/newsfirstlive-kannada/media/media_files/2025/09/23/lorry-1-2025-09-23-08-49-39.jpg)
ಬೆಳಗಾವಿ:ಗೋಮಾಂಸವನ್ನ ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಗೆ ಗ್ರಾಮಸ್ಥರು ಬೆಂಕಿ ಹಚ್ಚಿದ್ದಾರೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ಪ್ರಕರಣ ನಡೆದಿದೆ. ನೆನ್ನೆ ರಾತ್ರಿ ಸುಮಾರು 9.30 ಗಂಟೆಗೆ ಈ ಘಟನೆ ನಡೆದಿದ್ದು, ಕ್ಷಣಾರ್ಧದಲ್ಲೇ ಗೋಮಾಂಸ ಸಾಗಿಸುತ್ತಿದ್ದ ಲಾರಿ ಸುಟ್ಟು ಭಸ್ಮವಾಗಿದೆ.
ಆಗಿದ್ದೇನು?
ರಾಯಭಾಗ ತಾಲೂಕಿನ ಕುಡಚಿ ಪಟ್ಟಣದಿಂದ ಹೈದರಾಬಾದ್‌ಗೆ ಗೋಮಾಂಸವನ್ನ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು. ಈ ವೇಳೆ ಲಾರಿಯನ್ನ ಗ್ರಾಮಸ್ಥರು ತಡೆದು ಚಾಲಕನಿಗೆ ಥಳಿಸಿ ಕೂಡಿ ಹಾಕಿದ್ದರು. ಬಳಿಕ ಅಂದಾಜು ಏಳು ಕ್ವಿಂಟಲ್‌ನಷ್ಟಿದ್ದ ಗೋಮಾಂಸ ಸಮೇತ ಲಾರಿಗೆ ಗ್ರಾಮಸ್ಥರು ಬೆಂಕಿ ಹಚ್ಚಿದ್ದಾರೆ.
ಆದರೆ ಐನಾಪೂರ ಪಟ್ಟಣದಲ್ಲಿ ಗ್ರಾಮಸ್ಥರು ಗೋಮಾಂಸ ಸಾಗಾಟ ಮಾಡುತ್ತಿದ್ದ ಲಾರಿಯನ್ನ ಹಿಡಿದರು ಕೂಡ ಪೊಲೀಸರು ಬಂದಿಲ್ಲ ಅಂತ ಆರೋಪಿಸಲಾಗ್ತಿದೆ. ನೆನ್ನೆ ರಾತ್ರಿ ಸುಮಾರು 9.30ಕ್ಕೆ ಗೋಮಾಂಸ ಲಾರಿಯನ್ನ ಗ್ರಾಮಸ್ಥರು ತಡೆದು ಹಿಡಿದಿದ್ದರು. ಈ ವೇಳೆ ಗ್ರಾಮಸ್ಥರು 112 ವಾಹನಕ್ಕೆ ಕರೆ ಮಾಡಿದ್ದರು. ಆದ್ರೆ ಪೊಲೀಸರು ಬೇಗ ಬಾರದ ಹಿನ್ನಲೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು.
ಬಳಿಕ ರಾತ್ರಿ ಸುಮಾರು 11.30ಕ್ಕೆ ಕಾಗವಾಡ ಪಿಎಸ್‌ಐ ರಾಘವೇಂದ್ರ ಖೋತ ಸ್ಥಳಕ್ಕೆ ಭೇಟಿ ನೀಡಿದರು. ತಡವಾಗಿ ಪೊಲೀಸರು ಸ್ಥಳಕ್ಕೆ ಬಂದ ಹಿನ್ನಲೆ ಆಕ್ರೋಶಗೊಂಡ ಗ್ರಾಮಸ್ಥರು ಗೋಮಾಂಸ ಸಮೇತ ಲಾರಿಗೆ ಬೆಂಕಿ ಹಚ್ಚಿದ್ದಾರೆ. ಘಟನೆ ಸಂಬಂಧ ಈಗಾಗಲೇ 10ಕ್ಕೂ ಹೆಚ್ಚು ಮಂದಿಯನ್ನ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಜೊತೆಗೆ ಐನಾಪುರ ಗ್ರಾಮದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.
ಇದನ್ನೂ ಓದಿ : ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ CD ಬಾಂಬ್.. ಕಾಶಪ್ಪನವರ್ ಹೇಳಿಕೆ ಭಾರೀ ಸಂಚಲನ