/newsfirstlive-kannada/media/media_files/2025/10/19/bgk_women-2025-10-19-10-25-38.jpg)
ಬಾಗಲಕೋಟೆ: ಹೆರಿಗೆಗೆ ಬಂದಿದ್ದ ಬಾಣಂತಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ. ಈ ದಾರುಣ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಪೂರ್ಣಿಮಾ ರಾಠೋಡ್ ಮೃತ ಬಾಣಂತಿಯಾಗಿದ್ದು, ಬಾಗಲಕೋಟೆ ಕುಮಾರೇಶ್ವರ ವೈದ್ಯರ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆ ಎದುರು ಮೃತಳ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಮುಖ್ಯ ವೈದ್ಯರು ಬಂದು ನೋಡಲಿಲ್ಲ. ಬರಿ ನರ್ಸ್​ಗಳನ್ನು ಕಳಿಸಿದ್ದರು ಅಂತ ವೈದ್ಯರಿಗೆ ಹಿಡಿಶಾಪ ಹಾಕಿದ್ದಾರೆ.
ಆಗಿದ್ದೇನು?
ಬೆಳಗಾವಿ ಜಿಲ್ಲೆಯ ಅರೆಬೆಂಚಿ ತಾಂಡದ ಪೂರ್ಣಿಮಾ ರಾಠೋಡ್ ಅವರನ್ನ ಹೆರಿಗೆ ನೋವು ಅಂತ ಬಾಗಲಕೋಟೆ ಕುಮಾರೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಮಧ್ಯಾಹ್ನ 12.30ರ ವೇಳೆಗೆ ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಲಾಯಿತು. ಬಳಿಕ ಬಾಣಂತಿ ಪೂರ್ಣಿಮಾ ರಾಠೋಡ್ ಆರಾಮಾಗಿ ಇದ್ದರು. ಆದ್ರೆ ಸಂಜೆ 7 ರಿಂದ 7.30ರ ಅವಧಿಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಇತ್ತ ಬಾಣಂತಿ ಪೂರ್ಣಿಮಾ ಸಾವಿನ ವಿಚಾರ ತಿಳಿದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬಾಣಂತಿ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸಿಜೇರಿನ್​ ಬಳಿಕ ಪೂರ್ಣಿಮಾ ಬಳಲುತ್ತಿದ್ದಳು. ಈ ವೇಳೆ ವೈದ್ಯರು ಬಾರದೇ ನರ್ಸ್​ ಇಂಜೆಕ್ಷನ್​ ಕೊಟ್ಟಿದ್ದಾರೆ. ಇಂಜೆಕ್ಷನ್ ಕೊಟ್ಟ ಮೇಲೆ ಬಾಣಂತಿ ಪೂರ್ಣಿಮಾ ಮತ್ತಷ್ಟು ಒದ್ದಾಡಿ ಪ್ರಾಣ ಬಿಟ್ಟಳು ಅಂತ ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.
ಬಾಣಂತಿ ಚಿಕಿತ್ಸೆಯಲ್ಲಿ ಯಾವುದೇ ಲೋಪವಾಗಿಲ್ಲ:
ಇತ್ತ ವೈದ್ಯರು ಬಾಣಂತಿಗೆ ಸಮರ್ಪಕವಾಗಿ ಚಿಕಿತ್ಸೆ ನೀಡಲಾಗಿದೆ ಅಂತ ಹೇಳುತ್ತಿದ್ದಾರೆ. ಬಾಣಂತಿ ಚಿಕಿತ್ಸೆಯಲ್ಲಿ ಯಾವುದೇ ಲೋಪವಾಗಿಲ್ಲ. ಸಿಜೇರಿಯನ್ ಮೂಲಕ ಹೆರಿಗೆಯಾಗಿದೆ. ಸಂಜೆ ಏಕಾಏಕಿ ಬಿಪಿ ಲೋ ಆಗಿದೆ. ನಂತರ ಹೃದಯಾಘಾತವಾಗಿದೆ. ನಾವು ಬದುಕಿಸಲು ಎಲ್ಲಾ ಪ್ರಯತ್ನ ಮಾಡಿದ್ದೀವಿ. ಆದ್ರೆ ದುರಾದೃಷ್ಟವಶಾತ್​ ಬಾಣಂತಿ ಪೂರ್ಣಿಮಾ ರಾಠೋಡ್ ಬದುಕುಳಿಯಲಿಲ್ಲ. ಮಗು ಆರೋಗ್ಯವಾಗಿದೆ ಅಂತ ವೈದ್ಯರು ತಿಳಿಸಿದ್ದಾರೆ.