/newsfirstlive-kannada/media/media_files/2025/08/04/internal-reservation-12-2025-08-04-14-06-14.jpg)
ರಾಜ್ಯ ಸರ್ಕಾರಕ್ಕೆ ಒಳಮೀಸಲು ಸಮೀಕ್ಷಾ ವರದಿ ಸಲ್ಲಿಕೆ ಆಗಿದೆ. ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸಲು ಉಪಪಂಗಡಗಳ ಅಂಕಿ-ಅಂಶಗಳ ಸಮೀಕ್ಷೆಗಾಗಿ ರಾಜ್ಯ ಸರ್ಕಾರ ರಚಿಸಿದ್ದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯ ಆಯೋಗವು ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ಎಸ್ಸಿ ಸಮುದಾಯಕ್ಕೆ ಒಳ ಮೀಸಲಾತಿ ಬೇಕು ಅನ್ನೋದು ಇಂದು, ನಿನ್ನೆಯಿಂದ ಕೇಳಿಬರ್ತಾ ಇರೋ ಬೇಡಿಕೆಯಲ್ಲ. ಶತಮಾನಗಳಿಂದಲೇ ಕೇಳಿಬರ್ತಾ ಇರೋ ಆಗ್ರಹ. ಇದೀಗ ಅದಕ್ಕೆ ತಾರ್ಕಿತ ಅಂತ್ಯ ಕಾಣೋ ಲಕ್ಷಣ ಕಾಣಿಸ್ತಿದೆ. ಕಾರಣ, ನಾಗಮೋಹನ್ ದಾಸ್ ವರದಿ ಸಿದ್ದರಾಮಯ್ಯ ಕೈಗೆ ಸೇರಿದ್ದು ಸಚಿವ ಸಂಪುಟದಲ್ಲಿ ಚರ್ಚೆಗೆ ಸಿದ್ಧವಾಗಿದೆ. ಹಾಗಾದ್ರೆ, ಆ ವರದಿಯಲ್ಲಿ ಇರೋದು ಏನು?, ಜಾರಿಯ ಹಿಂದೆ ನಿಮ್ಗೆ ನ್ಯಾಯ, ನಮ್ಗೆ ಲಾಭ ಅನ್ನೋ ಲೆಕ್ಕಾಚಾರ ಯಾವ ರೀತಿಯಲ್ಲಿದೆ ಎನ್ನುವ ರಿಪೋರ್ಟ್ ಇಲ್ಲಿದೆ.
ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಕ್ಕೆ ಖಂಡಿತವಾಗಿಯೂ ಮೀಸಲಾತಿ ಬೇಕು. ಸಮಾಜದಲ್ಲಿ ಅವರು ಮುಂದೆ ಬರುವಂತೆ ಆಗ್ಬೇಕು. ಆದ್ರೆ, ಕೆಲವು ಪಂಗಡಗಳಲ್ಲಿ ನೂರಾರು ಜಾತಿಗಳು ಇರೋದ್ರಿಂದ ಅದ್ರಲ್ಲಿ ಪ್ರಬಲರು, ಬಲಾಢ್ಯರು ಯಾರು ಇರ್ತಾರೋ? ಅವ್ರೇ ಆ ಎಲ್ಲಾ ಮೀಸಲಾತಿಯ ಲಾಭ ಪಡೀತಾ ಇರ್ತಾರೆ. ಸರ್ಕಾರಿ ನೌಕರಿಯಲ್ಲಿನ ಮೀಸಲಾತಿಯೂ ಅವ್ರಿಗೆ ಹೋಗುತ್ತೆ, ಕಾಲೇಜುಗಳಲ್ಲಿ ಶಿಕ್ಷಣ ಪಡೆಯುವಲ್ಲೂ ಅವರೇ ಮೀಸಲಾತಿ ಪಡೀತಾರೆ. ರಾಜಕೀಯದಲ್ಲಿ ಮೀಸಲಾತಿ ಇರೋ ಸೀಟ್‌ನಲ್ಲೂ ಅವರೇ ಮೇಲುಗೈ ಪಡೀತಾರೆ. ಹೀಗಾಗಿಯೇ ಒಳಮೀಸಲು ಅನ್ನೋದ್ ಖಂಡಿತವಾಗಿ ಅಗತ್ಯ. ಈ ನಿಟ್ಟಿನಲ್ಲಿ ತೆಲಂಗಾಣ ರಾಜ್ಯದಂತೆ ರಾಜ್ಯ ಸರ್ಕಾರವೂ ದಿಟ್ಟ ಹೆಜ್ಜೆ ಇಡ್ತಿದೆ.
ನಾವು ಹೇಳ್ತಾ ಇರೋದು ಎಸ್ಸಿ ಒಳಮೀಸಲು ಬಗ್ಗೆ, ಅದೆಷ್ಟೋ ವರ್ಷಗಳಿಂದ ಎಡಗೈ ಸಮುದಾಯದವ್ರು ತಮ್ಗೆ ಒಳಮೀಸಲು ಕೊಡಿ ಅಂತಾ ಹೋರಾಟ ಮಾಡ್ತಾನೇ ಬರ್ತಾ ಇದ್ರು. ಎಸ್‌ಸಿ ಸಮುದಾಯಕ್ಕೆ ಶೇ.17 ರಷ್ಟು ಮೀಸಲಾತಿ ಇದ್ರೂ ತಮ್ಗೆ ನ್ಯಾಯ ಸಲ್ಲಿಕೆ ಆಗ್ತಾ ಇಲ್ಲ. ಹೀಗಾಗಿ ಇದ್ಕೆಲ್ಲ ಒಳ ಮೀಸಲು ಬ್ರಹ್ಮಾಸ್ತ್ರವಾಗುತ್ತೆ ಅಂತಾ ಆಗ್ರಹ ಮಾಡ್ತಿದ್ರು. ಇದೀಗ ಸರ್ಕಾರ ಎಸ್‌ಸಿ ಒಳಮೀಸಲು ಕೊಡಲು ಸಜ್ಜಾಗಿದೆ. ಆದ್ರೆ, ಅಲ್ಲಿ ನಿಮ್ಗೆ ನ್ಯಾಯ, ನಮ್ಗೆ ಲಾಭ ಅನ್ನೋ ರಾಜಕೀಯ ತಂತ್ರಗಾರಿಕೆ ಎದ್ದು ಕಾಣಿಸ್ತಿದೆ.
ಎಡಗೈಗೆ ಶೇ.6, ಬಲಗೈಗೆ ಶೇ.5.. ಇನ್ನೇನಿದೆ ಆ ವರದಿಯಲ್ಲಿ?
ತೆಲಂಗಾಣದಲ್ಲಿಯೂ ಎಸ್ಸಿ ಒಳ ಮೀಸಲು ಜಾರಿ ಮಾಡ್ಬೇಕು ಅನ್ನೋ ಕೂಗು ಅದೆಷ್ಟೋ ವರ್ಷಗಳಿಂದ ಇತ್ತು. ಆದ್ರೆ, ಸರ್ಕಾರ ಅಂತಾ ಸಾಹಸಕ್ಕೆ ಕೈಹಾಕೋದಕ್ಕೆ ಹೋಗಿರ್ಲಿಲ್ಲ. ಯಾಕಂದ್ರೆ, ಅವರಿಗೆ ಎಲ್ಲಿ ರಾಜಕೀಯವಾಗಿ ತಿರುಗೇಟು ಬೀಳುತ್ತೋ ಅನ್ನೋ ಆತಂಕವಿತ್ತು. ಆದ್ರೆ, ಇತ್ತೀಚಿಗೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಸರ್ವೇ ಮಾಡಿಸಿ, ಎಸ್ಸಿ ಕೆಟಗರಿಯಲ್ಲಿ ಎಷ್ಟು ಜಾತಿಗಳು ಬರ್ತಾವೆ. ಅದ್ರಲ್ಲಿ ಯಾವ ಸಮುದಾಯದ ಮೀಸಲು ಲಾಭ ಪಡೀತಾ ಇದೆ? ಯಾರಿಗೆ ಅನ್ಯಾಯ ಆಗ್ತಾ ಇದೆ ಅನ್ನೋದನ್ನ ಸರ್ವೇ ಮೂಲಕ ಪಡೆದಿದ್ರು. ಅಂತಿಮವಾಗಿ ವಿವಿಧ ಪಂಗಡಗಳಾಗಿ ವಿಂಗಡಿಸಿ ಒಳಮೀಸಲು ಜಾರಿ ಮಾಡಿಯೇ ಬಿಟ್ರು. ಇದೀಗ ಅದೇ ಹಾದಿಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವ್ರು ಸಾಗ್ತಾ ಇರುವಂತೆ ಕಾಣಿಸ್ತಿದೆ.
ಕರ್ನಾಟಕದಲ್ಲಿಯೂ ಆಳ ಮೀಸಲು ಜಾರಿ ಮಾಡ್ಬೇಕು. ಅನ್ಯಾಯಕ್ಕೊಳಗಾದ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡ್ಬೇಕು ಅನ್ನೋ ಹಿನ್ನೆಲೆಯಲ್ಲಿ ಆಯೋಗವೊಂದನ್ನ ರಚನೆ ಮಾಡಲಾಗಿತ್ತು. ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನ್‌ದಾಸ್ ನೇತೃತ್ವದ ಆಯೋಗ ಬರೋಬ್ಬರಿ 62 ದಿನಗಳ ಕಾಲ ರಾಜ್ಯದಲ್ಲಿ ಸರ್ವೇ ಮಾಡಿ ಸರ್ಕಾರಕ್ಕೆ 1,765 ಪುಟಗಳ ವರದಿಯನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಪ್ಪಿಸಿದೆ. ಅಷ್ಟಕ್ಕೂ ಒಳ ಮೀಸಲು ಜಾರಿಯಾದ್ರೆ ಕಾಂಗ್ರೆಸ್‌ಗೆ ಏನ್ ಲಾಭ ಅನ್ನೋದನ್ನ ಹೇಳ್ತೀವಿ. ಅದ್ಕೂ ಮುನ್ನ ವರದಿಯಲ್ಲಿ ಏನಿದೆ ಅನ್ನೋದು ಮಾಹಿತಿ ಇಲ್ಲಿದೆ.
ಕರ್ನಾಟಕದಲ್ಲಿ ಎಸ್ಸಿ ಸಮುದಾಯದಲ್ಲಿ ಇರೋದು 101 ಜಾತಿ. ಇವ್ರಿಗೆ ಇದ್ದಿರೋ ಮೀಸಲಾತಿ ಶೇಕಡಾ 17, ಇದೀಗ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮೀತಿ ಆ 101 ಜಾತಿಗಳನ್ನ 5 ಗುಂಪುಗಳಾಗಿ ವರ್ಗೀಕರಣ ಮಾಡಿದೆ. ಯಾವ ಗುಂಪಿಗೆ ಎಷ್ಟು ಮೀಸಲಾತಿ ಅಗತ್ಯವಿದೆ ಅನ್ನೋದನ್ನೂ ಉಲ್ಲೇಖ ಮಾಡಿದೆ.
ವರ್ಗೀಕರಣ!
- ಗುಂಪು-01 ಅತೀ ಹಿಂದುಳಿದ ಜಾತಿಗಳು ಶೇ.1
- ಗುಂಪು-02 ಎಡಗೈ ಜಾತಿಗಳು ಶೇ.6
- ಗುಂಪು-03 ಬಲಗೈ ಜಾತಿಗಳು ಶೇ.5
- ಗುಂಪು-04 ಬಂಜಾರ, ಬೋವಿ, ಕೊರಚ, ಕೊರಮ ಶೇ.4
- ಗುಂಪು-05 ಆದಿ ಕರ್ನಾಟಕ, ಆದಿ ಡ್ರಾವಿಡ, ಆದಿ ಆಂಧ್ರ ಜಾತಿ ಶೇ.1
ನಾಗಮೋಹನ್ ದಾಸ್ ಅವ್ರು ಸಮೀಕ್ಷೆ ಮಾಡಿ ಎಸ್ಸಿ ಸಮುದಾಯದಲ್ಲಿ ಯಾವ ಜಾತಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮುಂದುವರಿದೆ. ಯಾವ ಜಾತಿ ಹಿಂದುಳಿದಿದೆ. ಯಾವ ಜಾತಿಯವರನ್ನ ಯಾವ ವರ್ಗಕ್ಕೆ ಸೇರಿಸ್ಬೇಕು. ಯಾಱರಿಗೆ ಎಷ್ಟು ಮೀಸಲು ಅಗತ್ಯವಿದೆ ಅನ್ನೋದನ್ನ ವರದಿಯಲ್ಲಿಯೇ ಉಲ್ಲೇಖ ಮಾಡಿದ್ದಾರೆ. ಹಾಗೇ ಸರ್ಕಾರಕ್ಕೆ ಶಿಫಾರಸುಗಳನ್ನು ಮಾಡಿದ್ದಾರೆ.
ಶಿಫಾರಸು!
- ಪಟ್ಟಿಯಲ್ಲಿ ಗುರುತಿಸಿಕೊಳ್ಳದ ಜಾತಿಗಳ ಕುಲಶಾಸ್ತ್ರೀಯ ಅಧ್ಯಯನ ನಡೆಸಿ, ಜಾತಿ ಪಟ್ಟಿಯಲ್ಲಿ ಸೇರಿಸಲು ಸರ್ಕಾರ ಕ್ರಮ ತೆಗದುಕೊಳ್ಳಬೇಕು
- ಆದಿ, ದ್ರಾವಿಡ, ಆದಿ ಕರ್ನಾಟಕ, ಆದಿ ಆಂಧ್ರ ಎಂದು ನಮೂದಿಸಿದವರಿಗೆ ಅದೇ ಹೆಸರಿನಲ್ಲಿ ಜಾತಿ ಪ್ರಮಾಣಪತ್ರ ನೀಡಬೇಕು
- ಉದ್ಯೋಗದಲ್ಲಿ ರೋಸ್ಟರ್ ಬಿಂದುಗಳನ್ನು ‘ಗುಂಪು’ಗಳ ಆಧಾರದಲ್ಲಿ ಗುರುತಿಸಬೇಕು. ಅದೇ ಆಧಾರದಲ್ಲಿ ಮೀಸಲಾತಿ ನೀಡಬೇಕು
- ಆದಿ, ದ್ರಾವಿಡ, ಆದಿ ಕರ್ನಾಟಕ, ಆದಿ ಆಂಧ್ರ ಎಂದು ನಮೂದಿಸುವ ಜೊತೆಗೆ ಮೂಲ ಜಾತಿಯನ್ನೂ ಗುರುತಿಸಿದ್ದರೆ, ಅಂಥವರಿಗೆ ಅವರ ಮೂಲ ಜಾತಿಯ ಹೆಸರಿನಲ್ಲಿಯೇ ಜಾತಿ ಪ್ರಮಾಣಪತ್ರ ನೀಡಬೇಕು
ಜಾರಿ ಮಾಡ್ಬೇಕೋ? ಬೇಡವೋ?
ಆಯೋಗ ವರದಿ ನೀಡೋ ಜೊತೆಗೆ ಈ ರೀತಿಯಾಗಿ ನಾಲ್ಕು ಶಿಫಾರಸುಗಳನ್ನ ಮಾಡಿದೆ. ಈಗ ಚೆಂಡು ಸರ್ಕಾರದ ಅಂಗಳದಲ್ಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವ್ರು ಮುಂದಿನ ಸಚಿವ ಸಂಪುಟದಲ್ಲಿ ವರದಿಯಲ್ಲಿ ಏನಿದೆ? ಜಾರಿ ಮಾಡ್ಬೇಕೋ? ಬೇಡವೋ? ಅನ್ನೋದನ್ನ ಚರ್ಚೆ ಮಾಡಲಿದ್ದಾರೆ. ಹಾಗೇ ಸಚಿವರ ಅಭಿಪ್ರಾಯವನ್ನ ಪಡೆದು ಅಂತಿಮ ನಿರ್ಧಾರ ತೆಗೆದ್ಕೊಳ್ಳಲಿದ್ದಾರೆ.
ಇನ್ನು ಸಮೀಕ್ಷೆಯ ಸಂದರ್ಭದಲ್ಲಿ ಕೆಲವು ವಿಶೇಷ ಸಂಗತಿಗಳು ಬಹಿರಂಗವಾಗಿವೆ. ಈವರೆಗೂ ಸರ್ಕಾರದ ಯಾವುದೇ ಸೌಲಭ್ಯಗಳು ತಲುಪದ, ವಂಚಿತವಾದ ಜಾತಿಗಳನ್ನು ವರದಿಯಲ್ಲಿ ಆಯೋಗ ಪಟ್ಟಿ ಮಾಡಿದೆ. ಐದು ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಇರುವ 70 ಜಾತಿಗಳನ್ನು ಗುರುತಿಸಲಾಗಿದೆ. 1 ಲಕ್ಷ ಜನಸಂಖ್ಯೆ ಇರುವ ಏಳೆಂಟು ಜಾತಿಗಳನ್ನು ವರದಿಯಲ್ಲಿ ಪಟ್ಟಿ ಮಾಡಲಾಗಿದೆ ಎಂದು ಹೇಳಲಾಗ್ತಿದೆ.
ಇದನ್ನೂ ಓದಿ: ಹೃದಯ ಶ್ರೀಮಂತಿಕೆ ಮೆರೆದ ವಿಕೆಟ್ ಕೀಪರ್ ರಿಷಬ್ ಪಂತ್.. ಬಾಗಲಕೋಟೆ ಕಾಲೇಜು ವಿದ್ಯಾರ್ಥಿನಿಗೆ ನೆರವು
ಒಳ ಮೀಸಲು ಜಾರಿಗೆ ಸಜ್ಜಾದ ಸಿದ್ದರಾಮಯ್ಯ
ಮೀಸಲಾತಿ ಅನ್ನೋದ್ ಜೇನುಗೂಡು ಇದ್ದಂತೆ. ಸ್ವಲ್ಪ ಹೆಚ್ಚು ಕಡಿಮೆ ಆದ್ರೂ ಭೀಕರ ಪರಿಣಾಮ ಎದುರಿಸ್ಬೇಕಾಗುತ್ತೆ. ಆದ್ರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವ್ರು ಒಳ ಮೀಸಲು ಜಾರಿಗೆ ಸಜ್ಜಾಗಿದ್ದಾರೆ ಅಂದ್ರೆ ಖಂಡಿತ ಅಲ್ಲಿ ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದವರಿಗೆ ನ್ಯಾಯ ಒದಗಿಸೋ ತಂತ್ರವೂ ಇದೆ. ಕಾಂಗ್ರೆಸ್‌ಗೆ ರಾಜಕೀಯವಾಗಿ ಲಾಭ ತಂದುಕೊಂಡು ಬ್ರಹ್ಮಾಸ್ತ್ರವೂ ಅಡಗಿದೆ.
ನಾಗಮೋಹನ್ ದಾಸ್ ವರದಿಯಲ್ಲಿ ಏನಿದೆ ಅನ್ನೋದನ್ನ ಹೇಳಿದ್ದೇವೆ. ಆದ್ರೆ, ಆ ವರದಿಯಿಂದ ಸರ್ಕಾರಕ್ಕೆ ಏನು ಲಾಭ? ಕಾಂಗ್ರೆಸ್‌ಗೆ ಯಾವ ರೀತಿಯಲ್ಲಿ ವರ್ಕೌಟ್ ಆಗುತ್ತೆ ಅಂತಾ ನೋಡ್ತಾ ಹೋದ್ರೆ ಸ್ಫೋಟಕ ವಿಚಾರಗಳು ತೆರೆದುಕೊಳ್ತಾವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ