/newsfirstlive-kannada/media/media_files/2025/10/04/dk_shivakumar_home-2025-10-04-18-57-01.jpg)
ಬೆಂಗಳೂರು: ಸಾಮಾಜಿಕ, ಶೈಕ್ಷಣಿಕ ಗಣತಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ನಿವಾಸದಲ್ಲೇ ಚಾಲನೆ ಸಿಕ್ಕಿದ್ದು ಪತ್ನಿ ಉಷಾ ಅವರ ಜೊತೆ ಕುಳಿತು ಖುದ್ದು,​ ಗಣತಿದಾರರ ಪ್ರಶ್ನೆಗೆ ಒಂದೊಂದಾಗೇ ಉತ್ತರಿಸಿದ್ದಾರೆ. ಗಣತಿದಾರರ ಮೇಲೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಕೋಪ ಮಾಡಿಕೊಂಡಿದ್ದು ಇದೆ.
ಗಣತಿದಾರರಿಗೆ ಮಾಹಿತಿ ನೀಡುವಾಗ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಹುಟ್ಟಿರುವುದು ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ. ಧರ್ಮ ಹಿಂದೂ ಆಗಿದ್ದು ಒಕ್ಕಲಿಗ ಗೌಡ ಅಂತ ಶಾಲೆಯಲ್ಲಿ ಜಾತಿ ಪ್ರಮಾಣ ಪತ್ರ ಪಡೆದಿದ್ದೇನೆ ಎಂದು ಉತ್ತರ ನೀಡಿದ್ದಾರೆ. ಇದರ ಜೊತೆಗೆ 31ನೇ ವಯಸ್ಸಲ್ಲಿ ಮದುವೆಯಾಗಿದ್ದು, ಸರ್ಕಾರದಿಂದ ಮೀಸಲಾತಿ ಸೇರಿದಂತೆ ಯಾವುದೇ ಸೌಲಭ್ಯ ಪಡೆದಿಲ್ಲ. ಇನ್ನೂ ಉದ್ಯೋಗದ ಬಗ್ಗೆ ಕೇಳಿದ ಪ್ರಶ್ನೆಗೆ ಪಬ್ಲಿಕ್ ಸರ್ವೆಂಟ್, ಸೆಲ್ಫ್ ಎಂಪ್ಲಾಯ್ಮೆಂಟ್ ಎಂದು ಅವರು ಹೇಳಿದ್ದಾರೆ. ನಿಮ್ಮ ಮನೆಗಳು ಎಷ್ಟು ಇವೆ ಎಂದು ಕೇಳಿದ್ದಕ್ಕೆ 8 ರಿಂದ 10 ಇವೆ ಎಂದು ಉತ್ತರಿಸಿದ್ದಾರೆ.
ಮಾಹಿತಿ ನೀಡುವಾಗ ಡಿಸಿಎಂ ಡಿ.ಕೆ ಶಿವಕುಮಾರ್ ಅವರು,​ ಗಣತಿದಾರರ ಮೇಲೆ ಗರಂ ಆಗಿದ್ದಾರೆ. ಮೊದಲಿಗೆ ಟೂ-ಮಚ್ ಪ್ರಶ್ನೆಗಳು ಇವೆ ಎಂದಿದ್ದಾರೆ. ಫ್ಯಾಕ್ಸ್ ಬಗ್ಗೆ ಕೇಳಿದ ಪ್ರಶ್ನೆಗೆ ಇವೆಲ್ಲಾ ಯಾರು ರೀ ಇಟ್ಟುಕೊಳ್ಳುತ್ತಾರೆ ಅಂತ ಮರು ಪ್ರಶ್ನಿಸಿದ್ದಾರೆ. ಕಾಯಿಲೆ ಬಂದಿತ್ತಾ, ಇನ್ಶುರೆನ್ಸ್ ಮಾಡಿಸಿದ್ದೀಯಾ ಇವೆಲ್ಲಾ ಯಾರ್​​ ಕೊಡ್ತಾರೆ ನಿಮಗೆಲ್ಲಾ?. ಸಮೀಕ್ಷನಾ ಸಿಂಪಲ್ ಆಗಿ ಮಾಡ್ರಪ್ಪ ಎಂದು ಹೇಳಿದ್ದಾರೆ. ಡಿಸಿಎಂ ಮನೆಯಲ್ಲಿ ಸಮೀಕ್ಷೆ 1 ಗಂಟೆಗೂ ಹೆಚ್ಚು ಸಮಯ ಹಿಡಿದಿದ್ದು, ನಿಧಾನಗತಿ ಸಮೀಕ್ಷೆಗೂ ಬೇಸರ ವ್ಯಕ್ತಪಡಿಸಿದ್ದಾರೆ. ಇಲ್ಲೇ ಇಷ್ಟು ಹೊತ್ತು ಆದರೆ, ಬೇರೆ ಕಡೆ ಯಾವಾಗ​ ಹೋಗೋದು ಎಂದು ಪ್ರಶ್ನೆ ಮಾಡಿದ್ದಾರೆ.
ಸಮೀಕ್ಷೆ ಕುರಿತು ಬೆಂಗಳೂರಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಮಾತನಾಡಿ, ಇವತ್ತಿನಿಂದ ಬೆಂಗಳೂರು ನಗರದಲ್ಲಿ ಸಮೀಕ್ಷೆ ಆರಂಭವಾಗಿದೆ. ನನ್ನ ಮನೆಯಲ್ಲೂ ಸಮೀಕ್ಷೆ ಮಾಡಿದ್ದಾರೆ. ಎಲ್ಲದಕ್ಕೂ ಮಾಹಿತಿ ಕೊಟ್ಟಿದ್ದೇನೆ. ಎಲ್ಲಾ ಸಾರ್ವಜನಿಕರಿಗೆ ಮನವಿ ಮಾಡುತ್ತೇನೆ. ತಾಳ್ಮೆಯಿಂದ ಮಾಹಿತಿ ಒದಗಿಸಿದರೆ ಮುಂದಿನ ಪೀಳಿಗೆಗೆ ನ್ಯಾಯ ಕೊಟ್ಟಂಗಾಗುತ್ತೆ. ಸಮೀಕ್ಷೆಯಲ್ಲಿ ಸರಳೀಕರಣ ಮಾಡಬೇಕಿತ್ತು. ಇವತ್ತೇ ನಾನು ಫಾರ್ಮ್​ ನೋಡಿದ್ದು. ಜಾಸ್ತಿ ಪ್ರಶ್ನೆಗಳಿವೆ, ಜನರಿಗೆ ಕಡಿಮೆ ಪ್ರಶ್ನೆಗಳನ್ನ ಕೇಳಿ ಎಂದು ಹೇಳಿದ್ದಾರೆ.
ಅಷ್ಟೊಂದು ಪ್ರಶ್ನೆಗೆ ಉತ್ತರ ಹೇಳಲು ನಗರದಲ್ಲಿ ಯಾರಿಗೂ ತಾಳ್ಮೆ ಇರಲ್ಲ. ಹಳ್ಳಿಗಳಲ್ಲಿ ತಾಳ್ಮೆ ಇರುತ್ತದೆ. ಆದರೆ ನಗರದವರರಿಗೆ ಇರಲ್ಲ. ಕುರಿ ಎಷ್ಟಿದೆ?, ಕೋಳಿ ಎಷ್ಟಿದೆ?, ಚಿನ್ನ ಎಷ್ಟಿದೆ? ಎಂದು ಕೇಳಿದ್ರೆ ಯಾರಿಗೂ ತಾಳ್ಮೆ ಇರಲ್ಲ. ನನಗೆ ಕೇಳ್ತಾರೆ ಕೋಳಿ ಸಾಕಿದ್ದೀರಾ ಎಂದು, ಊರಲ್ಲಿದೆ. ಅದು ಬೇರೆ ವಿಷಯ. ನಾನು ಸಾರ್ವಜನಿಕರಿಗೆ ಕೇಳುವುದಕ್ಕೆ ಆಗುತ್ತಾ?. ಎಲ್ಲರೂ ಮಾಹಿತಿ ಕೊಡಿ, ಆನ್‌ಲೈನ್​ನಲ್ಲಿಯೂ ಮಾಹಿತಿ ಕೊಡಲು ಅವಕಾಶ ಇದೆ. ಕೋರ್ಟ್​ನವರು ಈಗಾಗಲೇ ಹೇಳಿದ್ದಾರೆ. ಬಲವಂತ ಮಾಡಬೇಡಿ ಅಂತ. ಅವರು ಕೇಳೋದು ಕೇಳ್ತಾರೆ, ನಾನು ಹೇಳಿಲ್ಲ ಇವೆಲ್ಲ ಕೇಳಬೇಡಿ ಎಂದು. ಸೂಕ್ಷ್ಮತೆಯಿಂದ ಬೆಂಗಳೂರಲ್ಲಿ ಸಮೀಕ್ಷೆ ಮಾಡಿ ಎಂದು ಹೇಳಿದ್ದೇನೆ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ