/newsfirstlive-kannada/media/media_files/2026/01/22/k-ride-2026-01-22-07-47-50.jpg)
ಬೆಂಗಳೂರು: ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕರ್ನಾಟಕ) ಲಿಮಿಟೆಡ್ – ಕ-ರೈಡ್ ನಿನ್ನೆ ನಾಗರಿಕ–ಹಿತಾಸಕ್ತಿದಾರರ ಸಂಪರ್ಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿತು. ಕ-ರೈಡ್‌ನ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದ ಮೂಲಕ ಪಾರದರ್ಶಕತೆ, ಭಾಗವಹಿಸುವಿಕೆ ಹಾಗೂ ನಾಗರಿಕ ಕೇಂದ್ರಿತ ಮೂಲಸೌಕರ್ಯ ಅಭಿವೃದ್ಧಿಗೆ ಸಂಸ್ಥೆಯ ಬದ್ಧತೆಯನ್ನು ಕ-ರೈಡ್ ಪುನರುಚ್ಚರಿಸಿತು.
ಕಾರ್ಯಕ್ರಮದಲ್ಲಿ ರಾಜೇಶ್ ಕುಮಾರ್ ಸಿಂಗ್, ನಿರ್ದೇಶಕರು (ಯೋಜನೆಗಳು ಮತ್ತು ಯೋಜನಾ ರೂಪಣೆ) ಹಾಗೂ ಶ್ರೀ ಅವಧೇಶ್ ಮೆಹ್ರಾ, ನಿರ್ದೇಶಕರು (ವ್ಯವಹಾರ ಅಭಿವೃದ್ಧಿ ಮತ್ತು ಹಣಕಾಸು) ಸೇರಿದಂತೆ ಕ-ರೈಡ್‌ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್‌ಆರ್‌ಪಿ) ಕುರಿತ ಪ್ರಗತಿಯ ಮಾಹಿತಿ ಪಡೆಯಲು ಗಣ್ಯ ನಾಗರಿಕ ಸಂಘಟನೆಗಳು, ನಿವಾಸಿ ಕಲ್ಯಾಣ ಸಂಘಟಣೆಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳ (ಎನ್‌ಜಿಒಗಳು) ಪ್ರತಿನಿಧಿಗಳು ಉತ್ಸಾಹದಿಂದ ಭಾಗವಹಿಸಿದರು.
ಕಾರ್ಯಕ್ರಮದ ವೇಳೆ ಕ-ರೈಡ್ ಯೋಜನೆಗಳ ಪ್ರಸ್ತುತ ಸ್ಥಿತಿ, ಇದುವರೆಗೆ ಸಾಧಿಸಿರುವ ಪ್ರಮುಖ ಮೈಲಿಗಲ್ಲುಗಳು ಹಾಗೂ ಮುಂದಿನ ಹಂತಗಳ ಕುರಿತು ವಿವರವಾದ ಪ್ರಸ್ತುತೀಕರಣಗಳು ನಡೆದವು. ಯೋಜನಾ ಅವಧಿ, ರೂಪುರೇಷೆಗಳು ಮತ್ತು ಅನುಷ್ಠಾನದ ಸಂದರ್ಭದಲ್ಲಿ ಎದುರಾಗುವ ಸವಾಲುಗಳ ಬಗ್ಗೆ ನಾಗರಿಕರಿಗೆ ಸಮಗ್ರ ಮಾಹಿತಿ ನೀಡಲಾಯಿತು. ನಂತರ ಮುಕ್ತ ಸಂವಾದ ವೇದಿಕೆಯ ಮೂಲಕ ಭಾಗವಹಿಸಿದವರು ತಮ್ಮ ಅಭಿಪ್ರಾಯಗಳು, ಸಲಹೆಗಳು ಮತ್ತು ಆತಂಕಗಳನ್ನು ವ್ಯಕ್ತಪಡಿಸಿದರು.
ಇದನ್ನೂ ಓದಿ:ನಾಗ್ಪುರದಲ್ಲಿ ಇತಿಹಾಸ ಸೃಷ್ಟಿಸಿದ ಐದು ಬಿಗ್ ಸ್ಟಾರ್ಸ್.. ಭಾರತಕ್ಕೆ ಭರ್ಜರಿ ಗೆಲುವು
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಲಕ್ಷ್ಮಣ್ ಸಿಂಗ್, “ಕ-ರೈಡ್‌ನ ಹೊಣೆಗಾರಿಕೆ ಕೇವಲ ರೈಲು ಮೂಲಸೌಕರ್ಯ ನಿರ್ಮಾಣಕ್ಕೆ ಸೀಮಿತವಲ್ಲ. ಪಾರದರ್ಶಕತೆ, ಹೊಣೆಗಾರಿಕೆ ಮತ್ತು ನಾಗರಿಕರೊಂದಿಗೆ ನಿರಂತರ ಸಂವಹನದ ಮೂಲಕ ಸಾರ್ವಜನಿಕ ವಿಶ್ವಾಸವನ್ನು ನಿರ್ಮಿಸುವುದು ನಮ್ಮ ಕರ್ತವ್ಯ. ಉಪನಗರ ರೈಲು ಯೋಜನೆಯನ್ನು ಜನಕೇಂದ್ರಿತ ಚಲನವಲನ ಪರಿಹಾರವಾಗಿ ರೂಪಿಸಲಾಗುತ್ತಿದೆ. ಹಿತಾಸಕ್ತಿದಾರರ ಸಕ್ರಿಯ ಭಾಗವಹಿಸುವಿಕೆ ಯೋಜನೆಯ ಗುಣಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ದೀರ್ಘಕಾಲಿಕ ಸ್ಥಿರತೆಯನ್ನು ಖಚಿತಪಡಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜೇಶ್ ಕುಮಾರ್ ಸಿಂಗ್, ನಾಗರಿಕರು ಮತ್ತು ಹಿತಾಸಕ್ತಿದಾರರೊಂದಿಗೆ ನಿರಂತರ ಸಂವಾದವು ಯೋಜನೆಗಳ ರೂಪಣೆ ಹಾಗೂ ಅನುಷ್ಠಾನವನ್ನು ಮತ್ತಷ್ಟು ಸುಧಾರಿಸಲು ನೆರವಾಗುತ್ತದೆ. ಇಂತಹ ಸಂವಹನಗಳಿಂದ ದೊರಕುವ ರಚನಾತ್ಮಕ ಸಲಹೆಗಳು ಸಮಸ್ಯೆಗಳನ್ನು ಮುಂಚಿತವಾಗಿ ಗುರುತಿಸಿ ಪರಿಹರಿಸಲು ಸಹಕಾರಿಯಾಗುತ್ತವೆ. ಸಾಧ್ಯವಾದ ಎಲ್ಲ ಕಡೆ ಈ ಸಲಹೆಗಳನ್ನು ಯೋಜನಾ ಪ್ರಕ್ರಿಯೆಗಳಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಕ-ರೈಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ಲಕ್ಷ್ಮಣ್ ಸಿಂಗ್, ಸಂಸ್ಥೆಯ ಸುದ್ದಿಪತ್ರ ಸಂಪರ್ಕ (SAMPARKA)ದ ಇತ್ತೀಚಿನ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಈ ಸುದ್ದಿಪತ್ರವು ಕ-ರೈಡ್ ಯೋಜನೆಗಳ ಪ್ರಗತಿ, ಪ್ರಮುಖ ಸಾಧನೆಗಳು ಹಾಗೂ ನಾಗರಿಕ ಕೇಂದ್ರಿತ ಉಪಕ್ರಮಗಳ ಕುರಿತು ನಿಯಮಿತ ಮಾಹಿತಿಯನ್ನು ಒದಗಿಸುವ ಉದ್ದೇಶ ಹೊಂದಿದ್ದು, ನಾಗರಿಕರು ಮತ್ತು ಪಾಲುದಾರರೊಂದಿಗೆ ಸಂವಹನ ಹಾಗೂ ಪಾರದರ್ಶಕತೆಯನ್ನು ಬಲಪಡಿಸುವ ಮಹತ್ವದ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ.
ಇದನ್ನೂ ಓದಿ:ಉಗ್ರಂ ಮಂಜುಗೆ ಮದುವೆ ಸಂಭ್ರಮ.. ಅರಿಶಿಣ ಶಾಸ್ತ್ರದಲ್ಲಿ ಮಿಂದೆದ್ದ ಸ್ಟಾರ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us