/newsfirstlive-kannada/media/media_files/2025/10/11/bng_cm_dcm_new-2025-10-11-07-38-23.jpg)
ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮೊದಲ ಸಭೆ ನಡೆದಿದೆ. ಬಿಜೆಪಿ ಸದಸ್ಯರ ಗೈರುಹಾಜರಿಯ ನಡುವೆಯೂ, ನಗರ ಯೋಜನೆ, 5 ಹೊಸ ಪಾಲಿಕೆಗಳ ರಚನೆ ಹಾಗೂ ಆಡಳಿತಾತ್ಮಕ ಅಧಿಕಾರಗಳ ವರ್ಗಾವಣೆ ಸೇರಿ ಮಹತ್ವದ ನಿರ್ಧಾರಗಳನ್ನ ಸಭೆಯಲ್ಲಿ ಕೈಗೊಳ್ಳಲಾಗಿದೆ.
ಸಿಲಿಕಾನ್​ ಸಿಟಿ ಬೆಂಗಳೂರು ಪಾಲಿಗೆ ನವಯುಗ ಆರಂಭವಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾಗಿ 5 ಹೊಸ ನಗರ ಪಾಲಿಕೆಗಳು ಅಸ್ತಿತ್ವಕ್ಕೆ ಬಂದಿವೆ. ಈ ಬೆನ್ನಲ್ಲೆ ನಿನ್ನೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮೊದಲ ಸಭೆ ನಡೆದಿದೆ.
ಸುಗಮ ಆಡಳಿತ, ಬೆಂಗಳೂರಿನ ಅಭಿವೃದ್ಧಿ ಕುರಿತು ಚರ್ಚೆ!
ಜಿಬಿಎ ಕೇಂದ್ರ ಕಚೇರಿ ಆವರಣದ ಕೆಂಪೇಗೌಡ ಪೌರಸಭಾಂಗಣದಲ್ಲಿ ಸಭೆ ನಡೆದಿದೆ. ಜಿಬಿಎ ಸಂಬಂಧ ಮಾಸ್ಟರ್ ಪ್ಲಾನ್ ರಚಿಸುವುದು ಸೇರಿದಂತೆ 11 ವಿಷಯಗಳ ಕುರಿತು ಚರ್ಚೆ ನಡೆಸಲಾಗಿದೆ. ಈ ವೇಳೆ ಸಭೆಯಲ್ಲಿ ಜಿಬಿಎ ಅಧ್ಯಕ್ಷ ಸಿಎಂ, ಜಿಬಿಎ ಉಪಾಧ್ಯಕ್ಷ ಡಿಸಿಎಂ ಡಿ.ಕೆ ಶಿವಕುಮಾರ್, ಮುಖ್ಯ ಆಯುಕ್ತ ಮಹೇಶ್ವರ್ ರಾವ್, 5 ಪಾಲಿಕೆಯ ಆಯುಕ್ತರು, ಅಧಿಕಾರಿಗಳು ಭಾಗಿಯಾಗಿದ್ದರು.
ಜಿಬಿಎ ಮೀಟಿಂಗ್​ ಚರ್ಚೆ ಏನಾಯ್ತು?
- ಕಳೆದ ಒಂದು ತಿಂಗಳು ಜಿಬಿಎ ವ್ಯಾಪ್ತಿಯಲ್ಲಿ ಪ್ರಗತಿ ಕಾರ್ಯಗಳು
- ಎಲ್ಲಾ ಪಾಲಿಕೆ ವ್ಯಾಪ್ತಿಯಲ್ಲಿ ಎಷ್ಟು ಗುಂಡಿಗಳನ್ನ ಮುಚ್ಚಲಾಗಿದೆ?
- ಮರು ಡಾಂಬರೀಕರಣ ವೈಟ್ ಟಾಪಿಂಗ್ ರಸ್ತೆಗಳ ಬಗ್ಗೆ ವಿವರ
- ಕಸದ ಸಮಸ್ಯೆ ಮತ್ತು ಫುಟ್‌ಪಾತ್, ಪ್ಲೈಓವರ್‌ಗಳ ನಿರ್ವಹಣೆ
- ಪ್ರತಿ ಪಾಲಿಕೆಯಲ್ಲಿ ಜಾತಿ ಜನ ಗಣತಿ ಸಮೀಕ್ಷೆಯ ವಿವರ ಚರ್ಚೆ
ಸಭೆ ಬಳಿಕ ಟ್ವೀಟ್​​ ಮಾಡಿದ ಸಿಎಂ, ಬೆಂಗಳೂರಿನ 1.40 ಕೋಟಿ ಜನರಿಗೆ ಸುಗಮ ಆಡಳಿತ ಮತ್ತು ಸಮರ್ಪಕ ಅಭಿವೃದ್ಧಿ ಒದಗಿಸುವುದು ನಮ್ಮ ಮುಖ್ಯ ಉದ್ದೇಶ ಅಂದರು. ಶುದ್ಧ ನೀರಿನ ಪೂರೈಕೆ, ಸ್ವಚ್ಚತೆ, ಸಂಚಾರ ವ್ಯವಸ್ಥೆ ಸೇರಿದಂತೆ ಬೆಂಗಳೂರಿಗರ ಜೀವನಮಟ್ಟ ಸುಧಾರಣೆಗೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ತಿಳಿಸಿದರು.
ಜಿಬಿಎ ಅಡಿ ಬೆಸ್ಕಾಂ, ಬಿಎಂಟಿಸಿ, ಅಗ್ನಿಶಾಮಕ ದಳದ ಕಾರ್ಯ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಬಿಡಿಎ ಇತಿಹಾಸದ ಪುಟ ಸೇರಿದೆ. ಬಿಡಿಎ ಅಧಿಕಾರ ಈಗ ಜಿಬಿಎಗೆ ಹಸ್ತಾಂತರ ಆಗಿದೆ. ಲೋಕಲ್ ಪ್ಲ್ಯಾನಿಂಗ್ ವ್ಯಾಪ್ತಿಯಲ್ಲಿ ಬರುವ ಟಿಡಿಆರ್​ ಕೆಲಸವನ್ನ ಜಿಬಿಎ ನಿರ್ವಹಿಸಲಿದೆ. ಬೆಸ್ಕಾಂ, ಬಿಎಂಟಿಸಿ, ಅಗ್ನಿಶಾಮಕ ದಳ ಎಲ್ಲವೂ ಜಿಬಿಎ ವ್ಯಾಪ್ತಿ ಅಡಿ ಕೆಲಸ ಮಾಡಲಿದೆ. ಈ ಬಗ್ಗೆ ಮಾತ್ನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಇದು ಐತಿಹಾಸಿಕ ದಿನ ಅಂತ ಬಣ್ಣಿಸಿದ್ದಾರೆ. ಆದ್ರೆ, ವಿಪಕ್ಷ ನಾಯಕ ಅಶೋಕ್​ ಮಾತ್ರ ಡಿ.ಕೆ ಶಿವಕುಮಾರ್ ಕನಸಿನ ಬ್ರ್ಯಾಂಡ್ ಬೆಂಗಳೂರನ್ನ ಟೀಕಿಸಿದರು.
‘ಇದೊಂದು ಐತಿಹಾಸಿಕ ದಿನ’
ಇಡೀ ಕರ್ನಾಟಕ ರಾಜ್ಯಕ್ಕೆ, ಇಡೀ ಬೆಂಗಳೂರಿಗೆ ಇದು ಐತಿಹಾಸಿಕವಾದ ದಿನವಾಗಿದೆ. ಗ್ರೇಟರ್ ಬೆಂಗಳೂರು ಅಥಾರಿಟಿ ಪ್ಲಾನಿಂಗ್, ಬಿಡಿಎ ಇದ್ದ ಅಧಿಕಾರ ಜಿಬಿಎಗೆ ಹಸ್ತಾಂತರ ಆಗಿದೆ.
ಡಿ.ಕೆ.ಶಿವಕುಮಾರ್​, ಡಿಸಿಎಂ
ಇದನ್ನೂ ಓದಿ: ಶೀಘ್ರದಲ್ಲೇ ಮದುವೆ ಆಗ್ತಾರಾ ಬ್ಯೂಟಿ ಗರ್ಲ್​ ತ್ರಿಶಾ ಕೃಷ್ಣನ್.. ಹುಡುಗ ಯಾರು, ಯಾವ ರಾಜ್ಯದವ್ರು..?
‘ಇದು ಮನೆಹಾಳ ಕೆಲಸ’
ಬ್ರ್ಯಾಂಡ್ ಬೆಂಗಳೂರು ಬಿಟ್ಟರು. ಒಂದು ವರ್ಷ ನಡೆಸಿದರು. ಅದು ಆದ ಮೇಲೆ ಟನಲ್ ರೋಡ್ ಅಂದ್ರು. ಇದನ್ನು ಮುಗಿಸಿದರು. ಈಗ ಗ್ರೇಟರ್ ಬೆಂಗಳೂರು ಅಂತ ಬಂದಿದೆ.
ಆರ್​.ಅಶೋಕ್​, ವಿಪಕ್ಷ ನಾಯಕ
ಜಿಬಿಎ ಚಟುವಟಿಕೆ, ಅಧಿಕಾರ ವ್ಯಾಪ್ತಿ ಎಲ್ಲವೂ ಹಂಚಿಕೆ ಆಗಿದೆ. ನೇರವಾಗಿ ಸರ್ಕಾರದ ಅಡಿಯಲ್ಲಿ ಜಿಬಿಎ ಕಾರ್ಯ ನಿರ್ವಹಿಸಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ