/newsfirstlive-kannada/media/media_files/2025/09/28/kv_prabhakar_speech-2025-09-28-19-26-37.jpg)
ಕೋಲಾರ: ನಮ್ಮ ಸಮುದಾಯದ ಪ್ರತಿಭೆಗಳು ಸಮಾಜದ ಆಸ್ತಿಗಳಾಗಿ ಅರಳಬೇಕು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್ ಅವರು ಕರೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ಕನಕನೌಕರರ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರತಿಭಾವಂತ ಮಕ್ಕಳನ್ನು ಉದ್ದೇಶಿಸಿ ಕೆ.ವಿ ಪ್ರಭಾಕರ್ ಅವರು ಮಾತನಾಡಿದರು. ನಮ್ಮ ಕುಲಕ್ಕೆ, ಸಮುದಾಯಕ್ಕೆ ಒಂದು ಶ್ರಮಿಕ ಪರಂಪರೆ ಇದೆ. ಈ ಪರಂಪರೆಯ ಒಳಗೆ ಅದ್ಭುತವಾದ ಮಾದರಿ ವ್ಯಕ್ತಿತ್ವಗಳೂ ಇವೆ. ಛಲ ಮತ್ತು ಹೋರಾಟಕ್ಕೆ ಸಂಗೊಳ್ಳಿ ರಾಯಣ್ಣ ಮಾದರಿ ಆದರೆ, ವಿಶ್ವಪ್ರಜ್ಞೆಗೆ ಕನಕದಾಸರು ಮಾದರಿ ಆಗಿದ್ದಾರೆ. ಶಿಕ್ಷಣಕ್ಕೆ ಅಹಲ್ಯಾಬಾಯಿ ಹೋಳ್ಕರ್ ಮಾದರಿ ಆದರೆ ಸಾಮಾಜಿಕ ಬದ್ಧತೆಗೆ ಸಿಎಂ ಸಿದ್ದರಾಮಯ್ಯ ಮಾದರಿ. ಈ ಎಲ್ಲಾ ಹಿರಿಯ ಮಾದರಿಗಳು ಸಮಾಜದ ಆಸ್ತಿ ಆಗಿರುವುದು ನಮಗೆಲ್ಲಾ ಹೆಮ್ಮೆ ತರುವ ಜೊತೆಗೆ ಪ್ರೇರಣೆ ಕೂಡ ಆಗಲಿ ಎಂದು ಅವರು ಹೇಳಿದರು.
ಸಮುದಾಯದಲ್ಲಿ ಪ್ರತಿಭೆ ಹೊರ ತರಬೇಕು
ಪ್ರತಿಭೆ ಎನ್ನುವುದು ಒಟ್ಟು ಸಮಾಜದ ಕೊಡುಗೆ. ಹೀಗಾಗಿ ಪ್ರತಿಭಾವಂತರು ಸಮಾಜದ ಆಸ್ತಿ ಆಗಬೇಕು. ಪ್ರತಿಭೆ ಪ್ರತಿಯೊಬ್ಬರ ಒಳಗೂ ಇರುತ್ತೆ. ಅದನ್ನು ಹೊರಗೆ ಬರುವುದಕ್ಕೆ ಅವಕಾಶ ಮುಖ್ಯ. ಸಮುದಾಯದ ಹಿರಿಯರು ನಡೆಸಿದ ಹೋರಾಟ, ಮಾಡಿದ ಸಂಘಟನೆ ಕಾರಣಕ್ಕೆ ಇಂದು ಅವಕಾಶಗಳು ಸೃಷ್ಟಿ ಆಗಿವೆ. ಆದರೆ ಅವಕಾಶ ವಂಚಿತರು ಇನ್ನೂ ಬಹಳ ಜನ ಇದ್ದಾರೆ. ಈ ಅವಕಾಶ ವಂಚಿತರ ರಾಯಭಾರಿಗಳಾಗಿ ನೀವು ಬೆಳೆಯಬೇಕು ಎಂದು ಹೇಳಿದ್ದಾರೆ.
ವೃದ್ಧಾಶ್ರಮಕ್ಕೆ ಅಪ್ಪ-ಅಮ್ಮನ ಕಳುಹಿಸಬೇಡಿ
ಅಂಕಪಟ್ಟಿಯ ಅಂಕಗಳಷ್ಟೇ, ನೈತಿಕತೆಯ ಮೌಲ್ಯಗಳೂ ಬಹು ಮುಖ್ಯ. ಈಗ ಡಿಜಿಟಲ್ ತಂತ್ರಜ್ಞಾನದ ಜೊತೆ ಸಂಬಂಧ ಬೆಳೆಸಿಕೊಂಡು ಪೋಷಕರ ಜೊತೆ ಅಂತರ ಕಾಯ್ದುಕೊಳ್ಳುತ್ತಿದ್ದೇವೆ. ಯಾರೋ ಮೇಕಪ್ ಸ್ಟಾರ್​ಗಳಿಗೆ ಲವ್ ಯು ಹೇಳುವ ಚಟ ಬಿಟ್ಟು ನಮ್ಮ ಬದುಕು, ಭವಿಷ್ಯಕ್ಕಾಗಿ ತ್ಯಾಗ ಮಾಡಿದ ಅಪ್ಪ-ಅಮ್ಮನಿಗೆ ಲವ್ ಯು ಹೇಳಿ ಎಷ್ಟು ವರ್ಷ ಆಯ್ತು ಯೋಚನೆ ಮಾಡಿ. ವೃದ್ಧಾಶ್ರಮಗಳು ಹೆಚ್ಚಾಗುವುದು ರೋಗಿಷ್ಟ ಸಮಾಜದ ಲಕ್ಷಣ. ಯಾವುದೇ ಕಾರಣಕ್ಕೂ ಅಪ್ಪ ಅಮ್ಮನನ್ನು ವೃದ್ಧಾಶ್ರಮಕ್ಕೆ ತಳ್ಳುವಷ್ಟು ಮಟ್ಟಕ್ಕೆ ಬೆಳೆಯಬೇಡಿ ಎಂದು ಹೇಳಿದರು.
ಇದನ್ನೂ ಓದಿ: ಕಾವೇರಿ ಆರತಿಗೆ ಅಮೆರಿಕ ಕನ್ನಡತಿ ಭಾವುಕ.. ಜೀವನದಿ ಕಾರ್ಯಕ್ರಮಕ್ಕೆ 5 ಲಕ್ಷ ರೂಪಾಯಿ ಕಾಣಿಕೆ
ಆಸ್ಪತ್ರೆಗಳು ಹೆಚ್ಚಾಗುವುದು ಆರೋಗ್ಯವಂತ ಸಮಾಜದ ಲಕ್ಷಣವಲ್ಲ. ಶಾಲೆಗಳು, ಆಟದ ಮೈದಾನಗಳು ಆರೋಗ್ಯವಂತ ಸಮಾಜದ ಲಕ್ಷಣ. ಕಾಗಿನೆಲೆ ಗುರುಪೀಠದ ಶ್ರೀ ಶ್ರೀ ಈಶ್ವರಾನಂದಪುರಿ ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಸಚಿವರೂ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ ರೇವಣ್ಣ, ಕೊಪ್ಪಳ ವಿವಿಯ ಉಪ ಕುಲಪತಿ ಬಿ.ಕೆ.ರವಿ, insight ಅಕಾಡೆಮಿ ವಿನಯ್ ಕುಮಾರ್, ಮಾಜಿ ಸಚಿವ ಆರ್ ವರ್ತೂರು ಪ್ರಕಾಶ್ ಸೇರಿ ಸಮುದಾಯದ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ