/newsfirstlive-kannada/media/media_files/2025/09/15/cauvery-2025-09-15-22-32-31.jpg)
ಕನ್ನಡ ನಾಡಿನ ಜೀವನದಿ ಕೊಡಗಿನ ಕುಲದೇವತೆ ಕಾವೇರಿ ತೀರ್ಥೋದ್ಭವಕ್ಕೆ ದಿನ ನಿಗದಿಯಾಗಿದೆ. ಅಕ್ಟೋಬರ್ 17ರಂದು ಮಧ್ಯಾಹ್ನ 1 ಗಂಟೆ 44 ನಿಮಿಷಕ್ಕೆ ಕಾವೇರಿ ತೀರ್ಥರೂಪಿಣಿಯಾಗಿ ನಾಡಿನ ಜನತೆಗೆ ದರ್ಶನ ಕೊಡಲಿದ್ದಾಳೆ. ಈ ಹಿನ್ನಲೆ ಕೊಡಗು ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಇಂದು ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಕೂಡ ನಡೆದಿದೆ.
ದಕ್ಷಿಣ ಭಾರತದ ಪುಣ್ಯನದಿ, ಕನ್ನಡ ನಾಡಿನ ಜೀವನದಿ, ಕೊಡಗಿನ ಕುಲದೇವತೆ ತಾಯಿ ಕಾವೇರಿ. ಜಿಲ್ಲೆಯ ತಲಕಾವೇರಿಯಲ್ಲಿ ಹುಟ್ಟಿ ನಾಡಿನ ದಾಹ ತಣಿಸಿ ಪಕ್ಕದ ತಮಿಳುನಾಡಿಗೂ ನೀರುಣಿಸುವ ಕಾವೇರಿ ಪ್ರತೀ ವರ್ಷ ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ಕೊಡುತ್ತಾಳೆ. ಈ ವರ್ಷ ಕಾವೇರಿ ತೀರ್ಥೋದ್ಭವದ ಪುಣ್ಯ ದಿನ ನಿಗದಿಯಾಗಿದೆ. ಇದೇ ಅಕ್ಟೋಬರ್ 17ರ ಮಧ್ಯಾಹ್ನ 1 ಗಂಟೆ 44 ನಿಮಿಷಕ್ಕೆ ಮಕರ ಲಗ್ನದಲ್ಲಿ ಕಾವೇರಿ ತೀರ್ಥರೂಪಿಣಿಯಾಗಿ ನಾಡಿನ ಜನತೆಗೆ ದರ್ಶನ ಕೊಡಲಿದ್ದಾಳೆ.
ಇದರ ಭಾಗವಾಗಿ ಸೆಪ್ಟಂಬರ್ 26ರ ಬೆಳಗ್ಗೆ 9:31ರ ತುಲಾ ಲಗ್ನದಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕುವ ಮೂಲಕ ಒಂದು ತಿಂಗಳ ಕಾಲ ನಡೆಯುವ ಕಾವೇರಿ ಸಂಕ್ರಮಣದ ಧಾರ್ಮಿಕ ಕಾರ್ಯಕ್ಕೆ ಚಾಲನೆ ಸಿಗಲಿದೆ. ಇನ್ನು ಅಕ್ಟೋಬರ್ 4ರ ಬೆಳಗ್ಗೆ 8:33ರ ತುಲಾ ಲಗ್ನದಲ್ಲಿ ಆಜ್ಞಾ ಮುಹೂರ್ತ, ಅಕ್ಟೋಬರ್ 14ರ ಬೆಳಗ್ಗೆ 11:45ಕ್ಕೆ ಧನುರ್ ಲಗ್ನದಲ್ಲಿ ಅಕ್ಷಯ ಪಾತ್ರೆ ಇರಿಸುವುದು, ಅಕ್ಟೋಬರ್ 14ರ ಸಂಜೆ 4:45ಕ್ಕೆ ಮೀನಾ ಲಗ್ನದಲ್ಲಿ ಕಾಣಿಕೆ ಡಬ್ಬಿ ಇರಿಸುವುವ ಕಾರ್ಯಗಳು ನೆರವೇರಲಿವೆ.
ಇದನ್ನೂ ಓದಿ: ಹೊಸ ಗರ್ಲ್ಫ್ರೆಂಡ್ ಜೊತೆ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ.. ಯಾರು ಈ ಬ್ಯೂಟಿ?
ಸಭೆಯಲ್ಲಿ ಗಂಭೀರ ಚರ್ಚೆ
ಇನ್ನು ಕಾವೇರಿ ತೀರ್ಥೋದ್ಭವ ಹಿನ್ನಲೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜು ಅವರ ನೇತೃತ್ವದಲ್ಲಿ ಭಾಗಮಂಡಲದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು. ಸಭೆಯಲ್ಲಿ ವಿರಾಜಪೇಟೆ ಶಾಸಕ ಶಾಸಕ ಎ.ಎಸ್ ಪೊನ್ನಣ್ಣ, ಡಿಸಿ, ಎಸ್ಪಿ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ತಲಕಾವೇರಿ, ಭಾಗಮಂಡಲ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿ ಕಾವೇರಿ ಸಂಕ್ರಮಣದ ತಯಾರಿಯ ಬಗ್ಗೆ ಚರ್ಚೆ ನಡೆಸಿ ಸಲಹೆ ಸೂಚನೆ ನೀಡಿದರು. ಈ ವೇಳೆ ಅರಣ್ಯ, ಆರೋಗ್ಯ, ಸಾರಿಗೆ, ಅಬಕಾರಿ, ವಿದ್ಯುತ್, ಪಿಡಬ್ಲ್ಯೂಡಿ ಸೇರಿದಂತೆ ವಿವಿಧ ಇಲಾಖೆಗಳ ಜವಾಬ್ದಾರಿಗಳ ಕುರಿತು ಸಭೆಯಲ್ಲಿ ಗಂಭೀರ ಚರ್ಚೆ ನಡೆದು, ಸಚಿವರು ಹಾಗೂ ಶಾಸಕರು ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದರು.
ತಾಯಿ ಕಾವೇರಿ ತೀರ್ಥೋದ್ಭವಕ್ಕೆ ಕೊಡಗು ಜಿಲ್ಲೆಯಲ್ಲಿ ಭರ್ಜರಿ ಸಿದ್ಧತೆ ನಡೀತಿದೆ. ವರ್ಷಂಪ್ರತಿಯಂತೆ ತೀರ್ಥೋದ್ಭವ ಹಾಗೂ ಪ್ರಯುಕ್ತ ಒಂದು ತಿಂಗಳ ಕಾಲ ನಡೆಯೋ ಈ ಕಾವೇರಿ ಸಂಕ್ರಮಣ ಜಾತ್ರೆಯನ್ನು ಮತ್ತು ತಾಯಿ ಕಾವೇರಿಯನ್ನು ಬರಮಾಡಿಕೊಳ್ಳಲು ಭಕ್ತಗಣ ಕಾತುರತೆಯಿಂದ ಕಾಯ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ