/newsfirstlive-kannada/media/media_files/2026/03/05/devanahalli-robbery-2026-03-05-15-07-58.jpg)
ದೇವನಹಳ್ಳಿ: ಕಡಿಮೆ ಬೆಲೆಗೆ ಚಿನ್ನ ಕೊಡಿಸುವುದಾಗಿ ನಂಬಿಸಿ ಆಂಧ್ರಪ್ರದೇಶ ಮೂಲದ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 20 ಲಕ್ಷ ರೂಪಾಯಿ ದರೋಡೆ ಮಾಡಿರುವ ಆಘಾತಕಾರಿ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನಲ್ಲಿ ನಡೆದಿದೆ.
ಏನಿದು ಘಟನೆ?
ಆಂಧ್ರಪ್ರದೇಶ ಮೂಲದ ವಿಶ್ವಪ್ರಸಾದ್ ರೆಡ್ಡಿ ದರೋಡೆಗೊಳಗಾದ ವ್ಯಕ್ತಿ. ದರೋಡೆಕೋರರ ತಂಡವು ವಿಶ್ವಪ್ರಸಾದ್ ರೆಡ್ಡಿ ಅವರಿಗೆ ಕರೆ ಮಾಡಿ, ನಮ್ಮ ಬಳಿ 4 ಕೆಜಿ ಚಿನ್ನವಿದೆ, ಅದನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ನೀಡುತ್ತೇವೆ ಎಂದು ನಂಬಿಸಿದ್ದರು. ಮೊದಲ ಹಂತವಾಗಿ 1 ಕೆಜಿ ಚಿನ್ನಕ್ಕೆ 20 ಲಕ್ಷ ರೂಪಾಯಿ ನೀಡುವಂತೆ ಸಂಚು ರೂಪಿಸಿದ್ದರು.
ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಟಾರ್ ಕ್ರಿಕೆಟರ್, ಕನ್ನಡಿಗ ವೈಶಾಕ್ ವಿಜಯಕುಮಾರ್.. ಹುಡುಗಿ ಯಾರು..?
ಖಾಸಗಿ ಲೇಔಟ್‌ನಲ್ಲಿ ನಡೆದ ಕೃತ್ಯ
ಚಿನ್ನದ ಆಸೆಗೆ ಬಿದ್ದ ವಿಶ್ವಪ್ರಸಾದ್ ರೆಡ್ಡಿ ಅವರು ಹಣದೊಂದಿಗೆ ಆಂಧ್ರದಿಂದ ಬೆಂಗಳೂರಿನತ್ತ ಬಂದಿದ್ದರು. ದರೋಡೆಕೋರರು ಅವರನ್ನು ದೇವನಹಳ್ಳಿ ತಾಲ್ಲೂಕಿನ ವೆಂಕಟಗಿರಿಕೋಟೆ ಬಳಿಯ ಖಾಸಗಿ ಲೇಔಟ್‌ಗೆ ಬರುವಂತೆ ಸೂಚಿಸಿದ್ದರು. ವಿಶ್ವಪ್ರಸಾದ್ ರೆಡ್ಡಿ ಅಲ್ಲಿಗೆ ತಲುಪುತ್ತಿದ್ದಂತೆ, ಹೊಂಚು ಹಾಕಿ ಕುಳಿತಿದ್ದ ಆರು ಮಂದಿ ದರೋಡೆಕೋರರ ತಂಡ ಇಬ್ಬರ ಮೇಲೆ ಹಲ್ಲೆ ನಡೆಸಿದೆ. ವಿಶ್ವಪ್ರಸಾದ್ ರೆಡ್ಡಿ ಮತ್ತು ಅವರ ಜೊತೆಗಿದ್ದವರ ತಲೆಗೆ ಹೊಡೆದ ದರೋಡೆಕೋರರು, ಅವರ ಬಳಿಯಿದ್ದ 20 ಲಕ್ಷ ರೂಪಾಯಿ ನಗದನ್ನು ಕಿತ್ತುಕೊಂಡು ಪರಾರಿಯಾಗಿದೆ.
ಪೊಲೀಸ್ ಠಾಣೆ ಮೆಟ್ಟಿಲೇರಿದ ಸಂತ್ರಸ್ತರು
ಅತ್ತ ಚಿನ್ನವೂ ಸಿಗದೆ, ಇತ್ತ ಕೈಯಲ್ಲಿದ್ದ 20 ಲಕ್ಷ ರೂಪಾಯಿ ಹಣವನ್ನೂ ಕಳೆದುಕೊಂಡ ವಿಶ್ವಪ್ರಸಾದ್ ರೆಡ್ಡಿ ಈಗ ಕಂಗಾಲಾಗಿದ್ದಾರೆ. ಈ ಸಂಬಂಧ ಅವರು ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಚಂದ್ರಕಾಂತ್ ಮತ್ತು ಡಿವೈಎಸ್ಪಿ ಪಾಂಡುರಂಗ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದರೋಡೆಕೋರರನ್ನು ಪತ್ತೆಹಚ್ಚಲು ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ. ಕಡಿಮೆ ಬೆಲೆಗೆ ಚಿನ್ನ ಸಿಗುತ್ತದೆ ಎಂದು ಅಪರಿಚಿತರನ್ನು ನಂಬುವ ಮುನ್ನ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.
ಇದನ್ನೂ ಓದಿ:ಭಾರತ vs ಇಂಗ್ಲೆಂಡ್ ಸೆಮಿಫೈನಲ್: ಮಳೆಯಿಂದ ಪಂದ್ಯ ರದ್ದಾದರೆ ಫೈನಲ್‌ಗೆ ಹೋಗುವ ತಂಡ ಯಾವುದು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us