/newsfirstlive-kannada/media/media_files/2025/10/16/fish-attack-1-2025-10-16-15-18-44.jpg)
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ (Karwar) ಮಾಜಾಳಿ ದಾಂಡೇಭಾಗದಲ್ಲಿ ಮೀನುಗಾರಿಕೆಗೆ ತೆರಳಿದ್ದ ಯುವಕ ಮೀನು ಚುಚ್ಚಿ ಸಾವನ್ನಪ್ಪಿದ್ದಾನೆ. ಅಕ್ಟೋಬರ್ 14 ರಂದು ದೋಣಿ ಮೂಲಕ ಮೀನುಗಾರಿಕೆಗೆ 24 ವರ್ಷದ ಅಕ್ಷಯ ಅನಿಲ ಮಾಜಾಳಿಕರ್ ಎಂಬ ಯುವಕ ತೆರಳಿದ್ದ. ಈ ವೇಳೆ ದೋಣಿಯಲ್ಲಿದ್ದ ಯುವಕನಿಗೆ ನೀರಿನಿಂದ ಜಿಗಿದ ಚೂಪು ಮೂತಿಯ ಕಾಂಡೆ (ತೊಳೆ) ಮೀನು ಚುಚ್ಚಿದೆ. ಸುಮಾರು 8 ರಿಂದ 10 ಇಂಚಿದ್ದ ಮೀನಿನ ಮೂತಿ ಚುಚ್ಚಿದ ಪರಿಣಾಮ ಯುವಕ ಗಂಭೀರವಾಗಿ ಗಾಯಗೊಂಡಿದ್ದ.
ಗಾಯಗೊಂಡ ಯುವಕನನ್ನು ಕಾರವಾರದ ಕ್ರಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದೆರಡು ದಿನಗಳಿಂದ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಯುವಕನಿಗೆ ವೈದ್ಯರು ಹೊಟ್ಟೆಯ ಭಾಗದ ಗಾಯಕ್ಕೆ ಹೊಲಿಗೆ ಹಾಕಿದ್ದರು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದರೂ, ತೀವ್ರ ನೋವಿದ್ದ ಪರಿಣಾಮ ಯುವಕ ಆಸ್ಪತ್ರೆಯಲ್ಲೇ ತಂಗಿದ್ದ. ಮೀನಿನ ಮೂತಿ ಚುಚ್ಚಿದ್ದರಿಂದ ಯುವಕನ ಕರುಳಿಗೂ ಗಾಯವಾಗಿದ್ದ ಪರಿಣಾಮ ನಿನ್ನೆ ರಾತ್ರಿ ಯುವಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ವೈದ್ಯರ ನಿರ್ಲ್ಯಕ್ಷದಿಂದಲೇ ಯುವಕ ಸಾವನ್ನಪ್ಪಿರುವುದಾಗಿ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಈ ಹಿನ್ನಲೆ ಆಸ್ಪತ್ರೆ ಸುತ್ತಾ ಯುವಕನ ಸಂಬಂಧಿಕರು ಜಮಾಯಿಸಿದ್ದು, ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.