/newsfirstlive-kannada/media/media_files/2025/08/14/dharmastala_case-2025-08-14-07-59-53.jpg)
ಧರ್ಮಸ್ಥಳದಲ್ಲಿ ಕಾರ್ಯಾಚರಣೆ ನಡೆಸಿದ ಎಸ್ಐಟಿಗೆ ಬರಿಗೈಯೇ ಗತಿಯಾಗಿದೆ. ಅಗೆದು, ಬಗೆದು 13ನೇ ಸ್ಪಾಟ್ನ ಆಳಕ್ಕೆ ಇಳಿದ ಅಧಿಕಾರಿಗಳಿಗೆ ಒಂದೇ ಒಂದು ಮೂಳೆಯೂ ಪತ್ತೆ ಆಗಿಲ್ಲ. ಅನಾಮಿಕನ ಮಾತು, ಎಸ್ಐಟಿ ನಿರೀಕ್ಷೆ ಎಲ್ಲವೂ ಮಣ್ಣುಪಾಲಾಗಿದೆ. ಎಸ್ಐಟಿ ನಡೆ ಮುಂದೇನು ಅನ್ನೋ ಯಕ್ಷ ಪ್ರಶ್ನೆ ಎಲ್ಲರನ್ನ ಕಾಡಿದೆ.
ಧರ್ಮಸ್ಥಳದಲ್ಲಿ ಅಗೆದು ಬಗೆದು 16 ಸ್ಪಾಟ್ಗಳ ಸತ್ಯ ಭೇದಿಸಿದ ಎಸ್ಐಟಿ ತಂಡಕ್ಕೆ ನಿರಾಸೆಯ ಕಾರ್ಮೋಡ ಕವಿದಿದೆ. 13ನೇ ಸ್ಪಾಟ್ ಮೇಲೆ ಹದ್ದಿನ ಕಣ್ಣು ಇಟ್ಟಿದ್ದ ಎಸ್ಐಟಿ ತಂಡದ ಹುಡುಕಾಟಕ್ಕೆ ಕೊನೆಗೆ ಸಿಕ್ಕ ಉತ್ತರ ಏನಿಲ್ಲ ಏನಿಲ್ಲ.
ಪ್ಲಾಪ್ ಆಯ್ತು ಸ್ಪಾಟ್ ನಂಬರ್ 13ರ ಕಾರ್ಯಾಚರಣೆ!
ಸಿಗಬಹುದು, ಸಿಗುತ್ತೆ, ನೋಡೋಣ. ಈ ನಿರೀಕ್ಷೆ ಕೊನೆಗೂ ಎಸ್ಐಟಿ ಪಾಲಿಗೆ ಫಲ ನೀಡದೇ ಹೋಗಿದೆ. 13ನೇ ಸ್ಪಾಟ್ ಮೇಲೆ ಭಾರೀ ನಿರೀಕ್ಷೆಯಿಟ್ಟು 2 ದಿನಗಳಿಂದ ಭರದ ಕಾರ್ಯಾಚರಣೆ ನಡೆಸಿದ್ದ ಎಸ್ಐಟಿಗೆ ಬರಿಗೈಯೇ ಗತಿಯಾಗಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 15 ಅಡಿ ಆಳ ಅಗೆದರೂ 13ನೇ ಸ್ಪಾಟ್ನಲ್ಲಿ ಒಂದೇ ಒಂದು ಮೂಳೆ ಪೀಸ್ ಸಹ ಸಿಕ್ಕಿಲ್ಲ. 32 ಅಡಿ ಉದ್ದ, 28 ಅಡಿ ಅಗಲ ಮತ್ತು 15 ಅಡಿ ಆಳಕ್ಕೆ ಇಳಿದ ಎಸ್ಐಟಿ ಕೊನೆಗೆ ಬರಿಗೈಲಿ ವಾಪಸಾಗಿದೆ. ಮಾಡಿದುಣ್ಣೋ ಮಾರಾಯ ಅಂತ ಅಗೆದ ಗುಂಡಿಯನ್ನ ಹಿಟಾಚಿಯಿಂದ ಮುಚ್ಚಲಾಗಿದೆ.
13ನೇ ಸ್ಪಾಟ್ನಲ್ಲಿ ಸಿಗದ ಕುರುಹು.. ಸ್ಥಗಿತಗೊಳ್ಳುತ್ತಾ ಕಾರ್ಯಾಚರಣೆ?
13ನೇ ಸ್ಪಾಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟಿದ್ದ ಎಸ್ಐಟಿಗೆ ನಿರಾಸೆಯ ಫಲ ಸಿಕ್ಕಿರೋ ಸಂದೇಶ ಸರ್ಕಾರಕ್ಕೂ ರವಾನೆಯಾಗಿದೆ. ಅಗಸ್ಟ್ 11ರಂದು ಶಾಸಕಾಂಗ ಸಭೆ ನಡೆಸಿದ್ದ ಸಿಎಂ ಸಿದ್ದರಾಮಯ್ಯ 13ನೇ ಸ್ಪಾಟ್ನಲ್ಲಿ ಯಾವುದೇ ಕಳೇಬರ ಸಿಕ್ಕದಿದ್ರೆ SIT ಕಾರ್ಯಾಚರಣೆ ಸ್ಥಗಿತಗೊಳಿಸ್ತೇವೆ ಅಂತ ಹೇಳಿದ್ದರು. ಸದ್ಯ 13ನೇ ಸ್ಪಾಟ್ನಲ್ಲಿ ಏನು ಸಿಕ್ಕಿಲ್ಲ, ಹೀಗಿರೋವಾಗ ಸರ್ಕಾರ SIT ಕಾರ್ಯಾಚರಣೆಗೆ ಬ್ರೇಕ್ ಹಾಕುತ್ತಾ ಅನ್ನೋ ಪ್ರಶ್ನೆ ಮೂಡಿದೆ.
ತನಿಖೆಯ ಮೇಲೆ ಕಣ್ಣಿಟ್ಟು ಇಂಚಿಂಚೂ ಮಾಹಿತಿ ಸಂಗ್ರಹ
ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ ರಾಜ್ಯ ಸರ್ಕಾರಕ್ಕೆ ಭಾರೀ ಸವಾಲು ಎದುರಿಸುವಂತೆ ಮಾಡಿದೆ. ಇದೇ ಕಾರಣಕ್ಕೆ ಕಾರ್ಯಾಚರಣೆ ಸ್ಥಗಿತಗೊಳಿಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂಬ ಮಾತು ಕೇಳಿ ಬರ್ತಿದೆ. ಈ ಮಧ್ಯೆ ವಿಧಾನಸಭೆ ಅಧಿವೇಶನದಲ್ಲೂ ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣದ ಬಗ್ಗೆ ಕೆಲ ನಾಯಕರು ಧನಿ ಎತ್ತುತ್ತಿದ್ದಾರೆ. ಧರ್ಮಸ್ಥಳ ಕುರಿತ ವಿಪಕ್ಷ ನಾಯಕರ ಪ್ರಶ್ನೆಗಳಿಗೆ ಸರ್ಕಾರದ ಸಾರಥಿಗಳು ಉತ್ತರ ನೀಡೋದೆ ದೊಡ್ಡ ಸವಾಲಾಗಿದೆ. ಹೀಗಾಗಿ ತನಿಖೆಯ ಮೇಲೆ ಕಣ್ಣಿಟ್ಟು ಇಂಚಿಂಚೂ ಮಾಹಿತಿ ಸಂಗ್ರಹಕ್ಕೆ ಸರ್ಕಾರ ಮುಂದಾಗಿದೆ.
SIT ಮುಖ್ಯಸ್ಥರಿಂದ ಸರ್ಕಾರಕ್ಕೆ ಇಂಚಿಂಚೂ ಮಾಹಿತಿ
ಧರ್ಮಸ್ಥಳದ ಎಸ್ಐಟಿ ಕಾರ್ಯಾಚರಣೆ ಬಗ್ಗೆ ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಅವರು, ಗೃಹ ಸಚಿವ ಪರಮೇಶ್ವರ್ಗೆ ಇಂಚಿಂಚೂ ಮಾಹಿತಿ ನೀಡಿದ್ದಾರೆ. ಮಧ್ಯಂತರ ವರದಿ ಸಲ್ಲಿಸಿದ್ದಾರೆ. ಸದ್ಯ ಈ ಎಲ್ಲಾ ಮಾಹಿತಿಯನ್ನ ಸಿಎಂಗೆ ತಲುಪಿಸಿರೋ ಗೃಹಸಚಿವರು ಕಾರ್ಯಾಚರಣೆಯ ಆಗುಹೋಗುಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ವರದಿ ಬಳಿಕ ಸಿಎಂ ಯಾವ ನಿರ್ಧಾರ ಕೈಗೊಳ್ತಾರೆ ಅನ್ನೋದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಗ್ರಾಹಕರಿಂದ ಭಾರೀ ವಿರೋಧ.. ತನ್ನ ನಿರ್ಧಾರ ಬದಲಿಸಿದ ICICI ಬ್ಯಾಂಕ್
ಎಸ್ಐಟಿ ಕಾರ್ಯಾಚರಣೆಗೆ ಪ್ರತಿನಿತ್ಯ ಲಕ್ಷ ಲಕ್ಷ ಖರ್ಚು!
ಕಳೆದ 13 ದಿನಗಳಿಂದ ಧರ್ಮಸ್ಥಳದಲ್ಲಿ ಕಾರ್ಯಾಚರಣೆ ನಡೆಸಿರುವ ಎಸ್ಐಟಿ ತಂಡದ ದಿನದ ಖರ್ಚು ಲಕ್ಷ ಲಕ್ಷ ದಾಡ್ತಿದೆ. ಎಸ್ಐಟಿ ತನಿಖೆಗೆ ನಿತ್ಯ ಅಂದಾಜು 4 ರಿಂದ 5 ಲಕ್ಷ ರೂ. ಖರ್ಚಾಗುತ್ತಿದೆ. ಅಧಿಕಾರಿಗಳ ಊಟ, ತಿಂಡಿ ಮತ್ತು ವಿಶ್ರಾಂತಿಗಾಗಿ ಲಾಡ್ಜ್ ವೆಚ್ಚ ದಿನಕ್ಕೆ 10 ಸಾವಿರ ರೂಪಾಯಿ. ಗುಂಡಿ ಅಗೆಯುವವರಿಗೆ ಒಬ್ಬೊಬ್ಬರಿಗೂ ದಿನಗೂಲಿ 2 ಸಾವಿರದಂತೆ ಒಟ್ಟು 15 ಜನರಿದ್ದು ದಿನಕ್ಕೆ 30 ಸಾವಿರ ರೂಪಾಯಿ. ಪೊಲೀಸ್, ವೈದ್ಯರ ಓಡಾಟಕ್ಕೆ ವಾಹನ, ಪೆಟ್ರೋಲ್ ಬಳಕೆ ಖರ್ಚು 20 ಸಾವಿರ ರೂಪಾಯಿ. ಜಿಪಿಆರ್ಗೆ 2 ಲಕ್ಷ ರೂಪಾಯಿ ಬಾಡಿಗೆ ನೀಡಲಾಗುತ್ತಿದೆ.
16 ಸ್ಪಾಟ್ಗಳ ಹುಡುಕಾಟದ ಬಳಿಕ ಎಸ್ಐಟಿ ತಂಡದ ಮುಂದಿನ ನಡೆ ಏನು? ಅನ್ನೋದೇ ಕುತೂಹಲ.. ಧರ್ಮಸಂಕಟದಲ್ಲಿರೋ ಸರ್ಕಾರದ ಮುಂದಿನ ಹೆಜ್ಜೆಯೂ ತನಿಖೆಯ ದಿಕ್ಕನ್ನ ನಿರ್ಧರಿಸಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ