂರ್ತಿ ಆಚರಣೆ ಮಾಡಬೇಕು. ಕಾವೇರಿ ಆರತಿ ಕಾರ್ಯಕ್ರಮ ಶಾಸ್ತ್ರೋಕ್ತವಾಗಿದೆ. ಇದೊಂದು ಪುಣ್ಯದ ಕಾರ್ಯ. ಮುಂದಿನ ದಿನಗಳಲ್ಲಿ ಕರ್ನಾಟಕಕ್ಕೆ ಬಂದಾಗ ಕಾವೇರಿ ತಾಯಿಗೆ ಪೂಜೆ ಸಲ್ಲಿಸುತ್ತೇನೆ ಎಂದು ಅನಿವಾಸಿ ಭಾರತೀಯರಾದ ಜ್ಯೋತಿ ವಿಕಾಸ್ ಅವರು ಹೇಳಿದ್ದಾರೆ.
ಇದನ್ನೂ ಓದಿ:ಬಿಸಿಸಿಐಗೆ ಮಿಥುನ್ ಮನ್ಹಾಸ್ ಅಧ್ಯಕ್ಷ.. ಕನ್ನಡಿಗ ರಘುರಾಮ್ ಭಟ್​​ಗೆ ಉನ್ನತ ಸ್ಥಾನ
ಜ್ಯೋತಿ ವಿಕಾಸ ದಂಪತಿ ಅವರು, ಕಾವೇರಿ ಆರತಿ ಹಾಗೂ ಅಭಿವೃದ್ಧಿಗಾಗಿ ಬಳಸಿಕೊಳ್ಳಲು 5 ಲಕ್ಷ ಹಣ ಕಳುಹಿಸಿಕೊಟ್ಟಿದ್ದಾರೆ. ಇದನ್ನು ಸಿಎಂ ಹಾಗೂ ಡಿಸಿಎಂ ಗಮನಕ್ಕೂ ತರುತ್ತೇವೆ. ಇದರ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್​​ ಚಲುವರಾಯಸ್ವಾಮಿ ಅವರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಯ ಉಪಾಧ್ಯಕ್ಷ, ಶಾಸಕ ದಿನೇಶ್ ಗೂಳಿಗೌಡ ಅವರು ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ