ಕಾರು ಅಪಘಾತಕ್ಕೆ ಬಿಗ್ ಟ್ವಿಸ್ಟ್.. ಅದೊಂದು ಕಾರಣ ಕುಚಿಕು ಗೆಳೆಯನ ಜೀವ ತೆಗೆಸಿತಾ..?

ಆನೇಕಲ್‌ನಲ್ಲಿ ಘೋರ ದುರಂತ: ಮೇಲ್ನೋಟಕ್ಕೆ ಇದು ಅಪಘಾತ, ಆಳದಲ್ಲಿ ಇದು ಕೊಲೆ! ಕಾರಿನ ಕಿಟಕಿಯಲ್ಲಿ ನೇತಾಡುತ್ತಿದ್ದ ಗೆಳೆಯನನ್ನೇ ಮರಕ್ಕೆ ಗುದ್ದಿಸಿ ಕೊಂದ ಪಾಪಿ! ಅಷ್ಟಕ್ಕೂ ಆಗಿದ್ದೇನು?

author-image
Ganesh Kerekuli
car accident (1)
Advertisment

ಬೆಂಗಳೂರು: ಸಿಲಿಕಾನ್ ಸಿಟಿಯ ಹೊರವಲಯದ ಆನೇಕಲ್ ತಾಲೂಕಿನ ಕಮ್ಮಸಂದ್ರದಲ್ಲಿ ನಡೆದ ಕಾರು ಅಪಘಾತ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಮೊದಲು ಕುಡಿದ ನಶೆಯಲ್ಲಿ ನಡೆದ ಆಕಸ್ಮಿಕ ಅಪಘಾತ ಎಂದು ಭಾವಿಸಲಾಗಿದ್ದ ಈ ಘಟನೆ, ಈಗ 'ಕೊ*' ಎಂಬ ಆಘಾತಕಾರಿ ಸತ್ಯವನ್ನು ಹೊರಹಾಕಿದೆ. ಮೃತ ಪ್ರಶಾಂತ್ ತಾಯಿಯ ದೂರಿನ ಮೇರೆಗೆ ಹೆಬ್ಬಗೋಡಿ ಪೊಲೀಸರು ಪ್ರಕರಣವನ್ನು ಕೊ* ಎಂದು ದಾಖಲಿಸಿಕೊಂಡಿದ್ದಾರೆ.

ಕ್ರಿಕೆಟ್ ಬೆಟ್ಟಿಂಗ್ ಅಥವಾ ಸೋಲಿನ ಕಿರಿಕ್?

ಘಟನೆಯ ಹಿನ್ನೆಲೆ ನೋಡಿದರೆ, ಕಮ್ಮಸಂದ್ರದಲ್ಲಿ ನಡೆದಿದ್ದ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಮೃತ ಪ್ರಶಾಂತ್ (28) ಆಟವಾಡಿದ್ದ ತಂಡ ಸೋಲನ್ನಪ್ಪಿತ್ತು. ಇದರಿಂದ ಬೇಸರಗೊಂಡಿದ್ದ ಪ್ರಶಾಂತ್ ಮನೆಗೆ ಹೋಗಿ ತಾಯಿಯ ಬಳಿ ವಿಷಯ ಹಂಚಿಕೊಂಡಿದ್ದ. ಆದರೆ ರಾತ್ರಿ 7.30ರ ಸುಮಾರಿಗೆ ಫೋನ್ ಕರೆ ಬಂದ ಹಿನ್ನೆಲೆಯಲ್ಲಿ ಮತ್ತೆ ಮೈದಾನಕ್ಕೆ ಬಂದಿದ್ದ. ಅಲ್ಲಿ ಗೆಳೆಯ ರೋಷನ್ ಹೆಗ್ಗಡೆ (27) ಮತ್ತು ಪ್ರಶಾಂತ್ ನಡುವೆ ಎಣ್ಣೆ ಪಾರ್ಟಿಯ ವೇಳೆ ದೊಡ್ಡ ಮಟ್ಟದ ಗಲಾಟೆ ನಡೆದಿದೆ.

ಸಿನಿಮೀಯ ಮಾದರಿಯಲ್ಲಿ ಕೃತ್ಯ

ಇಬ್ಬರ ನಡುವಿನ ಕಿರಿಕ್ ತಾರಕಕ್ಕೇರಿದಾಗ ರೋಷನ್ ಅಲ್ಲಿಂದ ತನ್ನ ಕಾರಿನಲ್ಲಿ ತೆರಳಲು ಮುಂದಾಗಿದ್ದಾನೆ. ಈ ವೇಳೆ ಪ್ರಶಾಂತ್ ಕಾರನ್ನು ತಡೆಯಲು ಯತ್ನಿಸಿದ್ದು, ಕಾರಿನ ಎಡಭಾಗದ ಕಿಟಕಿಯನ್ನು ಹಿಡಿದು ನೇತಾಡುತ್ತಿದ್ದರು. ಆದರೂ ಕರುಣೆ ತೋರದ ರೋಷನ್, ಕಾರನ್ನು ಅತಿ ವೇಗವಾಗಿ ಚಲಾಯಿಸಿದ್ದಾನೆ. ಪ್ರಶಾಂತ್ ಕಾರಿನ ಹೊರಭಾಗದಲ್ಲಿ ನೇತಾಡುತ್ತಿದ್ದರೂ ಕಾರನ್ನು ನಿಲ್ಲಿಸದೆ, ಉದ್ದೇಶಪೂರ್ವಕವಾಗಿಯೇ ರಸ್ತೆಯ ಪಕ್ಕದಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಗೆಳೆಯನಿಗೆ ಗಾಯ

ಮರಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಹೊರಭಾಗದಲ್ಲಿ ನೇತಾಡುತ್ತಿದ್ದ ಪ್ರಶಾಂತ್ ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಇನ್ನು ಕಾರು ಚಲಾಯಿಸುತ್ತಿದ್ದ ರೋಷನ್ ಹೆಗ್ಗಡೆಗೂ ಗಂಭೀರ ಗಾಯಗಳಾಗಿದ್ದು, ಆತ ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಆರಂಭದಲ್ಲಿ ಇದು ಕುಡಿದ ಅಮಲಿನಲ್ಲಿ ನಡೆದ ಅಡ್ಡಾದಿಡ್ಡಿ ಚಾಲನೆ ಮತ್ತು ಅಪಘಾತ ಎಂದು ಹೇಳಲಾಗಿತ್ತು. ಪ್ರಶಾಂತ್ ತಾಯಿ ಅನು ಅವರು ನೀಡಿದ ದೂರಿನಲ್ಲಿ, "ನನ್ನ ಮಗನನ್ನು ಉದ್ದೇಶಪೂರ್ವಕವಾಗಿ ಮರಕ್ಕೆ ಡಿಕ್ಕಿ ಹೊಡೆಸಿ ಕೊಲ್ಲಲಾಗಿದೆ" ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಬ್ಬಗೋಡಿ ಪೊಲೀಸರು ಐಪಿಸಿ ಸೆಕ್ಷನ್ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಒಂದು ಸಣ್ಣ ಕ್ರಿಕೆಟ್ ಪಂದ್ಯದ ಸೋಲು ಮತ್ತು ಕುಡಿತದ ಅಮಲು ಇಬ್ಬರು ಗೆಳೆಯರ ಬದುಕನ್ನು ಈ ರೀತಿ ದುರಂತಕ್ಕೆ ತಳ್ಳಿದೆ. ಸದ್ಯ ಪೊಲೀಸರು ರೋಷನ್ ಚೇತರಿಸಿಕೊಂಡ ನಂತರ ಆತನನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೆಂಟ್ ಜಾನ್ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ:RCBಗೆ ಮೋಸ ಮಾಡಿದ ಎಲೀಸ್ ಪೆರ್ರಿ! ಪೆರ್ರಿ, ಪೆರ್ರಿ ಬೇರೆಡೆಗೆ ಪೇರಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Accident NEWS Car Accident accident
Advertisment