/newsfirstlive-kannada/media/media_files/2025/08/05/bgk_rishab_pant-2025-08-05-22-05-10.jpg)
ಬಾಗಲಕೋಟೆ: ಟೀಮ್ ಇಂಡಿಯಾದ ವಿಕೆಟ್ ಕೀಪರ್, ಬ್ಯಾಟರ್ ಆದ ರಿಷಬ್ ಪಂತ್ ಅವರು ಆಗಾಗ ದಾನ ಮಾಡುವುದರಿಂದಲೂ ತಮ್ಮ ಹೃದಯಶ್ರೀಮಂತಿಕೆ ಮರೆಯುತ್ತಾರೆ. ಇತ್ತೀಚೆಗಷ್ಟೇ ಇಂಗ್ಲೆಂಡ್ ಟೂರ್ನಿಯಲ್ಲಿ ಗಾಯಗೊಂಡಿದ್ದ ಪಂತ್ ಸರಣಿಯಿಂದ ಹೊರಗುಳಿದಿದ್ದರು. ಈ ಎಲ್ಲದರ ನಡುವೆ ಕರ್ನಾಟಕದ ಬಾಗಲಕೋಟೆಯ ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕೆ ರಿಷಭ್ ಪಂತ್ ಅವರು ನೆರವು ನೀಡಿದ್ದಾರೆ.
ಜಿಲ್ಲೆಯ ಬೀಳಗಿ ತಾಲೂಕಿನ ರಬಕವಿ ಗ್ರಾಮದ ಜ್ಯೋತಿ ಕಣಬೂರ್ ಎನ್ನುವ ವಿದ್ಯಾರ್ಥಿನಿ ದ್ವಿತೀಯ ಪಿಯುಸಿ ಕಾಮರ್ಸ್ನಲ್ಲಿ ಶೇ.85 ರಷ್ಟು ಅಂಕ ಪಡೆದಿದ್ದರು. ಆದರೆ ಈಕೆಗೆ ಬಿಸಿಎ ಮಾಡಬೇಕು ಎನ್ನುವುದು ಆಸೆ ಇತ್ತು. ಈ ಬಗ್ಗೆ ತಂದೆ ತೀರ್ಥಯ್ಯ ಕಣಬೂರ ಬಳಿ ಹೇಳಿಕೊಂಡಿದ್ದಳು. ಆರ್ಥಿಕವಾಗಿ ಬಡವರು ಆಗಿದ್ದರಿಂದ ಕಾಲೇಜಿಗೆ ಅಡ್ಮಿಷನ್ ಆಗಲು ಬೇಕಾದ ಹಣ ಇರಲಿಲ್ಲ.
ಇದನ್ನೂ ಓದಿ:ಮೊಹಮ್ಮದ್ ಸಿರಾಜ್ಗೆ ಸ್ಪೆಷಲ್ ಮೆಸೇಜ್ ಕಳುಹಿಸಿದ ಕಿಂಗ್ ಕೊಹ್ಲಿ.. ಭಾರತದ ಗೆಲುವಿಗೆ ವಿರಾಟ್ ಏನಂದ್ರು?
ತಂದೆಯೂ ಹಣ ಹೊಂದಿಸಲು ಸಾಹಸ ಪಟ್ಟರೂ ಎಲ್ಲಿಯೂ ಹಣ ಸಿಗಲಿಲ್ಲ. ಈ ವಿಷಯವನ್ನು ಅದೇ ಊರಿನ ಅನಿಲ್ ಹುಣಸಿಕಟ್ಟಿ ಎಂಬ ಯುವಕನಿಗೆ ಗೊತ್ತಾಗಿತ್ತು. ಈ ಅನಿಲ್ನ ಗೆಳೆಯರು ಬೆಂಗಳೂರಿನಲ್ಲಿ ಐಪಿಎಲ್ ನಡೆಯುವಾಗ ಕೆಲಸ ಮಾಡುತ್ತಿದ್ದರು. ಇವರಿಗೆ ಜ್ಯೋತಿಯ ವಿಷಯವನ್ನು ತಿಳಿಸಿದ್ದಾರೆ. ಅವರು ರಿಷಭ್ ಪಂತ್ ಅವರ ಗಮನಕ್ಕೆ ತಂದಿದ್ದಾರೆ.
ಇದನ್ನು ಅರ್ಥ ಮಾಡಿಕೊಂಡ ವಿಕೆಟ್ ಕೀಪರ್ ರಿಷಭ್ ಪಂತ್ ಅವರು ಜ್ಯೋತಿ ಅವರ ವಿದ್ಯಾಭ್ಯಾಸಕ್ಕೆ ಬೇಕಾದ 40 ಸಾವಿರ ಹಣ ಶುಲ್ಕವನ್ನ ನೀಡಿದ್ದಾರೆ. ಸದ್ಯ ರಿಷಬ್ ಪಂತ್ ಸಹಾಯಕ್ಕೆ ಜ್ಯೋತಿ ಹಾಗೂ ಅವರ ಕುಟುಂಬ ಕೃತಜ್ಞತೆ ಸಲ್ಲಿಸಿದ್ದಾರೆ. ಇನ್ನು ಜಮಖಂಡಿ ಬಿಎಲ್.ಡಿ ಕಾಲೇಜಿನಲ್ಲಿ ವಿದ್ಯಾರ್ಥಿನಿ ಬಿಸಿಎ ನಲ್ಲಿ ಪ್ರಥಮ ಸೆಮಿಸ್ಟರ್ ಅನ್ನು ಓದುತ್ತಿದ್ದಾರೆ.
ಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಮಿ’ ವೀಕ್ಷಿಸಿ