/newsfirstlive-kannada/media/media_files/2025/10/11/bng_rain-2025-10-11-07-06-51.jpg)
ಹನಿ ಹನಿ ಕೂಡಿದರೆ ಹಳ್ಳ, ತೆನೆ ತೆನೆ ಕೂಡಿದರೆ ಬಳ್ಳ ಅಂತಾರೆ. ಆದ್ರೆ, ಗುಂಡಿ-ಗುಂಡಿ ಕೂಡಿದರೆ ಕೆರೆ ಅಂತ ಇನ್ನೊಂದು ಸೇರಿಸಬಹುದೇನೋ?, ರಾತ್ರಿ ಸುರಿದ ಮಳೆಗೆ ಬೆಂಗಳೂರಿನಲ್ಲಿ ಆಗಿದ್ದು ಅದೆ. ವರುಣರಾಯನ ರೌದ್ರಾವತಾರಕ್ಕೆ ಗುಂಡಿಗಳು ನರ್ತಿಸಿದವು. ಗುಡುಗಿನ ತಬಲಾ ವಾದನ, ಮಿಂಚಿನ ಬೆಳಕು, ಸವಾರರನ್ನ, ಚಾಲಕರನ್ನು ರಸ್ತೆಯಲ್ಲಿ ನಿಲ್ಲಿಸಿಬಿಟ್ಟವು.
ಹಾಗೊಮ್ಮೆ.. ಹೀಗೊಮ್ಮೆ.. ಅಂತ ಗ್ಯಾಪ್​ ಕೊಟ್ಟು ಬೆಂಗಳೂರಿನ ಜನಕ್ಕೆ ಕಾಟ ಕೊಡುತ್ತಿದ್ದ ಮಳೆರಾಯ, ರಾತ್ರಿ ಒಂದೇ ಸಮನೆ ಗುಡುಗು ಮಿಂಚು ಸಮೇತ ಧೋ ಅನ್ನೋದಕ್ಕೆ ಶುರು ಮಾಡಿದ್ದ. ಮಳೆ ಹನಿಗಳ ಹೊಡೆತಕ್ಕೆ ಬೆಂಗಳೂರಿನ ರಸ್ತೆಗಳು ಹಳ್ಳ ಹಿಡಿದಿದ್ರೆ, ಆ ಹಳ್ಳಗಳು ಕೆರೆಗಳಂತಾಗಿದ್ದವು.
ಎಲೆಕ್ಟ್ರಾನಿಕ್ಸ್​​ ಸಿಟಿ; ಗುಡುಗು ಸಿಡಿಲಿನ ಅಬ್ಬರ.. ಸಿಲಿಕಾನ್ ಸಿಟಿ ತತ್ತರ
ಇಷ್ಟು ದಿನ ಮಳೆರಾಯ ಜಿಟಿ ಜಿಟಿ ಅಂತಾ ಕಾಟ ಕೊಡುತ್ತಿದ್ದನು. ನಿನ್ನೆ ಒಮ್ಮೆಲೇ ಅಬ್ಬರಿಸಿದ್ದಾನೆ. ಎಲೆಕ್ಟ್ರಾನಿಕ್ಸ್​​ ಸಿಟಿ ಸುತ್ತಮುತ್ತ ಸುರಿದ ಮಳೆಯಿಂದ, ರಸ್ತೆಯಲ್ಲಿ ಮೊಣಕಾಲುದ್ದ ನೀರು ತುಂಬಿತ್ತು. ನೀಲಾದ್ರಿ ನಗರದಲ್ಲಿ ನೆಲಮಹಡಿಯ ಅಂಗಡಿಗಳಿಗೂ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.
ಪಣತ್ತೂರು; ರಸ್ತೆಗಳು ಜಲಮಯ.. ಸಂಚಾರ ಅಯೋಮಯ
ಇತ್ತ, ಮಳೆ ಅವಾಂತರಕ್ಕೆ ಪಣತ್ತೂರು ರಸ್ತೆಗಳ ಸ್ಥಿತಿ ಕೇಳೋದೆ ಬೇಡ. ರಸ್ತೆಗಳೆಲ್ಲಾ ಸಂಪೂರ್ಣ ಹೊಳೆಯಂತಾಗಿದ್ದು, ವಾಹನಗಳು ತೇಲುತ್ತಾ-ಮುಳುಗುತ್ತಾ ದಡ ಸೇರಿವೆ. ಒಂದು ಕಡೆ ಕಾಮಗಾರಿ, ಮತ್ತೊಂದೆಡೆ ಮಳೆಯಿಂದ ರಸ್ತೆ ಮಧ್ಯೆ ವಾಹನಗಳು ಸ್ಟ್ರಕ್ ಆಗಿ ನಿಂತಿದ್ದವು.
ಹೊಸ ರೋಡ್; ಗುಂಡಿ ಬಿದ್ದ ರಸ್ತೆಗಳಲ್ಲಿ ವಾಹನಗಳ ಡಿಸ್ಕೋ ಡ್ಯಾನ್ಸ್ ​!
ಇನ್ನೂ ಕೆಲ ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ ಬೆಂಗಳೂರು ಸಿಟಿ ರೌಂಡ್ಸ್​​​ ವೇಳೆ ಇದೇ ರಸ್ತೆಗೆ ಬಂದಿದ್ದರು. ರಸ್ತೆ ಗುಂಡಿ ಮುಚ್ಚುವಂತೆ ತಾಕೀತು ಮಾಡಿದ್ದರು. ಆದ್ರೆ ವರುಣನ ಅಬ್ಬರಕ್ಕೆ ಹೊಸ ರೋಡ್​​ ಎಲ್ಲ ಹದಗೆಟ್ಟು ಹೋಗಿದೆ. ರಸ್ತೆ ಯಾವುದೋ, ಗುಂಡಿ ಯಾವುದೋ ತಿಳಿಯದೇ ಭಯದಲ್ಲೇ ವಾಹನ ಚಾಲನೆ ಮಾಡಬೇಕಿದೆ.
ಇದನ್ನೂ ಓದಿ: ನಿಮಗೆ ಜ್ಞಾಪಕ ಶಕ್ತಿ ಕಾಡುತ್ತಿದೆಯೇ.. ಇದಕ್ಕೆ ಮದ್ದು ಎಂದರೆ ಹಸಿ ಕೊಬ್ಬರಿ ಮಾತ್ರ..!
ವರ್ತೂರು; ವರ್ತೂರು ರಸ್ತೆಯಲ್ಲೂ ಅದೇ ರಾಗ ಅದೇ ಹಾಡು!
ಇತ್ತ ವರ್ತೂರಿನಲ್ಲಿ ವರುಣನ ರೌದ್ರಾವತಾರಿಂದ ಎಲ್ಲಿ ನೋಡಿದರೂ ನೀರೋ ನೀರು ಎನ್ನುವಂತೆ ಆಗಿತ್ತು. ಬಳಗೆರೆ ರಸ್ತೆ ಜಲಾವೃತವಾಗಿ ವಾಹನ ಸವಾರರು ಮನೆ ತಲುಪಿದ್ರೆ ಸಾಕು ಸಾಕು ಅನ್ನೊಂಗಾಗಿತ್ತು.
ಮಾರತ್ತಹಳ್ಳಿ, ಸರ್ಜಾಪುರದ ಜನ ಫುಲ್ ಸುಸ್ತು
ಇತ್ತ, ಮಳೆರಾಯನ ಕಾಟಕ್ಕೆ ಮಾರತ್ತಹಳ್ಳಿಯ ಜನ ಸುಸ್ತಾಗಿ ಹೋದರು. ಮಳೆಯಿಂದ ಮಾರತ್ತಹಳ್ಳಿ ರಸ್ತೆಯಲ್ಲಿ ಟ್ರಾಫಿಕ್ಕೋ ಟ್ರಾಫಿಕ್ಕೋ.. ಕಿಲೋ ಮೀಟರ್​ಗಟ್ಟಲೇ ವಾಹನಗಳು ಸಾಲು ಗಟ್ಟಿ ನಿಂತಿದ್ದವು. ಇನ್ನು, ಸರ್ಜಾಪುರ ರಸ್ತೆಯ ವಿಪ್ರೋ ಗೇಟ್​ ರಸ್ತೆಗಳು, ನಮ್ದು ಅದೇ ಹಣೆಬರಹ ಆಗಿತ್ತು. ರಾತ್ರಿ ಸುರಿದ ಮಳೆ ಬೆಂಗಳೂರು ಮಂದಿಯನ್ನ ತೊಯ್ದು ತೊಪ್ಪೆಯಾಗಿಸಿದ್ದಂತೂ ನಿಜ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ