/newsfirstlive-kannada/media/media_files/2025/08/21/kv_prabhakar-1-2025-08-21-12-43-43.jpg)
ಬೆಂಗಳೂರು: ಪತ್ರಕರ್ತನಾಗಿ ಸಮಾಜವನ್ನು ಬಿಡಿ-ಬಿಡಿಯಾಗಿ ನೋಡುತ್ತಿದ್ದ ನಾನು ಸಮಾಜವಾದದ ಆಲದ ಮರ ಸಿಎಂ ಸಿದ್ದರಾಮಯ್ಯ ಅವರ ಗರಡಿಯಲ್ಲಿ ಇಡಿ ಇಡಿಯಾಗಿ ಗ್ರಹಿಸುವುದು ಕಲಿತೆ. ಹೀಗಾಗಿ ಇಲ್ಲಿ ನನಗೆ ಸಲ್ಲುವ ಎಲ್ಲ ಸನ್ಮಾನ, ಗೌರವಗಳನ್ನು ನಾನು ಆಲದ ಮರಕ್ಕೆ ಅರ್ಪಿಸುತ್ತೇನೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ ಪ್ರಭಾಕರ್ ಅವರು ಹೇಳಿದ್ದಾರೆ.
ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಪ್ರಭಾಭಿನಂದನಂ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಕೆ.ವಿ ಪ್ರಭಾಕರ್ ಅವರು ಮಾತನಾಡಿದರು. ಹಿಂದುಳಿದ ಕೆಳ ಮಧ್ಯಮ ವರ್ಗದ ಕುಟುಂಬದಿಂದ ಬಂದ ನನಗೆ ಬದುಕಿನ ಆಯ್ಕೆಗಳೇ ಇರಲಿಲ್ಲ. ಹೀಗಾಗಿ ನನ್ನ ಪಾಲಿಗೆ ಒದಗಿ ಬಂದಿದ್ದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತಾ, ಬಂದದ್ದೆಲ್ಲವನ್ನೂ ಬಂದ ಹಾಗೆಯೇ ಸ್ವೀಕರಿಸುತ್ತಾ ಮುಂದೆ ಸಾಗಿ ಈಗ ನಿಮ್ಮ ಮುಂದೆ ಧನ್ಯತೆಯಿಂದ ನಿಂತಿದ್ದೇನೆ. ನಾನು ಸಾಗಿ ಬಂದ ಹಾದಿಯನ್ನು ಹಿಂದಿರುಗಿ ನೋಡಿದಾಗ ವೃತ್ತಿಪರತೆ ಮತ್ತು ಕರ್ತವ್ಯ ಪ್ರಜ್ಞೆ ಇಲ್ಲಿಯವರೆಗೂ ನನ್ನನ್ನು ಬೆರಳಿಡಿದು ನಡೆಸಿದೆ ಅಂತ ಭಾವಿಸುತ್ತೇನೆ ಎಂದಿದ್ದಾರೆ.
ನಾನು ಕನ್ನಡಪ್ರಭ ಬಿಟ್ಟು 2013ರಲ್ಲಿ ಮುಖ್ಯಮಂತ್ರಿಗಳ ನೆರಳಿಗೆ ಬಂದೆ. ಪತ್ರಿಕಾ ವೃತ್ತಿಯ ಸಾಧ್ಯತೆಗಳನ್ನೆಲ್ಲ ಇಲ್ಲಿ ಪ್ರಯೋಗಿಸತ್ತಾ ಹೋದೆ. ಆದರೆ, ಪತ್ರಿಕಾ ಕಚೇರಿಯಲ್ಲಿದ್ದ ಸಮಯದ ಮಿತಿ ಇಲ್ಲದೆ ಇಲ್ಲಿ ಕೆಲಸ ಮಾಡುವ ಅನಿವಾರ್ಯತೆ ಇತ್ತು. ಈ ಸಂದರ್ಭದಲ್ಲಿ ಇಡೀ ರಾಜ್ಯದ ಪತ್ರಕರ್ತ ಸಮುದಾಯ ನನ್ನ ಸಹಕಾರ ನೀಡಿದ್ದಕ್ಕೆ ಕೃತಜ್ಞತೆ ಅರ್ಪಿಸುತ್ತೇನೆ ಎಂದರು.
ದಿನೇಶ್ ಅಮೀನ್ ಮಟ್ಟುರನ್ನ ನೆನೆದ ಕೆ.ವಿ ಪ್ರಭಾಕರ್
ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಆಗಿದ್ದ ಸಂದರ್ಭದಲ್ಲಿ, ಮಾಧ್ಯಮ ಸಲಹೆಗಾರರಾಗಿದ್ದ ದಿನೇಶ್ ಅಮೀನ್ ಮಟ್ಟು ಅವರು ಕೆಲಸ ಕಲಿಯಲು ಕೊಟ್ಟ ಅವಕಾಶ, ನೀಡಿದ ಪ್ರೋತ್ಸಾಹ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿತು. ಈ ಆತ್ಮವಿಶ್ವಾಸ ಒಂದು ಸಂಗತಿಯನ್ನು ಹಲವು ಕೋನಗಳಿಂದ ಅರ್ಥ ಮಾಡಿಕೊಳ್ಳುವುದನ್ನು ಕಲಿಸಿತು. ಬಿಡುವಿಲ್ಲದ ಪ್ರಯಾಣ, ನಿದ್ದೆ ಇಲ್ಲದ ರಾತ್ರಿಗಳು, ಮನೆ-ಮಕ್ಕಳಿಗೆ ಸಮಯ ಕೊಡಲು ಸಾಧ್ಯವಿಲ್ಲದಾದಾಗ, ರಾಜಕಾರಣ/ಒಳ ರಾಜಕಾರಣ ಕೆಲವೊಮ್ಮೆ ನನ್ನ ಆತ್ಮವಿಶ್ವಾಸವನ್ನು ಅಲ್ಲಾಡಿಸಿ ಪತ್ರಿಕೆ ಕೆಲಸ ಬಿಟ್ಟು ತಪ್ಪು ಮಾಡಿದೆನಾ ಅಂತಲೂ ಅನ್ನಿಸಿದ್ದಿದೆ. ಇಂಥ ಘಳಿಗೆಗಳಲ್ಲಿ ಮಾನ್ಯ ಮುಖ್ಯಮಂತ್ರಿಗಳೇ ದಿನಕ್ಕೆ 16 ರಿಂದ 18 ಗಂಟೆ ಕೆಲಸ ಮಾಡುವಾಗ ಅದರ ಮುಂದೆ ನನ್ನದೇನು ಎಂದುಕೊಂಡು ಮತ್ತೆ ಚಾರ್ಜ್ ಆಗುತ್ತಿದ್ದೆ ಎನ್ನುವುದನ್ನು ಕೆ.ವಿ ಪ್ರಭಾಕರ್ ಅವರು ನೆನಪು ಮಾಡಿಕೊಂಡರು.
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರನಾದ ಬಳಿಕ ಸರ್ಕಾರದಿಂದ, ಇಲಾಖೆಯಿಂದ ಪತ್ರಕರ್ತರಿಗೆ ಆಗಬೇಕಾದ ಮತ್ತು ಬಾಕಿ ಇರುವ ಕೆಲಸಗಳ ಬಗ್ಗೆ ಕ್ರಿಯಾಶೀಲ ಒತ್ತಡ ಬರುತ್ತಿತ್ತು. ಅದನ್ನೆಲ್ಲ ನಾನು ಆಯುಕ್ತರಾದ ಹೇಮಂತ್ ನಿಂಬಾಳ್ಕರ್ ಮತ್ತು ಕಾರ್ಯದರ್ಶಿಗಳಾದ ಕಾವೇರಿ ಮೇಡಂ ಅವರ ಮುಂದಿಡುತ್ತಿದ್ದೆ. ಇವರಿಬ್ಬರೂ ಅತ್ಯಂತ ಸಹೃದಯತೆಯಿಂದ ಸಹಕಾರ ನೀಡಿದರು. ಆಡಳಿತಾತ್ಮಕ ಮತ್ತು ತಾಂತ್ರಿಕ ಅಡೆತಡೆಗಳನ್ನು ನನ್ನೊಂದಿಗೆ ಚರ್ಚಿಸಿ ಸಕಾರಾತ್ಮಕ ಪರಿಹಾರ ಕಂಡುಕೊಳ್ಳಲು ಒಂದು ತಂಡವಾಗಿ ಕೆಲಸ ಮಾಡಿದೇವು. ಇದರ ಒಟ್ಟು ಪರಿಣಾಮದಲ್ಲಿ ಗ್ರಾಮೀಣ ಪತ್ರಕರ್ತರ ಉಚಿತ ಬಸ್ ಪಾಸ್, ಆರೋಗ್ಯ ಸಂಜೀವಿನಿ, ಮಾಸಾಶನದ ಹೆಚ್ಚಳ ಸೇರಿ ಹಲವು ಅನುಕೂಲಗಳು ಪತ್ರಕರ್ತ ಸಮುದಾಯದ ಅಂಗೈ ತಲುಪುವಂತಾಯಿತು. ಹೀಗಾಗಿ ಇವತ್ತಿನ ಈ ಸನ್ಮಾನ ಮತ್ತು ಗೌರವದಲ್ಲಿ ಅವರದ್ದೂ ದೊಡ್ಡ ಪಾಲು ಇದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:BMTCಗೆ ಮತ್ತೊಂದು ಬಲಿ.. ಹೆತ್ತ ತಾಯಿ ಮುಂದೆಯೇ ಹೋಯಿತು ಮಗಳ ಜೀವ
ಪತ್ರಿಕಾ ವೃತ್ತಿಯೇ ಪ್ರಪಂಚ. ಪತ್ರಕರ್ತರೇ ನನ್ನ ಒಡನಾಡಿಗಳು
ನನಗೆ ನೆರಳಾದವರು, ಜೊತೆ ನಿಂತವರ ಪಾಲಿನ ಗೌರವಗಳನ್ನು ಅರ್ಪಿಸಿದ ಬಳಿಕವೂ ಇವತ್ತಿನ ಈ ಸನ್ಮಾನದ ಭಾರ ನನ್ನ ಮೇಲೆ ಸದಾ ಇರುತ್ತದೆ. ಇದು ನನ್ನ ಹೊಣೆಗಾರಿಕೆಯನ್ನು ಹೆಚ್ಚಿಸಿದೆ. ಪತ್ರಕರ್ತರು ತಮ್ಮ ವೃತ್ತಿಪರ ಅಗತ್ಯಗಳಿಗಾಗಿ ಪ್ರತಿಭಟನೆ ಮಾಡುವ ಅಗತ್ಯವೇ ಬಾರದಂತೆ ನಾನು ಕೆಲಸ ಮಾಡಬೇಕು ಎಂದು ಮಾಧ್ಯಮ ಸಲಹೆಗಾರ ಆದ ದಿನವೇ ನಿರ್ಧರಿಸಿದ್ದೆ. ಪತ್ರಕರ್ತ ಸಮುದಾಯದ ಹಿತಕ್ಕಾಗಿ ಶ್ರಮಿಸುತ್ತ ಈ ಭಾರವನ್ನು ನಾನು ಇಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಇಲ್ಲಿಯವರೆಗೆ ನಡೆದು ಬಂದಿದ್ದೇನೆ. ಮುಂದಿನ ನಡೆಯಲ್ಲೂ ನೀವೆಲ್ಲ ಜೊತೆಗಿರುತ್ತೀರಿ ಎಂದು ನಂಬಿದ್ದೇನೆ. ವಿಧಾನಸೌಧದಲ್ಲಿ 204ನೇ ಕೊಠಡಿ ಎಂದಿಗೂ ಪತ್ರಕರ್ತರಿಗಾಗಿ ಸದಾ ತೆರೆದಿರುತ್ತದೆ. ಇಂತಹ ತಾಳ್ಮೆ ಕಲಿತಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ. ಪತ್ರಿಕಾ ವೃತ್ತಿಯೇ ನನ್ನ ಪ್ರಪಂಚ. ಪತ್ರಕರ್ತರೇ ನನ್ನ ಒಡನಾಡಿಗಳು. ತಾಳ್ಮೆ, ಸಹನೆಯ ಪಾಸ್ ವರ್ಡ್ ಮುಖ್ಯಮಂತ್ರಿ ಸಿದ್ದರಾಮಯ್ಯ. ಇವರಿಂದ ಸಹನೆ ಕಲಿತೆ ಎಂದು ಹೇಳಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ