/newsfirstlive-kannada/media/media_files/2025/09/17/td-rajegowda-2025-09-17-13-54-03.jpg)
ಬೆಂಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ (T. D. Rajegowda) ವಿರುದ್ಧ ಎಫ್‌ಐಆರ್ ದಾಖಲಿಸಲು ಜನಪ್ರತಿನಿಧಿಗಳ ಕೋರ್ಟ್ ಆದೇಶ ನೀಡಿದೆ.
124 ಕೋಟಿ ಬೆಲೆ ಬಾಳುವ ಭೂಮಿಯನ್ನು ಕಡಿಮೆ ಬೆಲೆಗೆ ಅಕ್ರಮವಾಗಿ ಖರೀದಿಸಿದ ಆರೋಪವನ್ನು ಟಿ.ಡಿ.ರಾಜೇಗೌಡ ಹಾಗೂ ಅವರ ಕುಟುಂಬ ಎದುರಿಸುತ್ತಿದೆ. ಶಾಸಕ, ಅವರ ಪತ್ನಿ ಪುಷ್ಪಾ ರಾಜೇಗೌಡ ಹಾಗೂ ಪುತ್ರ ರಾಜ್‌ದೇವ್ ರಾಜೇಗೌಡ ವಿರುದ್ಧ ಎಫ್‌ಐಆರ್ ದಾಖಲಿಸಲು ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ಅನುಮತಿ ನೀಡಿದೆ.
ಏನಿದು ಭೂಮಿ ನೊಂದಣಿ ಪ್ರಕರಣ?
2020ರಲ್ಲಿ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಹೆಗ್ಡೆ ಒಡೆತನದಲ್ಲಿದ್ದ 124 ಕೋಟಿ ರೂಪಾಯಿ ಬೆಲೆ ಬಾಳುವ ಭೂಮಿ ಖರೀದಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. 13/02/2020ರಲ್ಲಿ ಶಾಸಕ ಟಿ.ಡಿ ರಾಜೇಗೌಡರ ಪತ್ನಿ ಪುಷ್ಪಾ ರಾಜೇಗೌಡ ಅವರು ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರದಲ್ಲಿನ 124 ಕೋಟಿ ಬೆಲೆ ಬಾಳುವ ಜಾಗದ ಮೇಲಿದ್ದ ಬ್ಯಾಂಕ್ ಸಾಲವನ್ನು 16 ಕೋಟಿ ಮರು ಪಾವತಿಸಿದ್ದಾರೆ. ಅಂದೇ ಎನ್.ಆರ್.ಪುರ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಬ್ಯಾಂಕ್ ಸಾಲ ತೀರಿದೆ ಎಂದು ರಿಲೀಸ್ ಡೀಡ್ ಮಾಡಿಸಿರುತ್ತಾರೆ ಎನ್ನಲಾಗಿದೆ.
ಇದನ್ನೂ ಓದಿ:ಪೇಮೆಂಟ್ಗಾಗಿ ಗಲಾಟೆ ಮಾಡಿದ್ದು ನಿಜ, ನೋವು ಹಂಚಿಕೊಂಡ ನಟಿ ಸ್ವರ್ಣ -VIDEO
ಇದನ್ನು ಅರಿತ ಸ್ಥಳೀಯ ಬಿಜೆಪಿ ಮುಖಂಡ ದಿನೇಶ್ ಅನ್ನೋರು ಮೊದಲಿಗೆ ಲೋಕಾಯುಕ್ತಗೆ ದೂರು ನೀಡುತ್ತಾರೆ. ಶಾಸಕ ಟಿ.ಡಿ.ರಾಜೇಗೌಡ ಚುನಾವಣೆ ಸಂದರ್ಭದಲ್ಲಿ ತಮಗಿರುವ ಆಸ್ತಿಯ ದಾಖಲೆಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದಾರೆ. ಅದರಲ್ಲಿ ಅವರ ಆದಾಯ ಹಾಗೂ ಒಟ್ಟು ಆಸ್ತಿ ಮೌಲ್ಯ 38 ಲಕ್ಷ ಎಂದು ನಮೂದಿಸಿದ್ದಾರೆ. ಶಾಸಕರ ವಾರ್ಷಿಕ ಆದಾಯವೇ 38 ಲಕ್ಷ ರೂಪಾಯಿ ಆಗಿದ್ದರೆ 124 ಕೋಟಿ ಬೆಲೆ ಬಾಳುವ ಭೂಮಿ ಖರೀದಿಸಲು ಹೇಗೆ ಸಾಧ್ಯ? ಎಂದು ಲೋಕಾಯುಕ್ತಕ್ಕೆ 2022 ರಲ್ಲಿ ದೂರು ಕೊಟ್ಟಿದ್ದರು.
ಬಿಜೆಪಿಯ ದಿನೇಶ್ ನೀಡಿದ್ದ ದೂರನ್ನು ಲೋಕಾಯುಕ್ತ ಮೂರೇ ತಿಂಗಳಲ್ಲಿ ಇತ್ಯರ್ಥಪಡಿಸಿ, ಇದರಲ್ಲಿ ಏನೂ ಇಲ್ಲ ಎಂದಿತ್ತು. ಲೋಕಾಯುಕ್ತದಲ್ಲಿ ನ್ಯಾಯ ಸಿಗಲಿಲ್ಲ ಎಂದು ದಿನೇಶ್ ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ನಲ್ಲಿ ಮೂರು ತಿಂಗಳುಗಳ ಕಾಲ ವಿಚಾರಣೆ ನಡೆದಿತ್ತು. ಇದೀಗ ಕೋರ್ಟ್ ಟಿ.ಡಿ.ರಾಜೇಗೌಡ ಹಾಗೂ ಅವರ ಕುಟುಂಬದ ವಿರುದ್ಧ ಎಫ್‌ಐಆರ್ ದಾಖಲಿಸಲು ಸೂಚಿಸಿದೆ. ಸದ್ಯ ಶಾಸಕರ ವಿರುದ್ಧ ಅಕ್ರಮ ಹಣದಲ್ಲಿ ಭೂಮಿ ಖರೀದಿ ಹಾಗೂ ಅಕ್ರಮ ಆಸ್ತಿ ಸಂಪಾದನೆ ಅಡಿಯಲ್ಲಿ ಪ್ರಕರಣ ದಾಖಲಿಸಲು ಸಿದ್ಧತೆ ನಡೆದಿದೆ ಎನ್ನಲಾಗಿದೆ.
ಇದನ್ನೂ ಓದಿ:ಪ್ರಧಾನಿ ಮೋದಿ ತಾಯಿಯ ಎಐ ವಿಡಿಯೋ ತೆಗೆದು ಹಾಕಲು ಕಾಂಗ್ರೆಸ್‌ಗೆ ಪಾಟ್ನಾ ಹೈಕೋರ್ಟ್ ನಿರ್ದೇಶನ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ