/newsfirstlive-kannada/media/media_files/2025/09/12/chikkamagalore-baby-2-2025-09-12-07-23-02.jpg)
4 ದಿನದ ಹಸುಗೂಸು ಜೀವ ಚೆಲ್ಲಿದೆ ಅಂತ ಹೆತ್ತವರೇ ಭಾರವಾದ ಹೃದಯದಿಂದ ಸ್ಮಶಾನಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ರು. ಆದ್ರೆ ಯಮರಾಜನ ಮನಸ್ಸು ಕರಗಿತ್ತೋ ಅಥವಾ ಮಗುವಿನ ಹಣೆಬರಹ ಗಟ್ಟಿಯಾಗಿತ್ತೋ ಏನೋ? ಅರ್ಧ ದಾರಿಯಲ್ಲೇ ಮಗು ಜೋರಾಗಿ ಅತ್ತು ಶಾಕ್ ಕೊಟ್ಟಿದೆ. ಇದು ಹಸುಗೂಸು ಪುನರ್ಜನ್ಮ ಪಡೆದ ಕಥೆ.
ಈ ವಿಶೇಷ ಹಾಗೂ ಅಪರೂಪದ ಘಟನೆ ನಡೆದಿದ್ದು ಚಿಕ್ಕಮಗಳೂರಲ್ಲಿ.. ಮೂಡಿಗೆರೆಯ ಲೋಕವಳ್ಳಿ ಗ್ರಾಮದ ಕಾಫಿ ತೋಟದ ಕೂಲಿ ಕಾರ್ಮಿಕ ದಂಪತಿಯ ಹಸುಗೂಸು ಉಸಿರಾಟವನ್ನೇ ನಿಲ್ಲಿಸಿತ್ತು. ಅಳೋದು ಬಿಡಿ ಕಣ್ಣು ಕೂಡ ಬಿಡೋಕೆ ತಯಾರಿರಲಿಲ್ಲ.. ಹಾಗಾಗಿ ಮೂಡಿಗೆರೆ ಆಸ್ಪತ್ರೆ ವೈದ್ಯರು ಚಿಕ್ಕಮಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದರು. ಆದ್ರೆ ಮೂರು ದಿನ ಚಿಕಿತ್ಸೆ ನೀಡಿದ್ರೂ ಮಗು ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಆಕ್ಸಿಜನ್ ತೆಗೆದರೆ ಸಾವನ್ನಪ್ಪುತ್ತೆ ಅಂತ ವಾಪಸ್ ಕಳಿಸಿದ್ದರು. ತೀವ್ರ ದುಃಖದಲ್ಲೇ ಪೋಷಕರಾದ ಸುಪ್ರಿತಾ ಹಾಗೂ ಹರೀಶ್ ಮಗು ಸತ್ತಿದೆ ಅಂತ ವೆಂಟಿಲೇಟರ್ ತೆಗೆದು ಮನೆಗೆ ಹೋಗಿ ಸ್ಮಶಾನಕ್ಕೆ ಹೋಗಲು ಮುಂದಾಗಿದ್ದರು. ಆದರೆ ಌಂಬುಲೆನ್ಸ್ನಲ್ಲಿ ಪವಾಡವೇ ನಡೆದಿದೆ.
ಹಸುಗೂಸಿಗೆ ಪುನರ್ಜನ್ಮ
ಅಪ್ಪ-ಅಮ್ಮನ ಜೊತೆ ಌಂಬುಲೆನ್ಸ್ನಲ್ಲಿ ಹೋಗ್ತಿದ್ದ ಮಗುವಿಗೆ ಅಮ್ಮನ ಕಣ್ಣೀರು ಕಾಣಿಸ್ತೋ ಅಥವಾ ಅಪ್ಪನ ದುಗುಡ ಕೇಳಿಸ್ತೋ ಏನೋ ಌಂಬುಲೆನ್ಸ್ನಲ್ಲಿ ಒಮ್ಮೇಲೆ ಜೋರಾಗಿ ಅತ್ತು ಉಸಿರಾಡಿದೆ. ಮಗು ಸಾವನ್ನಪ್ಪಿದ ತೀವ್ರ ದುಃಖದಲ್ಲೇ ದಿಕ್ಕು ತೋಚದಂತೆ ಕುಳಿತಿದ್ದ ಹೆತ್ತವರು ಕಂದ ಅಳು ಕೇಳಿ ದಿಗ್ಭ್ರಮೆಗೊಳಗಾಗಿದ್ರು. ಸಂತೋಷದಿಂದ ಌಂಬುಲೆನ್ಸ್ನ್ನ ತಿರುಗಿಸಿ ಸೀದಾ ಮೂಡಿಗೆರೆ ಸಾರ್ವಜನಿಕ ಆಸ್ಪತ್ರೆಗೆ ಹೋಗಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ತಕ್ಷಣ ಹಾಸನದ ಹಿಮ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಮೂಡಿಗೆರೆಯಿಂದ 3 ಌಂಬುಲೆನ್ಸ್ಗಳು ಎಸ್ಕಾರ್ಟ್ ಕೊಟ್ಟು ನಾಲ್ಕನೇ ಌಂಬುಲೆನ್ಸ್ನಲ್ಲಿ ಮಗುವನ್ನ ಹಾಸನದ ಹಿಮ್ಸ್ಗೆ ರವಾನಿಸಿದ್ದಾರೆ. ಹಾಸನದಲ್ಲಿ ಮಗುವಿಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಮಗು ತಾತ್ಕಾಲಿಕವಾಗಿ ಉಸಿರಾಡುತ್ತಿದ್ದು ಸಾವಿನ ದವಡೆಯಿಂದ ಪಾರಾಗಿದೆ. ಅಪ್ಪ-ಅಮ್ಮನೇ ಸತ್ತಿದೆ ಎಂದು ಭಾವಿಸಿದ್ದ ಮಗುವಿಗೆ ಪುನರ್ಜನ್ಮ ಸಿಕ್ಕಿದ್ದು ಚೇತರಿಸಿಕೊಳ್ಳುತ್ತಿದೆ.
ಇದನ್ನೂ ಓದಿ:‘ಬಂಗ್ಲೆಗುಡ್ಡದಲ್ಲಿ ಹೆ*ಣಗಳ ರಾಶಿ ಸಿಕ್ಕಿವೆ..’ ಸೌಜನ್ಯ ಮಾವ ವಿಠಲ್ ಗೌಡ ಸ್ಫೋಟಕ ಹೇಳಿಕೆ
ಒಟ್ಟಾರೆ ಮಗು ಉಳಿಯಲೆಂದು ಬಡ ಅಪ್ಪ-ಅಮ್ಮ ಮೂರು ದಿನಕ್ಕೆ 20 ಸಾವಿರ ಖರ್ಚು ಮಾಡಿದ್ರು. ಆದ್ರೆ ಖಾಸಗಿ ಆಸ್ಪತ್ರೆಯವರು ವೆಂಟಿಲೇಟರ್ ತೆಗೆದರೆ ಮಗು ಸಾಯುತ್ತೆ ಅಂತ ಹೇಳಿದ್ದರಿಂದ ಅಪ್ಪ-ಅಮ್ಮನೇ ಮಗು ಸತ್ತಿದೆ ಅಂತ ಕಣ್ಣೀರಿಟ್ಟಿದ್ರು. ಹೀಗಿರುವಾಗ ಯಮರಾಜನೇ ಕಂದನಿಗೆ ಆಯುಷ್ಯ ಕರುಣಿಸಿದ್ದಾನೆ. ಅರ್ಧ ದಾರಿಯಲ್ಲೇ ಉಸಿರಾಡಿ, ಕಣ್ಣೀರಾಕಿ ಬದುಕಿ ಮೃತ್ಯುಂಜಯನಾಗಿದೆ. ಆ ಮಗುವಿನ ಭವಿಷ್ಯ ಚೆನ್ನಾಗಿರಲಿ ಅನ್ನೋದೇ ಎಲ್ಲರ ಹಾರೈಕೆ.
ವಿಶೇಷ ವರದಿ: ಮಹಾರುದ್ರ ನ್ಯೂಸ್ ಫಸ್ಟ್ ಚಿಕ್ಕಮಗಳೂರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ