/newsfirstlive-kannada/media/media_files/2025/08/25/by_vijayendra_bjp_new-2025-08-25-14-17-27.jpg)
ಬೆಂಗಳೂರು: ಧರ್ಮಸ್ಥಳದ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪೂರ್ವಪರ ಯೋಚನೆ ಇಲ್ಲದೇ ಪ್ರಕರಣವನ್ನು ಎಸ್ಐಟಿಗೆ ಒಪ್ಪಿಸಿದ್ದಾರೆ. ಆದರೆ ಈಗ ವಿಳಂಬ ಮಾಡದೇ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ)ಕ್ಕೆ ವಹಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಹೇಳಿದ್ದಾರೆ.
ಧರ್ಮಸ್ಥಳ ಪ್ರಕರಣದಲ್ಲಿ ಕೋಟ್ಯಾಂತರ ಭಕ್ತರ ನಂಬಿಕೆಗೆ ಘಾಸಿಯಾಗಿದೆ. ಶ್ರೀ ಕ್ಷೇತ್ರದ ಬಗ್ಗೆ ಪ್ರಚಾರಗಳು, ಅಪಪ್ರಚಾರ ನಡೆಯುತ್ತಿದೆ. ಇದು ಭಕ್ತರಿಗೆ ನೋವು ಉಂಟು ಮಾಡಿದೆ. ಸಿಎಂ ಸಿದ್ದರಾಮಯ್ಯ ಅವರು ಎಸ್ಐಟಿ ತನಿಖೆಗೆ ಕೊಡುವುದರಲ್ಲಿ ಎಡವಿದ್ದಾರೆ. ಇದು ಬಹಳ ಗಂಭೀರವಾದ ವಿಚಾರ ಆಗಿದೆ. ಸೀನಿಯರ್ ಅಡ್ವೊಕೇಟ್ ಇದರ ಬಗ್ಗೆ ನಿಯಮ ಮಾಡಬೇಕು ಎಂದಿದ್ದಾರೆ. ಹೀಗಾಗಿ ನಾಡಿನ ಜನರ ಪರವಾಗಿ ಮನವಿ ಮಾಡುತ್ತಿದ್ದೇನೆ. ಇದರ ಬಗ್ಗೆ ಸರಿಯಾದ ತನಿಖೆ ಆಗಬೇಕು ಎಂದರೆ ಈ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು ಎಂದು ಹೇಳಿದ್ದಾರೆ.
ಈ ಘಟನೆಯಿಂದ ಸರ್ಕಾರಕ್ಕೆ ಕಳಂಕ ಬಂದಿದೆ. ಈ ಕಳಂಕದಿಂದ ಹೊರಬರಬೇಕಾಗಿದೆ. ಧರ್ಮಸ್ಥಳದ ಬಗ್ಗೆ ಇಂದು ಅಪಪ್ರಚಾರ ಮಾಡುತ್ತಿದ್ದಾರೆ. ಈ ದುಷ್ಕೃತ್ಯದಿಂದ ಅಲ್ಲೊಬ್ಬ, ಇಲ್ಲೊಬ್ಬ ಆರೆಸ್ಟ್ ಆಗಿದ್ದಾರೆ. ಇದರ ಬಗ್ಗೆ ಸರಿಯಾದ ತನಿಖೆ ಆಗಬೇಕಿದೆ. ವಿಳಂಬ ಮಾಡದೇ ನಿಷ್ಪಕ್ಷಪಾತವಾದ ತನಿಖೆ ಆಗುವುದಕ್ಕೆ ರಾಷ್ಟ್ರೀಯ ತನಿಖಾ ತಂಡಕ್ಕೆ ಪ್ರಕರಣ ನೀಡಬೇಕು ಎಂದು ಬಿವೈ ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.
ಪ್ರಕರಣವನ್ನು ಎನ್‌ಐಎಗೆ ವಹಿಸುವುದರಿಂದ ಸರ್ಕಾರದ ಬಗ್ಗೆ ಜನರಿಗೆ ವಿಶ್ವಾಸ ಬರುತ್ತದೆ. ಸಿಎಂ ಸಿದ್ದರಾಮಯ್ಯ ಅವರು ತಡ ಮಾಡದೇ ತಪ್ಪಿಸಿಕೊಳ್ಳಲು ಹೋಗದೇ, ಎನ್‌ಐಎಗೆ ಪ್ರಕರಣ ಕೊಡಬೇಕು. ಇದೇ ಅಗ್ರಹ ಇಟ್ಟುಕೊಂಡು ಸೆಪ್ಟೆಂಬರ್ 1 ರಂದು ಧರ್ಮಸ್ಥಳ ಚಲೋಗೆ ಕರೆ ಕೊಡುತ್ತಿದ್ದೇವೆ. ಆಗಿರುವ ಅಪಪ್ರಚಾರಕ್ಕೆ, ಪ್ರಕರಣ ಎನ್‌ಐಎಗೆ ವಹಿಸಲು ಒತ್ತಾಯ ಮಾಡುತ್ತಾ, ಧರ್ಮಸ್ಥಳ ಚಲೋ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಧರ್ಮಸ್ಥಳದಲ್ಲಿ ಸಮಾವೇಶ ಕೂಡ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಲಾಡ್ಜ್ಗೆ ಜೊತೆಯಲ್ಲಿ ಬಂದಿದ್ದ ಮಹಿಳೆ ಜೀವ ತೆಗೆದ ಪ್ರಿಯಕರ ಕಿರಾತಕ.. ಅಸಲಿಗೆ ಏನಾಯಿತು?
ಧರ್ಮಸ್ಥಳಕ್ಕೆ ಹೊರಡುವ ವೇಳೆ ನಮಗೆ ಎಲ್ಲ ಹಿಂದುಗಳು ಬೆಂಬಲ ನೀಡುತ್ತಾರೆ ಎಂಬ ನಂಬಿಕೆ ಇದೆ. ಸೆ.1 ರಂದು ಬೆಳಗ್ಗೆ ತಮ್ಮ ತಮ್ಮ ನಗರ, ಗ್ರಾಮದಲ್ಲಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ, ವಾಹನದಲ್ಲಿ ಮೆರವಣಿಗೆ ಮುಗಿಸಿ ಧರ್ಮಸ್ಥಳಕ್ಕೆ ಆಗಮಿಸಬೇಕು. ಸೆಪ್ಟೆಂಬರ್ 2 ರಂದು ಧರ್ಮಸ್ಥಳದಲ್ಲಿ ಧರ್ಮ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಮಾವೇಶ ನಡೆಯಲಿದೆ. ಎಲ್ಲರೂ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಬರಬೇಕು ಎಂದು ಮನವಿ ಮಾಡಿದ್ದಾರೆ.
ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಆರ್ ವಿಶ್ವನಾಥ್, ಸಂಸದ ಪಿ.ಸಿ ಮೋಹನ್ ಕಾರ್ಯಕ್ರಮದ ಸಂಚಾಲಕರಾಗಿರುತ್ತಾರೆ. ಕಾರ್ಕಳದ ಶಾಸಕ ಸುನಿಲ್‌ಕುಮಾರ್, ವಿಧಾನಪರಿಷತ್ ಸದಸ್ಯರಾದ ಸಿ.ಟಿ ರವಿ, ಎನ್ ರವಿಕುಮಾರ್, ಭಾರತಿ ಶೆಟ್ಟಿ ಸೇರಿದಂತೆ 12 ಜನ ಸಮಿತಿಯಲ್ಲಿ ಇರುತ್ತಾರೆ. ಧರ್ಮಸ್ಥಳ ಚಲೋ ಕಾರ್ಯಕ್ರಮದಲ್ಲಿ ಯಾರು ಬೇಕಾದರೂ ಭಾಗಿಯಾಗಬಹುದು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ