/newsfirstlive-kannada/media/media_files/2025/10/17/cn_ashwath_narayan-2025-10-17-18-32-08.jpg)
ಬೆಂಗಳೂರು: ದೇಶದಲ್ಲಿ ಯುವ ಪ್ರತಿಭೆಗಳಿಗೆ ಅವಕಾಶ ನೀಡುವ ವಿಚಾರದಲ್ಲಿ ಸಿಲಿಕಾನ್ ಸಿಟಿ, ಉದ್ಯಾನನಗರಿ ಬೆಂಗಳೂರನ್ನು ಮೀರಿಸುವ ನಗರ ಇನ್ನೊಂದು ಇಲ್ಲ ಎಂದು ಮಾಜಿ ಡಿಸಿಎಂ ಹಾಗೂ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಶಾಸಕ ಅಶ್ವಥ್ ನಾರಾಯಣ್ ಸಿಎನ್ ಅವರು ಹೇಳಿದ್ದಾರೆ.
ನಗರದ ಚಿಕ್ಕಬಾಣಾವರದ ಆರ್.ಆರ್ ಇನ್​​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯು ಆಯೋಜಿಸಿದ್ದ ಪ್ರಥಮ ವರ್ಷದ ಇಂಜಿನಿಯರಿಂಗ್ ಕೋರ್ಸ್ ವಿದ್ಯಾರ್ಥಿಗಳ ಓರಿಯೆಂಟೇಶನ್ ಕಾರ್ಯಕ್ರಮದಲ್ಲಿ ಶಾಸಕ ಅಶ್ವಥ್ ನಾರಾಯಣ್ ಸಿಎನ್ ಅವರು ಮಾತನಾಡಿದರು. ನಿಮ್ಮ ಭವಿಷ್ಯ ರೂಪಿಸಿಕೊಳ್ಳಲು ಬೆಂಗಳೂರಲ್ಲಿ ಎಲ್ಲ ಬಗೆಯ ತಂತ್ರಜ್ಞಾನ ಕ್ಷೇತ್ರಗಳಿವೆ. ಐಟಿ, ಬಿಟಿ, ಏರೋಸ್ಪೇಸ್, ಹಣಕಾಸು, ವೈದ್ಯಕೀಯ ಎಲ್ಲದರಲ್ಲೂ ಅತ್ಯುನ್ನತ ಸಾಧನೆ ಮಾಡಿರುವ ನಗರ ನಮ್ಮ ಬೆಂಗಳೂರು. ನಿಮ್ಮ ಕನಸು- ಉದ್ದೇಶ ಈಡೇರಿಸಿಕೊಳ್ಳಲು ಇದಕ್ಕಿಂತ ಪ್ರಶಸ್ತ ಜಾಗ ಬೇರೊಂದು ಇಲ್ಲ ಎಂದು ಹೇಳಿದ್ದಾರೆ.
ಹಿಡಿದ ಕೆಲಸ ಸಾಧಿಸಲು ನಿಮಗೆ ನೀವೇ ಸಹಾಯ ಮಾಡಿಕೊಳ್ಳಬೇಕು. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸ್ಪೂನ್ ಫೀಡಿಂಗ್ ವ್ಯವಸ್ಥೆ ಇರಲ್ಲ, ಮಾರ್ಗದರ್ಶನವಿರುತ್ತದೆ. ಅದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ದೇಶದಲ್ಲಿರುವ ಒಟ್ಟು ನವೋದ್ಯಮಗಳ ಪೈಕಿ ಅರ್ಧದಷ್ಟು ಬೆಂಗಳೂರಲ್ಲೇ ಇವೆ. ಹೆಚ್ಚಿನ ಯಶಸ್ಸನ್ನು ಗಳಿಸಿವೆ. ನಿಮ್ಮ ಮುಂದೆ ಅವಕಾಶಗಳ ಹೆಬ್ಬಾಗಿಲೇ ತೆರೆದಿದೆ ಎಂದರು.
ಕಾಲೇಜಿನಲ್ಲಿ ಬೋಧಿಸುವ ಕೋರ್ಸ್​ ಜೊತೆಗೆ ಇನ್ನೊಂದಿಷ್ಟು ವಿಷಯಗಳನ್ನು ಕಲಿತುಕೊಳ್ಳುವ ಅವಕಾಶ ನಿಮಗೆಲ್ಲಾ ಮುಕ್ತವಾಗಿದೆ. ಅದರ ಪ್ರಯೋಜನ ಪಡೆದುಕೊಳ್ಳಿ. ದೇಹದ ಆರೋಗ್ಯದ ಜೊತೆಗೆ ಮನಸ್ಸಿನ ಆರೋಗ್ಯಕ್ಕೂ ಗಮನ ಕೊಡುವುದು ಅಗತ್ಯ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಶಿಕ್ಷಣ ಕ್ಷೇತ್ರ ಅತ್ಯಂತ ವೇಗವಾಗಿ ಬದಲಾಗುತ್ತಿದೆ ಅದಕ್ಕನುಗುಣವಾಗಿ ಶಿಕ್ಷಣ ನೀಡುವ ಕಾಲೇಜುಗಳು ಅಪ್​ಡೇಟ್ ಆಗಬೇಕು. ಈ ವಿಷಯದಲ್ಲಿ ಆರ್.ಆರ್ ಶಿಕ್ಷಣ ಸಮೂಹ ಅತ್ಯಂತ ಗುಣಮಟ್ಟದ ಕೆಲಸ ಮಾಡುತ್ತಿದೆ ಎಂದು ಶಾಸಕ ಅಶ್ವಥ್ ನಾರಾಯಣ್ ಶ್ಲಾಘಿಸಿದರು.
ಇನ್ನು ಸಮಾರಂಭದಲ್ಲಿ ಅರ್.ಅರ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ರಾಜಾರೆಡ್ಡಿ, ಹೆಚ್​ಎಎಲ್ ಜನರಲ್ ಮ್ಯಾನೇಜರ್ ಪಿ ವಾಂಗ್ ಚುಕ್, ಕಾರ್ಯದರ್ಶಿ ಕಿರಣ್ ಹೆಚ್.ಆರ್ ನಿರ್ದೇಶಕ ಅರುಣ್ ಹೆಚ್.ಆರ್ ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ ಮಹೇಂದ್ರ ಕೆ.ವಿ ಸಮಾರಂಭದಲ್ಲಿ ಹಾಜರಿದ್ದರು. ಇದರ ಜೊತೆಗೆ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದು ಸಂತಸ ತಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ