/newsfirstlive-kannada/media/media_files/2025/08/15/bly_psi_wife_1-2025-08-15-13-53-03.jpg)
ಬಳ್ಳಾರಿ: ಸ್ವಾತಂತ್ರ್ಯ ದಿನಾಚರಣೆಯಂದೇ ಮಕ್ಕಳು ಹಾಗೂ ತನ್ನ ಗಂಡ ಪಿಎಸ್ಐ ಅಧಿಕಾರಿಯನ್ನ ಧ್ವಜಾರೋಹಣಕ್ಕೆ ಕಳುಹಿಸಿ ಪತ್ನಿ ನೇಣು ಬಿಗಿದುಕೊಂಡು ಜೀವ ಬಿಟ್ಟಿರುವ ಘಟನೆ ನಗರದ ಮೋಕಾದಲ್ಲಿನ ಮನೆಯೊಂದರಲ್ಲಿ ನಡೆದಿದೆ.
ಮೋಕಾ ಪೊಲೀಸ್ ಠಾಣೆಯ ಪಿಎಸ್ಐ ಕಾಳಿಂಗ ಅವರ ಪತ್ನಿ ಚೈತ್ರಾ (36) ಮನೆಯಲ್ಲಿ ನೇಣು ಬಿಗಿದುಕೊಂಡು ಜೀವ ಬಿಟ್ಟಿದ್ದಾರೆ. ಮೃತದೇಹವನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಶವಾಗಾರದ ಬಳಿ ಆಕೆಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪತ್ನಿಯನ್ನ ಕಳೆದುಕೊಂಡ ಪತಿ ಕಾಳಿಂಗ ಸೇರಿ ಕುಟುಂಬದ ಸದಸ್ಯರು ಕಣ್ಣೀರು ಹಾಕುತ್ತಿದ್ದಾರೆ.
ಏನಿದು ಘಟನೆ?
ಬಳ್ಳಾರಿಯ ಮೋಕಾ ಠಾಣೆ ಪಿಎಸ್ಐ ಪತ್ನಿ ಚೈತ್ರಾ ಅವರು ಈ ಹಿಂದೆಯೇ ಸಹೋದರ ಮತ್ತು ಇಬ್ಬರು ಸಹೋದರಿಯರನ್ನು ಕಳೆದುಕೊಂಡಿದ್ದರು. ತನ್ನ ಜೊತೆಗೆ ಹುಟ್ಟಿದವರು ಇನ್ನಿಲ್ಲವಾಗಿದ್ದರಿಂದ ಚೈತ್ರಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. 2 ತಿಂಗಳ ಹಿಂದೆ ಸಹೋದರ ಜೀವ ತೆಗೆದುಕೊಂಡಿದ್ದನು. ಕೇವಲ 2 ವರ್ಷದಲ್ಲಿ ಸಹೋದರ ಹಾಗೂ ಇಬ್ಬರು ಸಹೋದರಿಯರು ಮೃತಪಟ್ಟಿದ್ದರು. ಇದು ಚೈತ್ರಾಗೆ ತೀವ್ರ ದುಃಖವನ್ನು ತರಿಸಿತ್ತು. ಇದರಿಂದಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು,
ಇದನ್ನೂ ಓದಿ:ಬೆಂಗಳೂರಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದೇ ಭಾರೀ ಸ್ಫೋಟ; ಜೀವ ಬಿಟ್ಟ ಬಾಲಕ, 9 ಮಂದಿ ಗಂಭೀರ
ಚೈತ್ರಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದರಿಂದ ಅವರನ್ನು ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿತ್ತು. ನಿನ್ನೆ ತವರು ಮನೆ ಮಲಪನಗುಡಿಯಿಂದ ಗಂಡ ಕೆಲಸ ಮಾಡುವ ಊರು ಬಳ್ಳಾರಿಯ ಮೋಕಾಗೆ ಬಂದಿದ್ದರು. ರಾತ್ರಿ ಗಂಡ ಕಾಳಿಂಗ ಅವರ ಜೊತೆ ಚೆನ್ನಾಗಿಯೇ ಇದ್ದರು. ಇಂದು ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಬೆಳಗ್ಗೆಯೇ ತನ್ನ ಮಕ್ಕಳನ್ನು, ಪತಿಯನ್ನು ಸಂತಸದಿಂದ ರೆಡಿ ಮಾಡಿ ಚೈತ್ರಾ ಕಳಿಸಿದ್ದರು.
ಮಕ್ಕಳು, ಗಂಡ ಮನೆಯಿಂದ ಹೊರ ಹೋಗುತ್ತಿದ್ದಂತೆ ಚೈತ್ರಾ ನೇಣು ಬಿಗಿದುಕೊಂಡು ಜೀವ ಕಳೆದುಕೊಂಡಿದ್ದಾರೆ. ಸದ್ಯ ಅವರ ಮೃತದೇಹವನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಆಸ್ಪತ್ರೆ ಬಳಿ ಆಕೆಯ ಗಂಡ ಹಾಗೂ ಕುಟುಂಬದ ಸದಸ್ಯರೆಲ್ಲ ಕಣ್ಣೀರು ಹಾಕುತ್ತಿದ್ದಾರೆ. ಇನ್ನು ಈ ಸಂಬಂಧ ಬಳ್ಳಾರಿಯ ಮೋಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ