/newsfirstlive-kannada/media/media_files/2025/09/10/eshwar_khandre-2025-09-10-23-10-41.jpg)
ಬೆಂಗಳೂರು: ಸೆಪ್ಟೆಂಬರ್ 22 ರಿಂದ ನಡೆಯಲಿರುವ ಜಾತಿಗಣತಿಯ ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ಬರೆಸಬೇಕು ಎಂದು ಸಚಿವ ಈಶ್ವರ ಖಂಡ್ರೆ ಅವರು ಸಮುದಾಯದವರಲ್ಲಿ ಮನವಿ ಮಾಡಿದ್ದರು. ಆದರೆ ಈ ಹೇಳಿಕೆಯ ವಿಡಿಯೋವನ್ನು ಎಡಿಟ್ ಮಾಡಿ ತಿರುಚಲಾಗಿತ್ತು. ಸದ್ಯ ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ.
ಸೆಪ್ಟಂಬರ್ 07, ಭಾನುವಾರದಂದು ಹಾನಗಲ್ ಕುಮಾರಸ್ವಾಮಿಗಳ ಸಭಾಂಗಣದಲ್ಲಿ ಮಹಾಸಭೆಯ ಅಧ್ಯಕ್ಷರಾದ ಡಾ. ಶಾಮನೂರು ಶಿವಶಂಕರಪ್ಪನವರ ಅಧ್ಯಕ್ಷತೆಯಲ್ಲಿ ಮಾಧ್ಯಮಗೋಷ್ಠಿ ನಡೆಸಲಾಗಿತ್ತು. ಇದರಲ್ಲಿ ಮಹಾಸಭೆಯ ಹಿರಿಯ ಉಪಾಧ್ಯಕ್ಷ ಹಾಗೂ ಮಹಾಪ್ರಧಾನ ಕಾರ್ಯದರ್ಶಿ ಆದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಮಾತನಾಡಿದ್ದರು.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಮಾತನಾಡಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಲಿರುವ ಸೆಪ್ಟಂಬರ್ 22ರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ- 2025 (ಜಾತಿಗಣತಿ) ರಲ್ಲಿ ತಪ್ಪದೇ ಪ್ರತಿಯೊಬ್ಬರೂ ಭಾಗವಹಿಸಬೇಕು. ಅನುಸೂಚಿಯ ಧರ್ಮದ ಕಾಲಂನಲ್ಲಿ ಇತರೇ ಎಂದು ನೀಡಿರುವ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ಬರೆಸಬೇಕು ಎಂದು ಮನವಿ ಮಾಡಿದ್ದರು.
ಜೊತೆಗೆ ಜಾತಿಯ ಕಾಲಂನಲ್ಲಿ ಲಿಂಗಾಯತ ಅಥವಾ ವೀರಶೈವ ಎಂದು ಮತ್ತು ಉಪಜಾತಿ ಕಾಲಂನಲ್ಲಿ ಸಮುದಾಯದವರು ಸೇರಿದ ತಮ್ಮಗಳ ಉಪಜಾತಿಯ ಸಂಕೇತ ಸಂಖ್ಯೆಯನ್ನು ಖಚಿತಪಡಿಸಿಕೊಂಡು ಬರೆಸಬೇಕು ಎಂದು ಸಮಾಜಬಾಂಧವರಿಗೆ ಮನವಿ ಮಾಡಿದ್ದರು. ಈ ಸುದ್ದಿಯನ್ನು ಯಾವುದೇ ತಪ್ಪಿಲ್ಲದೇ ಪ್ರಕಟ ಮಾಡಲಾಗಿತ್ತು ಎಂಬುದು ಎಲ್ಲರಿಗೆ ತಿಳಿದ ವಿಷಯ.
ಇದನ್ನೂ ಓದಿ:ಕೇವಲ 4 ಓವರ್ಗಳಲ್ಲಿ UAE ತಂಡದ ವಿರುದ್ಧ ಟೀಮ್ ಇಂಡಿಯಾಗೆ ಗೆಲುವು
ಆದರೆ ವಾಹಿನಿಗಳಲ್ಲಿ ಪ್ರಸಾರವಾಗಿರುವ ವಿಡಿಯೋವನ್ನು ಕೆಲವರು ದುರುದ್ದೇಶದಿಂದ ಎಡಿಟ್ ಮಾಡಿದ್ದಾರೆ. ಮಹಾಸಭೆಯ ಮನವಿಯನ್ನು ತಿರುಚುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಸಮಾಜದಲ್ಲಿ ಅನಾವಶ್ಯಕವಾಗಿ ಗೊಂದಲ ಮೂಡಿಸುತ್ತಿದ್ದಾರೆ. ಸಮಾಜದ ಸ್ವಾಸ್ಥ್ಯ ಹಾಳುಮಾಡುತ್ತಿರುವ ಇಂಥಹವರ ವಿರುದ್ಧ ಕ್ರಮಕೈಗೊಳ್ಳುವಂತೆ ಪೋಲೀಸರಿಗೆ ದೂರು ನೀಡಲಾಗಿದೆ.
ಆದ್ದರಿಂದ ಸಮಾಜಬಾಂಧವರು ಇಂಥಹ ಕುಚೋದ್ಯಗಳಿಗೆ ಕಿವಿಗೊಡದೇ, ಪ್ರತಿಯೊಬ್ಬರೂ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಂಡು, ಮಹಾಸಭೆಯ ಮನವಿಯಂತೆ ಬರೆಸಬೇಕು. ಸಮಾಜದ ನಿಖರ ಸಂಖ್ಯೆ ತಿಳಿಯಲು ಸಹಕರಿಸಬೇಕಾಗಿ ಸಮುದಾಯದವರಲ್ಲಿ ವಿನಂತಿ ಮಾಡಲಾಗಿದೆ ಎಂದು ಹೆಚ್.ಎಂ.ರೇಣುಕ ಪ್ರಸನ್ನ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ