/newsfirstlive-kannada/media/media_files/2025/09/27/river-linking-project-2025-09-27-12-46-55.jpg)
ಬೆಂಗಳೂರು: ರಾಜ್ಯದಲ್ಲಿ ಎತ್ತಿನಹೊಳೆಗಿಂತ ದೊಡ್ಡ ಯೋಜನೆಯೊಂದು ಸದ್ದಿಲ್ಲದೇ ಕಾರ್ಯಚರಿಸುತ್ತಿರುವುದು ಬಹಿರಂಗವಾಗಿದೆ. ರಾಜ್ಯ ಜಲಸಂಪನ್ಮೂಲ ಇಲಾಖೆಯಲ್ಲಿನ ಅಘನಾಶಿನಿ ಯೋಜನೆ ಬಗ್ಗೆ ವೃಕ್ಷಲಕ್ಷ ಆಂದೋಲನ ಮಾಹಿತಿ ಪಡೆದು ಅನಾವರಣಗೊಳಿಸಿದೆ.
ಅಘನಾಶಿನಿ ನದಿಯನ್ನು ಚಿತ್ರದುರ್ಗದ ವೇದಾವತಿ ನದಿಗೆ ಜೋಡಿಸುವ ಯೋಜನೆ ಇದಾಗಿದ್ದು, ಸಿದ್ದಾಪುರ ತಾಲೂಕು ಬಾಳೆಕೊಪ್ಪ ಬಳಿ ಅಘನಾಶಿನಿ ನದಿಗೆ ಡ್ಯಾಂ ನಿರ್ಮಿಸಿ, ಸುಮಾರು 35 ಟಿಎಂಸಿ ನೀರನ್ನು ವೇದಾವತಿ ಜಲಾಶಯಕ್ಕೆ ಹರಿಸಲಾಗುತ್ತದೆ. ಈಗಾಗಲೇ ಸರ್ಕಾರದ ಮನವಿ ಮೇರೆಗೆ ಪ್ರಿ-ಫಿಸಿಬಿಲಿಟಿ ವರದಿಯನ್ನು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ ತಯಾರಿಸಿದೆ.
ಈ ಯೋಜನೆಗೆ ಸುಮಾರು 23 ಸಾವಿರ ಕೋಟಿ ವೆಚ್ಚವಾಗಲಿದ್ದು, 194 ಕಿಲೋ ಮೀಟರ್ ಪೈಪ್ ಲೈನ್ ಅಳವಡಿಕೆ ಮಾಡಲಾಗುತ್ತದೆ. ಈಗಾಗಲೇ NWD ಬೆಂಗಳೂರು ಕಚೇರಿ ಈ ವರದಿ ತಯಾರಿಸಿ ಹೈದರಾಬಾದ್​ನ ಕಚೇರಿಗೆ ಕಳುಹಿಸಲಾಗಿದೆ ಎಂದು ವೃಕ್ಷಲಕ್ಷ ಆಂದೋಲನ ಬಹಿರಂಗಗೊಳಿಸಿದೆ.
ಈ ಬೃಹತ್ ಯೋಜನೆಗೆ 1.2 ಲಕ್ಷ ಮರಗಳು ಬಲಿ..!
ಈ ಯೋಜನೆಯಿಂದಾಗಿ ಶಿರಸಿ ಹಾಗು ಸಾಗರ ಅರಣ್ಯ ವ್ಯಾಪ್ತಿಯ ಸುಮಾರು 1.2 ಲಕ್ಷ ಮರಗಳು ಧರೆಗುರುಳಲಿವೆ. ಸುಮರು 600 ಎಕರೆ ಅರಣ್ಯ ಭೂಮಿ ಈ ಯೋಜನೆಗೆ ಬೇಕಾಗಲಿದೆ. ಈ ಕುರಿತು ವೃಕ್ಷಲಕ್ಷ ಆಂದೋಲನದ ಪ್ರಮುಖರಾದ ಅನಂತ ಹೆಗಡೆ ಅಶೀರಸ ‘ಕುಮಟಾ ತಾಲೂಕಿನ ಬಹುಗ್ರಾಮ ಯೋಜನೆ ಹಾಗು ಒಂದು ಲಕ್ಷ ರೈತರ ಪಂಪ್​ಸೆಟ್​ಗಳಿಗೆ ನದಿ ತಿರುವು ಕಂಟಕ ತರಲಿದೆ’ ಎಂದು ಎಚ್ಚರಿಸಿದ್ದಾರೆ.