/newsfirstlive-kannada/media/media_files/2025/09/27/dk_shivakumar-3-2025-09-27-08-05-24.jpg)
ಕನ್ನಡ ನಾಡಿನ ಜೀವನದಿ.. ಲಕ್ಷಾಂತರ ರೈತರ ಬದುಕನ್ನ ಅಸನಾಗಿಸಿದ, ಕೋಟ್ಯಾಂತರ ಜನರ ದಾಹ ನೀಗಿಸಿದಾಕೆ ಕಾವೇರಿ. ಈ ತಾಯಿಗೆ ನಮನ ಸಲ್ಲಿಸುವ ನಿಟ್ಟಿನಲ್ಲಿ ಗಂಗಾರತಿ ಮಾದರಿಯಲ್ಲಿ ನಿನ್ನೆ ಕಾವೇರಿ ಆರತಿಗೆ ವಿದ್ಯುಕ್ತ ಚಾಲನೆ ನೀಡಲಾಯ್ತು. ಐತಿಹಾಸಿಕ ಕಾರ್ಯಕ್ರಮಕ್ಕೆ ಸಾವಿರಾರು ಜನರು ಸಾಕ್ಷಿಯಾಗಿದ್ದು ವಿಶೇಷವಾಗಿದರು.
ಕಣ್ಮನ ಸೆಳೆಯುವ ದೀಪಾಲಂಕಾರ, ರಾರಾಜಿಸುತ್ತಿರುವ ಕನ್ನಡ ಬಾವುಟ.. ಕನ್ನಡ ನಾಡಿನ ಜೀವನದಿ ಕಾವೇರಿ ಮಾತೆಗೆ ಝೇಂಕರಿಸಿದ ಆರತಿ. ಇದನ್ನು ಕಂಡು ಭಕ್ತಿಯ ಪರಾಕಾಷ್ಠೆಯಲ್ಲಿ ನಿಂತ ಸಾವಿರಾರು ಜನರು.. ಇಂತಹ ಅದ್ಭುತ ದೃಶ್ಯಕ್ಕೆ ಸಾಕ್ಷಿಯಾಗಿದ್ದು ಹಳೆಮೈಸೂರು ಭಾಗದ ಜನರ ಜೀವನಾಡಿ ಕೆಆರ್‌ಎಸ್ ಡ್ಯಾಂನ ಬೃಂದಾವನ.
‘ಕಾವೇರಿ ಮಾತೆ’ಗೆ ಗಂಗಾರತಿ..
ಕಾವೇರಿ ನದಿಯನ್ನು ಕರುನಾಡಿನ ಜೀವನದಿ ಎಂದು ಪೂಜಿಸುತ್ತೇವೆ. ರಾಜಧಾನಿ ಬೆಂಗಳೂರು ಸೇರಿದಂತೆ ಹಳೆ ಮೈಸೂರು ಭಾಗದ ಕೋಟ್ಯಾಂತರ ಜನರಿಗೆ ಕಾವೇರಿಯೇ ಜಲದಾತೆ. ಅನ್ನದಾತರ ಭೂಮಿಗೆ ನೀರು ಹರಿಸಿದ ಕಾವೇರಿ ಮಾತೆಗೆ ಇದೇ ನಮನ ಸಲ್ಲಿಸಲು ಡಿಸಿಎಂ ಡಿ.ಕೆ.ಶಿವಕುಮಾರ್ ಕಾವೇರಿ ಆರತಿ ನೇರವೇರಿಸಬೇಕೆಂಬ ಕನಸು ಕಂಡಿದ್ರು. ಗಂಗಾರತಿ ಮಾದರಿಯಲ್ಲಿಯೇ ಕಾವೇರಿ ಆರತಿ ನಡೆಸಲು ತೀರ್ಮಾನಿಸಿದ್ದರು. ಅದರಂತೆ ಕೆಆರ್‌ಎಸ್ ಡ್ಯಾಂನ ಬೃಂದಾವನವನ್ನು ಸಾಂಕೇತಿಕವಾಗಿ ಐದು ದಿನಗಳ ಕಾಲ ನಡೆಯುವ ಕಾವೇರಿ ಆರತಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಪತ್ನಿ ಜೊತೆ ಬಂದು ಚಾಲನೆ ನೀಡಿದ್ರು. ಈ ಮೂಲಕ ಹೊಸ ಮುನ್ನುಡಿ ಬರೆದರು. ಸಚಿವರಾದ ಚಲುವರಾಯಸ್ವಾಮಿ, ಶಿವರಾಜ್ ತಂಗಡಗಿ, ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ದಿನೇಶ್ ಗೂಳಿಗೌಡ, ದರ್ಶನ್ ಪುಟ್ಟಣ್ಣಯ್ಯ ಸಾಥ್ ನೀಡಿದ್ರು.
ಮೊದಲಿಗೆ ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳ ಅರ್ಚಕರ ತಂಡ ವಾತಾಪಿ ಗಣಪತಿಂ ಭಜೆ ಮಂಗಳವಾದ್ಯದಿಂದ ಕಾವೇರಿ ಆರತಿಯನ್ನು ಪ್ರಾರಂಭಿಸಿದ್ರು. ಕಾವೇರಿ ಪ್ರಾರ್ಥನೆ, ಗಣಪತಿ ಪ್ರಾರ್ಥನೆ, ಗುರು ಪ್ರಾರ್ಥನೆ ಮಾಡಿ ಬಳಿಕ ಸಂಕಲ್ಪ ಮಾಡಲಾಯ್ತು. ನಂತರ ವಾರಣಾಸಿಯ ವೈದಿಕ ತಂಡದಿಂದ ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ ಮಾಡಿದ್ರು..
ಇದನ್ನೂ ಓದಿ: ತನ್ನ ಕ್ಲಾಸ್​ಮೇಟ್​ ತಾಯಿಯನ್ನ ಮದುವೆಯಾದ ವಿದ್ಯಾರ್ಥಿ.. ಈ ಇಬ್ಬರ ನಡುವೆ ಲವ್ ಹೇಗಾಯಿತು?
ಅರ್ಜುನ್ ಜನ್ಯ ಸೇರಿ ಹಲವು ಗಾಯಕರಿಂದ ಸಂಗೀತ ಕಾರ್ಯಕ್ರಮ
ಮುಂದಿನ ದಿನಗಳಲ್ಲಿ ನಾವು ಅಂದುಕೊಂಡಂತೆ ಬೃಹತ್ ಮಟ್ಟದಲ್ಲಿ ಕಾವೇರಿ ಆರತಿ ಮಾಡ್ತೇವೆ. ಚಾಮುಂಡೇಶ್ವರಿ ಹಾಗೂ ಕಾವೇರಿ ಮಾತೆಯ ಆಶೀರ್ವಾದದಿಂದ ಮೇಕೆದಾಟು ನಿರ್ಮಾಣವಾಗುವಂತೆ ಆಗಲಿ ಎಂದು ಡಿ.ಕೆ ಶಿವಕುಮಾರ್ ಅವರು ಪ್ರಾರ್ಥಿಸಿದರು. ಇನ್ನೂ ಕಾವೇರಿ ಆರತಿ ಸಮಾಪ್ತಿ ಬಳಿಕ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸೇರಿ ಹಲವು ಗಾಯಕರು ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ ಮನರಂಜಿಸಿತು. ಬರೀ ಮ್ಯೂಸಿಕ್ ಮಾತ್ರವಲ್ಲ ಕಾವೇರಿ ಆರತಿ ಕಾರ್ಯಕ್ರಮದಲ್ಲಿ ದಸರಾ ಸಂಭ್ರಮದ ಕುರಿತು ಲೇಸರ್ ಶೋ ನಡೆಸಲಾಯ್ತು.
ನವರಾತ್ರಿ ಹಬ್ಬದ ವೇಳೆ ಕಾವೇರಮ್ಮನಿಗೆ ನಮನ ಸಲ್ಲಿಸುವ ನಿಟ್ಟಿನಲ್ಲಿ ಐದು ದಿನಗಳ ಕಾಲ ಕೆಆರ್‌ಎಸ್‌ನ ಬೃಂದಾವನದಲ್ಲಿ ಕಾವೇರಿ ಆರತಿ ಆರಂಭವಾಗಿದ್ದು, ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿ ಕಾವೇರಿ ಆರತಿಯನ್ನ ಕಣ್ಮುಂಬಿಕೊಳ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ