/newsfirstlive-kannada/media/media_files/2026/02/19/hobalegowda-1-2026-02-19-12-40-11.jpg)
ಬೆಂಗಳೂರು: ನಗರದ ಬ್ಯಾಡರಹಳ್ಳಿಯಲ್ಲಿ ಹಾಡುಹಗಲೇ ನಡೆದಿದ್ದ ಸಿನಿಮೀಯ ಮಾದರಿಯ ದರೋಡೆ (Robbery) ಪ್ರಕರಣ ಇದೀಗ ರೋಚಕ ತಿರುವು ಪಡೆದುಕೊಂಡಿದೆ. ಪೊಲೀಸರ ಸಮವಸ್ತ್ರ ಧರಿಸಿ ಬಂದು ಕೃತ್ಯ ಎಸಗಿದ್ದ ಆರೋಪಿಗಳ ಪತ್ತೆಗೆ ಬಲೆ ಬೀಸಿರುವ ಪೊಲೀಸರಿಗೆ, ಇದು ಹೊರಗಿನವರ ಕೃತ್ಯವಲ್ಲ, ಬದಲಾಗಿ ‘ಮನೆ ಕಳ್ಳರ’ ಕೈಚಳಕ ಎಂಬ ಬಲವಾದ ಅನುಮಾನ ಮೂಡಿದೆ.
ಘಟನೆಯ ಹಿನ್ನೆಲೆ
ಬ್ಯಾಡರಹಳ್ಳಿಯ ಬಿಇಎಲ್ (BEL) ಬಡಾವಣೆಯ ನಿವಾಸಿ ಹೊಂಬಾಳೆಗೌಡ (53) ಅವರ ಮನೆಯಲ್ಲಿ ಈ ಘಟನೆ ನಡೆದಿತ್ತು. ಕೃತ್ಯ ನಡೆದ ವೇಳೆ ಮನೆಯಲ್ಲಿ ಹೊಂಬಾಳೆಗೌಡ, ಅವರ ಪತ್ನಿ ಮಂಗಳಮ್ಮ ಹಾಗೂ ಎರಡೂವರೆ ವರ್ಷದ ಮೊಮ್ಮಗು ಮಾತ್ರ ಇದ್ದರು. ಈ ಸಮಯವನ್ನೇ ನೋಡಿಕೊಂಡು ಪೊಲೀಸ್ ಯೂನಿಫಾರ್ಮ್ ಧರಿಸಿ ಬಂದಿದ್ದ ಖದೀಮರು ದರೋಡೆ ಮಾಡಿ ಪರಾರಿಯಾಗಿದ್ದರು.
ಇದನ್ನೂ ಓದಿ: ಜರ್ಸಿ ಬದಲಿಸಿದರೂ ಅದೃಷ್ಟ ಬದಲಾಗಲಿಲ್ಲ! 0, 0, 0 ಅಭಿಷೇಕ್ ಹ್ಯಾಟ್ರಿಕ್ ಶೂನ್ಯ..!
ದರೋಡೆಕೋರರು ಕೇವಲ ಹಣ ದೋಚಲು ಬಂದವರಂತೆ ವರ್ತಿಸಿಲ್ಲ. ಬದಲಾಗಿ ಮನೆಯ ಯಜಮಾನನ ಬಗ್ಗೆ ಇಂಚಿಂಚೂ ಮಾಹಿತಿ ತಿಳಿದವರಂತೆ ಮಾತನಾಡಿದ್ದಾರೆ. ಸಂತ್ರಸ್ತ ಹೊಂಬಾಳೆಗೌಡ ಅವರು ಪೊಲೀಸರಿಗೆ ನೀಡಿರುವ ಹೇಳಿಕೆಯೇ ಈ ಅನುಮಾನಕ್ಕೆ ಪ್ರಮುಖ ಕಾರಣವಾಗಿದೆ.
ದರೋಡೆಕೋರರು ಹೇಳಿದ್ದೇನು?
ಕೃತ್ಯ ಎಸಗುವ ವೇಳೆ ಆರೋಪಿಗಳು ಹೊಂಬಾಳೆಗೌಡರಿಗೆ ಬೆದರಿಕೆ ಹಾಕುತ್ತಾ, "ನೀನು ಎಲ್ಲೆಲ್ಲಿ ಆಸ್ತಿ ಮಾಡಿದ್ದೀಯಾ ಎಂಬುದು ನಮಗೆ ಗೊತ್ತು. ಮನೆಯಲ್ಲಿ ಹಣ ಎಲ್ಲಿದೆ, ಎಲ್ಲಿ ಇಟ್ಟಿದ್ದೀಯಾ ಅಂತನೂ ಗೊತ್ತು. ಸುಮ್ಮನೆ ಕೊಡು," ಎಂದು ಧಮ್ಕಿ ಹಾಕಿದ್ದಾರೆ. ಒಬ್ಬ ಅಪರಿಚಿತ ಕಳ್ಳನಿಗೆ ಅಥವಾ ದರೋಡೆಕೋರನಿಗೆ ಮನೆಯ ಯಜಮಾನ ಎಲ್ಲಿ ಆಸ್ತಿ ಖರೀದಿಸಿದ್ದಾನೆ? ಹಣ ಎಲ್ಲಿ ಇಡುತ್ತಾರೆ? ಎಂಬ ಖಚಿತ ಮಾಹಿತಿ ಇರಲು ಸಾಧ್ಯವಿಲ್ಲ. ಹೀಗಾಗಿ ಹೊಂಬಾಳೆಗೌಡರ ಆಸ್ತಿ ಮತ್ತು ಆರ್ಥಿಕ ವಿಚಾರಗಳ ಬಗ್ಗೆ ಚೆನ್ನಾಗಿ ತಿಳಿದಿರುವ ಆಪ್ತರು ಅಥವಾ ಸಂಬಂಧಿಕರೇ ಈ ಕೃತ್ಯದ ಹಿಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಇದನ್ನೂ ಓದಿ: ತಲಾ 1 ಕೋಟಿ ರೂಪಾಯಿ ಪರಿಹಾರ -ಮೃತ ಮೂವರು ಲೈನ್​ಮ್ಯಾನ್ ಕುಟುಂಬಕ್ಕೆ ಸಚಿವ ಕೆ.ಜೆ.ಜಾರ್ಜ್ ಚೆಕ್ ವಿತರಣೆ
CDR ಪರಿಶೀಲನೆ, ಆಪ್ತರಿಗೆ ನಡುಕ
ದರೋಡೆಕೋರರು ಆಡಿದ ಮಾತುಗಳನ್ನೇ ಸುಳಿವಾಗಿ ಇಟ್ಟುಕೊಂಡಿರುವ ಬ್ಯಾಡರಹಳ್ಳಿ ಪೊಲೀಸರು, ಈಗ ಕಳ್ಳರನ್ನು ಹುಡುಕುವ ಬದಲು 'ಮನೆ ಕಳ್ಳರನ್ನು' ಹುಡುಕುತ್ತಿದ್ದಾರೆ. ಹೊಂಬಾಳೆಗೌಡರ ಹತ್ತಿರದ ಸಂಬಂಧಿಗಳು ಮತ್ತು ಆಪ್ತರ ಮೊಬೈಲ್ ಕರೆಗಳ ವಿವರಗಳನ್ನು (CDR - Call Detail Record) ತೆಗೆಸುತ್ತಿದ್ದಾರೆ. ಪರಿಚಯಸ್ಥರೇ ಸುಪಾರಿ ಕೊಟ್ಟು ಈ ಕೃತ್ಯ ಎಸಗಿದ್ದಾರೆಯೇ ಅಥವಾ ಅವರೇ ನೇರವಾಗಿ ಭಾಗಿಯಾಗಿದ್ದಾರೆಯೇ ಎಂಬ ನಿಟ್ಟಿನಲ್ಲಿ ತನಿಖೆ ಮುಂದುವರೆದಿದೆ. ಒಟ್ಟಿನಲ್ಲಿ ಹಾಡುಹಗಲೇ ನಡೆದ ಈ ರಾಬರಿ ಕೇಸ್, ಸದ್ಯದಲ್ಲೇ ಬಗೆಹರಿಯುವ ಲಕ್ಷಣಗಳು ಕಾಣುತ್ತಿದ್ದು, ಆರೋಪಿಗಳು ಮನೆಯವರೇ ಆಗಿದ್ದರೂ ಅಚ್ಚರಿ ಪಡಬೇಕಿಲ್ಲ.
ಇದನ್ನೂ ಓದಿ: ಮಾಜಿ ಪತ್ನಿಯ ಮನೆಗೆ ನುಗ್ಗಿ ಆಕೆಯ ತಲೆಗೆ ಇರಿದು ಕೊಂದ ಮಾಜಿ ಪತಿ!!: ಕೆನಡಾಕ್ಕೆ ಹೋಗಲು ಕೇಸ್ ಅಡ್ಡಿಯಾಗಿದ್ದಕ್ಕೆ ಹತ್ಯೆ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us