/newsfirstlive-kannada/media/media_files/2025/09/27/klb_rain-2025-09-27-15-21-37.jpg)
ಕಲಬುರಗಿ: ಮಳೆ ಅಬ್ಬರಕ್ಕೆ ಕಲಬುರಗಿ ಜಿಲ್ಲೆ ತತ್ತರಿಸಿ ಹೋಗಿದೆ. ಕ್ಷಣ ಕ್ಷಣಕ್ಕೂ ಭೀಮಾ ನದಿ ಹರಿವಿನ ಪ್ರಮಾಣದಲ್ಲಿ ಭಾರಿ ಹೆಚ್ಚಳವಾಗುತ್ತಿರುವ ಕಾರಣ ಇನ್ನಷ್ಟು ಹಳ್ಳಿಗಳು ಮುಳುಗಡೆಯಾಗುವ ಆತಂಕ ಮೂಡಿದೆ. ಮಹಾರಾಷ್ಟ್ರದಿಂದಲೂ ನೀರು ಬಿಡುಗಡೆ ಮಾಡುತ್ತಿರುವುದು ಇನ್ನಷ್ಟು ಸಂಕಷ್ಟ ತಂದೊಡ್ಡುತ್ತಿದೆ.
ಕಳೆದ ಎರಡು ದಿನಗಳಿಂದ ಕಲಬುರಗಿ ಜಿಲ್ಲೆಯಾದ್ಯಂತ ಬಿಟ್ಟು ಬಿಡದೇ ಮಳೆ ಸುರಿಯುತ್ತಿದೆ. ಇದರಿಂದ ರೈತರ ಬೆಳೆಗಳು ಹಾನಿಯಾಗಿವೆ. ತೊಗರಿ, ಹತ್ತಿ, ಭತ್ತ ಸೇರಿದಂತೆ ರೈತರ ಇನ್ನು ಹಲವು ಬೆಳೆಗಳು ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳ ತುಂಬಿ ಗ್ರಾಮಗಳಿಗೆ ನೀರು ನುಗ್ಗುತ್ತಿದೆ. ಇದರಿಂದ ಹಲವಾರು ಮನೆಗಳು, ದೇವಸ್ಥಾನಗಳಿಗೆ ನೀರಿಂದ ಆವೃತವಾಗಿದ್ದು ಜನರು ಪರದಾಡುತ್ತಿದ್ದಾರೆ.
ಜಿಲ್ಲೆಯಾದ್ಯಂತ ಮಳೆ ಮುಂದುವರೆದಿದ್ದು ತಾಲೂಕಿನ ಸರಡಗಿ ಗ್ರಾಮದ 50ಕ್ಕೂ ಹೆಚ್ಚು ಮನೆಗಳಿಗೆ ಭೀಮಾ ನದಿ ನೀರು ನುಗ್ಗಿದೆ. ಮನೆಗೆ ನೀರು ನುಗ್ಗಿದ ಹಿನ್ನೆಲೆ ಮನೆ ಖಾಲಿ ಮಾಡಿಕೊಂಡು ಜನರು ಬೇರೆಡೆಗೆ ಹೋಗುತ್ತಿದ್ದಾರೆ. ಜೊತೆಗೆ ತಮ್ಮ ತಮ್ಮ ಸಾಕು ಪ್ರಾಣಿಗಳನ್ನು ಟ್ರಾಕ್ಟರ್​ನಲ್ಲಿ ಸಾಗಿಸುತ್ತಿದ್ದಾರೆ. ಸರ್ಕಾರ ಆದಷ್ಟು ಬೇಗನೇ ಕಾಳಜಿ ಕೇಂದ್ರ ಆರಂಭಿಸಬೇಕು ಎಂದು ಸಂತ್ರಸ್ತರು ಆಗ್ರಹಿಸುತ್ತಿದ್ದಾರೆ.
ಪ್ರವಾಹದಿಂದ ಸೇಡಂ ತಾಲೂಕಿನ ಮಳಖೇಡದ ಉತ್ತರಾದಿ ಮಠ ಜಲಾವೃತವಾಗಿದ್ದು ಜಯತೀರ್ಥರ ಮೂಲ ವೃಂದಾವನ ಮುಳುಗಿದೆ. ಕಾಗಿಣಾ ಹಾಗು ಭೀಮಾ ಎರಡು ನದಿಗಳು ಉಕ್ಕಿ ಹರಿಯುತ್ತಿದ್ದು ಮಠದ ಪ್ರಾಂಗಣ ಗರ್ಭಗುಡಿ, ಗೋಶಾಲೆ ಎಲ್ಲವೂ ಜಲಮಯವಾಗಿದೆ. ಹೀಗಾಗಿ ಮಠದ ಗೋವುಗಳನ್ನ ಮಹಡಿ ಮೇಲೆ ಶಿಫ್ಟ್ ಮಾಡಲಾಗಿದೆ. ಅಷ್ಟೇ ಅಲ್ಲ, ಸನ್ನಿವೇಶ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆಯಿದೆ. ಅದಕ್ಕಾಗಿ ಸಚಿವ ಡಾ.ಶರಣಪ್ರಕಾಶ ಪಾಟೀಲರಿಗೂ ಪರಸ್ಥಿತಿ ಬಗ್ಗೆ ಮನವರಿಕೆ ಮಾಡಲಾಗುತ್ತದೆ ಎಂದು ಮಠದ ಪ್ರಧಾನ ಅರ್ಚಕ ಯಂಕಣ್ಣಾಚಾರ್ ಹೇಳಿದ್ದಾರೆ.
ಕಲಬುರಗಿ ತಾಲೂಕಿನ ಹಾಗರಗುಂಡಗಿ ಗ್ರಾಮದಲ್ಲಿ ಪ್ರವಾಹಕ್ಕೆ ಸಿಲುಕಿದ್ದು ಗ್ರಾಮಸ್ಥರು ಪರದಾಡುವ ಪರಿಸ್ಥಿತಿ ಏರ್ಪಟ್ಟಿದೆ. ಮನೆಗಳಿಗೆ ಪ್ರವಾಹ ಹೊಕ್ಕು ಗೃಹೋಪಯೋಗಿ ವಸ್ತುಗಳು ನಾಶವಾಗಿದ್ದು ಬದುಕು ಬೀದಿಗೆ ಬಿದ್ದಿದೆ. ಇದರಿಂದ ಮಹಿಳೆಯರು, ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಜೆಟ್ಟೂರ್ ಗ್ರಾಮಕ್ಕೆ ಕಾಗಿಣಾ ನದಿ ನೀರು ನುಗ್ಗಿದ್ದು ಗ್ರಾಮಸ್ಥರು ಕಂಗಾಲಾಗಿದ್ದಾರೆ.
ಇದನ್ನೂ ಓದಿ:ಯುವರಾಜ್ ಸಿಂಗ್ ಗರಡಿಗೆ ಮತ್ತೊಬ್ಬ ಯಂಗ್ ಗನ್ ಎಂಟ್ರಿ​.. ಯಾರು ಈ ಹೊಸ ಸ್ಟೂಡೆಂಟ್?
ಇಡೀ ಜೆಟ್ಟೂರ್ ಗ್ರಾಮ ಜಲದಿಗ್ಬಂಧನವಾಗಿದ್ದು ಪ್ರತಿಯೊಂದು ಮನೆಗೂ ನೀರು ನುಗ್ಗಿದ ಪರಿಣಾಮ ಜನಜೀವನ ಅಸ್ತವ್ಯಸ್ಥ. ಮನೆಯಲ್ಲಿ ಇರೋಕೆ ಆಗದೆ ಮಹಡಿ ಮೇಲೆ ಗ್ರಾಮಸ್ಥರು ಆಶ್ರಯ ಪಡೆದಿದ್ದಾರೆ. ಪ್ರವಾಹದಲ್ಲಿ ಸಿಲುಕಿರುವ ಸಂತ್ರಸ್ತರನ್ನ ಮನೆಯಿಂದ ತಹಶೀಲ್ದಾರ್ ಹೊರಗೆ ಕರೆತರುತ್ತಿದ್ದಾರೆ. ಚಿಂಚೋಳಿ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ