/newsfirstlive-kannada/media/media_files/2026/02/19/nelamangala-case-2026-02-19-13-47-53.jpg)
ಬೆಂಗಳೂರು: ಸಾಲಬಾಧೆ ಮನುಷ್ಯನನ್ನ ಎಂತಹ ಹೀನ ಕೃತ್ಯಕ್ಕೂ ಇಳಿಸುತ್ತೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. 8 ಲಕ್ಷ ರೂಪಾಯಿ ಸಾಲ ತೀರಿಸಲು ಹೋಗಿ, ವೀಲ್‌ಚೇರ್‌ನಲ್ಲಿದ್ದ ಅಸಹಾಯಕ ಪತಿಯ ಕಣ್ಣೆದುರೇ ವೃದ್ಧೆಯೊಬ್ಬರ ಕುತ್ತಿಗೆ ಸೀಳಿ ಬರ್ಬರವಾಗಿ ಕೊ* ಮಾಡಿದ ಘಟನೆ ನೆಲಮಂಗಲದಲ್ಲಿ ನಡೆದಿದೆ. ಪ್ರಕರಣ ಭೇದಿಸಿರುವ ಪೊಲೀಸರು, ನಾಟಕವಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಘಟನೆಯ ವಿವರ
ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಪೇಟೆ ಬೀದಿಯ, ಜಯದೇವ ಚೌಟ್ರಿ ಪಕ್ಕದ ಮನೆಯಲ್ಲಿ ಈ ಘೋರ ಕೃತ್ಯ ನಡೆದಿದೆ. ಮೃತ ದುರ್ದೈವಿಯನ್ನು ಶೋಭಾ (70) ಎಂದು ಗುರುತಿಸಲಾಗಿದೆ. ಶೋಭಾ ಅವರ ಪತಿ ರಂಗನಾಥ್ ಪಾರ್ಶ್ವವಾಯು (Paralysis) ಸಮಸ್ಯೆಯಿಂದ ಬಳಲುತ್ತಿದ್ದು, ವೀಲ್‌ಚೇರ್‌ನಲ್ಲೇ ದಿನ ದೂಡುತ್ತಿದ್ದರು. ದಂಪತಿಗೆ ಮಕ್ಕಳಿರಲಿಲ್ಲ. ಇದನ್ನೇ ಬಂಡವಾಳವಾಗಿಸಿಕೊಂಡ ಆರೋಪಿ, ಏಕಾಂಗಿಯಾಗಿದ್ದ ವೃದ್ಧ ದಂಪತಿಯ ಮನೆಗೆ ನುಗ್ಗಿ ದರೋಡೆಗೆ ಯತ್ನಿಸಿದ್ದಾನೆ.
ಇದನ್ನೂ ಓದಿ: ಬಂಡಿಪುರ, ನಾಗರಹೊಳೆಯಲ್ಲಿ ಇಂದಿನಿಂದ ಸಫಾರಿಗೆ ಮತ್ತೆ ಅನುಮತಿ : ರೈತರಿಂದ ಹೋರಾಟಕ್ಕೆ ನಿರ್ಧಾರ
/filters:format(webp)/newsfirstlive-kannada/media/media_files/2026/02/19/nelamangala-town-police-station-2026-02-19-13-54-14.jpg)
ಪತಿಯ ಮುಂದೆಯೇ ಭೀಕರ ಕೃತ್ಯ
ಆರೋಪಿ ಶಿವಕುಮಾರ್ (35) ಹೋಲ್ ಸೇಲ್ ಅಂಗಡಿ ಮಾಲೀಕನಾಗಿದ್ದವನು. ಮಧ್ಯಾಹ್ನ ಸುಮಾರು 1 ಗಂಟೆ 3 ನಿಮಿಷಕ್ಕೆ ಮನೆಗೆ ನುಗ್ಗಿದ್ದ ಈತ, ಹಣಕ್ಕಾಗಿ ಇಡೀ ಮನೆಯನ್ನು ಜಾಲಾಡಿದ್ದಾನೆ. ಹಣ ಸಿಗದಿದ್ದಾಗ ವೃದ್ಧೆ ಶೋಭಾ ಮೇಲೆ ಹಲ್ಲೆ ನಡೆಸಿ, ಪತಿ ರಂಗನಾಥ್ ಅವರ ಮುಂದೆಯೇ ಚಾಕುವಿನಿಂದ ಇರಿದು, ಕುತ್ತಿಗೆ ಸೀಳಿ ಮುಗಿಸಿದ್ದಾನೆ. ಬಳಿಕ ಅವರ ಮೈಮೇಲಿದ್ದ ಮಾಂಗಲ್ಯ ಸರ ಹಾಗೂ ಕೈಬಳೆಗಳನ್ನು ಕಿತ್ತುಕೊಂಡು ಒಂದೂವರೆ ಗಂಟೆ ಬಳಿಕ ಅಲ್ಲಿಂದ ಪರಾರಿಯಾಗಿದ್ದ.
ಘಟನೆ ನಡೆದ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸುವಾಗ, ಆರೋಪಿ ಶಿವಕುಮಾರ್ ಕೂಡ ಅಲ್ಲಿಯೇ ಇದ್ದ. ಪೊಲೀಸರೊಂದಿಗೆ ಸೇರಿ ಏನೂ ಅರಿಯದವನಂತೆ ನಾಟಕವಾಡಿದ್ದ. ಅಕ್ಕಪಕ್ಕದ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸುವಾಗಲೂ ಜೊತೆಯಲ್ಲೇ ಇದ್ದು ಸಹಕರಿಸುವ ನಾಟಕವಾಡಿದ್ದ.
ಸಿಕ್ಕಿಬಿದ್ದಿದ್ದು ಹೇಗೆ?
ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಆರೋಪಿ ಶಿವಕುಮಾರ್ ತನ್ನ ‘ಆಕ್ಟಿವಾ’ (Activa) ಬೈಕ್‌ನಲ್ಲಿ ಬಂದು ಹೋಗಿರುವುದು ಪತ್ತೆಯಾಗಿದೆ. ಬೈಕ್ ನಂಬರ್ ಟ್ರೇಸ್ ಮಾಡಿದಾಗ ಅಸಲಿ ಕಳ್ಳ ಸಿಕ್ಕಿಬಿದ್ದಿದ್ದಾನೆ. ಎಸ್ಪಿ ಎಂ.ವಿ. ಚಂದ್ರಕಾಂತ್ ಮಾರ್ಗದರ್ಶನದಲ್ಲಿ ರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡ, ಆರೋಪಿ ಶಿವಕುಮಾರ್‌ನನ್ನು ಬಂಧಿಸಿದೆ. ಕೃತ್ಯಕ್ಕೆ ಬಳಸಿದ್ದ ಚಾಕು, ಬೈಕ್ ಹಾಗೂ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us