/newsfirstlive-kannada/media/media_files/2025/08/06/dharmasthala-case-2025-08-06-06-58-48.jpg)
ಧರ್ಮಸ್ಥಳ ಬುರುಡೆ ರಹಸ್ಯದ ಬೆಂಬಿದ್ದಿರುವ ಎಸ್ಐಟಿ ಪೊಲೀಸರು, 13 ಸ್ಥಳಗಳ ಪೈಕಿ 12 ಜಾಗಗಳಲ್ಲಿ ಅಗೆದು 13ನೇ ಸ್ಥಳಕ್ಕೆ ಕಾಲಿಟ್ಟಿದ್ದಾರೆ. 6ನೇ ಸ್ಥಳದಲ್ಲಿ 25 ಮೂಳೆಗಳು ಸಿಕ್ಕಿದ್ದು ಬಿಟ್ರೆ ಬೇಱವ ಜಾಗಗಳಲ್ಲೂ ಪತ್ತೆಯಾಗಿಲ್ಲ. ಇಂದು ಅಂತಿಮ 13ನೇ ಸ್ಥಳ ಅಗೆಯಲಿದ್ದಾರೆ. ಹಾಗಿದ್ರೆ ಇವತ್ತೇ ಭೂಮಿ ಅಗೆಯುವ ಕಾರ್ಯ ಕೊನೆಯಾಗುತ್ತಾ? ಹಾಗೊಮ್ಮೆ ಆದ್ರೆ ಮುಂದೇನು ಅನ್ನೋ ಕುತೂಹಲ ಮನೆ ಮಾಡಿದೆ.
ಇದನ್ನೂ ಓದಿ:ಧರ್ಮಸ್ಥಳ ಕೇಸ್ಗೆ ಅತಿದೊಡ್ಡ ಟ್ವಿಸ್ಟ್.. ನಿನ್ನೆ ಸಿಕ್ಕಿದ್ದು ಒಂದಲ್ಲ.. ಬರೋಬ್ಬರಿ 3 ಅಸ್ಥಿಪಂಜರ..!
ಧರ್ಮಸ್ಥಳ ಪ್ರದೇಶದಲ್ಲಿ ಶವಗಳನ್ನು ಹೂತಿದ್ದಾರೆ ಎಂಬ ಆರೋಪ ಪ್ರಕರಣದ ತನಿಖೆ ಅಂತಿಮ ಘಟ್ಟ ತಲುಪಿದೆ. ಇದುವರೆಗೆ ನೇತ್ರಾವತಿ ಸ್ನಾನ ಘಟ್ಟದ ಪಕ್ಕದ ಬಂಗ್ಲಗುಡ್ಡ ಪ್ರದೇಶದಲ್ಲಿರುವ ಕಾನನದಲ್ಲಿ 12 ಸ್ಥಳಗಳನ್ನು ಅಗೆಯಲಾಗಿದೆ. ಅದರಲ್ಲಿ 6ನೇ ಸ್ಥಳ ಬಿಟ್ರೆ ಬೇರೆ ಸ್ಥಳಗಳಲ್ಲಿ ಯಾವುದೇ ಕಳೇಬರ ಸಿಕ್ಕಿಲ್ಲ. ಈ ನಡುವೆ 13ನೇ ಸ್ಥಳ ಮಹತ್ವ ಪಡೆದಿದೆ.
ಎಸ್ಐಟಿ ಹೆಗಲಿಗೆ ಮತ್ತೆರಡು ಪ್ರಕರಣಗಳು ಹಸ್ತಾಂತರ..
ಧರ್ಮಸ್ಥಳ ಪ್ರಕರಣ ಸಂಬಂಧ ಮತ್ತೆರಡು ಪ್ರಕರಣಗಳು ಎಸ್ಐಟಿ ಹೆಗಲೇರಿವೆ. 10 ಸ್ಥಳಗಳ ಮಹಜರು ಮುಕ್ತಾಯವಾಗಿ ಮೊನ್ನೆ 11ನೇ ಸ್ಥಳದ ಬದಲು ಅನಾಮಿಕ ಹೇಳಿದಂತೆ ಹೊಸ ಜಾಗದಲ್ಲಿ ಎಸ್ಐಟಿ ಭೂಮಿ ಅಗೆದಿತ್ತು. 11ನೇ ಪಾಯಿಂಟ್ನಿಂದ 100 ಅಡಿ ದೂರದಲ್ಲಿ ನೆಲದ ಮೇಲೆ ಒಂದು ಅಸ್ಥಿ ಪಂಜರ ಸಿಕ್ಕಿತ್ತು. ಅಸ್ಥಿಪಂಜರದ ಮೂಳೆಗಳನ್ನು ವಶಕ್ಕೆ ಪಡೆದುಕೊಂಡು ಎಫ್ಎಸ್ಎಲ್ಗೆ ಕಳಿಸಲಾಗಿದೆ. ಈ ಬೆನ್ನಲ್ಲೇ ಅನನ್ಯ ಭಟ್ ತಾಯಿ ಸುಜಾತ್ ಭಟ್ ಪರ ವಕೀಲ ಮಂಜುನಾಥ್, ಒಂದಲ್ಲ ಮೂರು ಅಸ್ಥಿ ಪಂಜರ ಸಿಕ್ಕಿವೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಅದರಲ್ಲಿ ಒಂದು ಕಳೇಬರ ಮಹಿಳೆಯದ್ದು, ಒಂದು ಸೀರೆಯೂ ಸಿಕ್ಕಿದೆ ಎಂದು ವಕೀಲ ಮಂಜುನಾಥ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಇದು ಹಲವು ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಮತ್ತೆರಡು ಪ್ರಕರಣಗಳು ಎಸ್ಐಟಿ ಹೆಗಲೇರಿವೆ. 6ನೇ ಸ್ಥಳದಲ್ಲಿ 25 ಮೂಳೆಗಳು ಸಿಕ್ಕಿದ್ದನ್ನು ಧರ್ಮಸ್ಥಳ ಠಾಣೆಯಲ್ಲಿ UDR ಪ್ರಕರಣ ಎಂದು ದಾಖಲಿಸಲಾಗಿದೆ. ಇದೇ ವೇಳೆ ಸಾಮಾಜಿಕ ಕಾರ್ಯಕರ್ತ ಜಯಂತ್ ಟಿ, ಮತ್ತೊಬ್ಬ ಬಾಲಕಿಯ ಮೃತದೇಹ ಮುಚ್ಚಿದ್ದನ್ನು ನೋಡಿದ್ದೇನೆ ಅಂದಿದ್ದು ಕೂಡ ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲಾಗಿದೆ. ಇವೆರಡು ಪ್ರಕರಣಗಳನ್ನು ಮುಂದಿನ ವಿಚಾರಣೆಗೆ SITಗೆ ಹಸ್ತಾಂತರ ಮಾಡಲಾಗಿದೆ. ಇನ್ನು, ಇಂದು ಭೂಮಿ ಅಗೆಯುವ ಕಾರ್ಯಾಚರಣೆ ಕೊನೆಯಾಗುತ್ತಾ? ಕೊನೆಯಾದ್ರೆ ಮುಂದೇನು ಅನ್ನೋ ಕುತೂಹಲ ಕಾಡಿದೆ.
ಇಂದು ಕಾರ್ಯಾಚರಣೆ ಮುಕ್ತಾಯ?
ಇಂದು ಧರ್ಮಸ್ಥಳದ 13ನೇ ಪಾಯಿಂಟ್ನ ಭೂಮಿ ಅಗೆಯುವ ಪ್ರಕ್ರಿಯೆಯನ್ನು ಎಸ್ಐಟಿ ಅಧಿಕಾರಿಗಳು ಕೈಗೆತ್ತಿಕೊಳ್ಳಲಿದ್ದಾರೆ. ಪಾಯಿಂಟ್ ನಂಬರ್ 1ರಲ್ಲಿ ಡೆಬಿಟ್ ಕಾರ್ಡ್, ಪಾನ್ ಕಾರ್ಡ್ ಪತ್ತೆಯಾಗಿದ್ರೆ ಪಾಯಿಂಟ್ ನಂಬರ್ 6ರಲ್ಲಿ 25 ಮೂಳೆ ಹಾಗೂ ಬುರುಡೆ ಕುರುಹು ಪತ್ತೆಯಾಗಿದೆ. ಸದ್ಯ ಇವೆಲ್ಲ FSLಗೆ ರವಾನೆಯಾಗಿದ್ದು ಎಸ್ಐಟಿ ತನಿಖೆಗೆ ಮುಂದಾಗಿದೆ. ಅಲ್ಲದೇ ಪಾಯಿಂಟ್ ನಂಬರ್ 8ರಲ್ಲಿ ಹರಿದ ಕೆಂಪು ಬಣ್ಣದ ಬ್ಲೌಸ್ ಪೀಸ್ ಸಿಕ್ಕಿದ್ರೆ ನಿನ್ನೆ 11 ಮತ್ತು 12ರಲ್ಲಿ ಯಾವುದೇ ಕಳೇಬರ ದೊರೆತಿಲ್ಲ. ಹೀಗಾಗಿ ಇಂದು ಅಂತಿಮ 13ನೇ ಸ್ಥಳ ಮಹಜರು ಬಳಿಕವೂ ಏನೂ ಸಿಗದಿದ್ರೆ ದೂರುದಾರನ ವಿಚಾರಣೆ ಮಾಡುವ ಸಾಧ್ಯತೆ ಇದೆ. ಇಲ್ಲ ಅಂದ್ರೆ ಅನಾಮಿಕನ ಬ್ರೈನ್ ಮ್ಯಾಪಿಂಗ್ ಅಂದ್ರೆ ಸುಳ್ಳು ಪತ್ತೆ ಪರೀಕ್ಷೆ ಕೂಡ ಮಾಡಬಹುದು. ಒಂದ್ವೇಳೆ ಅನಾಮಿಕ ಬೇರೆ ಸ್ಥಳಗಳನ್ನು ತೋರಿಸಿದ್ರೆ ಆ ಸ್ಥಳಗಳನ್ನು ಎಸ್ಐಟಿ ಅಧಿಕಾರಿಗಳು ಮಹಜರು ಮಾಡಲಿದ್ದಾರೆ.
ಒಟ್ಟಾರೆ ಅನಾಮಿಕ ಗುರುತಿಸಿದ್ದ 13 ಸ್ಥಳಗಳ ಪೈಕಿ 6ನೇ ಪಾಯಿಂಟ್ ಬಿಟ್ಟರೆ ಮತ್ಯಾವುದೇ ಸ್ಥಳದಲ್ಲೂ ಅಸ್ಥಿಪಂಜರ ಸಿಕ್ಕಿಲ್ಲ. ಹೊಸ ಸ್ಥಳವನ್ನು 14ನೇ ಪಾಯಿಂಟ್ ಎಂದು ಗುರುತಿಸಿದೆ. ಇಂದು 13ನೇ ಪಾಯಿಂಟ್ ಬಾಕಿ ಇದ್ದು ಇಂದು ಆ ಸ್ಥಳವನ್ನೂ ಅಗೆಯಲಿದ್ದಾರೆ. ಈ ನಡುವೆ ಹೊಸ ಸ್ಥಳದಲ್ಲಿ 3 ಅಸ್ಥಿಪಂಜರ ಸಿಕ್ಕಿದೆ ಎಂದು ವಕೀಲರು ಮಾಡಿದ ಆರೋಪ ಪ್ರಕರಣಕ್ಕೆ ತಿರುವು ಕೊಡುತ್ತಾ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ